ಸಂವಿಧಾನ ಒಪ್ಪದ ಬಿಜೆಪಿಗೆ ಪ್ರಜಾಪ್ರಭುತ್ವ ಹಿತವಲ್ಲ: ಲಾವಣ್ಯ ಬಲ್ಲಾಳ್

Update: 2024-09-22 13:03 GMT

ಉಡುಪಿ, ಸೆ.22: ಸರ್ವಾಧಿಕಾರಿ ಧೋರಣೆ ಹೊಂದಿರುವ ಬಿಜೆಪಿಗೆ ವಿರೋಧ ಪಕ್ಷ ಎಂಬುದು ಈ ದೇಶದಲ್ಲಿ ಇರಲೇ ಬಾರದು. ಸಂವಿಧಾನವನ್ನು ಒಪ್ಪದ ಇವರಿಗೆ ಪ್ರಜಾಪ್ರಭುತ್ವದ ಎಂಬುದು ಹಿತವಲ್ಲ. ಕಾಂಗ್ರೆಸ್ ಇರುವ ವರೆಗೆ ಈ ದೇಶ ದಲ್ಲಿ ಪ್ರಜಾಪ್ರಭುತ್ವ ಇರುತ್ತದೆ ಮತ್ತು ಸಂವಿಧಾನ ದೃಢವಾಗಿರುತ್ತದೆ. ಅದನ್ನು ನಾವು ರಕ್ಷಿಸುವ ಕಾರ್ಯ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅಸಂವಿಧಾನಿಕ ಶಬ್ದಗಳಿಂದ ನಿಂದಿಸುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರವಿವಾರ ಬ್ರಹ್ಮಗಿರಿ ಆಸ್ಕರ್ ಫೆರ್ನಾಂಡೀಸ್ ಸ್ಮಾರಕ ಸರ್ಕಲ್‌ನಲ್ಲಿ ಹಮ್ಮಿ ಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ರಾಹುಲ್ ಗಾಂಧಿ ಅವರಿಗೆ ನೀಡಲಾಗಿದ್ದ ರಕ್ಷಣೆಯನ್ನು ಸರಕಾರ ಕಡಿತ ಮಾಡಿದೆ. ಬಿಜೆಪಿಯು ನೂರಾರು ಕೋಟಿ ರೂ. ಹಣವನ್ನು ರಾಹುಲ್ ಗಾಂಧಿ ಅವರ ಮಾನಹಾನಿಗಾಗಿ ವ್ಯಯಿಸುತ್ತಿದೆ. ಈ ಹಿಂದೆ ಪ್ರಧಾನಿ ಮೋದಿ ಪ್ರಧಾನಿ ಕೂಡ ಸೋನಿಯಾ ಗಾಂಧಿ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದಾರೆ. ಹಾಗಾಗಿ ಅವರ ಪಕ್ಷದಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ವಿರೋಧ ಪಕ್ಷದ ನಾಯಕರು ಪ್ರಧಾನಿ ಯಷ್ಟೆ ಪ್ರಭಾವ ಹೊಂದಿರು ತ್ತಾರೆ. ಅವರಿಗೆ ಅವಾಚ್ಯ ಶಬ್ದಗಳಿಂದ ಬೈದರೂ ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದು ಕೊಳ್ಳುತ್ತಿಲ್ಲ. ಸರಕಾರದ ಈ ಕುಟೀಲ ನೀತಿಯನ್ನು ನಾವು ಒಪ್ಪುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸ್ಥಾನ ಗಳನ್ನು ಕಳೆದುಕೊಂಡ ಬಿಜೆಪಿ, ಈಗ ಹೆದರಿ ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಯುವ ಜನತೆಗೆ ಉದ್ಯೋಗ ನೀಡುವಲ್ಲಿ ಹಾಗೂ ಪಾರದರ್ಶಕ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರಕಾರ ಇನ್ನು ಒಂದೇ ವರ್ಷ ದಲ್ಲಿ ಉರುಳಲಿದೆ. ಕಾಂಗ್ರೆಸ್‌ಗೆ ಜನ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಭುಜಂಗ ಶೆಟ್ಟಿ, ದಿನೇಶ್ ಪುತ್ರನ್, ಬಿ.ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಪ್ರಖ್ಯಾತ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ದಿನಕರ್ ಹೇರೂರು, ಕೀರ್ತಿ ಶೆಟ್ಟಿ, ಹರೀಶ್ ಕಿಣಿ, ಶಬೀರ್ ಅಹ್ಮದ್, ಶಶಿಧರ್ ಶೆಟ್ಟಿ ಎಲ್ಲೂರು, ಸರ್ಪುದ್ದೀನ್ ಶೇಕ್, ಇಸ್ಮಾಯಿಲ್ ಅತ್ರಾಡಿ, ಜಯ ಕುಮಾರ್, ಡಾ.ಸುನಿತಾ ಶೆಟ್ಟಿ, ಮಮತಾ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ, ಉದ್ಯಾವರ ನಾಗೇಶ್ ಕುಮಾರ್, ಸುರೇಶ್ ಶೆಟ್ಟಿ ಬನ್ನಂಜೆ, ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಭವನದಿಂದ ಬ್ರಹ್ಮಗಿರಿ ಸರ್ಕಲ್‌ ವರೆಗೆ ಪಾದಯಾತ್ರೆ ನಡೆಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News