ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ ನಿಧನ

Update: 2024-09-22 14:02 GMT

ಉಡುಪಿ: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ (83) ಶನಿವಾರ ನಿಧನರಾದರು.

ಮುಂಡ್ಕೂರು ಕೃಷ್ಣ ಶೆಟ್ಟಿಯವರಲ್ಲಿ ಹೆಜ್ಜೆಗಾರಿಕೆ ಕಲಿತ ಇವರು, ಮುಂಡ್ಕೂರು ಮೇಳದಲ್ಲಿ ಹವ್ಯಾಸಿ ವೇಷಧಾರಿಯಾಗಿ, ಮುಂದೆ ಉದ್ಯೋಗ ನಿಮಿತ್ತ ಮುಂಬಯಿ ಸೇರಿದರು. ಬಳಿಕ ಯಕ್ಷಗಾನಾಸಕ್ತಿಯಿಂದ ಮತ್ತೆ ಊರಿಗೆ ಬಂದು ಕಟೀಲು ಮೇಳ ಸೇರಿದರು. ಬೆಳ್ಮಣ್ಣು ಮತ್ತು ಬಪ್ಪನಾಡು ಮೇಳಗಳಲ್ಲೂ ಕೆಲವು ತಿರುಗಾಟ ಮಾಡಿದ್ದರು. ಪೀಠಿಕಾ ಮತ್ತು ಒಡ್ಡೋಲಗದ ಪಾತ್ರಗಳಿಂದ ಆರಂಭಗೊಂಡ ಇವರ ಯಕ್ಷ ಪಯಣ, ಮುಂದೆ ಹವ್ಯಾಸಿ ಸಂಘ ಸಂಸ್ಥೆಗಳ ಆಟಗಳಲ್ಲಿ ಅತಿಕಾಯ, ರಕ್ತಬೀಜದಂತಹ ಪ್ರಮುಖ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವಷ್ಟು ಪ್ರೌಢತೆ ಸಾಧಿಸಿತು.

ಇವರು ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಹಲವು ಗೌರವಕ್ಕೆ ಭಾಜನರಾಗಿದ್ದಾರೆ. ಇವರು ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News