ಭತ್ತದ ಕಟಾವು ಯಂತ್ರದ ಮಾಲಕರಿಂದ ರೈತರ ಸುಲಿಗೆ ಆರೋಪ: ಜಿಲ್ಲಾಡಳಿತಕ್ಕೆ ಮನವಿ

Update: 2024-10-08 12:26 GMT

ಉಡುಪಿ, ಅ.8: ಜಿಲ್ಲೆಯಾದ್ಯಂತ ಭತ್ತದ ಬೆಳೆ ಕಟಾವಿಗೆ ಆರಂಭವಾಗಿದ್ದು ಭತ್ತದ ಕಟಾವು ಯಂತ್ರದ ಮಾಲೀಕರು ಹಾಗೂ ದಲ್ಲಾಳಿಗಳು ಪ್ರತಿ ಘಂಟೆಗೆ 2400ರೂ. ಮಿಕ್ಕಿ ಹಣ ವಸೂಲಿ ಮಾಡಿ ರೈತರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಆರೋ ಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಲನ ಸಮಿತಿ ನಿಯೋಗವು ಇಂದು ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.

ಕಷ್ಟದಲ್ಲಿ ಭತ್ತ ಬೆಳೆದ ರೈತರಿಗೆ ಜಿಲ್ಲೆಗಳಿಗೆ ಬರುವ ಕಟಾವು ಯಂತ್ರಗಳ ವಸೂಲಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ನಿಗದಿತ ದರ ವಿಧಿಸಿ ಪ್ರಕಟಣೆ ಹೊರಡಿಸಬೇಕು. ಅಲ್ಲದೇ ರೈತರ ಹಾಗೂ ಕಟಾವು ಯಂತ್ರದ ಮಾಲಕರು ಹಾಗೂ ಕೃಷಿ ಇಲಾಖೆ ಜೊತೆ ಜಂಟಿ ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಹುತೇಕ ರೈತರಿಗೆ ಅನುಕೂಲವಾಗುವ ಭತ್ತದ ಖರೀದಿ ಕೇಂದ್ರಗಳನ್ನು ಅಕ್ಟೋಬರ್ ತಿಂಗಳಲ್ಲೇ ಬೆಂಬಲ ಬೆಲೆ ಘೋಷಿಸಿ ಆರಂಭಿಸಬೇಕು ಎಂದು ನಿಯೋಗ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ., ಕೃಷಿಕರಾದ ಅನಿಲ್ ಬಾರಕೂರು, ಗಣೇಶ್ ಪೂಜಾರಿ, ಜಲಂಧರ್, ಕಾರ್ಮಿಕ ಮುಖಂಡರಾದ ಸುರೇಶ್ ಕಲ್ಲಾಗರ, ಶಶಿಧರ ಗೊಲ್ಲ, ಕೃಷಿಕೂಲಿಕಾರ ಮುಖಂಡರಾದ ಕವಿರಾಜ್ ಎಸ್., ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News