ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ತಂಡದ ಭೇಟಿ

Update: 2024-10-18 13:58 GMT

ಶಿರ್ವ, ಅ.18: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಎರಡನೇ ಬಾರಿ ನ್ಯಾಕ್ ಮಾನ್ಯತೆ ನೀಡುವ ಸಲುವಾಗಿ, ಪರಿಣಿತರ ತಂಡವು ಅ.16 ಮತ್ತು 17ರಂದು ಭೇಟಿ ನೀಡಿತು.

ಹರಿಯಾಣದ ಓಂ ಸ್ಟೆರ್ಲಿಂಗ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ.ರಾಜೇಂದ್ರ ಸಿಂಗ್ ಚಿಲ್ಲರ್ ತಂಡದ ಅಧ್ಯಕ್ಷರಾಗಿದ್ದು, ಇವರ ಜೊತೆಗೆ ಪುಣೆಯ ಸಿಂಬಯೋಸಿಸ್ ತಾಂತ್ರಿಕ ಮಹಾವಿದ್ಯಾಲಯದ ಡಾ.ಆನಂದ್ ಕುಮಾರ್ ಪಾಂಡೆ ಮತ್ತು ಮುಂಬೈ ವಿಶ್ವವಿದ್ಯಾನಿಲಯದ ರತ್ನಗಿರಿ ಕೇಂದ್ರದ ನಿರ್ದೇಶಕ ಡಾ.ಕಿಶೋರ್ ಸುಖಾತಂಕರ್ ತಂಡದ ಸದಸ್ಯರಾಗಿ ಕಾಲೇಜಿಗೆ ಭೇಟಿ ನೀಡಿದ್ದರು.

ಎರಡು ದಿನಗಳ ಕಾಲ ಕಾಲೇಜಿನ ಮೂಲ ಸೌಕರ್ಯ ತಪಾಸಣೆ ಮತ್ತು ದಾಖಲಾತಿಗಳ ಪರಿಶೀಲನೆಯ ಜೊತೆಗೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿ ಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಮತ್ತು ಉದ್ಯೋಗದಾತರ ಜೊತೆಗೆ ಸಂವಾದ ನಡೆಸಿದರು. ಅ.17ರಂದು ನ್ಯಾಕ್ ತಂಡದ ಭೇಟಿಯ ಮುಕ್ತಾಯ ಸಭೆಯಲ್ಲಿ ತಂಡದ ಅಧ್ಯಕ್ಷರು ಕಳೆದ ಐದು ವರ್ಷಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವುದರಲ್ಲಿ ಕಾಲೇಜಿನ ಪರಿಶ್ರಮವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಅವರು ಸಂಶೋಧನೆಯ ಕುರಿತು ಸಂಸ್ಥೆಯು ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ತಂಡದ ಅಧ್ಯಕ್ಷರು ಸಂಸ್ಥೆಯು ಮತ್ತಷ್ಟು ಉನ್ನತ ಮಟ್ಟಕ್ಕೇರಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತು ಸಲಹೆ ಸೂಚನೆಗಳನ್ನೊಳಗೊಂಡ ವರದಿಯನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಸಂಚಾಲಕ ಡಾ.ಸುದರ್ಶನ್ ರಾವ್ ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News