ಹೊಲ ಉತ್ತು ಫಲ ಎತ್ತಿದವರ ಮಕ್ಕಳು ಕಬ್ಬಗಳನ್ನೂ ಉತ್ತು ಕಾಳು ತೆಗೆಯಬಲ್ಲರು: ಪ್ರೊ.ನಾಗಪ್ಪ ಗೌಡ

Update: 2024-10-18 16:19 GMT

ಉಡುಪಿ, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ ಉಳುಮೆಗಾರರ ಮಕ್ಕಳು, ಅಕ್ಷರದ ಆವರಣವನ್ನೂ ಉಳುಮೆ ಹೊಲಗಳೆಂದೇ ಪರಿಭಾವಿಸಿ ಪರಿಪೂರ್ಣ ಉಳುಮೆಯಲ್ಲಿ ತೊಡಗಿಕೊಳ್ಳುವ ಮೂಲಕ ಬಾಳ ಬಟ್ಟೆಯ ನಾಳೆಗೆ ಬೇಕಾದ ಪೈರನ್ನು ರೂಪಿಸಿಕೊಳ್ಳಬಲ್ಲರು ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ ಹೇಳಿದ್ದಾರೆ.

ತೆಂಕನಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ‘ಕಬ್ಬದುಳುಮೆ:ಹಳೆಗನ್ನಡ ಕಾವ್ಯದೋದು ಕಮ್ಮಟ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹಳೆಗನ್ನಡವನ್ನು ಕಬ್ಬಿಣದ ಕಡಲೆ ಎಂದೇ ಕರೆದು ಅದನ್ನು ಸಾಮಾನ್ಯರ ಮಕ್ಕಳಿಂದ ದೂರಮಾಡಿದ ಪ್ರತಿಭೆಯ ರಾಜಕಾರಣವನ್ನು ಅರ್ಥ ಮಾಡಿಸಿ, ನಿರ್ಭೀತವಾಗಿಯೇ ಹೊಕ್ಕು ಆ ಪಠ್ಯಗಳ ಜೀವನಮೌಲ್ಯವನ್ನು ಅರಿಯುವ ಸರಿಯಾದ ಬಿಚ್ಚಿಕಟ್ಟುವಿಕೆಯನ್ನು ಸಾಧ್ಯವಾಗಿಸುವ ಕಬ್ಬದುಳುಮೆಯಂತಹ ಕಮ್ಮಟಗಳ ಕಡೆಗೆ ಶಿಕ್ಷಣಸಂಸ್ಥೆಗಳು ಕಾರ್ಯೋನ್ಮುಖ ವಾಗುವ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರಾಚೀನ ಕನ್ನಡವನ್ನೂ ಇಂದಿನ ಬದುಕಿನೊಂದಿಗೆ ಸಂಧಿಸಿ ಕೊಂಡು ಓದುವ ಓದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಮ್ಮಟದ ಉದ್ದೇಶವನ್ನು ವಿವರಿಸಿದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಮೇವಿ ಮಿರಾಂದ, ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ, ಅರ್ಚನ ಹಾಗೂ ಶಾಲಿನಿ ಉಪಸ್ಥಿತರಿದ್ದರು.

ರಶ್ಮಿತ ಸ್ವಾಗತಿಸಿ, ಪ್ರಕೃತಿ ವಂದಿಸಿದ ಕಾರ‌್ಯಕ್ರಮವನ್ನು ನೈನಾ ಜೆ ಶೆಟ್ಟಿ ನಿರೂಪಿಸಿದರು.

ನಿರಂಜನರ ನೆನಪಲ್ಲಿ ರಂಗರೂಪಕ

ಕೆಯ್ಯೂರು ಹೋರಾಟ ಮತ್ತು ತಮ್ಮ ಬರಹ ಎರಡನ್ನೂ ಕನ್ನಡದ ನೆನಪಿನ ‘ಚಿರಸ್ಮರಣೆ’ಯಲ್ಲಿ ಉಳಿಸಿದ ಸಮ ಸಮಾಜದ ಕನಸುಗಾರ, ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಖ್ಯಾತ ಕಾದಂಬರಿಕಾರ, ಕಥೆಗಾರ ನಿರಂಜನರೆಂದೇ ಖ್ಯಾತ ರಾದ ಕುಳಕುಂದ ಶಿವರಾಯರ ನೂರರ ನೆನಪಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಗಳ ಸಹಯೋಗದೊಂದಿಗೆ ‘ನಿರಂಜನ ನೂರರ ನೆನಪು ಮತ್ತು ಕಥೆಯ ರಂಗ ರೂಪಕ’ ಕಾರ‌್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ನಿರಂಜನರ ಸಾಹಿತ್ಯ ಮತ್ತು ಸಾಮಾಜಿಕ ಕಾಳಜಿ ಗಳನ್ನು ಪರಿಚಯಿಸಿ ‘ಕನ್ನಡದ ಪಾಲಿಗೆ ಅವರೊಬ್ಬ ಕೇವಲ ಕಥೆಗಾರ, ಕಾದಂಬರಿ ಕಾರರಷ್ಟೇ ಅಲ್ಲ. ವೈಯಕ್ತಿಕ ಬದುಕಿನ ನೋವಿನ ನಡುವೆಯೂ ಸಮಾಜದ ಬದುಕಿನ ಘನತೆಗಾಗಿ ಇಡಿಯ ಬದುಕನ್ನು ಮುಡಿಪಾಗಿಟ್ಟ ಹೋರಾಟಗಾರ, ಬರಹಗಾರ ಮತ್ತು ಜನಪರ ಪತ್ರಕರ್ತರೂ ಆಗಿ ಕನ್ನಡಕ್ಕೆ ಉಳಿಸಿಹೋದ ‘ಚಿರಸ್ಮರಣೆ’ ದೊಡ್ಡದೇ ಎಂದರು.

ಉಪನ್ಯಾಸದ ಬಳಿಕ ವಾಸುದೇವ ಗಂಗೇರ ನಿರ್ದೇಶನದಲ್ಲಿ ನಿರಂಜನರ ಸಣ್ಣಕಥೆ ‘ಧ್ವನಿ’ಯ ರಂಗರೂಪದ ಪ್ರದರ್ಶನ ನಡೆುತು. ಕಥಾ ಓದಿನ ಹೊಸಬಗೆಯ ಈ ಪ್ರಯೋಗದಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಸ್ಯ ಕಲಾವಿದರು ಪಾತ್ರಗಳಾಗಿ ಕಥೆಯ ಮಾತುಗಳಿಗೆ ಕೊರಳಾದರು.

ಪ್ರಭಾರ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಡಾ.ಸದಾನಂದ ಬೈಂದೂರು, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನಾಗಪ್ಪ ಗೌಡ, ಐಕ್ಯೂಎಸಿ ಸಂಚಾಲಕಿ ಮೇವಿ ಮಿರಾಂದ ಹಾಗೂ ಇತರರು ಉಪಸ್ಥಿತರಿದ್ದರು.

ಶರಿತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಭಾರತಿ ವಂದಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News