ಸ್ಥಳೀಯ ಅಗತ್ಯಕ್ಕೆ ತಕ್ಕಂತ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು: ಪ್ರೊ.ರಾಮಸ್ವಾಮಿ

Update: 2024-10-18 15:35 GMT

ಉಡುಪಿ, ಅ.18: ದೇಶದಲ್ಲಿ ಶಿಕ್ಷಣ ನೀತಿ ಎಂಬುದು ಸ್ಥಳೀಯ ಅಗತ್ಯಗ ಳಿಗೆ ತಕ್ಕಂತೆ ರೂಪುಗೊಳ್ಳಬೇಕು. ಪೋಷಕರು, ಶಿಕ್ಷಕರು, ಪ್ರಾದ್ಯಾಪಕರು, ಶಿಕ್ಷಣ ತಜ್ಞರು, ಸಾರ್ವಜನಿಕರೊಂದಿಗೆ ಚರ್ಚಿಸಿ ಅದನ್ನು ರೂಪಿಸಬೇಕು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ನಮ್ಮ ಗಂಟಲಿಗೆ ತುರುಕಲಾಗಿದೆ ಎಂದು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ, ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿವಿಯ ಮಾಜಿ ಪ್ರಾಧ್ಯಾಪಕ ಹಾಗೂ ಪ್ರಸ್ತುತ ಐಐಟಿ ಹೊಸದಿಲ್ಲಿಯ ಸಂದರ್ಶಕ ಪ್ರಾಧ್ಯಾಪಕರಾಗಿರುವ ಪ್ರೊ.ರಾಮ್ ರಾಮಸ್ವಾಮಿ ಹೇಳಿದ್ದಾರೆ.

ಕರ್ನಾಟಕದ ಭಾರತ ಜ್ಞಾನ ವಿಜ್ಞಾನ ಸಮಿತಿಯ (ಬಿಜಿವಿಎಸ್) ಉಡುಪಿ ಜಿಲ್ಲಾ ಘಟಕ, ಸಮಿತಿಯ ಟೀಚರ್ ಮಾಸ ಪತ್ರಿಕೆಯ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದ ಎರಡು ದಿನಗಳ ಟೀಚರ್ ಶೈಕ್ಷಣಿಕ ಹಬ್ಬ-2024ನ್ನು ಉದ್ಘಾಟಿಸಿ ‘ಸಾರ್ವಜನಿಕ ವಿಶ್ವವಿದ್ಯಾನಿಲಯ- ನಮ್ಮ ಸಂಸ್ಥೆಗಳಿಗೆ ಗಮನ ಅಗತ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

ದೇಶಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ತುಂಬಾ ಇತ್ತು. ಮೂರು ದಶಕಗಳಿಂದ ದೇಶದ ಶಿಕ್ಷಣ ನೀತಿ ಬದಲಾಗಿರಲಿಲ್ಲ. ಆದರೆ ಕೇಂದ್ರ ಸರಕಾರ ಸಂಬಂಧಿತ ಯಾರೊಂದಿಗೆ ಚರ್ಚಿಸದೇ, ಶಿಕ್ಷಣ ನೀತಿಯ ಸ್ಪಷ್ಟ ರೂಪರೇಷೆ ಗಳಿಲ್ಲದೇ ಅದನ್ನು ಏಕಪಕ್ಷೀಯ ರೀತಿಯಲ್ಲಿ ದೇಶದ ಮೇಲೆ ಹೇರಿದೆ. ಯಾವುದೇ ಪೂರ್ವತಯಾರಿ ಇಲ್ಲದೇ, ಸೂಕ್ತ ತರಬೇತಿ, ಮಾಹಿತಿ ನೀಡದೇ ಅದನ್ನು ಜಾರಿಗೊಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ. ಎನ್‌ಇಪಿಯ ನೀತಿಗಳು ಅರ್ಥ ಹೀನ ಎಂದು ಹಲವು ವಿದೇಶಿ ವಿವಿಗಳು ಸೇರಿದಂತೆ ದೇಶದಲ್ಲಿ ಸುಮಾರು ನಾಲ್ಕು ದಶಕಗಳ ಅದ್ಯಾಪನದ ಅನುಭವ ಹೊಂದಿರುವ ಪ್ರಾಧ್ಯಾಪಕರು ತಿಳಿಸಿದರು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮಲ್ಲಿದ್ದ 400ಮಿಲಿಯ ಜನಸಂಖ್ಯೆ ಈಗ ಮೂರೂವರೆ ಪಟ್ಟು ಹೆಚ್ಚಾಗಿದೆ. ಭಾರತೀಯನ ಸರಾಸರಿ ಬದುಕುವ ಆಯುಸ್ಸು 30-35 ವರ್ಷದಿಂದ 70ಕ್ಕೇರಿದೆ. ಆದರೆ ಇದಕ್ಕೆ ಸರಿಯಾಗಿ ಶೈಕ್ಷಣಿಕ ಕ್ಷೇತ್ರ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಕಂಡಿಲ್ಲ. ಹೀಗಾಗಿ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ನಮ್ಮ ನಾಲ್ಕನೇ ಒಂದು ಭಾಗದ ಜನರು ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ ಎಂದವರು ವಿಷಾಧಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ದೇಶದ ಒಟ್ಟು ಜಿಡಿಪಿಯ ಶೇ.6ರಷ್ಟನ್ನು ಮೀಸಲಿಡಬೇಕು ಎಂದು ಕೊಠಾರಿ ಆಯೋಗ ವರದಿ ನೀಡಿದೆ. ಆದರೆ ಯಾವುದೇ ಸರಕಾರ ಇದುವರೆಗೆ ಶಿಕ್ಷಣಕ್ಕೆ ಶೇ.3ರಿಂದ 4ರಷ್ಟು ಹಣವನ್ನು ಇದಕ್ಕೆ ಮೀಸಲಿಟ್ಟಿಲ್ಲ ಎಂದ ಡಾ.ರಾಮ ಸ್ವಾಮಿ, ತನ್ನ ಅಭಿಪ್ರಾಯದಂತೆ ಶಿಕ್ಷಣಕ್ಕೆ ನಿಗದಿತ ಹಣ ನೀಡುವುದಲ್ಲ. ಅಗತ್ಯಕ್ಕೆ ತಕ್ಕಂತೆ ಹಣ ನೀಡಬೇಕು. ಅದು ಶೇ.10 ಆಗಬಹುದು, ಶೇ.20ರಷ್ಟು ಆಗಬಹುದು ಎಂದರು. ನಮ್ಮ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಡ್ಡಾಯ ಗೊಳಿಸು ವುದಲ್ಲ, ಅದನ್ನು ಸಂಪೂರ್ಣ ಆದ್ಯತೆಯನ್ನಾಗಿ ಮಾಡಬೇಕು ಎಂದರು.

ಖಾಸಗಿ ವಿವಿಗಳಿಗೆ ಉತೇಜನ: ನಮ್ಮ ಸರಕಾರಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಸಾರ್ವಜನಿಕ ವಿಶ್ವವಿದ್ಯಾನಿಲಯ ಗಳನ್ನು (ಪಬ್ಲಿಕ್ ಯುನಿವರ್ಸಿಟಿ) ಸಂಪೂರ್ಣವಾಗಿ ಕಡೆಗಣಿಸಿವೆ. ಇದಕ್ಕೆ ಬದಲು ಪರಿಗಣಿತ ವಿವಿ (ಡೀಮ್ಡ್ ವಿವಿ) ಹಾಗೂ ಖಾಸಗಿ ವಿವಿಗಳಿಗೆ ಸಂಪೂರ್ಣ ಪ್ರೋತ್ಸಾಹ ವನ್ನು ನೀಡಲಾಗುತ್ತಿದೆ. ಇದು ದೇಶದ ಉನ್ನತ ಶಿಕ್ಷಣ ಕ್ಷೇತ್ರ ಅಪಾಯದಲ್ಲಿರು ವುದರ ಸೂಚಕವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಖಾಸಗಿ ವಿವಿಗಳಿಗೆ ಸಿಗುತ್ತಿರುವ ಬೆಂಬಲದಿಂದ ಬಡವರನ್ನು ಮತ್ತೆ ಶಿಕ್ಷಣ ವಂಚಿತರನ್ನಾಗಿ ಮಾಡುವ ಅಪಾಯ ಎದುರಾಗಲಿದೆ ಎಂದವರು ಎಚ್ಚರಿಸಿದರು.

ಉಡುಪಿಯ ಖ್ಯಾತ ಶಿಕ್ಷಣ ತಜ್ಞ ಹಾಗೂ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಮಹಾಬಲೇಶ್ವರ ರಾವ್ ಅವರು ‘ಶಿಕ್ಷಕರು ಮತ್ತು ಸಾರ್ವಜನಿ ಶಿಕ್ಷಣದಲ್ಲಿ ಸಮಕಾಲೀನ ಸವಾಲುಗಳು’ ಎಂಬ ವಿಷಯದ ಕುರಿತು ಮಾತನಾಡಿ ಎನ್‌ಇಪಿಗೆ ನನಗೆ ಮೊದಲಿನಿಂದಲೂ ವಿರೋಧ ಇದ್ದೆ ಇದೆ ಎಂದರು.

ರಾಜ್ಯದಲ್ಲಿ ಹಿಂದಿನ ಸರಕಾರ, ಎನ್‌ಇಪಿಯನ್ನು ದೇಶದಲ್ಲೇ ಮೊದಲು ಜಾರಿಗೊಳಿಸಿದ ಹೆಗ್ಗಳಿಕೆ ಪಡೆಯಲು ತರಾತುರಿ ಯಿಂದ ಅದನ್ನು ಕಾಲೇಜು ಮಟ್ಟದಲ್ಲಿ ಮಾತ್ರ ಜಾರಿಗೊಳಿಸಿತು. ಅತ್ಯಂತ ಜಾಣತನದಿಂದ ಅದು ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಯಿಂದ ಅದನ್ನು ಜಾರಿಗೊಳಿಸಲಿಲ್ಲ ಎಂದರು.

ಇದೀಗ ಆಡಳಿತ ನಡೆಸುತ್ತಿರುವ ಪಕ್ಷವೂ ಎನ್‌ಇಪಿಯನ್ನು ವಿರೋಧಿಸಿದ್ದು, ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿ ಯನ್ನು ರಚಿಸಿದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳ್ಳುವುದೇ ಎಂಬುದು ಪ್ರಶ್ನಾರ್ಹವಾಗಿ ಉಳಿದಿದ್ದು, ರಾಜ್ಯದ ಪೋಷಕರು, ಶಿಕ್ಷಕರು, ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರ ಯಾವ ರೀತಿ ಎನ್‌ಇಪಿಯನ್ನು ಜಾರಿಗೊಳಿಸುತ್ತಿದೆಯೋ, ರಾಜ್ಯ ಸರಕಾರವೂ ಅದೇ ರೀತಿಯ ನೀತಿ ಅನುಸರಿಸುತ್ತಿದೆ. ತಳಮಟ್ಟದಲ್ಲಿ ಯಾರ ಅಭಿಪ್ರಾಯ ಪಡೆಯಬೇಕೋ ಅವರಿಗೆ ಇಲ್ಲಿಅವಕಾಶಗಳೇ ಸಿಗುತ್ತಿಲ್ಲ. ಎಲ್ಲವೂ ಕೇಂದ್ರೀಕೃತವಾಗಿ ನಡೆಯುತ್ತಿದೆ ಎಂದರು.

ಇಂದು ವಿವಿಗಳು ಸ್ವಾಯತ್ತವಾಗಿಲ್ಲ. ಅದೇ ರೀತಿ ಅನುದಾನಿತ ಶಿಕ್ಷಣ ಸಂಸ್ಥೆಗಳೆಂಬ ವ್ಯವಸ್ಥೆಯನ್ನೇ ಸರಕಾರ ಮುಗಿಸಲು ಮುಂದಾಗಿದೆ. ಸರಕಾರಿ ಶಾಲೆಗಳೂ ದುರ್ಬಲ ಗೊಳ್ಳುತಿದ್ದು, ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಒತ್ತು ಸಿಗುತ್ತಿದೆ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರನ್ನು ನೇಮಿಸಿ ಪಾಠ ಮಾಡಲಾಗುತ್ತಿದೆ. ಇಲ್ಲಿ ಸರಕಾರವೇ ಶೋಷಕನ ಪಾತ್ರ ವಹಿಸುತ್ತಿದೆ ಎಂದರು.

ಕರ್ನಾಟಕದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕೋಶಾಧಿಕಾರಿ, ನಿವ್ತೃತ್ತ ಪ್ರಾಧ್ಯಾಪಕ ಪ್ರೊ.ಕಮಲ್ ಲೊಡಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಎ.ಪ್ರಶಾಂತ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸ್ವಾಗತ ಸಮಿತಿಯ ಉಪಾಧ್ಯಕ್ಷೆ ಅಭಿಲಾಷ ಹಂದೆ ಹಾಗೂ ಟೀಚರ್ ಪತ್ರಿಕೆ ಸಂಪಾದಕ ಉದಯ ಗಾಂವಕರ್ ಉಪಸ್ಥಿತರಿದ್ದರು.

ಶೈಕ್ಷಣಿಕ ಹಬ್ಬ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಅತಿಥಿಗಳನ್ನು ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಸಂತೋಷ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

ಆನ್‌ಲೈನ್ ಶಿಕ್ಷಣದಿಂದ ಅಪಾಯ

ಸದ್ಯ ಆನ್‌ಲೈನ್ ಶಿಕ್ಷಣಕ್ಕೆ ಸಿಗುತ್ತಿರುವ ಉತ್ತೇಜನ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲೂ ಆನ್‌ಲೈನ್ ಶಿಕ್ಷಣಕ್ಕೆ ನೀಡಿರುವ ಒತ್ತನ್ನು ಉಲ್ಲೇಖಿಸಿದ ಡಾ.ರಾಮ್ ರಾಮಸ್ವಾಮಿ, ಇದು ದೇಶದ ಗ್ರಾಮೀಣ ಹಾಗೂ ನಗರ ಭಾಗದ ಮಕ್ಕಳ ನಡುವೆ ಕಲಿಕೆಯ ಅಂತರವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಈ ಅಪಾಯವನ್ನು ನಾವು ಕೋವಿಡ್ ಸಮಯದಲ್ಲೇ ಗಮನಿಸಿದ್ದೇವೆ. ಆದರೆ ಈಗಲೂ ಆನ್‌ಲೈನ್ ಶಿಕ್ಷಣಕ್ಕೆ ಸಿಗುತ್ತಿರುವ ವಿಶೇಷ ಪ್ರೋತ್ಸಾಹ ನೋಡಿದರೆ ಇದು ಗ್ರಾಮೀಣ ಮಕ್ಕಳು ಹಾಗೂ ಮಹಿಳೆಯರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದರು.

ಅದೇ ರೀತಿ ಬಹುಶಿಸ್ತಿನ ಶಿಕ್ಷಣ ಹಾಗೂ ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಕ್ಕೆ ಏರಿಸಿ, ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಮತ್ತೆ ಮುಂದುವರಿಸಲು ಅವಕಾಶ ನೀಡಿರುವುದನ್ನು ಅವರು ಟೀಕಿಸಿದರು. ಒಬ್ಬ ಸಿವಿಲ್ ಇಂಜಿನಿಯರಿಂಗ್ ಕಲಿ ಯಲು ಸೇರಿ ಎರಡು ವರ್ಷಕ್ಕೆ ಅದನ್ನು ನಿಲ್ಲಿಸಿದಾಗ ಹೇಗೆ ಮತ್ತು ಏನೆಂದು ಸರ್ಟಿಫಿಕೇಟ್ ನೀಡುತ್ತೀರಿ ಎಂದವರು ಪ್ರಶ್ನಿಸಿದರು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News