ವಕ್ಫ್ ಹೆಸರಿನಲ್ಲಿ ಭೂಕಬಳಿಕೆ ಆರೋಪ: ಬಿಜೆಪಿಯಿಂದ ಪ್ರತಿಭಟನೆ; ಡಿಸಿ ಕಚೇರಿ ಮುತ್ತಿಗೆ ಯತ್ನ

Update: 2024-11-06 15:32 GMT

ಉಡುಪಿ: ವಕ್ಫ್ ಬೋರ್ಡ್ ಹೆಸರಿನಲ್ಲಿ ಭೂಮಿ ಕಬಳಿಸುತ್ತಿರುವುದಾಗಿ ಆರೋಪಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಸಂವಿಧಾನ ವಿರುದ್ಧವಾಗಿ ರಚಿಸಿರುವ ವಕ್ಫ್ ಕಾಯಿದೆಯಿಂದ ರೈತರು ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹಿಂದು ಧಾರ್ಮಿಕ ಕೇಂದ್ರಗಳ ಆರ್‌ಟಿಸಿಯಲ್ಲಿ ವಕ್ಫ್ ಹೆಸರು ಬರುತ್ತಿದೆ. ಇದು ಹಿಂದುಗಳನ್ನು ಧಮನಿಸುವ ಷಡ್ಯಂತರ ಆಗಿದೆ. ಇದರಲ್ಲಿ ಕೇವಲ ಕಾಂಗ್ರೆಸ್ ಸರಕಾರ ಮಾತ್ರವಲ್ಲ ನಕಲಿ ಹಿಂದುಗಳು ಕೂಡ ಭಾಗಿಗಳಾಗಿದ್ದಾರೆ. ಮೊದಲು ಅವರೊಂದಿಗೆ ಸೇರಿ ಕೊಂಡಿರುವ ನಕಲಿ ಹಿಂದುಗಳ ಸೊಂಟ ಮುರಿಯ ಬೇಕಾಗಿದೆ ಎಂದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿದ ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಾಗಿಲಿನಲ್ಲಿಯೇ ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನ ಕಾರರ ಮಧ್ಯೆ ತಳ್ಳಾಟ ನಡೆಯಿತು. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಎಲ್ಲರನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ಕಳುಹಿಸಿದರು.

ತದನಂತ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾ ಯಿತು. ಪ್ರತಿಭಟನೆಯಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮುಖಂಡರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ವೀಣಾ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ಯಾಮಲಾ ಕುಂದರ್, ಪೃಥ್ವಿರಾಜ್ ಶೆಟ್ಟಿ, ವಿಜಯ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News