ಉಡುಪಿ| ಸರಣಿ ಅಂಗಡಿ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
ಉಡುಪಿ, ನ.6: ಮಣಿಪಾಲದಲ್ಲಿ ಕೆಲ ದಿನಗಳ ಹಿಂದೆ ನಡೆದ ಸರಣಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಮಣಿಪಾಲದ ಶಿಂಬ್ರಾ ಬ್ರಿಡ್ಜ್ ಬಳಿ ನ.6ರಂದು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಜೇಂದ್ರಗಡದ ಮಂಜುನಾಥ್ ಚಿದಾನಂದಪ್ಪ ನರತೆಲಿ (24), ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಪ್ರಸಾದ್(22), ಹಾಗೂ ಕಿಶನ್(20) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಸುಮಾರು 5,00,000ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಅ.31ರಂದು ರಾತ್ರಿ ಮಣಿಪಾಲ ಬೇಕ್‌ಲೇನ್ ಬೇಕರಿ ಹಾಗೂ ಈಶ್ವರ ನಗರದ ಆದಿಶಕ್ತಿ ಜನರಲ್ ಸ್ಟೋರ್ಸ್‌ಗೆ ನುಗ್ಗಿ ಒಟ್ಟು 60,000ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.
ಈ ಬಗ್ಗೆ ತನಿಖೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ಟಿ.ವಿ. ದೇವರಾಜ್ ನೇತೃತ್ವದ ಎಸ್ಸೈಗಳಾದ ಅಕ್ಷಯ ಕುಮಾರಿ, ವಿವೇಕಾನಂದ, ಸಿಬ್ಬಂದಿ ಪ್ರಸನ್ನ ಕುಮಾರ್, ಇಮ್ರಾನ್, ರಘು ಹಾಗೂ ಮಂಜುನಾಥ್ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.