ಸರಕಾರದ ಯೋಜನೆಯಡಿ ತರಬೇತಿ ಪಡೆದವರು ಸ್ವಂತ ಉದ್ಯೋಗಕ್ಕೆ ಮುಂದಾಗಿ: ಸಂಸದ ಕೋಟ

Update: 2024-11-08 13:48 GMT

ಮಣಿಪಾಲ, ನ.8: ಕೇಂದ್ರ ಸರಕಾರದ ಯೋಜನೆಯಡಿ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆದವರು ಸ್ವಂತ ಉದ್ಯೋಗ ಕೈಗೊಂಡು ಇನ್ನೊಂದಿಷ್ಟು ಮಂದಿಗೆ ಉದ್ಯೋಗ ನೀಡಲು ಮುಂದಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲೆಯ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾದ ಕೇಂದ್ರ ಸರಕಾರದ ಸಾಲ ಯೋಜನೆಗಳಾದ ಪಿ.ಎಂ ವಿಶ್ವಕರ್ಮ ಯೋಜನೆ, ಸ್ವನಿಧಿ ಯೋಜನೆ, ಮುದ್ರಾ ಯೋಜನೆ ಹಾಗೂ ಇತರ ಸಾಲಯೋಜನೆಗಳ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರಕಾರ ಜನಸಾಮಾನ್ಯರಿಗಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಸಾಲ-ಸೌಲಭ್ಯಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಅಧಿಕಾರಿ ಗಳಿಗೆ ಕರೆ ನೀಡಿದರು.

ದೇಶದಲ್ಲಿರುವ 18 ಪರಂಪರಾಗತ ಕುಲಕಸುಬುಗಳಿಗೆ ಶಕ್ತಿತುಂಬಿ, ಪ್ರೋತ್ಸಾಹಿಸಲು ಪ್ರಧಾನ ಮಂತ್ರಿಗಳು ಪಿ.ಎಂ. ವಿಶ್ವಕರ್ಮ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆಯಡಿ ಟೈಲರ್‌ಗಳು, ಬಡಗಿ, ಅಕ್ಕಸಾಲಿ ಗರು, ಕುಂಬಾರಿಕೆ, ಗಾರೆ ಕೆಲಸದವರು ಸೇರಿದಂತೆ ಒಟ್ಟು 18 ಪಾರಂಪರಿಕ ಕುಲಕಸುಬುದಾರರಿಗೆ ಅವರ ವೃತಿಯಲ್ಲಿ ಕೌಶಲ್ಯಾಭಿವೃದ್ಧಿಗೆ ತರಬೇತಿ ನೀಡಿ ಬಳಿಕ 15,000ರೂ. ಮೌಲ್ಯದ ಉಚಿತ ಉಪಕರಣ ಗಳೊಂದಿಗೆ ಆರ್ಥಿಕ ಸೌಲಭ್ಯ ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ವೃತ್ತಿಬಾಂದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಒಟ್ಟು 16,309 ಅರ್ಜಿ ಗಳು ಸ್ವೀಕೃತವಾಗಿದ್ದು, ಇವುಗಳಲ್ಲಿ 14,362 ಅರ್ಜಿಗಳು ಗ್ರಾಪಂಗಳ ಮೂಲಕ ಜಿಲ್ಲಾ ಸಮಿತಿಗೆ ಬಂದಿವೆ. ಇವುಗಳಲ್ಲಿ 8022 ಅರ್ಜಿಗಳನ್ನು ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಇನ್ನೂ 6338 ಅರ್ಜಿಗಳನ್ನು ಶಿಫಾರಸ್ಸು ಮಾಡಲು ಬಾಕಿ ಇವೆ ಎಂದು ಕೋಟ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 9 ತರಬೇತಿ ಕೇಂದ್ರಗಳಿದ್ದು, ಇಲ್ಲಿ ಈಗಾಗಲೇ 2293 ಮಂದಿ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆಯು ತಿದ್ದಾರೆ. ತರಬೇತಿಯ ಬಳಿಕ ಫಲಾನುಭವಿಗಳಿಗೆ ವಿವಿಧ ವೃತ್ತಿಗೆ ಸಂಬಂಧಿಸಿದಂತೆ 15,000ರೂ.ಮೌಲ್ಯದ ಉಚಿತ ಉಪಕರಣ ಹಾಗೂ ಒಂದು ಲಕ್ಷ ರೂ. ಸೌಲಸೌಲಭ್ಯ ದೊರೆಯಲಿದೆ. ವಿಶ್ವಕರ್ಮ ಯೋಜನೆಯಡಿ ಈಗಾಗಲೇ 1290 ಮಂದಿ ಫಲಾನುಭವಿಗಳಿಗೆ ಒಟ್ಟು 12.60 ಕೋಟಿ ರೂ. ಬಿಡುಡೆಯಾಗಿದೆ ಎಂದವರು ವಿವರಿಸಿದರು.

ಪಿ.ಎಂ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಗೆ ಒಟ್ಟು 131 ಗುರಿ ನೀಡಲಾಗಿದ್ದು, ಈವರೆಗೆ ಒಟ್ಟು 434 ಅರ್ಜಿಗಳು ಸ್ವೀಕೃತಗೊಂಡಿವೆ. 203 ಫಲಾನುಭವಿಗಳಿಗೆ ಒಟ್ಟು 21.12 ಕೋಟಿ ರೂ. ಸಾಲ ಮಂಜೂರಾಗಿದ್ದು, 53 ಫಲಾನುಭವಿ ಗಳಿಗೆ ಒಟ್ಟು 161.04 ಲಕ್ಷ ರೂ. ಬಿಡುಗಡೆಯಾಗಿದೆ. ಮುದ್ರಾ ಯೋಜನೆಯಡಿ 15,520 ಫಲಾನುಭವಿಗಳಿಗೆ 306 ಕೋಟಿ ರೂ. ಸಾಲ ಬಿಡುಗಡೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೊಳಿ ಸಲಾದ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮೂರು ಹಂತದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಪರಂಪ ರಾಗತ ಕುಲಕಸುಬು ಮಾಡುವವರಿಗೆ ವೃತ್ತಿ ನೈಪುಣ್ಯತೆ ನೀಡಲು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ. ವಿವಿಧ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿ ಗಳು ಇನ್ನಷ್ಟು ಮಂದಿಗೆ ಇದನ್ನು ತಲುಪಿಸಿದಾಗ ಯೋಜನೆ ಫಲಪ್ರದ ವಾಗುತ್ತದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ನಗರಾಭಿವೃಧ್ದಿ ಪ್ರಾಧಿಕಾ ರದ ಅಧ್ಯಕ್ಷ ದಿನಕರ ಹೇರೂರು, ಮಣಿಪಾಲ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮುಖ್ಯ ಪ್ರಬಂಧಕ ಜಯಪ್ರಕಾಶ್ ಸಿ., ಪಿ.ಎಂ ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶ್ರೀನಿಧಿ ಹೆಗಡೆ ಹಾಗೂ ಸುರೇಂದ್ರ ಫಣಿಯೂರು ಉಪಸ್ಥಿತರಿದ್ದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ ಸ್ವಾಗತಿಸಿದರೆ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ-1ರ ಉಪ ಮಹಾ ಪ್ರಬಂಧಕಿ ಶೀಬಾ ಸಹಜನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News