ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಎಸ್‌ಐಟಿ ತನಿಖೆಗೆ ಸಿಪಿಐಎಂ ಆಗ್ರಹ
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಮಲ್ಪೆ ಶಾಖೆಯಲ್ಲಿನ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
2023ರ ಮಾರ್ಚ್ ತಿಂಗಳಲ್ಲಿ ಮಲ್ಪೆ ಶಾಖೆಯ ಮ್ಯಾನೇಜರ್ ಆಗಿದ್ದ ಸುಬ್ಬಣ್ಣ ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಅವರ ಅಣ್ಣ ಸುರೇಶ್, ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಸುವರ್ಣ ಅವರ ಮೇಲೆ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರಕಾರ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಮಾತ್ರವಲ್ಲ ಆಪಾದನೆಗೆ ಒಳಗಾದ ವ್ಯಕ್ತಿಗೇ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿತ್ತು.
ಈಗ ಸಾಲ ಪಡೆದವರು, ಕಡಿಮೆ ಸಾಲ ಪಡೆದು ಹೆಚ್ಚು ಸಾಲ ಪಡೆದಿದ್ದೀರಿ ಎಂದು ನೋಟೀಸು ಪಡೆದವರು ನೂರಾರು ಜನರು ಬ್ಯಾಂಕಿಗೆ ದೂರು ನೀಡಿದ್ದಾರೆ. ಈ ಕುರಿತು ಆಣೆ, ಪ್ರಮಾಣ ಕೈಗೊಳ್ಳುವುದರ ಬದಲಾಗಿ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.