ಕೈಗಾರಿಕಾ ಕ್ರಾಂತಿ, ತಾಂತ್ರಿಕ ವಿಕಾಸಕ್ಕೆ ಹಿಡಿದ ಕೈಗನ್ನಡಿ: ಡಾ.ಭಟ್ಟಾಚಾರ್ಯ
ಮಣಿಪಾಲ, ನ.9: ಕೈಗಾರಿಕಾ ಕ್ಷೇತ್ರದಲ್ಲಾಗಿರುವ ಕ್ರಾಂತಿಯು ಇಂದಿನ ತಾಂತ್ರಿಕ ವಿಕಾಸಕ್ಕೆ ಕೈಗನ್ನಡಿಯಂತಿದೆ. ಇದು ಸ್ಟೀಮ್ ಇಂಜಿನ್‌ನಿಂದ ಇಂದಿನ ಸೈಬರ್ -ಭೌತಿಕ ವ್ಯವಸ್ಥೆಯವರೆಗೆ ಬೆಳೆದುಬಂದಿದೆ ಎಂದು ಹೊಸದಿಲ್ಲಿಯ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ರೊಬೊಟಿಕ್ಸ್ ಆ್ಯಂಡ್ ಆರ್ಟಿಪೀಷಿಯಲ್ ಇಂಟೆಲಿಜೆನ್ಸ್ (ನೀರಾ)ನ ಮಹಾ ನಿರ್ದೇಶಕ ಡಾ.ಇಂದ್ರಜಿತ್ ಭಟ್ಟಾಚಾರ್ಯ ಹೇಳಿದ್ದಾರೆ.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 32ನೇ ಘಟಿಕೋತ್ಸವದ ಎರಡನೇ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ಹೆತ್ತವರನ್ನುದ್ದೇಶಿಸಿ ಮಾತನಾಡುತಿದ್ದರು.
50 ವರ್ಷಗಳ ಹಿಂದೆ ಸಾಮಾನ್ಯ ಮಟ್ಟದಲ್ಲಿದ್ದ ಸ್ಥಳೀಯ ಮಾರುಕಟ್ಟೆ ಯನ್ನು ಇಂದು ಅಮೆಝಾನ್, ಸ್ವಿಗ್ಗಿಯಂಥ ಕೃತಕ ಬುದ್ದಿಮತ್ತೆ (ಎಐ) ಚಾಲಿತ ಪ್ಲಾಟ್‌ಫಾರಂಗಳು ಅವುಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿವೆ. ಎಐ ಇಂದು ಬೆಂಕಿಯಂಥ ಪರಿವರ್ತಕ ಶಕ್ತಿಯನ್ನು ಹೊಂದಿದೆ. 2030ರ ಹೊತ್ತಿಗೆ ಇದು ಜಾಗತಿಕ ಆರ್ಥಿಕತೆಯನ್ನು 15ಟ್ರಿಲಿಯನ್ ಡಾಲರ್‌ಗೆ ಒಯ್ಯಲಿದ್ದು, ಲಕ್ಷಾಂತರ ಉದ್ಯೋಗಗಳನ್ನು ಸಹ ಸೃಷ್ಟಿಸಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಎಐ ಭಯ ಬೇಡ: ಕೃತಕ ಬುದ್ಧಿಮತ್ತೆ ಕುರಿತಂತೆ ನಿಮಗೆ ಯಾವುದೇ ಭಯ ಬೇಡ ಎಂದು ಪದವಿ ಪಡೆದು ಹೊರಬರುತ್ತಿ ರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಡಾ.ಭಟ್ಟಾಚಾರ್ಯ, ಎಐ ನಿಮ್ಮ ಉದ್ಯೋಗವನ್ನು ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಎಐನ್ನು ಅಪ್ಪಿಕೊಳ್ಳುವ ಮೂಲಕ ನಿಮ್ಮ ಹಾಗೂ ನಿಮ್ಮ ತಂಡದ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಎಂದರು.
ಅದರಲ್ಲೂ ಜೆನರೇಟಿವ್ ಎಐ (ಜೆನ್‌ಎಐ) ಅತ್ಯಂತ ಭರವಸೆದಾಯಕ ವಾಗಿದೆ. ಅಪಾರ ಪ್ರಮಾಣದಲ್ಲಿರುವ ಡಾಟಾ- ಪಠ್ಯ, ಚಿತ್ರ, ಸೂಕ್ಷ್ಮ ವಿಷಯಗಳನ್ನು- ಸಂಯೋಜಿಸುವ ಹಾಗೂ ವಿಶ್ಲೇಷಿಸುವ ಮೂಲಕ ಅದು ಅತ್ಯಂತ ದಕ್ಷತೆಯನ್ನು ತೋರುವುದಲ್ಲದೇ, ಆರೋಗ್ಯದಂಥ ಕ್ಷೇತ್ರಗಳಲ್ಲಿ ನಿಖರತೆಯನ್ನು ತೋರಿಸುತ್ತದೆ. ಬ್ರೈನ್‌ಸೈಟ್‌ನಂಥ ಸಂಶೋಧನೆಯಲ್ಲಿ ಎಐ, ಮಿದುಳಿನ ಗಡ್ಡೆ, ಮರೆವು ರೋಗಕ್ಕೆ ಕಾರಣಗಳನ್ನು ಪತ್ತೆ ಮಾಡಿ ಚಿಕಿತ್ಸೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಆದರೂ ಕೃತಕ ಬುದ್ಧಿಮತ್ತೆಯನ್ನು ಹೆಚ್ಚು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕಾಗಿದೆ. ಈ ಮೂಲಕ ಡಾಟಾದ ಗುಣ ಮಟ್ಟವನ್ನು ಎತ್ತಿ ಹಿಡಿಯಬೇಕಾಗಿದೆ. ಉತ್ತರದಾಯಿತ್ವ ಹಾಗೂ ನ್ಯಾಯಪರತೆ ಇರುವ ನೈತಿಕ ಬುದ್ಧಿಮತ್ತೆ ಜಾಗತಿಕ ಪ್ರಯತ್ನಗಳಿಗೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದಂತೆ ಜಾಗತಿಕ ಮಟ್ಟ ಎಐ ಮಾನವರ ಒಳಿತಿಗಾಗಿ ಬಳಕೆಯಾಗುವುದನ್ನು ಖಚಿತ ಪಡಿಸಬೇಕಾಗಿದೆ ಎಂದರು.
ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಲೆ.ಜ. (ಡಾ.)ಎಂ.ಡಿ.ವೆಂಕಟೇಶ್, ರಿಜಿಸ್ಟ್ರಾರ್ ಡಾ.ಪಿ. ಗಿರಿಧರ್ ಕಿಣಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕೆ.ರಾವ್, ಡಾ.ದಿಲೀಪ್ ಜಿ. ನಾಯಕ್, ರಿಜಿಸ್ಟ್ರಾರ್ ಡಾ.ವಿನೋದ್ ವಿ.ಥಾಮಸ್ ಮುಂತಾದವರು ಉಪಸ್ಥಿತರಿದ್ದರು.
ಎರಡನೇ ದಿನದಂದು ಎಂಎಸ್‌ಎಲ್‌ಎಸ್‌ನ ಮಾಲಿಕ್ಯುಲರ್ ಬಯಾಲಜಿ ಯಲ್ಲಿ ಎಂಎಸ್ಸಿ ಓದುತ್ತಿರುವ ಅಡ್ಲಿನ್ ಸಿಯೋನಾ ರೆಬೆಲ್ಲೊ, ಎಂಐಸಿಯಲ್ಲಿ ಬಿಎ ಓದುತ್ತಿರುವ ಸಮರಗ್ಗಿ ಪಾತ್ರ, ಪಿಎಸ್‌ಪಿಎಚ್‌ನಲ್ಲಿ ಎಂಎಸ್ಸಿ ಬಯೋಸ್ಟಾಟ್ ಓದುತ್ತಿರುವ ಜಿವಿತಿಕಾ ಕೆ.ಎಂ. ಅವರು ತಮ್ಮ ಸಾಧನೆಗಳಿಗೆ ಡಾ.ಟಿಎಂಎ ಪೈ ಚಿನ್ನದ ಪದಕಗಳನ್ನು ಪಡೆದರು.
ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ.ನಾರಾಯಣ ಸಭಾಹಿತ್ ಅತಿಥಿಗಳನ್ನು ಸ್ವಾಗತಿಸಿದರೆ, ಎಂಕಾಡ್ಸ್‌ನ ಸಹಾಯ ಪ್ರಾಧ್ಯಾಪಕ ಡಾ.ಆನಂದದೀಪ್ ಶುಕ್ಲ ಕಾರ್ಯಕ್ರಮ ನಿರೂಪಿಸಿದರು. ಮಣಿಪಾಲ ಎಂಐಸಿ ನಿರ್ದೇಶಕಿ ಡಾ.ಪದ್ಮಾರಾಣಿ ವಂದಿಸಿದರು.