ಗಲಭೆಗ್ರಸ್ತ ಕಡಕೋಳ ಗ್ರಾಮಕ್ಕೆ ಮುಸ್ಲಿಂ ಬಾಂಧವ್ಯ ವೇದಿಕೆ ಭೇಟಿ
ಉಡುಪಿ: ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ನೀಡಿದೆ ಎಂಬುದನ್ನು ನೆಪವಾಗಿಸಿಕೊಂಡು ನಡೆದ ಭಯಾನಕ ಗಲಭೆ ಯಲ್ಲಿ ಸುಮಾರು 70 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಗ್ರಾಮ ತೊರೆದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮಕ್ಕೆ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆ ಭೇಟಿ ನೀಡಿತು.
ಗಲಭೆಯ ಕಾರಣದಿಂದ ಮಸೀದಿಯ ಧರ್ಮಗುರುಗಳೂ ಕೂಡ ಗ್ರಾಮ ತೊರೆದಿದ್ದು, ಮಸೀದಿಯಲ್ಲಿ ಒಂದು ವಾರದಿಂದ ಪ್ರಾರ್ಥನೆ ನಿಂತಿದೆ. ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವ್ಯ ವೇದಿಕೆ ಸದಸ್ಯರು ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಮೌಲಾ ಸಾಬ್ ನದಾಫ್ ಮತ್ತು ಸದಸ್ಯರನ್ನು ಮಾತನಾಡಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಊರಿನಲ್ಲಿರುವ ಹಿಂದೂ ಸಮುದಾಯದ ಮುಖಂಡರನ್ನು ಸೇರಿಸಿ ಸಭೆ ನಡೆಸಲಾಯಿತು. ಶತಮಾನಗಳಿಂದ ರೂಪಿಸಿಕೊಂಡು ಬಂದ ಸಾಮರಸ್ಯವನ್ನು ರಾಜಕೀಯದ ಉದ್ದೇಶದಿಂದ ಸಮಾಜ ಘಾತಕ ಶಕ್ತಿಗಳು ಮತ್ತು ಊರಿನ ಬಾಹ್ಯ ಶಕ್ತಿಗಳು ಕೆಡಿಸಲು ನಡೆಸುತ್ತಿರುವ ಷಡ್ಯಂತ್ರವನ್ನು ಅರಿತು ಸೌಹಾರ್ದಿಂದ ಬದುಕಬೇಕು ಎಂಬ ಕರೆಯನ್ನು ಸಂಘಟನೆಯ ಸದಸ್ಯರು ಗ್ರಾಮಸ್ಥರಿಗೆ ನೀಡಿದರು.
ಊರು ಬಿಟ್ಟುಹೋದ ಸದಸ್ಯರನ್ನು ಹಿಂತಿರುಗಿ ಕರೆದುಕೊಂಡು ಬರುವುದರ ಜೊತೆಗೆ ಕಿಡಿಗೇಡಿಗಳ ದಾಂಧಲೆ ದುಷ್ಕರ್ಮ ಗಳ ವಿರುದ್ಧ ಒಂದಾಗಿ ನಿಲ್ಲುವ ಭರವಸೆಯನ್ನು ಈ ಸಂದರ್ಭದಲ್ಲಿ ಊರಿನ ಹಿರಿಯ ಹಿಂದೂ ಮುಖಂಡರು ನೀಡಿದರು. ಊರಿನಲ್ಲಿ ಸೌಹಾರ್ದ ಸ್ಥಾಪಿಸಲು ಶ್ರಮ ಪಡುತ್ತಿರುವ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ಪ್ರಯತ್ನ ವನ್ನು ಗ್ರಾಮಸ್ಥರು ಒಕ್ಕೂರಲಿನಿಂದ ಶ್ಲಾಘಿಸಿದರು. ಗಲಭೆ ಸಂಬಂಧ ಶೀಘ್ರದಲ್ಲಿ ನಡೆಯುವ ಶಾಂತಿ ಮತ್ತು ಸಂಧಾನ ಸಭೆಗೆ ಬಾಂಧವ್ಯ ವೇದಿಕೆಯು ಭಾಗವಹಿಸಬೇಕು ಎಂಬ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಉಭಯ ಸಮುದಾಯದ ಹಿರಿಯ ಮುಖಂಡರು ವ್ಯಕ್ತಪಡಿಸಿದರು.
ವೇದಿಕೆಯ ನಿಯೋಗದಲ್ಲಿ ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಅಧ್ಯಕ್ಷ ಸುಹೇಲ್ ಅಹಮದ್ ಮರೂರ್, ವಕ್ತಾರ ಮುಷ್ತಾಕ್ ಹೆನ್ನಾಬೈಲ್, ಮಾಜಿ ಅಧ್ಯಕ್ಷ ಅನಿಸ್ ಪಾಷಾ, ಖಜಾಂಚಿ ಮುಝಫರ್ ಹುಸೇನ್ ಪಿರಿಯಾಪಟ್ಟಣ, ಮುಬಾರಕ್ ಗುಲ್ವಾಡಿ, ರಫೀಕ್ ನಾಗೂರ್, ರೆಹಮತ್ ದಾವಣಗೆರೆ ಮೊದಲಾದವರು ಉಪಸ್ಥಿತರಿದ್ದರು.