ಯಕ್ಷಗಾನ ಕಲಾವಿದ, ಭಾಗವತ ಕಮಲಾಕ್ಷ ಪ್ರಭು ನಿಧನ

Update: 2024-11-18 14:11 GMT

ಉಡುಪಿ, ನ.18: ಯಕ್ಷಗಾನ ಕಲಾವಿದ, ಭಾಗವತ ಮುಂಡ್ಕಿನಜೆಡ್ಡು ಕಮಲಾಕ್ಷ ಪ್ರಭು(58) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಇವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಞರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾ ಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ ಇವರು ಸಹಸ್ರಾರು ಮಂದಿ ಯಕ್ಷಗಾನ ಕಲಾವಿದರ ಹುಟ್ಟಿಗೆ ಕಾರಣರಾದವರು. ಸಂಪ್ರದಾಯ ಬದ್ಧವಾದ ಬಡಗುತಿಟ್ಟಿನ ಯಕ್ಷಗಾನ ಕಲೆಯ ಉಳಿವು-ಬೆಳವಿಗೆ ಕಾರಣರಾಗಿದ್ದರು.

90 ದಶಕದಲ್ಲಿ ಮಣಿಪಾಲದ ಸರಳೇಬೆಟ್ಟುವಿನಲ್ಲಿ ಬಾಲಮಿತ್ರ ಯಕ್ಷ-ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಿ ಎಳೆಯ ಪ್ರತಿಭೆಗಳಿಗೆ ನಿರಂತರ ಉಚಿತ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದರು. ಬಾಲಮಿತ್ರ ಯಕ್ಷಗಾನ ಮಂಡಳಿಯು ದೇಶದಲ್ಲಿ ಮಾತ್ರ ವಲ್ಲದೆ ದುಬೈ, ಸಿಂಗಾಪುರ, ಆಫ್ರಿಕಾ ಸೇರಿ ವಿಶ್ವದ ವಿವಿಧೆಡೆ ಪ್ರದರ್ಶನ ನೀಡಿದೆ.

ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ಮನೆ ಮನೆಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡುವ ಹೂವಿನ ಕೋಲು ಪ್ರಾಕಾರ ವನ್ನು ನಗರ ಪ್ರದೇಶಕ್ಕೂ ತಲಪಿಸುವ ಕಾರ್ಯ ಮಾಡಿದ್ದರು. ಇವರು ಪತ್ನಿ ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ಶುಶ್ರೂಷಾ ಧೀಕ್ಷಕಿ ಕವಿತಾ ಕಾಮತ್, ಪುತ್ರರಾದ ವಿಘ್ನೇಶ್ ಮತ್ತು ಶೈಲೇಶ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News