ಜನರ ಬಳಿಗೆ ಇತಿಹಾಸ ಒಯ್ದವರು ಗುರುರಾಜ ಭಟ್ಟರು: ಡಾ.ಪುಂಡಿಕಾ
ಉಡುಪಿ, ನ.19: ಮುಗ್ಧ ಮಗುವಿನ ಆಸಕ್ತಿ ಹಾಗೂ ಕುತೂಹಲ ದೊಂದಿಗೆ ಇತಿಹಾಸ ಸಂಶೋಧನೆಯಲ್ಲಿ ತೊಡಗಿದ್ದ ಡಾ.ಪಾದೂರು ಗುರುರಾಜ ಭಟ್ ಜನರ ಬಳಿಗೆ ಇತಿಹಾಸ ಕೊಂಡೊಯ್ದವರು ಎಂದು ಖ್ಯಾತ ಇತಿಹಾಸ ಸಂಶೋಧಕ ಡಾ. ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.
ಪೂರ್ಣಪ್ರಜ್ಞ ಕಾಲೇಜಿನ(ಸ್ವಾಯತ್ತ), ಆಂತರಿಕ ಗುಣಮಟ್ಟ ಖಾತರಿ ಘಟಕ, ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್, ಇತಿಹಾಸ ಅಧ್ಯಯನ ವಿಭಾಗ ಮತ್ತು ಸಮಾಜ ವಿಜ್ಞಾನ ಸಂಘದಿಂದ ಡಾ. ಪಾದೂರು ಗುರುರಾಜ ಭಟ್ ಜನ್ಮ ಶತಮಾನೋತ್ಸವದ ಅಂಗವಾಗಿ ತುಳುನಾಡಿನ ಇತಿಹಾಸ ಸಂಶೋಧನೆಗೆ ಡಾ. ಪಿ. ಗುರುರಾಜ ಭಟ್ ಕೊಡುಗೆಗಳು ಎಂಬ ವಿಷಯವಾಗಿ ಮಂಗಳವಾರ ನಡೆದ ಮಂಗಳೂರು ವಿವಿ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತಿದ್ದರು.
ಡಾ.ಭಟ್ಟರ ವ್ಯಕ್ತಿಚಿತ್ರವನ್ನು ಸಭಿಕರ ಮುಂದಿಟ್ಟ ಡಾ.ಪುಂಡಿಕಾ, ಅವರು ವೃತ್ತಿಪರ ಇತಿಹಾಸಕಾರರಲ್ಲಿ ಅಗ್ರಗಣ್ಯರು. ಉತ್ತಮ ಆಡಳಿತಗಾರ, ಉಪನ್ಯಾಸಕ, ಮಾದರಿ ವ್ಯಕ್ತಿತ್ವ ಹೊಂದಿದ್ದವರು. ಡಾ. ಭಟ್ ಇತಿಹಾಸ ಸಂಶೋಧನೆಯ ದಂತಕಥೆ. ಜೀವನ, ಸಾಧನೆ ನೆಲೆಯಲ್ಲಿ ರೋಚಕ ವ್ಯಕ್ತಿತ್ವ ಹೊಂದಿದ್ದರು. ಬಡತನ, ಕೌಟುಂಬಿಕ ಹಿನ್ನೆಲೆಯಿಲ್ಲದೆ ಸಾಧ ನೆಯ ಶಿಖರವೇರಿದ್ದರು. ಕ್ಷೇತ್ರ ಕಾರ್ಯವಿಲ್ಲದೇ ಗುರುರಾಜ ಭಟ್ಟರ ಸಂಶೋಧನೆ ಯಿಲ್ಲ. ಇತಿಹಾಸದ ತೀವ್ರ ಆಸಕ್ತಿಯ ಹಿನ್ನೆಲೆಯಲ್ಲಿ ಅವರು ನಿಷ್ಠೆಯಿಂದ ಸತ್ಯಾನ್ವೇಷಣೆಯ ಹಾದಿಯಲ್ಲಿ ಸಾಗಿದ್ದರು ಎಂದರು.
ಟ್ರಸ್ಟ್ ಕಾರ್ಯದರ್ಶಿ ವಿಶ್ವನಾಥ ಪಾದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಡಾ. ಬಿ. ಜಗದೀಶ ಶೆಟ್ಟಿ ಮಾತನಾಡಿ, ಗುರುರಾಜ ಭಟ್ಟರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಇತಿಹಾಸ ಪ್ರಜ್ಞೆ ಮೂಡಿ ಸಿದ, ಪ್ರಚಾರದ ಗೀಳಿಲ್ಲದ ಅಪೂರ್ವ ಸಂಶೋಧಕರಾಗಿದ್ದರು. ಜನ ಸಾಮಾನ್ಯರಲ್ಲಿ ಇತಿಹಾಸದ ಬಗ್ಗೆ ಕಳಕಳಿ ಮೂಡಿಸಿ ದ್ದರು. ವಿದ್ಯಾರ್ಥಿ ಗಳಲ್ಲಿ ಇತಿಹಾಸ ಅಧ್ಯಯನಕ್ಕೆ ಯಾವುದೇ ಕೀಳರಿಮೆ ಬೇಡ. ಸಂಶೋಧಕರು ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಬೇಕು ಎಂದರು.
ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್. ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಪದಾಧಿಕಾರಿ ಪರಶುರಾಮ ಭಟ್, ರಘುಪತಿ ರಾವ್, ಡಾ. ವಿನೋದ್ ಕುಮಾರ್ ಜಿ.ಸಿ., ಡಾ. ವಿನಯ ಕುಮಾರ್ ಡಿ., ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾಶ್ರೀ ನಿರೂಪಿಸಿ, ಸೌಜನ್ಯಾ ವಂದಿಸಿದರು.