ಅರಣ್ಯ ಇಲಾಖೆ, ಪೊಲೀಸರ ಕಾಟ ತಾಳಲಾರದೆ ನಕ್ಸಲ್ ಆದ ವಿಕ್ರಂ ಗೌಡ ದುರಂತ ಅಂತ್ಯ

Update: 2024-11-19 16:04 GMT

(ವಿಕ್ರಂ ಗೌಡ, ಎನ್‌ಕೌಂಟರ್‌ ನಡೆದ ಮನೆ)

ಉಡುಪಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ವಿರುದ್ಧ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಪ್ರಾರಂಭಗೊಂಡ ಚಳವಳಿಯ ಸಂದರ್ಭದಲ್ಲಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ವಿಕ್ರಂ ಗೌಡ, ಇದರಿಂದ ಅರಣ್ಯ ಇಲಾಖೆ ಹಾಗೂ ಪೊಲೀಸರು ತನ್ನ ಹಾಗೂ ಕುಟುಂಬದ ಬೆನ್ನುಹತ್ತಿದಾಗ ಕೊನೆಗೆ ಕಾಟ ತಾಳದೇ ನೇರವಾಗಿ ನಕ್ಸಲ್ ಚಳವಳಿಯನ್ನು ಅಪ್ಪಿಕೊಂಡಿದ್ದು, ಇದೀಗ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಕಬ್ಬಿನಾಲೆ ಬಳಿಯ ಕೂಡ್ಲುಮನೆಯ ಮಲೆಕುಡಿಯ ಜನಾಂಗದ ವಿಕ್ರಂ ಗೌಡ (ಸುಮಾರು 46 ವರ್ಷ) ಅನ್ಯಾಯ ಹಾಗೂ ವ್ಯವಸ್ಥೆ ವಿರುದ್ಧ ಹೋರಾಡುತ್ತಾ ಪೊಲೀಸರ ಹಾಗೂ ಅರಣ್ಯ ಇಲಾಖೆಯ ಕಂಗೆಣ್ಣಿಗೆ ಗುರಿಯಾಗಿದ್ದರು. ಹಲವು ಬಾರಿ ಪೊಲೀಸರಿಂದ ಚಿತ್ರಹಿಂಸೆಗೂ ಒಳಗಾಗಿ ಕೊನೆಗೆ ವ್ಯವಸ್ಥೆ ವಿರುದ್ಧವೇ ಸಿಡಿದೆದ್ದು, ಆಗ ತಾನೇ ಕರಾವಳಿ-ಮನೆನಾಡು ಭಾಗದಲ್ಲಿ ಬೇರುಬಿಡಲು ಪ್ರಯತ್ನಿಸುತಿದ್ದ ನಕ್ಸಲ್ ಚಳವಳಿಯನ್ನು ಅಪ್ಪಿಕೊಂಡಿದ್ದರು.

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಕ್ಸಲ್ ಚಳವಳಿ ಜೋರಾಗಿ ಸದ್ದು ಮಾಡುತಿದ್ದ ಸಮಯದಲ್ಲಿ ಒಮ್ಮೆ ಶೃಂಗೇರಿ ಸಮೀಪದ ಕಿಗ್ಗದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ ಎಂಬ ವ್ಯಾಪಕ ಸುದ್ದಿ ಹಬ್ಬಿತ್ತು. ಕೊನೆಗೆ ಸಂಬಂಧಿಯೊಬ್ಬರು ಶೃಂಗೇರಿಯ ಆಸ್ಪತ್ರೆಗೆ ತಂದ ಮೃತದೇಹವನ್ನು ಪರಿಶೀಲಿಸಿ ಅದು ವಿಕ್ರಮನದ್ದಲ್ಲವೆಂದು ಖಚಿತ ಪಡಿಸಿದ ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಆಗ ಸಾಮಾನ್ಯ ನಕ್ಸಲ್ ಆಗಿದ್ದ ವಿಕ್ರಮ ಗೌಡ ಬಳಿಕ ಒಂದು ಗುಂಪಿನ ನಾಯಕನೂ, ಕರ್ನಾಟಕ ಪ್ರಾಂತದ ಪ್ರಮುಖನೂ ಆಗಿ ಬೆಳೆದಿದ್ದರು.

ಕರ್ನಾಟಕದಲ್ಲಿ ನಕ್ಸಲ್ ಶಕ್ತಿಗುಂದಿದ ಬಳಿಕ ತನ್ನ ಅಳಿದುಳಿದ ಸಂಗಡಿಗ ರೊಂದಿಗೆ ಕೇರಳದತ್ತ ಸಾಗಿದ್ದ ವಿಕ್ರಂ ಗೌಡ, ಪೂರ್ಣ ಪ್ರಮಾಣದ ನಾಯಕನಾಗಿ ಬೆಳೆದಿದ್ದರು ಎಂದು ಹೇಳಲಾಗುತ್ತಿದೆ. ಮೂರ್ನಾಲ್ಕು ಬಾರಿ ಎನ್‌ಕೌಂಟರ್‌ನಿಂದ ಸ್ವಲ್ಪದರಲ್ಲೇ ಪಾರಾಗಿದ್ದ ವಿಕ್ರಂ ಗೌಡ, 2016ರಲ್ಲಿ ಕೇರಳದ ನೀಲಾಬರಿ ಎನ್‌ಕೌಂಟರ್‌ನಲ್ಲಿ ಕೂದಲೆಳೆಯಂತರದಲ್ಲಿ ಬಚಾವಾಗಿದ್ದರು ಎಂದು ವರದಿಯಾಗಿತ್ತು. ಇತ್ತೀಚೆಗೆ ನಾಲ್ಕೈದು ಮಂದಿ ಸಂಗಡಿಗರೊಂದಿಗೆ ಮತ್ತೆ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಮರಳಿದ್ದರು. ನವೆಂಬರ್ ಬಳಿಕ ಕಾರ್ಕಳದ ಈದು ಸೇರಿದಂತೆ ಮಲೆನಾಡಿನ ಹಲವು ಕಡೆ ವಿಕ್ರಂ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿತ್ತು.

ಕರಾವಳಿ-ಮಲೆನಾಡು ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ತಣ್ಣಗಾಗಿದ್ದ ನಕ್ಸಲ್ ಚಳವಳಿ ಮತ್ತೆ ತಲೆ ಎತ್ತುತಿದ್ದಂತೆ ಚುರುಕಾದ ಎಎನ್‌ಎಫ್ ಹಾಗೂ ಪೊಲೀಸ್ ಪಡೆ ಇದೀಗ ತಮ್ಮ ಬೇಹು ಜಾಲದಮೂಲಕ ವಿಕ್ರಂ ಸುಳಿವನ್ನು ಪತ್ತೆ ಹಚ್ಚಿ ಇದೀಗ ಆತನ ಬಲಿ ಪಡೆದಿದ್ದಾರೆ. ಅಳಿದುಳಿದ ನಕ್ಸಲ್ ಬಲಕ್ಕೆ ಇದು ಬಲವಾದ ಮರ್ಮಾಘಾತವೆನ್ನಬಹುದು.

ಕೇವಲ ಐದನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದ ವಿಕ್ರಮ ಗೌಡ ಅವರ ತಾಯಿ ಗುಲಾಬಿ, ಅರಣ್ಯ ಇಲಾಖೆಯವರ ಹಾಗೂ ಪೊಲೀಸರ ವಿಚಾರಣೆಯ ಶಿಕ್ಷೆಯಿಂದ ಪಾರಾಗಲು ಯಾವತ್ತೊ ಮನೆಯನ್ನು ತೊರೆದು ಹೋಗಿದ್ದರು. ಪದೇ ಪದೇ ನಡೆಯುತಿದ್ದ ವಿಚಾರಣೆಯಿಂದ ಬೇಸತ್ತ ವಿಕ್ರಮನ ತಮ್ಮ ಸುರೇಶ, ಹೆಂಡತಿ ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಹೆಬ್ರಿಯಲ್ಲೆಲ್ಲೊ ವಾಸವಾಗಿದ್ದ ಎಂದು ಹೇಳಲಾಗುತ್ತಿದೆ. ವಿಕ್ರಮನ ನಿಕಟ ಸಂಬಂಧಿ ಸುರೇಶ ಗೌಡ ಮುಂಬೈಯಿಂದ ಊರಿಗೆ ಮರಳಿ ಕಬ್ಬಿನಾಲೆ ಆಸುಪಾಸಿನಲ್ಲಿ ತೋಟದ ಕೆಲಸ ಮಾಡುತಿದ್ದು ಆತನನ್ನೂ ಪೊಲೀಸರು ವಿಚಾರಣೆಯ ನೆಪದಲ್ಲಿ ಬಂಧಿಸಿ ಸಾಕಷ್ಟು ಕಿರುಕುಳ ನೀಡುತಿದ್ದಾರೆ ಎಂದು ಸುರೇಶನ ಪತ್ನಿ 2008ರಲ್ಲಿ ಪತ್ರಕರ್ತರೊಂದಿಗೆ ದೂರಿಕೊಂಡಿದ್ದರು. ಇವೆಲ್ಲವೂ ಆತ ವ್ಯವಸ್ಥೆಯ ವಿರುದ್ಧ ನಿಲ್ಲಲು ಕಾರಣವಾದ ಅಂಶಗಳು ಎಂಬುದು ಕಬ್ಬಿನಾಲೆ, ಕೂಡ್ಲುವಿನಲ್ಲಿ ಆತನನ್ನು ಬಲ್ಲವರು ಹೇಳುವ ಮಾತುಗಳು.

ಸುಮಾರು 2002-03ರ ಸುಮಾರಿಗೆ ವಿಕ್ರಂ ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ವಿರೋಧಿಸಲು ‘ಕರ್ನಾಟಕ ವಿಮೋಚನಾ ಸಂಘ’ ಪ್ರಾರಂಭಗೊಂಡಾಗ ವಿಕ್ರಂ ಅದರಲ್ಲಿ ಸೇರಿ ಕೊಂಡರು. ಸಾಕೇತ್ ರಾಜನ್ ನಕ್ಸಲ್ ಚಳವಳಿಯ ಮುಂದಾಳತ್ವ ವಹಿಸಿ ಬಂದಾಗ ಇವರಲ್ಲಿ ಕೆಲವರು ನಕ್ಸಲ್ ಚಳವಳಿ ಸೇರಿದ್ದರು. ಊರಿನಲ್ಲಿ ಜನರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಇವರು ಆರಂಭದಲ್ಲಿ ನಕ್ಸಲಿಸಂಗೆ ಬೆಂಬಲ ನೀಡಿ ಬಳಿಕ ಆ ಚಳವಳಿಯ ಭಾಗವಾಗಿ ಸೇರಿದರು ಎಂಬುದು ಹಲವರ ಅಭಿಪ್ರಾಯ.

ವಿಕ್ರಂ ಗೌಡ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣ ಅರಣ್ಯ ಇಲಾಖೆಯವರು. ಅವರು ವಿಕ್ರಂ ಮೆಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಪೊಲೀಸರು ಅವರೊಂದಿಗೆ ಸೇರಿ ಸಾಕಷ್ಟು ಹಿಂಸಿಸಿದ್ದರು. ಇದರಿಂದ ಆಕ್ರೋಶಿತ ನಾಗಿ ವಿಕ್ರಂ ನಕ್ಸಲ್ ತಂಡ ಸೇರಿದರು. ಆದರೆ ವಿಕ್ರಮ್ ಸಾಧು ಸ್ವಭಾವದ ಹುಡುಗ. ಆತ ನಕ್ಸಲ್ ನಾಯಕನಾಗುತ್ತಾನೆ ಎಂಬುದನ್ನು ಕನಸಿನಲ್ಲೂ ಊಹಿಸಲು ಸಾದ್ಯವಿರಲಿಲ್ಲ ಎಂದು 2008ರಲ್ಲಿ ಈ ಪ್ರದೇಶ ದಲ್ಲಿ ಪತ್ರಕರ್ತರ ತಂಡವೊಂದು ಸುದ್ದಿಯ ಬೆನ್ನು ಹತ್ತಿ ತೆರಳಿದ್ದಾಗ ಅಕ್ಕಪಕ್ಕದ ಮನೆಯವರು ಹೇಳಿದ ಅಭಿಪ್ರಾಯವಾಗಿತ್ತು.

ಇದೀಗ 13 ವರ್ಷಗಳ ಬಳಿಕ ಕರಾವಳಿಯಲ್ಲಿ ನಕ್ಸಲ್ ಎನ್ಕೌಂಟರ್ ನಡೆದಿದೆ. 2011ರಲ್ಲಿ ಪೊಲೀಸರ ಮಾಹಿತಿದಾರ ಎಂಬ ನೆಲೆಯಲ್ಲಿ ಸದಾಶಿವ ಗೌಡನೇ ನಕ್ಸಲರಿಗೆ ಕೊನೆಯ ಬಲಿಯಾಗಿದ್ದ. ಆ ಬಳಿಕ ಕೇರಳದತ್ತ ಸಾಗಿದ್ದ ಪಶ್ಚಿಮ ಘಟ್ಟದ ಈ ತಂಡದ ವಿಕ್ರಂಗೌಡ ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನಾಗಿ ಆಗಿ ಬೆಳೆದಿದ್ದರು. ಕಳೆದ 20 ವರ್ಷಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದರು. ಇದೀಗ ತಾನು ಆಡಿ ಬೆಳೆದ ಕೂಡ್ಲು ಮನೆ ಪರಿಸರದ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ಕೌಂಟರ್‌ಗೆ ವಿಕ್ರಂ ಗೌಡ ಬಲಿಯಾಗಿದ್ದಾರೆ.

ವ್ಯವಸ್ಥೆ ವಿರುದ್ಧ ಶಸ್ತ್ರಾಸ್ತ್ರ ಹಿಡಿದು ಹೋರಾಡಿದ ವಿಕ್ರಮ ಗೌಡ ಅದರಿಂದಲೇ ಹತನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ಬಿ.ಬಿ ಶೆಟ್ಟಿಗಾರ್‌

contributor

Similar News