ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಜಿಲ್ಲಾ ಘಟಕ ಉದ್ಘಾಟನೆ

Update: 2024-11-19 14:06 GMT

ಉಡುಪಿ, ನ.19: ಸಮಾಜದ ಕಳಕಳಿಯನ್ನು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬೆಳೆಸಿ ಪ್ರತಿಯೊಂದು ಸಮುದಾಯಗಳೊಂದಿಗೆ ಒಗ್ಗಟ್ಟಿನಿಂದ ಬದುಕುವ ಮೂಲಕ ಲೋಕಕ್ಕೆ ಬೆಳಕಾಗಬೇಕು ಎಂದು ಸಿಎಸ್‌ಐ ಕರ್ನಾಟಕ ಸದರ್ನ್ ಡಯೋಸಿಸ್‌ನ ಧರ್ಮಾಧ್ಯಕ್ಷರಾದ ರೆ.ಡಾ.ಹೇಮಚಂದ್ರ ಹೇಳಿದ್ದಾರೆ.

ಮಂಗಳವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರಲ್ಲಿ ಉಡುಪಿ ಜಿಲ್ಲೆಯ ವಿವಿಧ ಕ್ರೈಸ್ತ ಸಭೆಗಳನ್ನು ಒಗ್ಗೂಡಿಸುವ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಯೇಸು ಸ್ವಾಮಿ ಎಲ್ಲರನ್ನೂ ಪ್ರೀತಿಸುವ ಸಂದೇಶವನ್ನು ನೀಡಿದ್ದು, ಅವರ ಸಂದೇಶದಂತೆ ಸಮಾಜ ಕಟ್ಟುವ ಕೆಲಸ ಮಾಡು ವುದರೊಂದಿಗೆ ನೆರೆಯ ಸಮುದಾಯಗಳೊಂದಿಗೆ ಗುರುತಿಸಿಕೊಂಡು ಯೇಸು ಸ್ವಾಮಿಯ ಸಾಮಾಜಿಕ ಕಳಕಳಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು. ಈ ಮೂಲಕ ಕ್ರೈಸ್ತ ಸಮುದಾಯದ ಅನೋನ್ಯತೆಯ ಧ್ಯೇಯ ಇತರರಿಗೆ ಮಾದರಿಯಾಗುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ ನಾವು ಒಗ್ಗಟ್ಟಿನಲ್ಲಿದ್ದರೆ ಶಕ್ತಿಯುತವಾಗಿರಲು ಸಾಧ್ಯ ಅದೇ ವಿಭಜನೆಗೊಂಡರೆ ಅದು ನಮ್ಮ ಸಮುದಾಯದ ಸೋಲು ಆಗುತ್ತದೆ. ಒಗ್ಗಟ್ಟಿನಿಂದ ಬಾಳುವುದು ಇಂದಿನ ಪ್ರಮುಖ ಅವಶ್ಯಕತೆಯಾಗಿದ್ದು ಈ ಮೂಲಕ ಸಮುದಾಯದ ಹಕ್ಕುಗಳಿಗೆ ಹೋರಾಟ ನಡೆಸಬಹುದು. ಒಗ್ಗಟ್ಟಿನ ಹೋರಾಟದಿಂದ ಯಶಸ್ಸು ಸದಾ ನಮ್ಮದಾಗುತ್ತದೆ ಎಂದರು.

ತಮ್ಮ ಜೀವನದ 75 ಸಂವತ್ಸರಗಳನ್ನು ಪೊರೈಸಿದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ, ಕ್ರೈಸ್ತ ಐಕ್ಯತಾ ವೇದಿಕೆ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ವಂ.ಬ್ಯಾಪ್ಟಿಸ್ಟ್ ಪಾಯ್ಸ್ ಹಾಗೂ ವೇದಿಕೆ ರಾಷ್ಟ್ರೀಯ ಸದಸ್ಯರಾಗಿ ನೇಮಕಗೊಂಡಿರುವ ವಂ. ಡೆನಿಸ್ ಡೆಸಾ ಇವರನ್ನು ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಕಾರ್ಯಚಟುವಟಿಕೆಗಳು, ಮುಂದಿನ ಯೋಜನೆ ಗಳ ಕುರಿತು ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಜೆ.ಬಿ.ಸಲ್ಡಾನಾ ಮಾಹಿತಿ ಕಾರ್ಯಾ ಗಾರವನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ರೈಸ್ತ ಸಭೆಗಳಾದ ರೋಮನ್ ಕ್ಯಾಥೊಲಿಕ್, ಸೀರೊ ಮಲಬಾರ, ಸೀರೋ ಮಲಂಕರ, ಸಿಎಸ್‌ಐ, ಯುಬಿಎಂಸಿ, ಸೀರಿಯನ್ ಓರ್ಥೊಡಕ್ಸ್, ಮಾರ್ಥೋಮಾ ಸೇರಿದಂತೆ ಇತರ ಸ್ವತಂತ್ರ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಿಎಸ್‌ಐ ಉಡುಪಿ ಸಭಾ ಪಾಲಕರಾದ ಐವನ್ ಸೋನ್ಸ್ ಪ್ರಾರ್ಥನೆ ನೆರವೇರಿಸಿದರು. ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಸ್ವಾಗತಿಸಿ, ಕ್ರೈಸ್ತ ಐಕ್ಯತಾ ವೇದಿಕೆ ಧರ್ಮಪ್ರಾಂತದ ಕಾರ್ಯದರ್ಶಿ ವಂ. ಲಿಯೋ ಡಿಸೋಜಾ ವಂದಿಸಿದರು.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News