ಸಂವಿಧಾನ ಬದಲಾವಣೆಯ ಹೇಳಿಕೆ| ಪೇಜಾವರ ಶ್ರೀ ವಿರುದ್ಧ ಪ್ರಕರಣ ದಾಖಲಿಸಿ: ಸುಂದರ್ ಮಾಸ್ತರ್ ಆಗ್ರಹ
ಉಡುಪಿ: ಪೇಜಾವರ ಸ್ವಾಮೀಜಿ, ಈ ಸಂವಿಧಾನದಲ್ಲಿ ಗೌರವ ಇಲ್ಲ, ಗೌರವ ಸಿಗುವ ಸಂವಿಧಾನ ಬರಬೇಕು ಎಂದು ಹೇಳುವ ಮೂಲಕ ಈ ದೇಶದ ಅಖಂಡ ಸಂವಿಧಾನಕ್ಕೆ ಅಪಮಾನ ಮಾಡಿ ದೇಶದ್ರೋಹದ ಕೆಲಸ ಮಾಡಿದ್ದಾರೆ. ಈ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕಾಗಿರುವ ಧರ್ಮಗುರುಗಳು, ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುತ್ತಿ ದ್ದಾರೆ. ಸರಕಾರ ಪೋಲಿಸ್ ಇಲಾಖೆ ಪೇಜಾವರ ಸ್ವಾಮೀಜಿ ವಿರುದ್ಧ ಈ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸ ಬೇಕೆಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಆರ್ಯರು ಈ ದೇಶಕ್ಕೆ ಹೊರಗಿನಿಂದ ಬಂದವರು. ಯಾರಿಗೆ ಈ ಸ್ವತಂತ್ರ ಭಾರತದ ಸಂವಿಧಾನದಲ್ಲಿ ನಂಬಿಕೆ ಇಲ್ಲವೋ, ಯಾರು ನಮ್ಮ ಸಂವಿಧಾನವನ್ನು ಗೌರವಿಸುವುದಿಲ್ಲವೋ ಅಂತಹವರು ಗೌರವ ಅರಸಿಕೊಂಡು ಪಾಕಿಸ್ತಾನಕ್ಕೆ ಹೋಗ ಬಹುದು. ಈ ದೇಶದ ಬಹುಸಂಖ್ಯಾತರಾದ ನಾವು ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಗಲು ಬಿಡುವುದಿಲ್ಲ.
ಭಾರತದ ಸಂವಿಧಾನ ಪ್ರಪಂಚದಲ್ಲೇ ಸರ್ವಶ್ರೇಷ್ಠ ಸಂವಿಧಾನ ಎಂದು ಮನ್ನಣೆ ಪಡೆದಿದೆ. ಇಲ್ಲಿನ ಸಂವಿಧಾನದಲ್ಲಿ ಸಮಾನತೆ, ಸಹೋದರತೆ, ಭ್ರಾತೃತ್ವ, ಸ್ವಾತಂತ್ರ್ಯ ಎಲ್ಲವೂ ಅಡಗಿದೆ. ಈ ದೇಶದ ಮೂಲನಿವಾಸಿಗಳು, ಬಹು ಸಂಖ್ಯಾತರು ಈ ಸಂವಿಧಾನದ ಅಡಿಯಲ್ಲಿ ನೆಮ್ಮದಿಯಿಂದ ಇದ್ದು ಈ ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ.
ಜಾತಿ ಪಧ್ಧತಿ, ಅಸ್ಪೃಶ್ಯತೆ, ಮೇಲು ಕೀಳೆಂಬ ಆಚರಣೆಯಲ್ಲಿ ನಂಬಿಕೆ ಇಟ್ಟವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ನಮ್ಮ ಕರ್ನಾಟಕವು ಶಾಂತಿಯ ತೋಟ, ಇಲ್ಲಿ ಧ್ವೇಷ ಭಾಷಣ ಮಾಡಿ ಶಾಂತಿ ಸೌಹಾರ್ದತೆಯನ್ನು ಕೆಡಿಸುವ ಕೆಲಸವನ್ನು ಪೇಜಾವರ ಸ್ವಾಮಿಯವರು ಮಾಡುತ್ತಿದ್ದಾರೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮ ದವರೂ ಸಹೋದರರಂತೆ ಬದುಕುತ್ತಿದ್ದಾರೆ. ಮಠಾಧೀಶರು ಜಿಲ್ಲೆಯ ಶಾಂತಿಯನ್ನು ಕದಡುವುವ ಕೆಲಸಕ್ಕೆ ಕೈಹಾಕಿದ್ದಾರೆ.