ಪ್ಲಾಟಿಂನ+ ಗ್ರೀನ್ ರ‍್ಯಾಂಕಿಂಗ್ ನಲ್ಲಿ ಮಾಹೆಗೆ ಅಗ್ರಸ್ಥಾನ

ಮಣಿಪಾಲ, ಮಾ.22: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಭಾರತದ ಸುಸ್ಥಿರ ಸಂಸ್ಥೆಗಳ ಪ್ಲಾಟಿನಂ + ಬ್ಯಾಂಡ್‌ನಲ್ಲಿ (ದಿ ಗ್ರೀನ್ ರ‍್ಯಾಂಕಿಂಗ್-2025) ದೇಶದಲ್ಲೇ ನಂ. 1 ಸ್ಥಾನ ಪಡೆದಿದೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್. ವರ್ಲ್ಡ್ ಸಾಂಸ್ಥಿಕ ರ್ಯಾಂಕಿಂಗ್ 2025 ಈ ರ‍್ಯಾಂಕಿಂಗ್ ನ್ನು ಪ್ರಕಟಿಸಿದೆ. ಪರಿಸರ ಸುಸ್ಥಿರತೆಗೆ ಮಾಹೆಯ ಬದ್ಧತೆ, ಪರಿಸರ ಸ್ನೇಹಿ ಉಪಕ್ರಮಗಳು ಹಾಗೂ ಹಸಿರು ಕ್ಯಾಂಪಸ್‌ಗೆ ನೀಡಿದ ಆದ್ಯತೆಯಿಂದ ಮಾಹೆಗೆ ಈ ಹೆಮ್ಮೆಯ ಸ್ಥಾನ ದೊರಕಿದೆ ಎಂದುಅದು ಹೇಳಿಕೆಯಲ್ಲಿ ತಿಳಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹಸಿರು ಶ್ರೇಯಾಂಕ ನೀಡಿಕೆಯನ್ನು ಸುಸ್ಥಿರತೆಯ ನಿಯತಾಂಕಗಳಾದ ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ನವೀನ ಸಮರ್ಥನೀಯ ಯೋಜನೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಪ್ಲಾಟಿನಂ+ ಬ್ಯಾಂಡ್‌ನಲ್ಲಿ ಮಾಹೆಗೆ ದೊರಕಿದ ಉನ್ನತ ಸ್ಥಾನವು ಅದರ ಕ್ಯಾಂಪಸ್‌ನಲ್ಲಿ ಅದರ ಸಮಗ್ರ ಸುಸ್ಥಿರ ಅಭ್ಯಾಸಗಳು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ ಎಂದು ಅದು ಹೇಳಿದೆ.
ಮಾಹೆಯ ಈ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್, ಮಾಹೆಯ ಈ ಸಾಧನೆ ನಮ್ಮ ಸಾಮೂಹಿಕ ಪ್ರಯತ್ನ ಹಾಗೂ ಸಮುದಾಯದ ಸಮರ್ಪಣೆಯ ಪ್ರತಿಬಿಂಬವಾಗಿದೆ ಎಂದರು. ನಾವು ಪರಿಸರ ಜವಾಬ್ದಾರಿ ಸಂಸ್ಕೃತಿಯನ್ನು ಬೆಳೆಸಲು ಮತ್ತು ಜಾಗತಿಕವಾದ ಉತ್ತಮ ಅಭ್ಯಾಸಗಳೊಂದಿಗೆ ಹೊಂದಿಕೊಳ್ಳುವ ಸುಸ್ಥಿರ ಮಾದರಿಗಳನ್ನು ಜಾರಿಗೆ ತರುವುದಕ್ಕೆ ಬದ್ಧರಾಗಿದ್ದೇವೆ. ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯಲ್ಲಿ ನಮ್ಮ ಉಪಕ್ರಮಗಳು ಕೇವಲ ನೀತಿಗಳಲ್ಲ, ಅವುಗಳು ನಮ್ಮ ಸಾಂಸ್ಥಿಕ ನೀತಿಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.