ದ್ವಿತೀಯ ಪಿಯುಸಿ ಫಲಿತಾಂಶ: ನಾಲ್ಕನೇ ಪ್ರಯತ್ನದಲ್ಲಿ ರಾಜ್ಯದಲ್ಲಿ ಅಗ್ರಸ್ಥಾನಕ್ಕೆ ನೆಗೆದ ಉಡುಪಿ

ಸುಧೀಕ್ಷಾ ಶೆಟ್ಟಿ - ಪ್ರಣವಿ ಸುವರ್ಣ
ಉಡುಪಿ, ಎ.8: ಮಂಗಳವಾರ ಪ್ರಕಟಗೊಂಡ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.93.90 ಉತ್ತೀರ್ಣದ ಫಲಿತಾಂಶದೊಂದಿಗೆ ರಾಜ್ಯದಲ್ಲೇ ಮತ್ತೊಮ್ಮೆ ಅಗ್ರಸ್ಥಾನವನ್ನು ಪಡೆಯು ವಲ್ಲಿ ಯಶಸ್ವಿಯಾಗಿದೆ. ಸತತ ಮೂರು ವರ್ಷಗಳ ಕಾಲ ನೆರೆಯ ದಕ್ಷಿಣ ಕನ್ನಡ ಜಿಲ್ಲೆಗೆ ನಿಕಟ ಸ್ಪರ್ಧೆ ನೀಡಿ ದ್ದರೂ ಉಡುಪಿ ರಾಜ್ಯದಲ್ಲಿ ದ್ವಿತೀಯ ಸ್ಥಾನಕ್ಕಷ್ಟೆ ತೃಪ್ತಿ ಪಡಬೇಕಾಗಿ ಬಂದಿತ್ತು.
ಈ ಬಾರಿ ಉಡುಪಿ ಜಿಲ್ಲೆ 93.90ಶೇ. ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದರೆ, ಶೇ.0.33ರಷ್ಟು ಹಿನ್ನಡೆಯೊಂದಿಗೆ ದಕ್ಷಿಣ ಕನ್ನಡ (ಶೇ.93.57) ಮೂರು ವರ್ಷಗಳ ಬಳಿಕ ದ್ವಿತೀಯ ಸ್ಥಾನಕ್ಕೆ ಇಳಿದಿದೆ.
ಕೊರೋನಾದ ಬಳಿಕ ಮೂರು ವರ್ಷಗಳಲ್ಲಿ- 2022, 2023, 2024- ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದರೆ, ತೀವ್ರ ಸ್ಪರ್ಧೆಯ ಹೊರತಾಗಿಯೂ ಉಡುಪಿ ಜಿಲ್ಲೆಯ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಗಿತ್ತು. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಶೇ.97.37ರ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರೆ, ಉಡುಪಿ ಕೇವಲ ಶೇ.0.57ರ ಹಿನ್ನಡೆಯೊಂದಿಗೆ (ಶೇ.96.80) ಎರಡನೇ ಸ್ಥಾನ ಪಡೆದಿತ್ತು.
2023ರಲ್ಲಿ ದಕ್ಷಿಣ ಕನ್ನಡ ಶೇ.95.33ರೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಉಡುಪಿ ಜಿಲ್ಲೆ ಶೇ.95.24 (ಶೇ.0.11) ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾಗಿತ್ತು. 2022ರಲ್ಲಿ ದಕ್ಷಿಣಕನ್ನಡ ಶೇ.88.02 ಫಲಿತಾಂಶ ಪಡೆದಿದ್ದರೆ, ಉಡುಪಿ ಜಿಲ್ಲೆ ಶೇ.86.38 ಫಲಿತಾಂಶ ಪಡೆದಿತ್ತು. 2019-20ರಲ್ಲಿ ಎರಡೂ ಜಿಲ್ಲೆಗಳು ಶೇ.90.71 ಫಲಿತಾಂಶ ಪಡೆದು ಸಮಬಲದಲ್ಲಿದ್ದರೆ, 2018-19ರಲ್ಲಿ ಉಡುಪಿ ಜಿಲ್ಲೆ ಶೇ.92.20 ಫಲಿತಾಂಶದೊಂದಿಗೆ ರಾಜ್ಯಕ್ಕೆ ಅಗ್ರಸ್ಥಾನಿಯಾಗಿತ್ತು.
ಈ ಬಾರಿ ಮೊದಲ ಸಲ ಪರೀಕ್ಷೆ ಬರೆದ ಜಿಲ್ಲೆಯ ಒಟ್ಟು 15,628 ವಿದ್ಯಾರ್ಥಿಗಳಲ್ಲಿ 14,674 ಮಂದಿ ತೇರ್ಗಡೆಗೊಂಡಿದ್ದು ಶೇ.93.9 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ, ಮರು ಪರೀಕ್ಷೆ ಬರೆದವರು ಸೇರಿದಂತೆ ಒಟ್ಟಾರೆಯಾಗಿ ಈ ಬಾರಿ 16,127 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 14884 ಮಂದಿ ತೇರ್ಗಡೆಗೊಂಡು ಶೇ.92.29 ಫಲಿತಾಂಶ ದಾಖಲಾಗಿದೆ. ಖಾಸಗಿಯಾಗಿ ಪರೀಕ್ಷೆ ಬರೆದವರು ಶೇ.50.15ರಷ್ಟು ಹಾಗೂ ಮರು ಪರೀಕ್ಷೆ ಬರೆದವರು ಶೇ.25.9ರಷ್ಟು ತೇರ್ಗಡೆಗೊಂಡಿದ್ದಾರೆ.
ಬಾಲಕಿಯರ ಮೇಲುಗೈ: ಜಿಲ್ಲೆಯಲ್ಲಿ 7965 ಮಂದಿ ಬಾಲಕರಲ್ಲಿ 7177 ಮಂದಿ (ಶೇ.90.1) ಹಾಗೂ 8162 ಮಂದಿ ಬಾಲಕಿಯರಲ್ಲಿ 7707 ಮಂದಿ (ಶೇ.94.43) ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಈ ವರ್ಷವೂ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಪಡೆದಂತಾಗಿದೆ.
ಆಂಗ್ಲ ಮಾಧ್ಯಮದವರ ಸಾಧನೆ: ಆಂಗ್ಲ ಮಾಧ್ಯಮದಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 14,210 ವಿದ್ಯಾರ್ಥಿಗಳಲ್ಲಿ 13,393 ಮಂದಿ (ಶೇ.94.25) ಹಾಗೂ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆದ 1917 ವಿದ್ಯಾರ್ಥಿಗಳಲ್ಲಿ 1491 ಮಂದಿ (ಶೇ.77.78) ತೇರ್ಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆ ಬರೆದ 1070 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಲ್ಲಿ 902 (ಶೇ.84.3) ಮಂದಿ ಹಾಗೂ 780 ಮಂದಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ 698 ಮಂದಿ (89.49) ತೇರ್ಗಡೆ ಗೊಂಡಿ ದ್ದಾರೆ. ಉಳಿದಂತೆ 2ಎ ವರ್ಗದಲ್ಲಿ ಶೇ.92.73, 2ಬಿಯಲ್ಲಿ ಶೇ.87.37, 3ಎಯಲ್ಲಿ 95.94, 3ಬಿಯಲ್ಲಿ ಶೇ.95.05 ಹಾಗೂ ಇತರ ವರ್ಗದಲ್ಲಿ ಶೇ.96.75ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ: ಜಿಲ್ಲೆಯ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 7622 ಮಂದಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ 7226 ಮಂದಿ (ಶೇ.94.8) ಉತ್ತೀರ್ಣರಾದರೆ, 8006 ಮಂದಿ ನಗರದ ವಿದ್ಯಾರ್ಥಿಗಳ ಪೈಕಿ 7448 ಮಂದಿ (ಶೇ.93.03) ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿದ್ಯಾರ್ಥಿಗಳ ಮೇಲುಗೈ: ಮೂರು ವಿಭಾಗಗಳ ವಿದ್ಯಾರ್ಥಿಗಳ ಪೈಕಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಸ್ಪಷ್ಟ ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 7700 ಮಂದಿಯಲ್ಲಿ 7459 ಮಂದಿ (ಶೇ.96.87) ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 6946 ಮಂದಿ ಪರೀಕ್ಷೆಗೆ ಕುಳಿತಿದ್ದು, ಇವರಲ್ಲಿ 6385 (ಶೇ.91.92) ಮಂದಿ ಪಾಸಾಗಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 982 ಮಂದಿಯಲ್ಲಿ 830 ಮಂದಿ (ಶೇ.84.52) ಉತ್ತೀರ್ಣರಾಗಿದ್ದಾರೆ.
ಆರ್ಟ್ಸ್ ಟಾಪರ್: ಪರಿಶಿಷ್ಟರ ಮೇಲುಗೈ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಆರ್ಟ್ಸ್ ವಿಭಾಗದ 10 ಮಂದಿ ಟಾಪರ್‌ಗಳಲ್ಲಿ ಸ್ಪಷ್ಟ ಮೇಲುಗೈ ಪಡೆದಿದ್ದಾರೆ. ಈ ವಿಭಾಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ದಿವ್ಯ 586 ಅಂಕಗಳೊಂದಿಗೆ ಜಿಲ್ಲೆಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ.
ವಂಡ್ಸೆ ಸರಕಾರಿ ಪದವಿ ಪೂರ್ವ ಕಾಲೇಜಿನ ನವ್ಯ ಗರಿಷ್ಠ 600 ಅಂಕಗಳಲ್ಲಿ 574 ಅಂಕ ಗಳಿಸುವ ಮೂಲಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕಾರ್ಕಳ ಭುವನೇಂದ್ರ ಕಾಲೇಜಿನ ಪರಿಶಿಷ್ಟ ಪಂಗಡದ ಸ್ಪಂದನ ಕೆ.ಎಸ್. 570 ಅಂಕಗಳೊಂದಿಗೆ ತೃತೀಯ, ಅದೇ ಕಾಲೇಜಿನ ಸಿಂಚನ ಕೆ.ಎಸ್. 564 ಅಂಕಗಳೊಂದಿಗೆ ಏಳನೇ, ಬ್ರಹ್ಮಾವರ ಎಸ್‌ಎಂಎಸ್ ಪಿಯು ಕಾಲೇಜಿನ ಪ.ಜಾತಿಯ ಲಕ್ಷ್ಮಿತಾ ಪಿ. 563 ಅಂಕಗಳೊಂದಿಗೆ ಎಂಟನೇ, ಕಾರ್ಕಳ ಭುವನೇಂದ್ರದ ದೀಕ್ಷಿತಾ ಆರ್.ನಾಯ್ಕ್ ಒಂಭತ್ತನೇ (562) ಹಾಗೂ ಮುನಿಯಾಲು ಸರಕಾರಿ ಪಿಯು ಕಾಲೇಜಿನ ಪ್ರೀತಿ (562) ಹತ್ತನೇ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಜಿಲ್ಲೆಯಲ್ಲಿ ಐವರು ಟಾಪರ್
ಕಳೆದ ತಿಂಗಳು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಸತತ ಮೂರು ಪ್ರಯತ್ನಗಳ ಬಳಿಕ ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನ ಕ್ಕೇರುವಲ್ಲಿ ಯಶಸ್ವಿಯಾಗಿದೆ.
ಜಿಲ್ಲೆಯ ಹತ್ತು ಮಂದಿ ವಿದ್ಯಾರ್ಥಿಗಳು ಪ.ಪೂ.ಮಂಡಳಿ ಪ್ರಕಟಿಸಿದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ರಾಜ್ಯದ 50 ಮಂದಿ ಟಾಪರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ಎರಡೂ ವಿಭಾಗಗಳಿಂದ ತಲಾ ಐವರು ವಿದ್ಯಾರ್ಥಿ ಗಳು ಇದರಲ್ಲಿ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಕುಕ್ಕಂದೂರು ಗಣಿತನಗರದ ಜ್ಞಾನಸುಧಾ ಪಿಯು ಕಾಲೇಜಿನ ಅಸ್ತಿ ಎಸ್. ಶೆಟ್ಟಿ 596 ಅಂಕಗಳೊಂದಿಗೆ ಜಿಲ್ಲೆಯ ಅಗ್ರಸ್ಥಾನಿಯಾಗಿದ್ದಾರೆ. ಉಳಿದಂತೆ ಉಡುಪಿ ಜ್ಞಾನಸುಧಾ ಪಿಯು ಕಾಲೇಜಿನ ಅಪೂರ್ವ ವಿ.ಕುಮಾರ್ 595 ಅಂಕ ಪಡೆದಿದ್ದರೆ, ಎಂಜಿಎಂ ಕಾಲೇಜಿನ ಭೂಮಿಕಾ ಆರ್. ಹೆಗ್ಡೆ 595, ಕಾರ್ಕಳ ಜ್ಞಾನಸುಧಾದ ಶ್ರೀರಕ್ಷಾ ಬಿ.ನಾಯಕ್ 595, ಅದೇ ಕಾಲೇಜಿನ ವಿಶ್ವಾಸ್ ಆರ್. ಆತ್ರೇಯ ಅವರು ಸಹ 595 ಅಂಕಗಳನ್ನು ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ಒಟ್ಟು 37 ಮಂದಿ ವಿದ್ಯಾರ್ಥಿಗಳು 591 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಇವರಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳೇ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದಾರೆ. ಉಳಿದಂತೆ ಉಡುಪಿಯ ವಿದ್ಯೋದಯ ಪಿಯು ಕಾಲೇಜು, ಕುಂದಾಪುರ ವೆಂಕಟರಮಣ ಪಿಯು ಕಾಲೇಜು, ಕಾರ್ಕಳದ ಕ್ರೈಸ್ಟ್ ಕಿಂಗ್ ಪಿಯು ಕಾಲೇಜು, ಕೋಟದ ವಿವೇಕ ಪ.ಪೂ.ಕಾಲೇಜು ವಿದ್ಯಾರ್ಥಿಗಳೂ ಸೇರಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ 26 ಮಂದಿ ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ರಾಜ್ಯದ ಐವರು ಟಾಪರ್‌ಗಳಲ್ಲಿ ಉಡುಪಿ ವಿದ್ಯೋದಯ ಪಿಯು ಕಾಲೇಜಿನ ಪ್ರಣವಿ ಎಚ್.ಸುವರ್ಣ (595), ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ಸುಧೀಕ್ಷಾ ಎಸ್.ಶೆಟ್ಟಿ (595), ಕಟಪಾಡಿ ತ್ರಿಷಾ ವಿದ್ಯಾ ಪಿಯು ಕಾಲೇಜಿನ ಅರ್ಚನಾ ಎಸ್.ಶೆಟ್ಟಿ (594), ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಸಹನಾ ನಾಯಕ್ (594) ಹಾಗೂ ಕಾರ್ಕಳ ಜ್ಞಾನಸುಧಾ ಕಾಲೇಜಿನ ತನ್ವಿ ರಾವ್ (594) ಸೇರಿದ್ದಾರೆ.
ಪಿಯುಸಿ ಫಲಿತಾಂಶ: ಉಸ್ತುವಾರಿ ಸಚಿವರ ಹರ್ಷ
ಇಂದು ಪ್ರಕಟಣಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದು, ಜಿಲ್ಲೆಯ ಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು. ಮಕ್ಕಳ ಭವಿಷ್ಯ ಉಜ್ವಲವಾಗಲಿ. ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೋಷಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲರ ಪರಿಶ್ರಮದ ಫಲ: ಜಿಲ್ಲಾಧಿಕಾರಿ
ಉಡುಪಿ ಜಿಲ್ಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಇಂದು ಪ್ರಕಟಗೊಂಡ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ್ದಾರೆ.
ವಿದ್ಯಾರ್ಥಿಗಳ ಮತ್ತು ಶಿಕ್ಷಕರ ತಂಡದ ಎರಡು ವರ್ಷಗಳ ಪರಿಶ್ರಮದ ಫಲ ಇದಾಗಿದೆ. ಇಡೀ ವರ್ಷ ಚೆನ್ನಾಗಿ ಓದಿ ಈ ಸಾಧನೆಗೆ ಅವರು ಕಾರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಧಿಕಾರಿಗಳ ಮಟ್ಟದಲ್ಲಿ ಪ್ರಾಂಶುಪಾಲರ ಹಲವಾರು ಸಭೆಗಳನ್ನು ಮಾಡಿದ್ದೆವು. ಶೈಕ್ಷಣಿಕ ವರ್ಷದ ಆರಂಭದಿಂದ ನಾವು ಪ್ರಥಮ ಸ್ಥಾನದ ಗುರಿಯನ್ನು ಇಟ್ಟಿದ್ದೆವು. ಡಿಡಿಪಿಯು ಮಾರುತಿ ಮತ್ತು ಕಾಲೇಜಿನ ಶಿಕ್ಷಕರು ತಂಡವಾಗಿ ಕೆಲಸ ಮಾಡಿದ್ದಾರೆ. ಕಳೆದ ವರ್ಷದ ಫಲಿತಾಂಶದ ಮೇಲೆ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ ಎಂದವರು ವಿವರಿಸಿದರು.
ನೋಡಲ್ ಆಫೀಸರ್‌ಗಳನ್ನ ನೇಮಕ ಮಾಡಿ ಶಾಲೆಯಲ್ಲಿ ವಿಶೇಷ ತರಗತಿಗಳನ್ನು ಆರಂಭ ಮಾಡಿದ್ದೆವು. ಹಿಂದಿನ ಐದು ವರ್ಷಗಳ ಫಲಿತಾಂಶ ಗಳನ್ನು ತೆಗೆದುಕೊಂಡು ಅವುಗಳ ಪರಾಮರ್ಶೆ ಮಾಡಿ ಕೆಲಸ ಮಾಡಿದ್ದೆವು. ಶಿಕ್ಷಕರಿಗೆ ಸಾಕಷ್ಟು ಕಟ್ಟುನಿಟ್ಟಿನ ಸೂಚನೆ ನಿರ್ದೇಶನಗಳನ್ನು ನೀಡಿದ್ದೆವು ಎಂದರು.
ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಸಭೆ, ಡಿಡಿಪಿಯು ಪ್ರತಿ ತಿಂಗಳು ಸಭೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಓ, ಎಸ್‌ಪಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪರೀಕ್ಷೆಯ ಸಂದರ್ಭ ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕರು ಪೋಷಕರು ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೆಲಸ ಮಾಡಿರುವುದರಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದು ಡಾ.ವಿದ್ಯಾಕುಮಾರಿ ವಿವರಿಸಿದರು.
ರಾಜ್ಯ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಕ 20 ಅಂಶಗಳ ಸುತ್ತೋಲೆ ನೀಡಿತ್ತು. 20 ಅಂಶದ ಕಾರ್ಯಕ್ರಮವನ್ನು ಪ್ರತಿ 15 ದಿನಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಪೂರ್ಣ ಸಹಕಾರವನ್ನು ನೀಡಿದ್ದರು. ಸರಕಾರದ ಸುತ್ತೋಲೆಯ ಎಲ್ಲಾ ಅಂಶಗಳನ್ನು ಜಾರಿಗೆ ತಂದಿದ್ದೇವೆ ಎಂದವರು ಹೇಳಿದ್ದಾರೆ.
ಮುಂದಿನ ವರ್ಷ ಕೂಡ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಒಂದು ತಂಡವಾಗಿ ಕೆಲಸ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಭರವಸೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ 8 ಕಾಲೇಜುಗಳಿಗೆ ಶೇ.100 ಫಲಿತಾಂಶ
ಎರಡು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಜಿಲ್ಲೆಯ ಒಟ್ಟು ಎಂಟು ಕಾಲೇಜುಗಳು ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಗೊಳ್ಳುವ ಮೂಲಕ ಶೇ.100ರ ಫಲಿತಾಂಶವನ್ನು ದಾಖಲಿಸಿವೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ.
ಪಲಿಮಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಗಳು ಶೇ.100ಫಲಿತಾಂಶ ದಾಖಲಿಸಿರುವ ಸರಕಾರಿ ವಿದ್ಯಾಸಂಸ್ಥೆಗಳಾಗಿವೆ. ಉಳಿದ ಆರು ಅನುದಾನ ರಹಿತ ಖಾಸಗಿ ಪಿಯು ಕಾಲೇಜುಗಳಾಗಿವೆ.
ಉಡುಪಿ ವಿದ್ಯೋದಯ ಪ.ಪೂ.ಕಾಲೇಜು, ಕಾರ್ಕಳದ ಎಸ್‌ಎನ್‌ಯು ಪ.ಪೂ.ಕಾಲೇಜು, ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು, ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು, ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಹಾಗೂ ಕಲ್ಯಾಣಪುರದ ತ್ರಿಷಾ ಪದವಿಪೂರ್ವ ಕಾಲೇಜು ಗಳ ಸಹ ಶೇ.100 ಫಲಿತಾಂಶ ದಾಖಲಿಸಿವೆ. ಜಿಲ್ಲೆಯಲ್ಲಿ ಯಾವುದೇ ಸಂಸ್ಥೆ ಶೂನ್ಯ ಫಲಿತಾಂಶ ದಾಖಲಿಸಿದ ಬಗ್ಗೆ ಮಾಹಿತಿ ಬಂದಿಲ್ಲ ಎಂದವರು ಹೇಳಿದರು.
ರಾಜ್ಯದಲ್ಲಿ 13 ಸರಕಾರಿ, 3 ಅನುದಾನಿತ ಹಾಗೂ 103 ಅನುದಾನ ರಹಿತ ಕಾಲೇಜುಗಳು ಸೇರಿದಂತೆ ಒಟ್ಟು 134 ಪದವಿ ಪೂರ್ವ ಕಾಲೇಜುಗಳು ಶೇ.100 ಫಲಿತಾಂಶ ದಾಖಲಿಸಿದ್ದರೆ ಒಟ್ಟು 123 ವಿದ್ಯಾಸಂಸ್ಥೆ ಗಳು ಶೂನ್ಯ ಫಲಿತಾಂಶವನ್ನು ದಾಖಲಿಸಿವೆ.