ನ.18-19: ಉಡುಪಿ ಜಿಲ್ಲಾ ಮಟ್ಟ ಅಂಚೆಚೀಟಿ ಪ್ರದರ್ಶನ ‘ಕೃಷ್ಣಾಪೆಕ್ಸ್’

Update: 2023-11-10 15:47 GMT

ಉಡುಪಿ, ನ.10: ಉಡುಪಿ ಅಂಚೆ ವಿಭಾಗದಿಂದ ನ.18 ಮತ್ತು 19 ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ‘ಕೃಷ್ಣಾಪೆಕ್ಸ್-2023’ನ್ನು ಆಯೋಜಿ ಸಲಾಗಿದೆ ಎಂದು ಉಡುಪಿ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಅಂಚೆ ವಿಭಾಗ 1973ಯಲ್ಲಿ ರಚನೆಯಾ ಗಿದ್ದು, ಈ ವರ್ಷ ಸುವರ್ಣ ಸಂಭ್ರಮೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ವನ್ನು ಆಯೋಜಿಸಲಾಗುತ್ತಿದೆಎಂದರು.

ಅಂಚೆ ಚೀಟಿ ಸಂಗ್ರಹಣೆ ಎಂಬುದು ಉತ್ತಮ ಹವ್ಯಾಸ ಮಾತ್ರವಲ್ಲದೆ ನಮ್ಮ ಜ್ಞಾನವನ್ನು ಹೆಚ್ಚಿಸುವ ಜೊತೆಗೆ ದೇಶ-ವಿದೇಶಗಳ ಹಿರಿಮೆ- ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಂದಿನ ಯುವ ಪೀಳಿಗೆಯಲ್ಲಿ ಈ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಅಂಚೆ ಇಲಾಖೆಯು ಇಂತಹ ಅಂಚೆ ಚೀಟಿ ಪ್ರದರ್ಶನವನ್ನು ನಡೆಸುತ್ತಾ ಬರುತ್ತಿದೆ ಎಂದು ವಿವರಿಸಿದರು.

ಎರಡು ದಿನಗಳ ಈ ಪ್ರದರ್ಶನದಲ್ಲಿ ಜಿಲ್ಲೆಯ ಪ್ರತಿಷ್ಠಿತ ಅಂಚೆ ಚೀಟಿ ಸಂಗ್ರಹಕಾರರು ಭಾಗವಹಿಸಲಿದ್ದು, ತಮ್ಮ ಸಂಗ್ರಹ ವನ್ನು ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಅಂಚೆ ವೃತ್ತದ ಗೌರವಾನ್ವಿತ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ ಪ್ರಕಾಶ್ ಬೆಳಗ್ಗೆ 10ಗಂಟೆಗೆ ಉದ್ಘಾಟಿಸಲಿದ್ದಾರೆ. ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ. ದಾಸ್ ಮತ್ತು ನಿರ್ದೇಶಕ ಟಿ.ಎಸ್.ಅಶ್ವತನಾರಾಯಣ ಭಾಗವಹಿಸಲಿದ್ದಾರೆ ಎಂದರು.

ಪ್ರದರ್ಶನದಲ್ಲಿ ಸುಮಾರು 150ಕ್ಕೂ ಅಧಿಕ ಫಲಕಗಳಲ್ಲಿ ವಿವಿಧ ಅಂಚೆ ಚೀಟಿಗಳು ಹಾಗೂ ಅಂಚೆ ಪರಿಕರಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನವು ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಮೊದಲನೇಯದಾಗಿ ಇನ್ವಿಟೇಶನ್ ಕ್ಲಾಸ್(ಆಹ್ವಾನಿತರು)ನಲ್ಲಿ ಈ ಹಿಂದೆ ವಿವಿಧ ಪ್ರದರ್ಶನ ಗಳಲ್ಲಿ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಸಂಗ್ರಹಕಾರರು ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದಾರೆ.

ಎರಡನೇ ವಿಭಾಗದಲ್ಲಿ ಜಿಲ್ಲೆಯ ಸಂಗ್ರಹಣಕಾರರು ತಮ್ಮ ಅಂಚೆಚೀಟಿಗಳ ಸಂಗ್ರಹವನ್ನು ಪ್ರದರ್ಶಿಸಲಿದ್ದು ಉತ್ತಮ ಪ್ರದರ್ಶನಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಮೂರನೇ ವಿಭಾಗದಲ್ಲಿ ಜಿಲ್ಲೆಯ ಯುವಜನ ಹಾಗು ಮಕ್ಕಳು ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದು ಉತ್ತಮ ಪ್ರದರ್ಶನಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು.

ಈ ಪ್ರದರ್ಶನದಲ್ಲಿ ಮಕ್ಕಳಿಗಾಗಿ ಅಂಚೆ ಚೀಟಿ ಸಂಗ್ರಹಣೆಯ ಬಗ್ಗೆ ಕಾರ್ಯಾಗಾರವನ್ನು ಕೂಡಾ ಏರ್ಪಡಿಸಲಾಗುವುದು.ಈ ಸಂದರ್ಭದಲ್ಲಿ ನಾಲ್ಕು ವಿಶೇಷ ಅಂಚೆ ಲಕೋಟೆಗಳು ಮತ್ತು ಹನ್ನೊಂದು ಪಿಕ್ಚರ್ ಪೋಸ್ಟ್ ಕಾರ್ಡ್(ಸಚಿತ್ರ ಅಂಚೆ ಕಾರ್ಡ್)ಗಳು ಅನಾವರಣಗೊಳ್ಳಲಿವೆ ಎಂದು ರಮೇಶ್ ಪ್ರಭು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಉಪಾದ್ಯಕ್ಷ ಕೃಷ್ಣರಾಜ್ ಭಟ್, ಜೊತೆ ಕಾರ್ಯದರ್ಶಿ ವಸಂತ್, ಕಾರ್ಯ ಕ್ರಮ ಸಂಯೋಜಕಿ ಪೂರ್ಣಿಮಾ ಜನಾರ್ದನ್ ಹಾಗೂ ಮಾಧ್ಯಮ ಸಂಚಾಲಕ ಸುರೇಶ್ ಕೆ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News