ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಉಡುಪಿ, ಜು.18: ಹವಾಮಾನ ಇಲಾಖೆಯು ಉಡುಪಿಯೂ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅರೆಂಜ್ ಅಲರ್ಟ್‌ನ್ನು ಘೋಷಿ ಸಿದೆ. ಇದರಂತೆ ಜಿಲ್ಲೆಯಲ್ಲಿ ಜು.20ರ ಬೆಳಗ್ಗೆ 8:30ರವರೆಗೆ 115.6ಮಿ.ಮೀನಿಂದ 204.4 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಮಳೆಯೊಂದಿಗೆ ಬಲವಾದ ಗಾಳಿಯೂ ಜು.18ರಿಂದ 21ರವರೆಗೆ ಗಂಟೆಗೆ 40ರಿಂದ 45ಕಿ.ಮೀ. ವೇಗದಲ್ಲಿ ಬೀಸಲಿದ್ದು, ಅರಬಿಸಮುದ್ರದಲ್ಲಿ 2.0ರಿಂದ 2.8ಮೀ. ಎತ್ತರದ ಅಲೆಗಳು ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಗುರುವಾರದ ಬಳಿಕ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಇದ್ದು, ಆ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವುದಾಗಿ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ 8:30ರಿಂದ ಇಂದು ಬೆಳಗ್ಗೆ 8:30ರವರೆಗೆ 24 ಗಂಟೆಗಳ ಅವಧಿಯಲ್ಲಿ 25.9ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 41.4ಮಿ.ಮೀ., ಕುಂದಾಪುರದಲ್ಲಿ 35.2, ಬೈಂದೂರಿನಲ್ಲಿ 23.2, ಬ್ರಹ್ಮಾವರದಲ್ಲಿ 20.6ಮಿ.ಮೀ., ಉಡುಪಿಯಲ್ಲಿ 19.8, ಕಾರ್ಕಳದಲ್ಲಿ 18.7 ಹಾಗೂ ಕಾಪುವಲ್ಲಿ 4.7ಮಿ.ಮೀ. ಮಳೆಯಾಗಿದೆ. ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 5.83ಮೀ. ಆಗಿದ್ದರೆ, ಕಾರ್ಕಳದ ಮುಂಡ್ಲಿಯಲ್ಲಿ ನೀರಿನ ಮಟ್ಟ 5.48ಮೀ. ಆಗಿದೆ.
4 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ನಿನ್ನೆ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಬ್ರಹ್ಮಾವರದ 38 ಕಳತ್ತೂರಿನಲ್ಲಿ ರಾಜೀವ ಪಾಣ ಎಂಬವರ ಮನೆಯ ಗೋಡೆ ಕುಸಿದು ಬಿದ್ದು 80,000ರೂ., ಪೆಜಮಂಗೂರಿನ ನಾಗೇಶ ಮರಕಾಲ ಎಂಬವರ ಮನೆಯ ಮೇಲೆ ಮರ ಬಿದ್ದು 20ಸಾವಿರ ರೂ., ಕಾಪು ತಾಲೂಕು ಪಡು ಗ್ರಾಮದ ಸೋಮಪ್ಪ ಎಂಬವರ ಮನೆ ಮೇಲೆ ಮರ ಬಿದ್ದು 20,000ರೂ. ಹಾಗೂ ಬೈಂದೂರು ತಾಲೂಕು ಯಡ್ತರೆ ಗ್ರಾಮದ ನೀಲಮ್ಮ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 50,000 ರೂ. ನಷ್ಟದ ಅಂದಾಜು ಮಾಡಲಾಗಿದೆ.