ಪರ್ಕಳ: ಗೃಹಲಕ್ಷ್ಮೀ ಯೋಜನೆ ಹಣದಿಂದ ಕಪಾಟು ಖರೀದಿಸಿದ ಕೂಲಿ ಕಾರ್ಮಿಕ ಮಹಿಳೆ
ಪರ್ಕಳ, ನ.4: ಮಹಿಳಾ ಸಬಲೀಕರಣದ ಸದುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಲ್ಲಿ ಬಂದ ಹಣವನ್ನು ಕೂಡಿಟ್ಟ ಕೂಲಿಕಾರ್ಮಿಕ ಮಹಿಳೆಯೊಬ್ಬರು ಮನೆಗೆ ಕಪಾಟೊಂದನ್ನು ಖರೀದಿಸಿ ಖುಷಿ ಪಟ್ಟಿದ್ದಾರೆ.
ಪರ್ಕಳದ ಮೋಹನದಾಸ್ ನಾಯಕ್ ಅವರ ಸ್ವಾಗತ್ ಹೊಟೇಲ್‌ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಹಾವೇರಿ ಮೂಲದ ಕುಸುಮಾ ಮಾಡಿವಾಲ್ತಿ ಅವರೇ ಈ ಮಹಿಳೆ. ಇವರು ಗೃಹಲಕ್ಷ್ಮೀಯಿಂದ ಪ್ರತಿ ತಿಂಗಳು ಬಂದ 2000ರೂ. ಹಣವನ್ನು ಕೂಡಿಟ್ಟು ಇದೀಗ ಮನೆಗೆ ಹೊಸ ಕಪಾಟನ್ನು ಖರೀದಿಸಿದ್ದಾರೆ.
ಕುಸುಮಾ ಅವರ ರೇಷನ್ ಕಾರ್ಡಿನಲ್ಲಿ ಕೆಲವು ದೋಷಗಳಿದ್ದವು. ಅವುಗಳನ್ನು ಪರ್ಕಳದ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೆಬೆಟ್ಟು ಅವರ ಸಹಾಯದಿಂದ ತಿದ್ದುಪಡಿ ಮಾಡಿ ಬಳಿಕ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಿದ್ದರು.
ಕುಸುಮಾ ಅವರಿಗೆ ಗೃಹಲಕ್ಷ್ಮೀ ಯೋಜನೆ ಮಂಜೂರಾದ ಬಳಿಕ ಬಂದ ಹಣವನ್ನು ಹಾಗೆಯೇ ಕೂಡಿಟ್ಟಿದ್ದರು ಇದೀಗ ಅದರಿಂದ ಒಂದು ಕಪಾಟು ಖರೀದಿ ಮಾಡಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಕಂತಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.
‘ನಮ್ಮಂತ ಬಡ ಕೂಲಿಕಾರ್ಮಿಕರಿಗೆ ಗೃಹಲಕ್ಷ್ಮೀ ಯೋಜನೆ ವರದಾನ ವಾಗಿ ಬಂದಿದೆ. ಈ ಹಣದಿಂದ ಬಹುಕಾಲದಿಂದ ಖರೀದಿಸಲು ಯೋಜಿಸಿದ್ದ ಮನೆಗೆ ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲಿದೆ.’ ಎಂದು ಅವರು ಖುಷಿಯಿಂದ ಹೇಳಿದರು.