ಬೋಟ್ ಅಗ್ನಿದುರಂತದಿಂದ 13 ಕೋಟಿ ರೂ.ನಷ್ಟದ ಅಂದಾಜು: ಗಂಗೊಳ್ಳಿಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಗಂಗೊಳ್ಳಿ (ಕುಂದಾಪುರ): ಕಳೆದ ಸೋಮವಾರ ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್‌ನ ಬಂದರು ಇಲಾಖೆಗೆ ಸೇರಿದ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟುಗಳಿಗೆ ಬೆಂಕಿ ಹತ್ತಿ ಸಂಭವಿಸಿದ ಭೀಕರ ದುರಂತದಿಂದ ಸುಮಾರು 13ರಿಂದ 15 ಕೋಟಿ ರೂ.ನಷ್ಟದ ಅಂದಾಜು ಮಾಡಲಾಗಿದೆ. ಇನ್ನು 15 ದಿನದೊಳಗೆ ಎಲ್ಲರಿಗೂ ಪರಿಹಾರ ಒದಗಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ವ್ಯಕ್ತಪಡಿಸಿದ್ದಾರೆ.
ದುರಂತ ಸಂಭವಿಸಿದ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಅಗ್ನಿ ದುರಂತದಲ್ಲಿ 9 ಬೋಟುಗಳು, ಒಂದು ದೋಣಿ, 2 ಡಿಂಗಿ ದೋಣಿ, 8-10 ಬಲೆ ರಾಶಿ ಹಾಗೂ 2 ಬೈಕ್ ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿರುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.
ದುರಂತದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವ ಬಗ್ಗೆ ಅಂತಿಮವಾಗಿ ನಿರ್ಧರಿಸಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ದುರಂತ ಸಂಭವಿಸಿದ ದಿನದಂದೇ ಮೀನುಗಾರಿಕಾ ಸಚಿವರು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ, ತ್ವರಿತಗತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಖಂಡಿತ ಮೀನುಗಾರರಿಗೆ ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತಾರೆ. ಗೋಪಾಲ ಪೂಜಾರಿ ಅವರೂ ಈಗಾಗಲೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಅಗ್ನಿ ದುರಂತದ ಮಾಹಿತಿಯನ್ನು ನೀಡಿದ್ದಾರೆ ಎಂದರು.
ಇನ್ನೊಂದೆರಡು ದಿನಗಳಲ್ಲಿ ನಾವೆಲ್ಲರೂ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮೀನುಗಾರರಿಗ ಗರಿಷ್ಠ ಪರಿಹಾರ ದೊರೆಯುವಂತೆ ಪ್ರಯತ್ನಿಸುತ್ತೇವೆ. ಬದುಕು ಕಳೆದುಕೊಂಡ ಮೀನುಗಾರ ಕುಟುಂಬಗಳಿಗೆ ಮತ್ತೆ ಬದುಕು ಕಟ್ಟಲು ನಾವು ಜೊತೆಗಿರುತ್ತೇವೆ. ಸರಕಾರ ಎಂದೆಂದಿಗೂ ಅವರೊಂ ದಿಗಿರುತ್ತದೆ ಎಂದು ಹೆಬ್ಬಾಳ್ಕರ್ ತಿಳಿಸಿದರು.
ಇನ್ನು ಮುಂದೆ ಇಂತಹ ದುರ್ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದರಿನಲ್ಲಿ ಅಗ್ನಿ ಶಾಮಕ ದಳ ಸ್ಥಾಪನೆಗೆ ಕ್ರಮ ವಹಿಸಲಾ ಗುವುದು ಎಂದು ತಿಳಿಸಿದರು.