ಕಡೆಕಾರು ಗ್ರಾಮ ಪಂಚಾಯತ್‌ನಲ್ಲಿ ಸಂಜೀವಿನಿ ಸಂತೆ

Update: 2023-07-31 16:16 GMT

ಉಡುಪಿ: ತಾಲೂಕಿನ ಕಡೆಕಾರು ಗ್ರಾಮ ಪಂಚಾಯತಿಯಲ್ಲಿ ಮಾಣಿಕ್ಯ ಸಂಜೀವಿನಿ ಮಹಿಳಾ ಸಂಘದ ವತಿಯಿಂದ ಸಂಜೀವಿನಿ ಸಂತೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಕಡೆಕಾರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸರಸ್ವತಿ ಕಾರ್ಯಕ್ರಮ ಉದ್ಘಾಟಿಸಿ, ಮಹಿಳಾ ಸಂಘದ ಸದಸ್ಯರು ತಮಗೆ ಆಸಕ್ತಿ ಇರುವ ಆದಾಯ ತರು ವಂತಹ ಸ್ವ-ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಅಗತ್ಯ ತರಬೇತಿ ಮತ್ತು ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುವುದು. ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.

ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಣಿಕ್ಯ ಸಂಜೀವಿನಿ ಒಕ್ಕೂಟದ ಸದಸ್ಯರಿಂದ, ಹಡಿಲು ಭೂಮಿಯ ಪುನಶ್ಚೇತನ, ಬೇಕರಿ ಉತ್ಪನ್ನಗಳ ತಯಾರಿಕೆ, ಸಿದ್ದ ಉಡುಪುಗಳ ತಯಾರಿಕೆ ಸೇರಿದಂತೆ ಹಲವಾರು ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಟ್ಯೂಶನ್ ತರಗತಿಗಳ ಆರಂಭ, ಮೀನಿನ ಉತ್ಪನ್ನಗಳ ತಯಾರಿಕೆ, ಉದ್ಯೋಗ ಖಾತರಿ ಯೋಜನೆ ಒಗ್ಗೂಡಿಸುವಿಕೆಯಡಿ ಕೃಷಿ, ಅರಣ್ಯ, ತೋಟಗಾರಿಕೆ ಕಾಮಗಾರಿಗಳನ್ನು ಆರಂಭಿಸುವ ಯೋಜನೆ ಇದೆ ಎಂದು ಒಕ್ಕೂಟದ ಪುಷ್ಪ ಚಂದ್ರಶೇಖರ್ ತಿಳಿಸಿದರು.

ಸಂಜೀವಿನಿ ಯೋಜನೆಯ ಸೌಲಭ್ಯಗಳ ಕುರಿತು ಡಿ.ಪಿ.ಎಂ. ಗಣೇಶ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟ ಸದಸ್ಯರು ತಯಾರಿಸಿದ ಉತ್ಪನ್ನಗಳ ಸಂಜೀವಿನಿ ಸಂತೆ ನಡೆಯಿತು. ಆಹಾರ ಉತ್ಪನ್ನಗಳು, ಗೃಹ ಉಪಯೋಗಿ ಉತ್ಪನ್ನಗಳು, ಸಿದ್ಧ ಉಡುಪುಗಳು ಸಂತೆಯಲ್ಲಿ ಮಾರಾಟ ಗೊಂಡವು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಪಿ.ಡಿ.ಒ. ಸಿದ್ದೇಶ ಎಸ್, ಎಸ್.ಡಿ.ಎ. ವಾರಿಜ ಬಿ, ಸಾಫಲ್ಯ ಟ್ರಸ್ಟ್ ಸಂಚಾಲಕಿ ನಿರುಪಮ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಪಾಲಕರು, ಒಕ್ಕೂಟದ ಪದಾದಿಕಾರಿಗಳು, ಸದಸ್ಯರು, ಪಂಚಾಯತ್ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಇಂದಿರಾ ಪಿ.ಶೆಟ್ಟಿ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News