ಸೆ.16: ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ: ಪರ್ಯಾಯ ಲಾಂಛನ ಅನಾವರಣ

Update: 2023-09-13 15:37 GMT

ಉಡುಪಿ, ಸೆ.13: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪುತ್ತಿಗೆ ಮಠ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ ಹಾಗೂ ಪರ್ಯಾಯ ಲಾಂಛನವನ್ನು ಸೆ.16ರ ಸಂಜೆ 4:00ಕ್ಕೆ ಅನಾವರಣಗೊಳಿಸಿ ಸಮಾಲೋಚನಾ ಸಭೆ ನಡೆಸಲಿದ್ದಾರೆ ಎಂದು ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಹೇಳಿದ್ದಾರೆ.

ಬುಧವಾರ ಪುತ್ತಿಗೆ ಮಠದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಪುತ್ತಿಗೆ ಮಠದ ಸುಗುಣ ಸಭಾಂಗಣದಲ್ಲಿ ನಡೆಯಲಿದೆ ಎಂದರು. ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೇ ಬಾರಿ, ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥರೊಡಗೂಡಿ 2024ರ ಜ. 18ರಂದು ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ ಎಂದರು.

ವಿಶ್ವ ಗೀತಾ ಪರ್ಯಾಯಕ್ಕಾಗಿ ಭರದ ಪೂರ್ವ ತಯಾರಿ ನಡೆಯುತ್ತಿದೆ ಎಂದ ರಘುಪತಿ ಭಟ್, ಪರ್ಯಾಯದ ಅಚ್ಚುಕಟ್ಟು ವ್ಯವಸ್ಥೆಗಾಗಿ 21ಉಪ ಸಮಿತಿಗಳನ್ನು ರಚಿಸಲಾಗಿದೆ. ಪುತ್ತಿಗೆ ಶ್ರೀಗಳ ಮಹತ್ವಾಕಾಂಕ್ಷೆ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞವು ವಿಶ್ವದಾದ್ಯಂತ ನಡೆಯುತ್ತಿದೆ. ಪರ್ಯಾಯಕ್ಕೆ ಐದು ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ ಎಂದರು.

ದೇಶದ ತೀರ್ಥಕ್ಷೇತ್ರ ಯಾತ್ರೆ ಪೂರೈಸಿ ಪುತ್ತಿಗೆ ಶ್ರೀಗಳು 2024ರ ಜ. 8ರಂದು ಉಡುಪಿ ಪುರಪ್ರವೇಶ ಮಾಡಲಿದ್ದಾರೆ. ಉಡುಪಿ ಶಾಸಕರ ನೇತೃತ್ವದಲ್ಲಿ ಸ್ವಾಗತ ಸಮಿತಿ ನಿಯೋಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರ ಸಹಿತ ವಿವಿಧ ಇಲಾಖಾ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸಹಕಾರ ಯಾಚಿಸಲಿದೆ ಎಂದರು.

ಪರ್ಯಾಯ ಮೆರವಣಿಗೆಯಲ್ಲಿ ರಾಷ್ಟ್ರೀಯ, ರಾಜ್ಯ ಮಟ್ಟದ ಕಲಾ ತಂಡಗಳು ಪಾಲ್ಗೊಳ್ಳುವ ನಿಟ್ಟಿನಲ್ಲಿ ಈ ಹಿಂದಿನಂತೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನ ಅಗತ್ಯವಿದೆ. ಪರ್ಯಾಯಕ್ಕೆ ದೇಶ, ವಿದೇಶದಿಂದ ಬರುವವರಿಗೆ ವಸತಿ, ಊಟೋಪಚಾರ ವ್ಯವಸ್ಥೆ ಅಗತ್ಯ ವಾಗಿದೆ. 2008ರಲ್ಲಿ ಸುಂದರ ಉಡುಪಿ ಯೋಜನೆ ರೂಪಿಸಿ ಸಾಕಾರ ಗೊಳಿಸಿದ್ದ ಶ್ರೀಪಾದರು, 2024-26ರಲ್ಲಿ ಉಡುಪಿ ಕಾರಿಡಾರ್ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ರಂಜನ್ ಕಲ್ಕೂರ, ನಾಗರಾಜ ಆಚಾರ್ಯ, ರಮೇಶ್ ಭಟ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News