ಸೆ.9ರಂದು ಲಿಕೋ ಬ್ಯಾಂಕಿನ ಎಟಿಎಂ ಉದ್ಘಾಟನೆ
ಉಡುಪಿ, ಸೆ.7: ಉಡುಪಿ ಡಿವಿಜನಲ್ ಲೈಫ್ ಇನ್ಸೂರೆನ್ಸ್ ಎಂಪಾಲಯಿಸ್ ಕೋ ಆಪರೇಟಿವ್ ಸೊಸೈಟಿ ಲಿ. (ಲಿಕೋ ಬ್ಯಾಂಕ್)ನ ಎಟಿಎಂ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳ ಉದ್ಘಾಟನೆಯು ಸೆ.9ರಂದು ಬೆಳಗ್ಗೆ 10ಗಂಟೆಗೆ ಬ್ಯಾಂಕಿನ ಆವರಣದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣ ತಿಳಿಸಿದರು.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1962ರಲ್ಲಿ ಪ್ರಾರಂಭಗೊಂಡ ಈ ಬ್ಯಾಂಕ್ ಈಗ ರಾಜ್ಯದ ಹತ್ತು ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. 1991ರಲ್ಲಿ ಬ್ಯಾಂಕಿನ ಮೊದಲ ಶಾಖೆ ಧಾರವಾಡದಲ್ಲಿ ಪ್ರಾರಂಭಗೊಂಡಿತು ಎಂದರು.
2021ರಲ್ಲಿ ಉಡುಪಿಯಲ್ಲಿ ಲಿಕೋ ಬ್ಯಾಂಕ್ ವಜ್ರಮಹೋತ್ಸವ ಕಟ್ಟಡ ನಿರ್ಮಿಸಿದ್ದು, ಇದರಲ್ಲಿ 350 ಆಸನಗಳ ಸಭಾಂಗಣ, ಅತಿಥಿ ಗೃಹಗಳನ್ನು ನಿರ್ಮಾಣಗೊಂಡಿದೆ ಎಂದರು.
ಬ್ಯಾಂಕ್ ಪ್ರಸ್ತುತ 8 ಕೋಟಿ ಷೇರು ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ಠೇವಣಿ 160 ಕೋಟಿ ರೂ. ಹಾಗೂ 10 ಕೋಟಿ ಸಾಲ ಮತ್ತು ಮುಂಗಡ ನೀಡಿದೆ. ಬ್ಯಾಂಕಿನ ದುಡಿಯುವ ಬಂಡವಾಳ 180 ಕೋಟಿ. ಪ್ರಸ್ತುತ ಬ್ಯಾಂಕಿನ ಒಟ್ಟು ವ್ಯವಹಾರ 265 ಕೋಟಿ ರೂ.ಆಗಿದ್ದರೆ, ಬ್ಯಾಂಕಿನ ಆಸ್ತಿ 178 ಕೋಟಿ ರೂ.ಎಂದರು.
ಇದೀಗ ಬ್ಯಾಂಕಿನ 61ನೇ ವರ್ಷದಲ್ಲಿ ಗ್ರಾಹಕರ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಎಟಿಎಂ, ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತಿದ್ದು, ಇದರೊಂದಿಗೆ ಮೊಬೈಲ್ ಬ್ಯಾಂಕಿಂಗ್, ಯುಪಿಐ ಸೇವೆಯನ್ನು ನೀಡಲಾಗುತ್ತಿದೆ ಎಂದು ಕೆ.ಕೃಷ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾದ್ಯಕ್ಷ ಎ.ದಯಾನಂದ, ಸಿಇಓ ಶಶಿಕಲಾ ಹಾಗೂ ನಿರ್ದೇಶಕ ಕೆ.ಶಿವಪ್ರಸಾದ್ ಉಪಸ್ಥಿತರಿದ್ದರು.