ಕುಂದಾಪುರದಲ್ಲಿ ವೈದ್ಯರಿಂದ ಮೌನ ಪ್ರತಿಭಟನಾ ಮೆರವಣಿಗೆ

Update: 2024-08-17 12:31 GMT

ಕುಂದಾಪುರ, ಆ.17: ಕೋಲ್ಕತ್ತಾದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕುಂದಾಪುರ ಶಾಖೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗ ದಲ್ಲಿ ವೈದ್ಯರು ಶನಿವಾರ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ಕುಂದಾಪುರ ಶಾಸ್ತ್ರಿ ಸರ್ಕಲ್‌ನಿಂದ ಆರಂಭಗೊಂಡ ವೈದ್ಯರ ಮೌನ ಮೆರವಣಿಗೆಯು ಪಾರಿಜಾತ ಸರ್ಕಲ್ ಸರ್ಕಲ್, ಹೊಸ ಬಸ್ ನಿಲ್ದಾಣ ಮೂಲಕವಾಗಿ ಕುಂದಾಪುರದ ಮಿನಿ ವಿಧಾನನಸೌಧದವರೆಗೆ ನಡೆಯಿತು. ಐಎಂಎ ಕುಂದಾಪುರ ಶಾಖೆ ಅಧ್ಯಕ್ಷೆ ಡಾ.ಪ್ರಮೀಳಾ ನಾಯಕ್, ಸರಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ಡಾ.ನಾಗೇಶ್ ನೇತೃತ್ವ ದಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ಮಹೇಶ್ಚಂದ್ರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಐಎಂಎ ಕುಂದಾಪುರ ಶಾಖೆ ಕಾರ್ಯದರ್ಶಿ ಡಾ.ಮಹಿಮಾ ಆಚಾರ್ಯ ಮಾತನಾಡಿ, ಕೊಲ್ಕತ್ತಾದಲ್ಲಿ ವೃತ್ತಿ ನಿರತ ವೈದ್ಯೆಯನ್ನು ಆಸ್ಪತ್ರೆಯಲ್ಲೇ ಕೊಲೆ ಮಾಡಿರುವುದು ಗಂಭೀರ ವಿಚಾರ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ವೈದ್ಯರು ಸಹ ಮನುಷ್ಯರು. ನಮಗೂ ಹಕ್ಕಿದೆ. ಕೆಲಸ ಮಾಡುವ ಜಾಗದಲ್ಲಿ ಸುರಕ್ಷತೆ ಬೇಕು. ಮಹಿಳಾ ವೈದ್ಯರು, ನರ್ಸಿಂಗ್ ಯುವತಿಯರಿಗೆ ರಕ್ಷಣೆ ಕೊಡಿಯೆಂದು ಸರಕಾರಕ್ಕೆ, ಜನಸಾಮಾನ್ಯರಿಗೆ ವಿನಂತಿ. ವೃತ್ತಿ ಜಾಗದಲ್ಲಿ ವೈದ್ಯರ ಸುರಕ್ಷತೆಗಾಗಿ ಕೇಂದ್ರೀಯ ಕಾನೂನು ಜಾರಿಗೊಳಿಸ ಬೇಕು ಎಂದು ಆಗ್ರಹಿಸಿದರು.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್, ಐಎಂಎ ಕುಂದಾಪುರ ಶಾಖೆಯ ಪ್ರಮುಖರು, ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ.ಉಮೇಶ್ ನಾಯಕ್, ಉಡುಪಿ ದಂತ ವೈದ್ಯರ ಸಂಘದ ಅಧ್ಯಕ್ಷ ಡಾ.ಜಗದೀಶ್ ಜೋಗಿ, ಕಾರ್ಯದರ್ಶಿ ಡಾ.ಅತುಲ್, ಆಯುಷ್ ವೈದ್ಯರ ಸಂಘದ ಡಾ.ಹರಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಡಾ.ಕೃಷ್ಣ ರಾವ್, ಮೆಡಿಕಲ್ ಪ್ರತಿನಿಧಿಗಳ ಸಂಘದ ವಸಂತ ಉಡುಪ, ನಸಿಂಂಗ್ ಹಾಗೂ ಪ್ಯಾರಾ ಮೆಡಿಕಲ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುರೇಖಾ ಪುರಾಣಿಕ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಕುಂದಾಪುರದ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ಸಿಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News