ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ಜಾನುವಾರು!

Update: 2023-07-30 13:07 GMT

ಕುಂದಾಪುರ, ಜು.30: ಒಂದೆಡೆ ಮಳೆಗಾಲದಲ್ಲಿ ಅಲ್ಲಲ್ಲಿ ಬಿದ್ದ ಹೊಂಡಗಳು, ಮತ್ತೊಂದೆಡೆ ಅವೈಜ್ಞಾನಿಕ ತಿರುವುಗಳು, ಈ ಮಧ್ಯೆ ಹೆದ್ದಾರಿಯಲ್ಲಿ ಮಲಗುವ, ಆಸುಪಾಸಿನಲ್ಲಿ ಓಡಾಡುವ ಬೀಡಾಡಿ ಜಾನುವಾರುಗಳು ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಕುಂದಾಪುರದಿಂದ ಬೈಂದೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಈ ಎಲ್ಲ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ.

ಚತುಷ್ಪಥ ಹೆದ್ದಾರಿ ಮೂಲಕ ಸುಗಮ ವಾಹನ ಓಡಾಟ ವ್ಯವಸ್ಥೆ ಕಲ್ಪಿಸ ಬೇಕೆಂಬ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಾಮಗಾರಿ ಆರಂಭದ ದಿನದಿಂದಲೂ ಕುಂಟುತ್ತಾ ಸಾಗಿಬಂದಿತ್ತು. ಅಲ್ಲದೆ ಅವೈಜ್ಞಾನಿಕ ಕಾಮಗಾರಿಗಳಿಂದ ಜನರ ಕೆಂಗಣ್ಣಿಗೆ ಗುರಿಯಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದೀಗ ರಾಷ್ಟ್ರೀಯ ಹೆದ್ದಾರಿಯ ಬೈಂದೂರು-ಕುಂದಾಪುರ ನಡುವೆ ಡಿವೈಡರ್ ಮೇಲೆ ಜಾನುವಾರು ಗಳ ಓಡಾಟ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ ಈ ಮಾರ್ಗದ ಹಲವೆಡೆ ಹೆದ್ದಾರಿ ಮಧ್ಯೆಯೇ ಬೀಡಾಡಿ ಗೋವುಗಳು ಮಲಗಿ ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ.

ಬೈಂದೂರು ಮಾರ್ಗದ ತ್ರಾಸಿ ತರುವಾಯ ನಾವುಂದದಿಂದ ಬಹುತೇಕ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ಜಾನುವಾರುಗಳು ಎಲ್ಲೆಂದರಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಮಾಡುತ್ತಿದೆ. ಇದರಿಂದ ದ್ವಿಚಕ್ರ ವಾಹನ ಹಾಗೂ ಕಾರು ಮೊದಲಾದ ಲಘು ವಾಹನ ಸವಾರಿಗರಿಗೆ ಬಹಳಷ್ಟು ಸಮಸ್ಯೆಯಾದರೆ, ಘನ ವಾಹನಗಳಾದ ಲಾರಿ, ಬಸ್ಸು ಮೊದಲಾದ ವಾಹನಡಿಗೆ ಸಿಕ್ಕು ಜಾನುವಾರುಗಳು ಸಾವು-ನೋವು ಅನುಭವಿಸಿದ ಉದಾಹರಣೆಗಳಿವೆ.

ಶಿರೂರು ಟೋಲ್‌ನಲ್ಲಿ ನಡೆದ ದುರಂತ

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಿಂದ ರೋಗಿಯನ್ನು ಹಾಗೂ ಅವರ ಕುಟುಂಬಿಕರನ್ನು ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಅಂಬುಲೈನ್ಸ್ ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಫ್ಲಾಜಾ ಬಳಿ ಪಲ್ಟಿಯಾಗಿತ್ತು.

ಈ ದುರ್ಘಟನೆಯಲ್ಲಿ ಉ.ಕ ಜಿಲ್ಲೆಯ ಹೊನ್ನಾವರ ಮೂಲದ ನಾಲ್ವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. ಟೋಲ್ ಕೇಂದ್ರದ ವಾಹನ ಸಂಚಾರ ಮಾರ್ಗದಲ್ಲಿ ಜಾನುವಾರುಗಳು ಮಲಗಿದ್ದು, ಅದನ್ನು ಸಿಬ್ಬಂದಿ ಬದಿಗೆ ಕಳಿಸಿ ಬ್ಯಾರಿಕೇಡ್ ತೆಗೆಯಲು ಹೋದಾಗ ನಿಯಂತ್ರಣ ಕಳೆದುಕೊಂಡ ಅಂಬುಲೆನ್ಸ್ ಪಲ್ಟಿಯಾಗಿದ್ದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿತ್ತು.

"ಕುಂದಾಪುರ-ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ನಡುವೆ ಹಲವೆಡೆ ಜಾನುವಾರುಗಳು ಮಲಗುವ ಕಾರಣ ಸುಗಮ ಸಂಚಾರಕ್ಕೆ ಅಡಚಣೆ ಯಾಗುತ್ತಿದ್ದು, ಸಾವು -ನೋವಿಗೂ ಕಾರಣವಾಗುತ್ತಿದೆ. ಬೀಡಾಡಿ ಗೋವುಗಳಿಗೆ ಸೂಕ್ತ ನೆಲೆ ಕಲ್ಪಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗ ಬೇಕು. ಈ ಹಿಂದೆ ಆಶ್ವಾಸನೆ ನೀಡಿದಂತೆ ಗೋಶಾಲೆ ನಿರ್ಮಾಣವಾಗಬೇಕು. ಬೀಡಾಡಿ ಗೋವುಗಳಿಂದ ಎಷ್ಟೋ ಕೃಷಿ ಭೂಮಿ ಹಾಳಾಗುತ್ತಿದೆ. ರಾತ್ರಿಯ ಸಮಯದಲ್ಲಿ ವಾಹನ, ಬೈಕ್ ಹಾಗೂ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮವಹಿಸ ಬೇಕು".

-ಸುಬ್ರಹ್ಮಣ್ಯ ಬಿಜೂರು, ಸಾಮಾಜಿಕ ಕಾರ್ಯಕರ್ತರು



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News