ವಾಸ್ತವದ ಅರಿವಿನ ಕೊರತೆಯ ತ್ರಿಭಾಷಾ ಸೂತ್ರ: ಡಾ. ಮಹಾಬಲೇಶ್ವರ ರಾವ್

Update: 2025-03-27 21:39 IST
  • whatsapp icon

ಉಡುಪಿ: 2020ರ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತೆ ಅದೇ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸುತ್ತಿರುವುದು ಸಮಿತಿಯ ಹಾಗೂ ಸರಕಾರ ಗಳ ಅಧ್ಯಯನಶೀಲತೆಯ ಮತ್ತು ವಾಸ್ತವದ ಸ್ಥಿತಿಗತಿಗಳ ಅರಿವಿನ ಕೊರತೆಯನ್ನು ತೋರಿಸುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಉಡುಪಿ ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರ ರಾವ್ ಟೀಕಿಸಿದ್ದಾರೆ.

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ‘ತ್ರಿಭಾಷಾ ಸೂತ್ರ’ದ ವಿವಾದದ ಬಗ್ಗೆ ಏರ್ಪಡಿಸಲಾದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಭಾರತದಂಥ ಬಹುಭಾಷಿಕ ಸಂದರ್ಭದಲ್ಲಿ ಪರಿಣಾಮಕಾರಿ ಭಾಷಾ ಬೋಧನೆಯ ನಿಟ್ಟಿನಲ್ಲಿ ಭಾಷಾ ಶಿಕ್ಷಕರನ್ನು ಸಬಲೀಕರಿಸಬೇಕಾದ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಯಾವ ರಾಜಕೀಯ ಪಕ್ಷ ಈ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತೋ ಅದೇ ಪಕ್ಷ ಈಗ ಪ್ರಾದೇಶಿಕತೆ ಹೆಸರಿನಲ್ಲಿ ವಿರೋಧಿಸುತ್ತಿದೆ. ಯಾವ ಪಕ್ಷ ಶಿಕ್ಷಣವನ್ನು ಸಂವಿಧಾನದ ರಾಜ್ಯಪಟ್ಟಿಯಿಂದ ಸಹವರ್ತಿ ಪಟ್ಟಿಗೆ ತಂದಿತೋ ಅದೇ ಪಕ್ಷ ಈಗ ರಾಜ್ಯಗಳ ಸ್ವಾಯತ್ತೆಯ ನೆಪದಲ್ಲಿ ಶಿಕ್ಷಣನೀತಿಯನ್ನು ವಿರೋಧಿಸುತ್ತಿದೆ. ಯಾವ ಪಕ್ಷ ಈ ದೇಶದ ಶಾಲಾ ಶಿಕ್ಷಣದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ತ್ರಿಭಾಷಾ ಸೂತ್ರವನ್ನು ವಿರೋಧಗಳ ನಡುವೆಯೂ ಅನುಷ್ಠಾನಗೊಳಿಸಿತೋ ಅದೇ ಪಕ್ಷ ಈಗ ಅದನ್ನು ಹಿಂದಿ ಹೇರಿಕೆಯ ನೆಪವೊಡ್ಡಿ ವಿರೋಧಿಸುತ್ತಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿ ಶಿಕ್ಷಕರು ವಿವಾದದ ಇತಿಹಾಸ ಹಾಗೂ ಪ್ರಸಕ್ತ ಸನ್ನಿವೇಶದ ಬಗ್ಗೆ ಪ್ರೌಢವಾಗಿ ವಿಚಾರ ಮಂಡನೆ ಮಾಡಿದರು. ನಿತ್ಯವಲ್ಲಿ ಸ್ವಾಗತಿಸಿ, ಅಶ್ವಿಜ ವಂದಿಸಿದರು. ಗರಿಷ್ಮ ಮೈಂದನ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News