ಮಾದಕ ವ್ಯಸನಿ ಯುವಕನಿಗೆ ಚಿಕಿತ್ಸೆ: ಆಶ್ರಮಕ್ಕೆ ದಾಖಲು

Update: 2023-08-13 13:11 GMT

ಉಡುಪಿ: ತಿಂಗಳ ಹಿಂದೆ ಉಡುಪಿಯ ಅಂಬಾಗಿಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾದಕ ವ್ಯಸನಿ ಯುವಕನ ವೀಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿ ದೇಶ-ವಿದೇಶಗಳಲ್ಲಿ ಸದ್ದು ಮಾಡಿತ್ತು. ಇದೀಗ ಯುವಕ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರೂ ಮನೆಯವರು, ಇಲಾಖೆಯಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವಕನನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆಶ್ರಮಕ್ಕೆ ದಾಖಲಿಸಿದ್ದಾರೆ.

ಸುಮಾರು ಒಂದು ತಿಂಗಳ ಕಾಲ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಾರ್ದಿಕ್(21) ಬಹಳಷ್ಟು ಮಟ್ಟಿಗೆ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ವೈದ್ಯರು ಸೂಚಿಸಿದ್ದಾರೆ. ಮುಂದೆ ಯುವಕ ಇನ್ನಷ್ಟು ಗುಣಮುಖನಾಗಲು ಹೆಚ್ಚಿನ ಔಷಧೋಪಾಚಾರ, ಕೌನ್ಸಿಲಿಂಗ್, ಯೋಗ, ಧ್ಯಾನದ ಆವಶ್ಯಕತೆಯಿದೆ. ಈ ಹಂತದಲ್ಲಿ ಅದು ಲಭಿಸದಿದ್ದರೆ ಮತ್ತೆ ಆತ ದುಶ್ಚಟಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿಶು ಶೆಟ್ಟಿ ಯುವಕನ ಹೆತ್ತವರು, ಸಂಬಂಧಿಕರು, ಸರಕಾರಿ ಇಲಾಖೆಗಳನ್ನು ಸಂಪರ್ಕಿಸಿ ನೆರವು ಯಾಚಿಸಿದರೂ ಸೂಕ್ತ ಸ್ಪಂದನೆಯೇ ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ಹಾರ್ದಿಕ್‌ನನ್ನು ವಿಶು ಶೆಟ್ಟಿ ಖಾಸಗಿ ವಾಹನದಲ್ಲಿ ಯುವಕನನ್ನು ಕರೆದೊಯ್ದು ಮಂಜೇಶ್ವರದ ದೈಗುಳಿ ಶ್ರೀಸಾಯಿ ಸೇವಾ ಆಶ್ರಮಕ್ಕೆ ದಾಖಲಿಸಿದ್ದಾರೆ. ಯುವಕನ ಆಸ್ಪತ್ರೆ ವೆಚ್ಚವನ್ನು ಅಂಬಲಪಾಡಿ ಗ್ರಾಪಂ ಸದಸ್ಯೆ ಭಾರತಿ ಭಾಸ್ಕರ್, ವಿಶು ಶೆಟ್ಟಿ ಹಾಗೂ ದಾನಿಗಳು ಭರಿಸಿ ಮಾನವೀಯತೆ ಮೆರೆದಿದ್ದಾರೆ.

ಯುವಕ ಹೆದ್ದಾರಿಯಲ್ಲಿ ಮಲಗಿ ಡ್ರಗ್ಸ್‌ಗಾಗಿ ಅಂಗಲಾಚುವ ವೀಡಿಯೋ ವೈರಲ್ ಆಗಿ ಆತನನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸು ವಂತೆ ದೇಶ ವಿದೇಶದಿಂದ ಕರೆ ಬಂದಿತ್ತು. ಇದೀಗ ಯುವಕ ಚೇತರಿಸಿಕೊಂಡಿದ್ದಾನೆ. ಆದರೆ ಯುವಕನಿಗೆ ಆಶ್ರಯ ನೀಡುವವರು ಯಾರೂ ಇಲ್ಲ. ಸಂಬಂಧಪಟ್ಟ ಇಲಾಖೆಗಳು, ಜಿಲ್ಲಾಡಳಿತ ಅಲ್ಲದೆ ಯುವಕನ ಹೆತ್ತವರೂ ನೆರವಿಗೆ ಬಂದಿಲ್ಲ. ಯುವಕನನ್ನು ಹೀಗೆಯೇ ಬಿಟ್ಟರೆ ಮತ್ತೆ ಆತ ಬೀದಿ ಪಾಲಾಗುವುದರಲ್ಲಿ ಸಂಶಯವಿಲ್ಲ. ಇದೀಗ ಯುವಕನ ಮುಂದಿನ ಭವಿಷ್ಯದ ದೃಷ್ಟಿಯಿಂದ ಸಂಘ ಸಂಸ್ಥೆಗಳು, ಸಾಮಾಜಿಕ ಜಾಲತಾಣದ ಸಹೃದಯರು ನೆರವಿಗೆ ಮುಂದಾಗಬೇಕು’

-ವಿಶು ಶೆಟ್ಟಿ, ಸಮಾಜ ಸೇವಕರು, ಉಡುಪಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News