ಉಡುಪಿ: ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ ಫಲಾನುಭವಿಗಳು
ಬಿ.ಬಿ.ಶೆಟ್ಟಿಗಾರ್
ಉಡುಪಿ, ಜು.20: ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಗೆ ಫಲಾನುಭವಿಗಳ ನೊಂದಣಿ ಹಲವು ಸಮಸ್ಯೆಗಳ ಮಧ್ಯೆ ಇಂದು ಜಿಲ್ಲೆಯಾದ್ಯಂತ ಪ್ರಾರಂಭಗೊಂಡಿದೆ.
ಯೋಜನೆಯ ಮೊದಲ ದಿನವಾದ ಇಂದು ಕೇಳಿಬಂದ ಬಹುದೊಡ್ಡ ದೂರು ‘ಸರ್ವರ್ ಡೌನ್’ ಸಮಸ್ಯೆಯದ್ದು. ಇದು ಜಿಲ್ಲೆಯ ಹೆಚ್ಚಿನ ಗ್ರಾಮ ವನ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಕೇಳಿಬಂದಿದೆ. ಇದರಿಂದಾಗಿ ತಮ್ಮ ಮೊಬೈಲ್‌ಗೆ ನೊಂದಣಿಯ ಸಂದೇಶ ಪಡೆದ ಮಹಿಳೆಯರು ನಿಗದಿತ ಕೇಂದ್ರಗಳಿಗೆ ಧಾವಿಸಿ ಬಂದರಾದರೂ, ನೊಂದಾವಣಿಯ ಪ್ರಕ್ರಿಯೆ ಮುಗಿಸಿ ಮಂಜೂರಾತಿ ಪತ್ರ ಪಡೆಯಲು ವಿಫಲರಾದರು.
ಇದರೊಂದಿಗೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳ ಹೊಂದಾಣಿಕೆಯೂ ಹಲವು ಕಡೆಗಳಲ್ಲಿ ಸಾಧ್ಯವಾಗಿಲ್ಲ. ಇದರೊಂದಿಗೆ ಹಲವು ಮಂದಿಗೆ ಹತ್ತಿರದ ನೊಂದಣಿ ಕೇಂದ್ರಗಳ ಬದಲು ದೂರದ ಕೇಂದ್ರಗಳನ್ನು ಗೊತ್ತುಪಡಿಸಿರುವುದು ಸಹ ಗೊಂದಲಗಳಿಗೆ ಕಾರಣವಾಗಿದೆ. ಉದಾಹರಣೆಗೆ ಉಡುಪಿಯವರಿಗೆ ಮಣಿಪಾಲದ ನೊಂದಣಿ ಕೇಂದ್ರಕ್ಕೆ ಹೋಗಲು, ಒಂದು ಗ್ರಾಮದವರಿಗೆ ದೂರದ ಮತ್ತೊಂದು ಗ್ರಾಮದ ಗ್ರಾಮ ವನ್ ಅಥವಾ ಬಾಪೂಜಿ ಕೇಂದ್ರಗಳಿಗೆ ತೆರಳಲು ಮೊಬೈಲ್ ಸಂದೇಶ ಬಂದಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಕೃಷ್ಣಪ್ಪ ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಇಂದು ಯೋಜನೆಯ ಪ್ರಾರಂಭದ ದಿನವಾಗಿರುವುದರಿಂದ ಎದುರಾಗಿರುವ ಸಮಸ್ಯೆಗಳನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಿದ ಬಳಿಕ ನೊಂದಣಿ ಸುಲಲಿತವಾಗಿ ನಡೆಯುವ ನಿರೀಕ್ಷೆ ಇದೆ. ಎಲ್ಲರೂ ಒಮ್ಮೆಗೆ ನೊಂದಣಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಸಹಜವಾಗಿರುತ್ತದೆ. ಈ ಸಮಸ್ಯೆಯನ್ನು ರಾಜ್ಯ ಮಟ್ಟದಲ್ಲಿ ಬಗೆಹರಿಸ ಲಾಗುತ್ತದೆ.
ಒಂದೆರಡು ನಿಮಿಷದ ಕೆಲಸ: ಎಲ್ಲವೂ ಸರಾಗವಾಗಿ ನಡೆದರೆ ಗೃಹಲಕ್ಷ್ಮೀ ಯೋಜನೆಗೆ ಹೆಸರು ನೊಂದಾವಣಿ ಕೇವಲ ಒಂದೆರಡು ನಿಮಿಷಗಳ ಕೆಲಸ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿದ ತಕ್ಷಣ ಆಧಾರ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳು ಅಲ್ಲಿ ಕಾಣಿಸಿಕೊಳ್ಳುತ್ತದೆ. ಅವುಗಳ ಹೊಂದಾಣಿಕೆ ಅಷ್ಟೇ ಆದರೆ ಸಾಕಾಗುತ್ತದೆ. ಎಲ್ಲವೂ ಯೋಚಿಸಿದಂತೆ ನಡೆದರೆ ದಿನದಲ್ಲಿ 100ಕ್ಕೂ ಅಧಿಕ ಮಂದಿ ಹೆಸರನ್ನು ನೊಂದಾಯಿಸಬಹುದು. ಸದ್ಯಕ್ಕೆ ಪ್ರತಿ ಕೇಂದ್ರಕ್ಕೆ ಬೆಳಗ್ಗೆ 30 ಹಾಗೂ ಅಪರಾಹ್ನದ ಬಳಿಕ 30 ಸೇರಿ ದಿನಕ್ಕೆ 60 ನೊಂದಣಿ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೃಷ್ಣಪ್ಪ ವಿವರಿಸಿದರು.
ಆದರೆ ಮೇಲೆ ಹೇಳಿದ ವಿವಿಧ ಸಮಸ್ಯೆಗಳ ಕಾರಣದಿಂದ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಸಾಧ್ಯವಾಗಿಲ್ಲ. ಒಂದೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳೂ ಬಗೆಹರಿಯುವ ಸಾಧ್ಯತೆಗಳಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆಯ ನೊಂದಣಿಗೆ ಇರುವ ಎರಡನೇ ವಿಧಾನವೆಂದರೆ ಸರಕಾರ ದಿಂದ ನೇಮಕಗೊಳ್ಳುವ ಪ್ರಜಾಪ್ರತಿನಿಧಿ (ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು) ಗಳು ಫಲಾನುಭವಿಗಳ ಮನೆಮನೆಗೆ ಭೇಟಿ ನೀಡಿ ಸ್ಥಳದಲ್ಲೇ ನೊಂದಣಿ ಮಾಡಿಕೊಳ್ಳಲು ಇರುವ ಅವಕಾಶ.
ಪ್ರಜಾಪ್ರತಿನಿಧಿಗಳ ನೇಮಕಾತಿ ವಿಳಂಬ: ಸದ್ಯಕ್ಕೆ ಪ್ರತಿ500 ಕಾರ್ಡುಗಳಿಗೆ ಒಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಈವರೆಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ. ಈ ಬಗ್ಗೆ ಸರಕಾರದಿಂದ ಖಚಿತವಾದ ಮಾರ್ಗಸೂಚಿಗಳು ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆ ಇದರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಕೃಷ್ಣಪ್ಪ.
ಗೀತಕ್ಕನ ಮೊಗದಲ್ಲಿ ಸಂತಸ: ವಿವಿಧ ಸಮಸ್ಯೆಗಳಿಂದ ಹೆಚ್ಚಿನ ಗ್ರಾಮ ವನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಧ್ಯಾಹ್ನದವರೆಗೆ ಒಂದೇ ಒಂದು ನೋಂದಣಿ ಸಾಧ್ಯವಾಗಿರಲಿಲ್ಲ. ಆದರೆ ಪರ್ಕಳ ಸಮೀಪದ ಕೋಡಿಬೆಟ್ಟು ಜನತಾ ನಗರದ ನಿವಾಸಿ ಗೀತಾ ನಾಯಕ್ ಅವರು ಇದ್ಯಾವುದೂ ಸಮಸ್ಯೆಗಳಿಲ್ಲದೇ ‘ಗೃಹಲಕ್ಷ್ಮೀ ಯೋಜನೆ’ಗೆ ತನ್ನ ಹೆಸರನ್ನು ನೊಂದಾಯಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಕೇಂದ್ರದ ಸಿಬ್ಬಂದಿಗಳಿಂದ ಮಂಜೂರಾತಿ ಪತ್ರ ಪಡೆದ ಗೀತಕ್ಕನ ಮೊಗದಲ್ಲಿ ನಗುವೋ ನಗು.
ತನ್ನ ಮೊಬೈಲ್‌ಗೆ ಇಂಥದ್ದೊಂದು ಸಂದೇಶ ಬಂದಿರುವುದರ ಅರಿವೇ ಇಲ್ಲದ ಗೀತಕ್ಕ ಪರ್ಕಳಕ್ಕೆ ಬಂದಿದ್ದಾಗ, ಪರಿಚಯದವರೊಬ್ಬರು ಮೊಬೈಲ್ ನೋಡಿ ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅಪರಾಹ್ನ 3ಕ್ಕೆ ಗ್ರಾಮವನ್ ಕೇಂದ್ರಕ್ಕೆ ಧಾವಿಸಿದ ಗೀತಕ್ಕೆ ಯಶಸ್ವಿಯಾಗಿ ಯೋಜನೆಗೆ ತನ್ನ ಹೆಸರನ್ನು ನೊಂದಾಯಿಸಿಕೊಂಡರು. ಇದೀಗ ಅವರು ತನ್ನ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರಾಜ್ಯ ಸರಕಾರದಿಂದ 2,000ರೂ. ಬರುವುದನ್ನು ಎದುರು ನೋಡುತಿದ್ದಾರೆ.
ಜಿಲ್ಲೆಯಲ್ಲಿ 366 ನೊಂದಣಿ ಕೇಂದ್ರ, 2,58,765 ಫಲಾನುಭವಿಗಳು
ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಒಟ್ಟಾರೆ 2,58,765 ಮಂದಿ ಕುಟುಂಬದ ಯಜಮಾನಿ ಎಂದು ನಮೂದಾಗಿರುವ ಪಡಿತರ ಚೀಟಿದಾರರಿದ್ದು, ಇವರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ 27,682 ಮಂದಿ ಅಂತ್ಯೋದಯ, 1,62,734 ಮಂದಿ ಬಿಪಿಎಲ್ ಹಾಗೂ 68,349 ಎಪಿಎಲ್ ಕಾರ್ಡ್ ಹೊಂದಿದವರಿದ್ದಾರೆ.
ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 181 ಗ್ರಾಮ ಒನ್, 155 ಬಾಪೂಜಿ ಸೇವಾ ಕೇಂದ್ರ, 11 ಕರ್ನಾಟಕ ಒನ್, 19 ವಾರ್ಡ್ ಕಚೇರಿ ಸೇರಿದಂತೆ ಒಟ್ಟು 366 ಸೇವಾ ಕೇಂದ್ರಗಳನ್ನು ಏಳು ತಾಲೂಕುಗಳಲ್ಲಿ ಗುರುತಿಸಲಾಗಿದ್ದು, ಫಲಾನುಭಗಳು ಸದರಿ ಕೇಂದ್ರಗಳಿಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕುಟುಂಬದ ಯಜಮಾನಿ ಎಂದು ಗುರುತಿಸಿದ ಫಲಾನುಭವಿಗಳ ವಿವರ
ತಾಲೂಕು ಪಡಿತರ ಚೀಟಿ ಸಂಖ್ಯೆ | ಅಂತ್ಯೋದಯ | ಬಿಪಿಎಲ್ | ಎಪಿಎಲ್ | ಒಟ್ಟು |
ಕಾರ್ಕಳ | 3320 | 27412 | 10159 | 40891 |
ಕುಂದಾಪುರ | 8111 | 38221 | 9625 | 55957 |
ಉಡುಪಿ | 2523 | 25953 | 23052 | 51528 |
ಕಾಪು | 2511 | 15806 | 11131 | 29448 |
ಬ್ರಹ್ಮಾವರ | 5749 | 25295 | 9001 | 40045 |
ಬೈಂದೂರು | 4226 | 22002 | 3489 | 29717 |
ಹೆಬ್ರಿ | 1242 | 8045 | 1892 | 11179 |
ಒಟ್ಟು | 27682 | 162734 | 68349 | 258765 |
ಗೃಹಲಕ್ಷ್ಮೀ ಯೋಜನೆಗೆ ಗುರುತಿಸಿರುವ ಕೇಂದ್ರಗಳ ವಿವರ
ತಾಲೂಕು | ಗ್ರಾಮವನ್ | ಬಾಪೂಜಿ ಕೇಂದ್ರ | ಕರ್ನಾಟಕ ಒನ್ | ವಾರ್ಡ್ ಕಚೇರಿ | ಒಟ್ಟು |
ಕಾರ್ಕಳ | 28 | 27 | 1 | 3 | 59 |
ಕುಂದಾಪುರ | 46 | 45 | 1 | 3 | 95 |
ಉಡುಪಿ | 26 | 16 | 3 | 6 | 51 |
ಕಾಪು | 21 | 16 | 1 | 3 | 41 |
ಬ್ರಹ್ಮಾವರ | 29 | 27 | 2 | 2 | 60 |
ಬೈಂದೂರು | 22 | 15 | 3 | 2 | 42 |
ಹೆಬ್ರಿ | 09 | 09 | 0 | 0 | 18 |
ಒಟ್ಟು | 181 | 155 | 11 | 19 | 366 |
ಗೀತಾ ನಾಯಕ್