ಉಡುಪಿ: ಆ.6ಕ್ಕೆ ಕಂಪ್ಯೂಟರ್ ಕೀಲಿಮಣೆ ತಜ್ಞ ಕೆ.ಪಿ.ರಾವ್‌ಗೆ ಅಭಿನಂದನೆ

Update: 2023-08-02 15:47 GMT

ಉಡುಪಿ, ಆ.2: ನಾಡಿನ ಹಿರಿಯ ವಿದ್ವಾಂಸ, ಕಂಪ್ಯೂಟರ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ನಾಡೋಜ ಪ್ರೊ.ಕೆ.ಪಿ.ರಾವ್ ಅವರಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಸಹಕಾರದೊಂದಿಗೆ ನಾಡೋಜ ಕೆ.ಪಿ.ರಾವ್ ಅಭಿನಂದನ ಸಮಿತಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಉಡುಪಿಯ 20ಕ್ಕೂ ಅಧಿಕ ಸಂಘ -ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆ.6 ರವಿವಾರ ಬೆಳಗ್ಗೆ 9ರಿಂದ ಅಪರಾಹ್ನ 1:15ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರವಿವಾರ ಬೆಳಗ್ಗೆ 9:50ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಮುನ್ನ ಪರ್ಕಳದ ಸರಿಗಮ ಭಾರತಿ ಇವರಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮೂಡಬಿದರೆಯ ಜೈನಮಠದ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ನುಡಿ ಸಂದೇಶ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ನೀಲಾವರ ಸುರೇಂದ್ರ ಅಡಿಗ, ಪೂರ್ಣಿಮಾ, ಡಾ.ಪಿ.ವಿ ಭಂಡಾರಿ, ಉಡುಪಿ ವಿಶ್ವನಾಥ ಶೆಣೈ, ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಉಪಸ್ಥಿತರಿರುವರು.

ಬೆಳಗ್ಗೆ 10:30ರಿಂದ ಬೆಂಗಳೂರಿನ ಡಾ.ಯು.ಬಿ.ಪವನಜ ಕಂಪ್ಯೂಟರ್ ಮತ್ತು ಕೆ.ಪಿ.ರಾವ್ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. 10:45ರಿಂದ ಪ್ರೊ. ವರದೇಶ ಹಿರೇಗಂಗೆ ಕೆ.ಪಿ.ರಾವ್ ಬದುಕು ಹಾಗೂ ವರ್ಣಕ ಕಾದಂಬರಿ, 11:00ರಿಂದ ಡಾ. ಎನ್.ಟಿ.ಭಟ್ ಇವರು ಕೆ.ಪಿ.ರಾವ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡುವರು. 11:05ರಿಂದ ಕೆಪಿ ರಾವ್ ಅವರೊಂದಿಗೆ ‘ಮಾತುಕತೆ’ ನಡೆಯಲಿದೆ.

ಅಪರಾಹ್ನ 12:15ರಿಂದ ಕೆ.ಪಿ.ರಾವ್ ಅಭಿನಂದನ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಳ್ಳಾಲ್ ವಹಿಸಲಿದ್ದು, ಪ್ರಸಿದ್ಧ ಸಾಹಿತಿ ಬೆಂಗಳೂರಿನ ಜಯಂತ್ ಕಾಯ್ಕಿಣಿ ಅಭಿನಂದನ ಮಾತುಗಳನ್ನಾಡಲಿದ್ದಾರೆ. ಪ್ರೊ.ಮುರಳೀಧರ ಉಪಾಧ್ಯ, ಡಾ.ಬಿ. ಜಗದೀಶ ಶೆಟ್ಟಿ, ಪ್ರೊ. ಸೇಡಿಯಾಪು ಜಯರಾಮ ಭಟ್, ಉಡುಪಿ ವಿಶ್ವನಾಥ ಶೆಣೈ, ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಕಸಾಪದ ರವಿರಾಜ್ ಎಚ್.ಪಿ., ಕಾರ್ಯದರ್ಶಿ ಜನಾರ್ದನ ಕೊಡವೂರು ಹಾಗೂ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಉಪಸ್ಥಿತರಿದ್ದರು.

ಪ್ರೊ.ಕೆ.ಪಿ.ರಾವ್ ಪರಿಚಯ

ನಾಡೋಜ ಕಿನ್ನಿಕಂಬಳ ಪದ್ಮನಾಭ ರಾವ್ (ಕೆ.ಪಿ.ರಾವ್) ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ‘ಪಿತಾಮಹ’ರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ಮೂಲ ವಿನ್ಯಾಸವನ್ನು (‘ನುಡಿ’ ವಿನ್ಯಾಸ) ರೂಪಿಸಿದ್ದು ಕೆ. ಪಿ. ರಾವ್ ಅವರ ಸಾಧನೆಗಳಲ್ಲೊಂದು.

ಕೆ.ಪಿ.ರಾವ್ 1940ರ ಫೆ.29ರಂದು ಮಂಗಳೂರಿನ ಕಿನ್ನಿಕಂಬಳದಲ್ಲಿ ಜನಿಸಿದರು. ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢ ಶಾಲೆ ಹಾಗೂ ಕಾಲೇಜು ವ್ಯಾಸಂಗ. 1959ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ. ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್‌ನಲ್ಲಿ (ಟಿಐಎಫ್‌ಆರ್) ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು. 1970ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ. ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ -ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ.

ಸಾಧನೆಗಳು: ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ. ಕನ್ನಡದ ಪದಸಂಸ್ಕಾರಕ ತಂತ್ರಾಂಶ ’ಸೇಡಿ ಯಾಪು’ ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.

ಪ್ರಶಸ್ತಿ ಗೌರವಗಳು: ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂಬ ಮಾನ್ಯತೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. ಆಳ್ವಾಸ್ ನುಡಿಸಿರಿ 2009ರಲ್ಲಿ ಸನ್ಮಾನ. 2013ರಲ್ಲಿ ವಿಶ್ವಕರ್ಮ ಪ್ರಶಸ್ತಿ, 2013ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ. 2013ರ ಎಪ್ರಿಲ್ ನಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ ‘ಕಂಪ್ಯೂಟರ್ ಕನ್ನಡ ಕೆ.ಪಿ.ರಾವ್’ ಪ್ರಕಟ, 2013 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ. 2021ರಲ್ಲಿ ’ಕಾರಂತ ಬಾಲವನ ಪ್ರಶಸ್ತಿ’

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News