ವಾರಾಹಿ ಯೋಜನೆಯ ಕಾಮಗಾರಿ ತ್ವರಿತಗೊಳಿಸಲು ಉಡುಪಿ ಡಿಸಿ ಡಾ. ವಿದ್ಯಾಕುಮಾರಿ ಸೂಚನೆ

Update: 2023-09-02 14:49 GMT

ಉಡುಪಿ, ಸೆ.2: ಜಿಲ್ಲೆಯಲ್ಲಿ ಈ ವರ್ಷ ಒಟ್ಟಾರೆಯಾಗಿ ಶೇ.30ರಷ್ಟು ಮಳೆ ಕೊರತೆಯ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯೂ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸಲು ಜಿಲ್ಲಾಡಳಿತ ಈಗಲೇ ಸೂಕ್ತಕ್ರಮ ಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಜೂನ್ (ಶೇ.53ರಷ್ಟು) ಹಾಗೂ ಆಗಸ್ಟ್ ತಿಂಗಳಲ್ಲಿ (ಶೇ.72ರಷ್ಟು) ಕಂಡುಬಂದಿರುವ ಮಳೆಯ ಕೊರತೆಯಿಂದ ಎದುರಾಗಬಹುದಾದ ಸಮಸ್ಯೆ ಯನ್ನು ಎದುರಿಸಲು ಜಿಲ್ಲಾಡಳಿತ ಯಾವ ರೀತಿಯ ಸಿದ್ಧತೆ ನಡೆಸಿದೆ ಎಂದು ‘ವಾರ್ತಾಭಾರತಿ’ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಈ ಉತ್ತರ ನೀಡಿದರು. ಮಳೆಯ ಕೊರತೆಯಿಂದ ಸಾಕಷ್ಟು ಸಮಸ್ಯೆಯಾಗಿರುವುದು ಹೌದು. ಇದೀಗ ಸೆಪ್ಟಂಬರ್ ತಿಂಗಳು ನಮಗೆ ನಿರ್ಣಾಯಕ. ಅಲ್ಲೂ ಮಳೆಯ ಕೊರತೆ ಎದುರಾದರೆ ಈ ವರ್ಷಾಂತ್ಯದೊಳಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಆತಂಕವಿದೆ ಎಂದರು.

ಹೀಗಾಗಿ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ನಿನ್ನೆ ಅಧಿಕಾರಿಗಳ ಸಭೆಯೊಂದನ್ನು ಕರೆದು ಚರ್ಚಿಸಿ ಅಗತ್ಯ ಸೂಚನೆ ಗಳನ್ನು ನೀಡಿದ್ದೇನೆ. ಏನೇ ಸಮಸ್ಯೆ ಎದುರಾದರೂ ಮಾರ್ಚ್ ಒಳಗೆ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ ಎಂದರು.

ಇನ್ನು ನಗರಸಭೆ, ಪುರಸಭೆ, ಪಟ್ಟಣಪಂಚಾಯತ್, ಗ್ರಾಪಂಗಳಲ್ಲಿ ನೀರಿನ ಮಿತವ್ಯಯಕ್ಕೆ ಆದ್ಯತೆ ನೀಡುವಂತೆ, ಇದಕ್ಕೆ ಜನರನ್ನು ಸಜ್ಜುಗೊಳಿಸುವಂತೆ ತಿಳಿಸಲಾಗಿದೆ. ಡಿಸೆಂಬರ್ ವೇಳೆಗೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಿತವ್ಯಯವೊಂದೇ ನಮಗಿರುವ ದಾರಿ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲೆಯಲ್ಲಿರುವ ಕಿಂಡಿ ಅಣೆಕಟ್ಟುಗಳಿಗೆ ಸೆಪ್ಟಂಬರ್ ತಿಂಗಳಲ್ಲೇ ಹಲಗೆ ಹಾಕಿ ನೀರು ಸಂಗ್ರಹಿಸಿಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಕೂಡಲೇ ಟೆಂಡರ್ ಕರೆಯಲು ತಿಳಿಸಲಾಗಿದೆ. ಇದರಿಂದ ಅಣೆಕಟ್ಟಿನ ಆಸುಪಾಸಿನ ಬಾವಿ, ಬೋರ್‌ವೆಲ್ ಗಳಿಗೆ ಸಹಾಯವಾಗಲಿದೆ ಎಂದರು.

ರೈತರಿಗೂ ನೀರಿನ ಮಿತವ್ಯಯವನ್ನು ಈಗಿನಿಂದಲೇ ಅನುಸರಿಸುವಂತೆ ತಿಳಿಸಲಾಗಿದೆ. ಮಳೆ ನೀರಿನ ಸಂಗ್ರಹ, ನೀರು ಪೋಲಾಗದಂತೆ ಎಚ್ಚರ ವಹಿಸುವ ಸೂಚಿಸಲಾಗಿದೆ. ಇದರೊಂದಿಗೆ ಮಳೆ ನೀರಿನ ಸಂಗ್ರಹಕ್ಕೆ (ರೈನ್ ಹಾರ್ವೆಸ್ಟಿಂಗ್) ಈ ತಿಂಗಳಿನಿಂದಲೇ ಆದ್ಯತೆ ನೀಡಲು ಗ್ರಾಪಂ, ನಗರಸಭೆ ಸೇರಿದಂತೆ ಸ್ಥಳಿಯಾಡಳಿತ ಮಟ್ಟದಲ್ಲಿ ಸೂಚನೆ ನೀಡಲಾಗಿದೆ ಎಂದರು.

ಸೆಪ್ಟೆಂಬರ್ ತಿಂಗಳಲ್ಲಿ ಸಾಕಷ್ಟು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದು ನಮಗೆ ಸ್ಪಲ್ಪ ಮಟ್ಟಿನ ಸಮಾಧಾನ ನೀಡಿದೆ. ಆದರೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಜ್ಜಾಗುತಿದ್ದೇವೆ ಎಂದು ಡಾ.ವಿದ್ಯಾಕುಮಾರಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News