ಉಡುಪಿ: ನ.19ಕ್ಕೆ ಜ್ಞಾನ ವಿಜ್ಞಾನ ಸಮಿತಿ ಸಮಾವೇಶ
ಉಡುಪಿ, ನ.16: ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಸರ್ವ ಸದಸ್ಯರ ಸಮಾವೇಶವು ನ.19ರ ರವಿವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.
‘ಸಂವಿಧಾನದ ನೆಲೆಗಟ್ಟಿನಲ್ಲಿ ವೈಜ್ಞಾನಿಕ ಮನೋಭಾವ’ ಎಂಬ ಪರಿಕಲ್ಪನೆ ಅಡಿಯಲ್ಲಿ ಈ ಸಮಾವೇಶವು ನಡೆಯಲಿದ್ದು, ಮಂಗಳೂರಿನ ಹಿರಿಯ ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲಾಯ ಇವರಿಂದ ಸಮಾವೇಶದ ಮುಖ್ಯ ಉಪನ್ಯಾಸ ಕಾರ್ಯ ಕ್ರಮ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಮನೋವೈದ್ಯರು ಮತ್ತು ಬಿಜಿವಿಎಸ್ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಡಾ.ಪಿ.ವಿ.ಭಂಡಾರಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜಿವಿಎಸ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಾಬು ಟಿ ಎ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಾದ ವಜ್ರಮುನಿ ಮತ್ತು ಟೀಚರ್ ಪತ್ರಿಕೆಯ ಸಂಪಾದಕರಾದ ಉದಯ ಗಾಂವಕಾರ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಕಟಪಾಡಿಯ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ಜ್ಞಾನ ವಿಜ್ಞಾನ ಜಿಂದಾಬಾದ್ ನಾಟಕದ ಪ್ರದರ್ಶನವು ನಡೆಯಲಿದೆ.
ಅದೇ ರೀತಿ ಬಿಜಿವಿಎಸ್ ಪ್ರಕಾಶನ ಮತ್ತು ಪುಸ್ತಕ ಸರಸ್ವತಿ ಗುಲ್ವಾಡಿ ಇವರ ಪುಸ್ತಕ ಪ್ರದರ್ಶನ ಮತ್ತು ಮಾರಾಟವೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ವಿಜ್ಞಾನ ಶಿಕ್ಷಕರು ಬಿಜಿವಿಎಸ್‌ನ ಸರ್ವ ಸದಸ್ಯರು ಮತ್ತು ಆಸಕ್ತ ಸಾರ್ವಜನಿಕರು ಭಾಗವಹಿಸಬಹುದು ಎಂದು ಉಡುಪಿ ಜಿಲ್ಲಾ ಬಿಜಿವಿಎಸ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.