ಉಡುಪಿ: ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಕೃತ್ಯಕ್ಕೆ ಆರೋಪಿ ಪ್ರವೀಣ್‌ನಿಂದ ಮಾಸ್ಟರ್ ಪ್ಲ್ಯಾನ್!
ಉಡುಪಿ, ನ.17: ನೇಜಾರು ತಾಯಿ ಮತ್ತು ಮೂವರು ಮಕ್ಕಳನ್ನು ಭೀಕರವಾಗಿ ಕೊಲೆಗೈದ ಆರೋಪಿ ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ(39) ಬಹಳ ಯೋಜಿತವಾಗಿ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಯಾವುದೇ ಸಾಕ್ಷ್ಯಾಧಾರ ಮತ್ತು ತನ್ನ ಮುಖ ಪರಿಚಯ ಸಿಗಬಾರದೆಂಬ ಉದ್ದೇಶದಿಂದ ಪ್ರವೀಣ್ ಚೌಗುಲೆ ಈ ಪೂರ್ವ ಯೋಜಿತ ಕೊಲೆಗಾಗಿ ತನ್ನ ಕಾರು, ಮಾಸ್ಕ್, ಹಲವು ರಿಕ್ಷಾ, ಬೈಕ್, ಬಸ್‌ಗಳನ್ನು ಬಳಸಿದ್ದನು. ಅದೇ ರೀತಿ ಬ್ಯಾಗ್ ಮತ್ತು ಬ್ಯಾಗ್ ಒಳಗೆ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟು ಕೊಂಡಿದ್ದನು.
ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕೆಲ ತಿಂಗಳ ಕಾಲ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದ ಈತ, ತನ್ನ ಕ್ರಿಮಿನಲ್ ಮೈಂಡ್ ಬಳಸಿಕೊಂಡು ಎಲ್ಲ ರೀತಿಯ ಸಿದ್ಧತೆ ಹಾಗೂ ಯೋಜನೆ ಹಾಕಿಕೊಂಡೇ ಈ ಕೃತ್ಯ ಎಸಗಲು ಹೊರಟಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟೋಲ್ ಬಳಿ ಕಾರು ಪಾರ್ಕ್: ಈ ಕೃತ್ಯ ಎಸಗಲು ನ.12ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಆರೋಪಿ ಪ್ರವೀಣ್ ಚೌಗುಲೆ, ಮಂಗಳೂರಿನ ಮನೆಯಿಂದ ತನ್ನ ಕಾರಿನಲ್ಲಿ ಹೊರಟಿದ್ದನು. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗುವ ಏಕೈಕ ಟೋಲ್‌ಗೇಟ್‌ನಲ್ಲಿ ತನ್ನ ಕಾರು ಹಾದು ಹೋದರೆ ಸಿಸಿಟಿವಿ ಮೂಲಕ ತನ್ನ ಹೆಜ್ಜೆ ಪೊಲೀಸರಿಗೆ ದೊರೆಯುತ್ತದೆ ಎಂಬ ಅರಿವು ಅವನಿಗೆ ಇತ್ತು.
ಅದಕ್ಕಾಗಿ ಆತ ತಾನು ಉಡುಪಿಗೆ ಬಂದಿರುವ ಯಾವುದೇ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಕಾರನ್ನು ಹೆಜಮಾಡಿ ಟೋಲ್‌ಗೇಟ್‌ಗಿಂತ ಮೊದಲೇ ದೂರದಲ್ಲಿ ಪಾರ್ಕ್ ಮಾಡಿದ್ದನು. ಅಲ್ಲಿಂದ ಬೈಕ್, ಬಸ್ ಹಿಡಿದು ಉಡುಪಿಗೆ ಆಗಮಿಸಿದ ಪ್ರವೀಣ್, ಸಂತೆಕಟ್ಟೆಯಿಂದ ಆಟೊ ರಿಕ್ಷಾದಲ್ಲಿ ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಐನಾಝ್ ಮನೆಗೆ ನುಗ್ಗಿ ನಾಲ್ವರನ್ನು ಕಗ್ಗೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೃಪ್ತಿ ಲೇಔಟ್‌ನಿಂದ ಆತ ದಾರಿ ಹೋಕರ ಬೈಕ್, ಸಂತೆಕಟ್ಟೆಯಿಂದ ಉಡುಪಿ ಕರಾವಳಿ ಬೈಪಾಸ್‌ವರೆಗೆ ರಿಕ್ಷಾ ಬಳಸಿದನು. ಕರಾವಳಿ ಬೈಪಾಸ್‌ನಿಂದ ಬೈಕ್ ಏರಿ ಕಿನ್ನಿಮುಲ್ಕಿಗೆ ಹೋದ ಪ್ರವೀಣ್, ಅಲ್ಲಿಂದ ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಬಸ್ ಹತ್ತಿದ್ದನು. ಬಳಿಕ ಹೆಜಮಾಡಿ ಟೋಲ್ ಗೇಟ್ ಸಮೀಪ ನಿಲ್ಲಿಸಿದ ತನ್ನ ಕಾರಿನ ಬಳಿ ಬಸ್‌ನಿಂದ ಇಳಿದನು. ಅಲ್ಲಿಂದ ಕಾರಿನಲ್ಲಿ ನೇರವಾಗಿ ತನ್ನ ಮನೆಗೆ ಹೋಗಿದ್ದಾನೆ ಎನ್ನಲಾಗಿದೆ.
ಕೈಯಲ್ಲಿನ ಗಾಯಕ್ಕೆ ಚಿಕಿತ್ಸೆ
ಕೃತ್ಯ ಎಸಗಿ ಮನೆಗೆ ಹೋದ ಆರೋಪಿ ಪ್ರವೀಣ್, ಮನೆಯಲ್ಲಿ ತನ್ನ ಎಲ್ಲ ರಕ್ತದ ಕಲೆಗಳನ್ನು ಶುಚಿಗೊಳಿಸಿದನು. ಸುಮಾರು 10 ನಿಮಿಷಗಳ ಕಾಲ ಮನೆಯಲ್ಲಿದ್ದು, ಬಳಿಕ ಕೃತ್ಯ ಎಸಗಿದ ವೇಳೆ ಗಾಯಗೊಂಡ ಕೈಯಲ್ಲಿನ ಬೆರಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದ ಎನ್ನಲಾಗಿದೆ.
ಅಲ್ಲಿ ತನ್ನ ಬೆರಳಿನ ಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡ ಆತ, ಮತ್ತೆ ಮನೆಗೆ ಬಂದಿದ್ದಾನೆ. ಮನೆಯಿಂದ ತನ್ನ ಪತ್ನಿ ಮತ್ತು ಮಕ್ಕಳನ್ನು ಕಾರಿನಲ್ಲಿ ಹೊರಗೆ ವಿಹಾರಕ್ಕೆ ಕರೆದುಕೊಂಡು ಹೊರಗಡೆ ಸುತ್ತಾಡಿ ಸಂಜೆ 6ರ ಸುಮಾರಿಗೆ ಮತ್ತೆ ಮನೆಗೆ ಬರುತ್ತಾನೆ. ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದು ಎಂಟು ಗಂಟೆ ಕಳೆದರೂ ಆರೋಪಿ ಯಾವುದೇ ರೀತಿಯ ಪಾಶ್ಚತ್ತಾಪ ಇಲ್ಲದೆ ಮಾಮೂಲಿಯಂತೆ ಮನೆಯವರೊಂದಿಗೆ ಬೆರೆತುಕೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮರುದಿನ ಕಾರಿನಲ್ಲಿ ಬೆಳಗಾವಿಗೆ
ಹಬ್ಬದ ಪ್ರಯುಕ್ತ ಎರಡು ದಿನ ರಜೆ ಇದೆ ಎಂದು ಹೇಳಿ ಕೊಲೆಗೈದ ಮರು ದಿನ ಅಂದರೆ ನ.13ರಂದು ಬೆಳಗಾವಿಯ ಕುಡುಚಿಗೆ ಕುಟುಂಬದೊಂದಿಗೆ ಹೊರಡಲು ಯೋಜನೆ ಹಾಕಿಕೊಂಡಿದ್ದನು. ಅದರಂತೆ ಮರುದಿನ ಆತ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಬೆಳಗಾವಿಯ ಕುಡುಚಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು. ಅಲ್ಲಿ ತನ್ನ ಸಂಬಂಧಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ದೀಪಾವಳಿ ಆಚರಿಸಿದ್ದನು.
ಇತ್ತ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈತನೇ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಸಮಯಕ್ಕೆ ಆತ ಅಲ್ಲಿ ತನ್ನ ಮೊಬೈಲ್ ಸ್ವಿಚ್ ಆನ್ ಮಾಡುತ್ತಾನೆ. ಇದರಿಂದ ಆತ ಇರುವ ಜಾಡನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃತ್ಯಕ್ಕೆ ಬಳಸಿದ್ದ ಚೂರಿಗಾಗಿ ತೀವ್ರ ಶೋಧ
ಆರೋಪಿ ಕೊಲೆಗೆ ಬಳಸಿದ ಚೂರಿಯು ಇಡೀ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದು, ಇದಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕೊಲೆ ಮಾಡಿದ ಬಳಿಕ ಚೂರಿಯನ್ನು ತನ್ನ ಬ್ಯಾಗ್ ಒಳಗೆ ಹಾಕಿಕೊಂಡ ಆರೋಪಿ, ಅದನ್ನು ಹೆಜಮಾಡಿಯಿಂದ ಮುಂದೆ ಕಾರಿನಲ್ಲಿ ಹೋಗುವಾಗ ಸೇತುವೆಯಿಂದ ಕೆಳಗೆ ಎಸದಿದ್ದಾನೆ ಎಂದು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಅದರ ನಂತರ ಆತ ಅದನ್ನು ಮನೆ ಸಮೀಪವೇ ವಿಲೇವಾರಿ ಮಾಡಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದನು. ಹೀಗಾಗಿ ಪೊಲೀಸರು ಈ ಆಯುಧಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮನೆಯೊಳಗೆ ಬಟ್ಟೆ ಬದಲಾಯಿಸಿಲ್ಲ!
ಈ ಕೊಲೆ ಪ್ರಕರಣದಲ್ಲಿ ಆಶ್ಚರ್ಯಕರ ಸಂಗತಿ ಅಂದರೆ ನಾಲ್ಕು ಮಂದಿಯನ್ನು ಭೀಕರವಾಗಿ ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಪ್ರವೀಣ್, ತನ್ನ ರಕ್ತ ಸಿಕ್ಕ ಬಟ್ಟೆಯನ್ನು ಬದಲಾಯಿಸಿಯೇ ಇಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ನಾಲ್ವರ ಹತ್ಯೆಯಿಂದ ಇಡೀ ಮನೆ ರಕ್ತಸಿಕ್ತವಾಗಿತ್ತು. ನಾಲ್ವರು ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆದರೂ ಆತನ ಬಟ್ಟೆಗೆ ಅಲ್ಪಸ್ವಲ್ಪ ಮಾತ್ರವೇ ರಕ್ತದ ಕಲೆಗಳು ಅಂಟಿವೆ. ಇದನ್ನು ಆತ ಬೈಕು, ರಿಕ್ಷಾ, ಬಸ್‌ನಲ್ಲಿ ಹೋಗುವಾಗ ತನ್ನ ಕೈಯಲ್ಲಿದ್ದ ಬ್ಯಾಗ್‌ನಿಂದ ಅವುಚಿ ಇಟ್ಟು ಯಾರಿಗೂ ಕಾಣದಂತೆ ಮರೆ ಮಾಚಿದ್ದನು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ಬಳಿಕ ಆತ ಹೆಜಮಾಡಿಯಿಂದ ಮಂಗಳೂರು ಹೋಗುವಾಗ ದಾರಿ ಮಧ್ಯೆ ಕಾರು ನಿಲ್ಲಿಸಿ ಕಾರಿನೊಳಗೆಯೇ ತನ್ನ ಬ್ಯಾಗ್‌ನಲ್ಲಿದ್ದ ಬಟ್ಟೆ ತೆಗೆದು ಬದಲಾಯಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದಕ್ಕೆ ಪುಷ್ಟಿ ಕೊಡುವಂತೆ ಕೊಲೆ ನಡೆದ ದಿನ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್‌ಗೆ ಆರೋಪಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದ ಚಾಲಕ, ಮತ್ತೆ ಆತನನ್ನು ಸಂತೆಕಟ್ಟೆಯಲ್ಲಿ ಕಂಡಾಗ ಬಟ್ಟೆಯಿಂದ ಗುರುತಿಸಿದ್ದೆ ಎಂದು ಹೇಳಿಕೆ ನೀಡಿದ್ದರು.
ಮಂಗಳೂರಿನಲ್ಲಿ ಮಹಜರು ಪ್ರಕ್ರಿಯೆ
ಬಂಧಿತ ಕೊಲೆ ಆರೋಪಿ ಪ್ರವೀಣ್ ಚೌಗುಲೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಆತನನ್ನು ಕೃತ್ಯ ನಡೆಸಿದ ನೇಜಾರು ಮನೆಗೆ ಹಾಗೂ ಮಂಗಳೂರಿನ ಆತನ ಮನೆಗೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ದು ಎಲ್ಲ ರೀತಿಯ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಮುಂದೆ ಹೆಚ್ಚಿನ ತನಿಖೆಗಾಗಿ ಆತನನ್ನು ಬೆಳಗಾವಿ, ಮಹಾರಾಷ್ಟ್ರಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರವೀಣ್ ಕಿರುಕುಳಕ್ಕೆ ಐನಾಝ್ ನಂಬರ್ ಬ್ಲಾಕ್ ಮಾಡಿದ್ದಳು: ಅಸಾದ್
‘‘ಆರೋಪಿ ಪ್ರವೀಣ್ ಚೌಗುಲೆ ಕಿರುಕುಳದಿಂದ ಐನಾಝ್, ಆತನ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿದ್ದಳು. ಆತನ ಕಿರುಕುಳದ ಬಗ್ಗೆ ಮನೆಯಲ್ಲೂ ಹೇಳಿರಲಿಲ್ಲ. ಈ ವಿಚಾರ ಹೇಳುತ್ತಿದ್ದರೆ ತಂದೆ ಅವಳನ್ನು ಕೆಲಸಕ್ಕೆ ಹೋಗಬೇಡ ಎನ್ನುತ್ತಾರೆಂಬ ಭಯ ಅವಳಿಗಿತ್ತು’’ ಎಂದು ಮೃತ ಐನಾಝ್ ಸಹೋದರ ಅಸಾದ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಆದುದರಿಂದ ಅವರಿಗೆ ಭದ್ರತೆ ಬೇಕು. ಅವರಿಗೆ ಯಾರಾದರೂ ಕಿರುಕುಳ ನೀಡಿದರೆ ಮಾಹಿತಿ ಕೊಡುವ ವ್ಯವಸ್ಥೆ ಬರಬೇಕು ಎಂದು ಆಗ್ರಹಿಸಿದರು.
ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ಇದ್ದರೆ ಮಹಿಳೆಯರು ಹೇಳಿಕೊಳ್ಳುವುದಿಲ್ಲ. ಆದುದರಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಪ್ರತೀ ಜಿಲ್ಲೆಯಲ್ಲೂ ಮಹಿಳಾ ಸೆಲ್ ಸ್ಥಾಪಿಸಬೇಕು ಮತ್ತು ಅದನ್ನು ಬಲಿಷ್ಠ ಮಾಡಬೇಕು ಎಂದು ಆಗ್ರಹಿಸಿದರು.