ಉಡುಪಿ | ನೇಜಾರು ತಾಯಿಮಕ್ಕಳ ಹತ್ಯೆ ಪ್ರಕರಣ: ಕೋರ್ಟ್‌ನಲ್ಲಿ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ

Update: 2024-03-27 16:18 GMT

ಉಡುಪಿ, ಮಾ.27: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆಪಾದನೆಯನ್ನು ವಾಚಿಸಿದರು.

ಆದರೆ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿ, ವಿಚಾರಣೆ ಎದುರಿಸುವುದಾಗಿ ತಿಳಿಸಿದನು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಗಂಭೀರ ಪ್ರಕರಣದ ವಿಚಾರಣೆಗೆ ಪೂರ್ವಭಾವಿಯಾಗಿ ಎ.5ರಂದು ಪ್ರಿ ಟ್ರಾಯಲ್ ಕಾನ್ಫರೆನ್ಸ್ ನಡೆಸಲು ಆದೇಶ ನೀಡಿದರು.

ನ್ಯಾಯಾಧೀಶರ ಸಮಕ್ಷಮದಲ್ಲಿ ನಡೆಯುವ ಈ ಕಾನ್ಪರೆನ್ಸ್‌ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಯಾವ ವಿಚಾರಣೆ ಅಗತ್ಯ ಇದೆ ಎಂಬುದರ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಿ, ವಿಚಾರಣೆ ಆರಂಭಿಸಲು ಸಾಕ್ಷಿಗಳಿಗೆ ಸಮನ್ಸ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಬಳಿಕ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಎ.5ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ. ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ಹಾಜರಿದ್ದರು. ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭದ್ರತೆ ಉಸ್ತುವಾರಿಯನ್ನು ಪ್ರಭು ಡಿ.ಟಿ. ವಹಿಸಿದ್ದರು. ಬಳಿಕ ಆರೋಪಿ ಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಜೈಲಿಗೆ ಕರೆದೊಯ್ಯಲಾಯಿತು.

2023ರ ನ.12ರಂದು ಆರೋಪಿ ಪ್ರವೀಣ್ ಚೌಗುಲೆ ನೇಜಾರು ತೃಪ್ತಿ ಲೇಔಟ್‌ನ ಹಸೀನಾ ಹಾಗೂ ಅವರ ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದನು. ಆತನನ್ನು ಪೊಲೀಸರು ನ.14ರಂದು ಬೆಳಗಾವಿ ಬಂಧಿಸಿದ್ದರು.

ಮದ್ಯ ಸೇವನೆ ಆರೋಪ: ಆರ್‌ಎಸ್ಸೈ ವಿರುದ್ಧ ಕ್ರಮಕ್ಕೆ ವರದಿ

ನೇಜಾರು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯ ಭದ್ರತೆ ಜವಾಬ್ದಾರಿ ವಹಿಸಿದ್ದ ಬೆಂಗಳೂರಿನ ರಿಸರ್ವ್ ಎಸ್ಸೈ ವಿರುದ್ಧ ಮದ್ಯಪಾನ ಸೇವಿಸಿ ಕರ್ತವ್ಯ ನಿರ್ವಹಿಸಿದ್ದ ಆರೋಪದಲ್ಲಿ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಆರೋಪಿ ಚೌಗುಲೆಯನ್ನು ಬೆಂಗಳೂರು ಜೈಲಿನಿಂದ ಉಡುಪಿಗೆ ಕರೆ ತರುವಾಗ ಭದ್ರತೆ ಕರ್ತವ್ಯದಲ್ಲಿದ್ದ ಆರ್‌ಎಸ್ಸೈ ಮದ್ಯಪಾನ ಸೇವಿಸಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು. ಅವರು ಕೋರ್ಟ್ ಒಳಗೆ ಅನುಚಿತವಾಗಿ ವರ್ತಿಸುತ್ತಿರುವುದಾಗಿ ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಎಸ್ಪಿ ಯವರು ಆರ್‌ಎಸ್ಸೈ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟವರಿಗೆ ವರದಿ ಸಲ್ಲಿಸು ವುದಾಗಿ ತಿಳಿಸಿದ್ದಾರೆ.

ಮಾ.30ಕ್ಕೆ ಜಾಮೀನು ಅರ್ಜಿಯ ಅಂತಿಮ ಆದೇಶ

ನೇಜಾರು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಮಾ.13ರಂದು ಎರಡನೇ ಬಾರಿಗೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಇಂದು ಆಕ್ಷೇಪಣೆ ಸಲ್ಲಿಸಿದರು.

ಈ ಕುರಿತು ಆರೋಪಿ ಪರ ವಕೀಲ ರಾಜೇಶ್ ಹಾಗೂ ವಿಶೇಷ ಸರಕಾರಿ ಅಭಿಯೋಜಕರ ಮಧ್ಯೆ ವಾದ ಪ್ರತಿವಾದಗಳು ನಡೆದವು. ಎರಡು ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಜಾಮೀನು ಅರ್ಜಿಯ ಕುರಿತ ಅಂತಿಮ ಆದೇಶ ವನ್ನು ಮಾ.30ಕ್ಕೆ ನಿಗದಿ ಪಡಿಸಿ ಆದೇಶ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News