ಉಡುಪಿ: ಅ.9ರಂದು ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

Update: 2024-10-08 05:48 GMT

ಉಡುಪಿ, ಅ.7: ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಪ್ರೈವೇಟ್ ಲಿ.ನ ಎರಡನೇ ಶಾಖೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉಡುಪಿ-ಮಣಿಪಾಲ ರಸ್ತೆಯಲ್ಲಿರುವ ಕಲ್ಸಂಕದ ಟೈಮ್ಸ್ ಸ್ಕ್ವೇರ್‌ ಮಾಲ್‌ನಲ್ಲಿ ಅ.9ರ ಅಪರಾಹ್ನ 12 ಗಂಟೆಗೆ ಶುಭಾರಂಭಗೊಳ್ಳಲಿದೆ ಎಂದು ದಿ ಓಷಿಯನ್ ಪರ್ಲ್‌ನ ಆಡಳಿತ ನಿರ್ದೇಶಕ ರೋಷನ್ ಬನಾನಾ ತಿಳಿಸಿದ್ದಾರೆ.

‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಗುಲಗಳ ನಗರ ಎಂದೇ ಖ್ಯಾತಿ ಹೊಂದಿರುವ ಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್, ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿದ್ದು, ಈ ಹೋಟೆಲ್‌ನಲ್ಲಿ ಪ್ರೆಸಿಡೆಂಟಲ್ ಸೂಟ್, ಕ್ಲಬ್ ಸೂಟ್ಸ್, ಫ್ಯಾಮಿಲಿ ಸೂಟ್ ಮತ್ತು ಡಿಲಕ್ಸ್ ರೂಮ್‌ಗಳು ಸೇರಿದಂತೆ ಒಟ್ಟು 67 ಐಷಾರಾಮಿ ಕೊಠಡಿಗಳನ್ನು ಹೊಂದಿದೆ ಎಂದರು.

ಈ ಹೋಟೆಲ್‌ನಲ್ಲಿ ಒಟ್ಟು ಮೂರು ಅತ್ಯಾಧುನಿಕ ಸಭಾಂಗಣಗಳಿದ್ದು, ಗ್ರ್ಯಾಂಡ್ ದಿ ಪೆಸಿಫಿಕ್-1 ಹಾಲ್ ಸುಮಾರು 2,000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆ, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ಅದ್ಧೂರಿಯ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಇನ್ನು ‘ಪೆಸಿಫಿಕ್-2’ ಹಾಲ್ ಮಧ್ಯಮಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತ ವಾಗಿದ್ದು, ಇದು ಸುಮಾರು 200ರಿಂದ 250 ಮಂದಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇನ್ನು ‘ಪೆಸಿಫಕ್-3’ರಲ್ಲಿ 800-1000 ಮಂದಿ ಭಾಗವಹಿಸಲು ಅವಕಾಶವಿರುತ್ತದೆ ಎಂದರು.

ಇಲ್ಲಿ ಜಿಮ್, ಫಿಟ್ನೆಸ್ ಸೆಂಟರ್, ಬಿಜಿನೆಸ್ ಲಾಂಜ್ ಸೌಲಭ್ಯಗಳು ಲಭ್ಯವಿದೆ. ಈಜುಪ್ರಿಯರ ಅನುಕೂಲಕ್ಕಾಗಿ ಅಂತಾ ರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ಸಹ ನಿರ್ಮಾಣ ಮಾಡಲಾಗಿದೆ. ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ರೂಮುಗಳನ್ನು ವಿನ್ಯಾಸ ಗೊಳಿಸಲಾಗಿದೆ. ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಈ ನೂತನ ಹೋಟೆಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನಿಸ್ ಆಹಾರ ಉತ್ಪನ್ನಗಳು ಲಭ್ಯವಿದೆ. ಇದಕ್ಕಾಗಿ ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೊಂದು ವಿಶೇಷ ಎಂದರು.

ಸಂಸ್ಥೆಯ ಸಾಗರ್ ಹಾಗೂ ಸ್ವಾಗತ ರೆಸ್ಟೋರೆಂಟ್‌ಗಳು ಈಗಾಗಲೇ ಹೊಸದಿಲ್ಲಿ ಸಹಿತ ಉತ್ತರ ಭಾರತದಾದ್ಯಂತ ಜನಪ್ರಿಯಗೊಂಡಿವೆ. ಓಶಿಯನ್ ಪರ್ಲ್ ಹೋಟೆಲ್ ಮಂಗಳೂರು ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಉಡುಪಿಯ ಈ ಹೋಟಲ್ ಜಿಲ್ಲೆಯ ಅತಿದೊಡ್ಡ ಮಾಲ್ ಎನಿಸಿರುವ ಡಾ.ಜೆರ್ರಿ ವಿನ್ಸೆಟ್ ಡಯಾಸ್‌ರ ‘ಟೈಮ್ಸ್ ಸ್ಕ್ವೇರ್‌ಮಾಲ್’ನಲ್ಲಿ ನಗರದ ಕೇಂದ್ರ ಸ್ಥಾನದಲ್ಲಿದೆ ಎಂದರು.

ಸಾಗರ ರತ್ನ ಮತ್ತು ಓಷಿಯನ್ ಪರ್ಲ್ ಸಮೂಹ ಸಂಸ್ಥೆಗಳ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿಯಾಗಿರುವ ಜಯರಾಮ್ ಬನಾನ್ ಅವರ ಮಾರ್ಗದರ್ಶನದಲ್ಲಿ ಕರಾವಳಿಯಲ್ಲಿ ಶೀಘ್ರವೇ ಉಡುಪಿ ಮತ್ತು ಮಂಗಳೂರಿನ ನಡುವೆ ಸಮುದ್ರ ತೀರ ದಲ್ಲಿ ಅತಿ ದೊಡ್ಡ ರೆಸಾರ್ಟ್ ಹಾಗೂ ಚಿಕ್ಕಮಗಳೂರಿನಲ್ಲಿ ಸುಮಾರು 100 ಎಕರೆ ಜಾಗದಲ್ಲಿ ‘ಹಿಲ್ ರೆಸಾರ್ಟ್’ನ್ನು ನಿರ್ಮಿಸುವ ಯೋಜನೆ ಇದೆ ಎಂದು ರೋಷನ್ ಬನಾನ್ ತಿಳಿಸಿದರು.

‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ನ ಉದ್ಘಾಟನಾ ಸಮಾರಂಭ ಅ.9ರಂದು ಅಪರಾಹ್ನ 12ಗಂಟೆಗೆ ನಡೆಯಲಿದ್ದು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಸ್ವಾಮೀಜಿ, ಉಡುಪಿಯ ಬಿಷಪ್ ಅ.ವಂ. ಡಾ.ಜೆರಾಲ್ಡ್ ಲೋಬೊ, ಮೌಲ್ವಿ ಅವರು ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಓಷಿಯನ್ ಪರ್ಲ್ ಹೊಟೇಲ್ ಗ್ರೂಪ್‌ನ ಅಧ್ಯಕ್ಷ ಜಯರಾಮ ಬನಾನಾ, ಟೈಮ್ ಸ್ಕ್ವೇರ್ ಮಾಲ್‌ನ ನಿರ್ದೇಶಕ ಜೆರ್ರಿ ವಿನ್ಸೆಂಟ್ ಡಯಾಸ್, ಗ್ಲೆನ್ ಡಯಾಸ್, ಜೇಸನ್ ಡಯಾಸ್, ಓಷಿಯನ್ ಪರ್ಲ್ ಹೊಟೇಲ್ ಗ್ರೂಪ್‌ನ ಉಪಾಧ್ಯಕ್ಷರಾದ ಶಿವಕುಮಾರ್, ಗಿರೀಶ್, ಜನರಲ್ ಮ್ಯಾನೇಜರ್ ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News