ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವ ಭಾರತ ಸಾಂಸ್ಕೃತಿಕ ಸ್ಪರ್ಧೆ

Update: 2023-08-12 15:09 GMT

ಉಡುಪಿ, ಆ.12: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ 76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವ ಭಾರತ್ ಸಾಂಸ್ಕೃತಿಕ ಸ್ಪರ್ಧೆ ಆ.15ರಂದು ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ.

ಸಾಸಂಸ್ಕೃತಿಕ ಸ್ಪರ್ಧೆ ಅಂತರ್ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ನಡೆಯಲಿದ್ದು, ಇದರಲ್ಲಿ ಸಮೂಹ ಸಂಗೀತ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ ಹಾಗೂ ಪ್ರಹಸನ ಸ್ಪರ್ಧೆಗಳು ನಡೆಯಲಿವೆ ಎಂದು ಇಂದಿಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದೀಪಕ್ ಕೋಟ್ಯಾನ್ ತಿಳಿಸಿದ್ದಾರೆ.

ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ 10,000ರೂ., ದ್ವಿತೀಯ 5,000ರೂ. ಇದ್ದು, ಚಾಂಪಿಯನ್ ತಂಡಗಳಿಗೆ ಪ್ರಥಮ ಬಹುಮಾನ 50,000ರೂ. ದ್ವಿತೀಯ ಬಹುಮಾನ 25,000ರೂ. ಹಗೂ ತೃತೀಯ ಬಹುಮಾನ 15,000ರೂ. ಸಿಗಲಿದೆ. ಜಿಲ್ಲೆಯ 10 ಬ್ಲಾಕ್ ಕಾಂಗ್ರೆಸ್ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದರು.

ಕಾರ್ಯಕ್ರಮವನ್ನು ಬೆಳಗ್ಗೆ 9:30ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 4:00ಗಂಟೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪ್ರಾದೇಶಿಕ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಉಪಸ್ಥಿತರಿದ್ದು, ಎಐಸಿಸಿ ಸಾಮಾಜಿಕ ಜಾಲತಾಣದ ಸಂಯೋಜಕ ರಾದ ಭವ್ಯ ನರಸಿಂಹ ಮೂರ್ತಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ ಜೈನ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಉದಯ ಕುಮಾರ್ ಮುನಿಯಾಲ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಎಂ.ಎ.ಗಫೂರ್, ಮಿಥುನ್ ರೈ, ಇನಾಯತ್ ಅಲಿ, ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಸುರಯ್ಯ ಅಂಜುಮ್, ಪ್ರಧಾನ ಕಾರ್ಯ ದರ್ಶಿಗಳಾದ ಶಬರೀಶ್ ಸುವರ್ಣ, ಮಹಮ್ಮದ್ ನಿಯಾಝ್, ಪ್ರೀತಿ ಜೆ.ಸಾಲಿನ್ಸ್, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ರಾವ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News