ಶಿರಸಿ| ಡಿ.4:ರಂದು ಉ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎಂ.ಆರ್. ಮಾನ್ವಿಗೆ ಗೌರವ ಪುರಸ್ಕಾರ

Update: 2024-12-02 17:00 GMT

ಭಟ್ಕಳ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿ.4ರಂದು ಶಿರಸಿಯಲ್ಲಿ ನಡೆಯುವ ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಟ್ಕಳದ ಹಿರಿಯ ಪತ್ರಕರ್ತ, ಬರಹಗಾರ ಎಂ.ಆರ್. ಮಾನ್ವಿ ಅವರನ್ನು ಪುರಸ್ಕರಿಸಿ ಗೌರವಿಸಲಾಗುತ್ತಿದೆ.

ಪತ್ರಿಕೋದ್ಯಮ ಪದವಿಯನ್ನು ಪಡೆದಿರುವ ಮಾನ್ವಿಯವರು ಕಳೆದ 25ವರ್ಷಗಳಿಂದ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತೃಭಾಷೆ ಉರ್ದು ಆಗಿದ್ದರೂ ಕನ್ನಡ ಶಿಕ್ಷಕರಾಗಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ.

ಎಂ.ಆರ್. ಮಾನ್ವಿ ಅವರು ವಾರ್ತಾಭಾರತಿ ಪತ್ರಿಕೆಯ ಭಟ್ಕಳ ವರದಿಗಾರರಾಗಿ, ಸಾಹಿಲ್ ಆನ್‌ಲೈನ್ ಜಾಲತಾಣದ ಕನ್ನಡ ವಿಭಾಗದ ಉಪ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಭಟ್ಕಳ ಒನ್ ಮೀಡಿಯಾ ಎಂಬ ಯೂಟ್ಯೂಬ್ ಚಾನಲ್‌ ನಡೆಸುತ್ತಿದ್ದಾರೆ.

ಪತ್ರಿಕೋದ್ಯಮದ ಹೊರತಾಗಿಯೂ, ಮಾನ್ವಿಯವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯನ್ನು ಹೊಂದಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ ಇವರು ಸದ್ಭಾವನಾ ಮಂಚ್ ನ ಕಾರ್ಯದರ್ಶಿಯಾಗಿ ಹಲವಾರು ಸೌಹಾರ್ದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಶಿಕ್ಷಕರಾಗಿ ರುವ ಇವರು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಅಭಿರುಚಿ ಹೊಂದಿರುವ ಇವರು ಅನೇಕ ಕಥೆ, ಕವನ ಮತ್ತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಇವರ ಹಲವಾರು ಕಥೆ,ಕವನ, ಲೇಖನಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಸಮಾನವಾಗಿ ತೊಡಗಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News