ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವ
Update: 2024-12-01 13:29 GMT
ಕಾರವಾರ: ಜಿಲ್ಲೆಯ ಶಿರಸಿ-ಸಿದ್ದಾಪುರದ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಆತಂಕಗೊಂಡ ಘಟನೆ ನಡೆದಿದೆ.
ರವಿವಾರ ಸಿದ್ದಾಪುರ ತಾಲೂಕಿನ ಹೆಗ್ಗರಣಿ, ಹೇರೂರು ಹಾಗೂ ಶಿರಸಿ ತಾಲೂಕಿನ ಸಂಪಖಂಡ, ಗೋಳಿಮಕ್ಕಿ, ಮತ್ತಿಘಟ್ಟಾ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಈ ಗ್ರಾಮಗಳ ವ್ಯಾಪ್ತಿಯ ಮನೆಯಲ್ಲಿದ್ದವರಿಗೆ ಏಕಾಏಕಿ ಮನೆಯ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಹಲವರಿಗೆ ಕುಳಿತ ಖುರ್ಚಿ, ಸೋಫಾ ಅಲುಗಾಡಿದ ಅನುಭವವಾಗಿದ್ದು, ಭೂಕಂಪನ ಉಂಟಾಗಿರಬಹುದೆಂದು ಮನೆಯಿಂದ ಹೊರಗೆ ಬಂದಿದ್ದಾರೆ. ಅಲ್ಲದೇ ಅಕ್ಕಪಕ್ಕದವರೂ ಸಹ ತಮಗೂ ಅದೇ ರೀತಿ ಅನುಭವ ಆಗಿದ್ದನ್ನು ಹೇಳಿಕೊಂಡಿದ್ದು ಜನರು ಆತಂಕಗೊಂಡಿದ್ದಾರೆ.