ಮನುಷ್ಯನ ಮೆದುಳಲ್ಲಿ ಚಿಪ್: ಬೆನ್ನಲ್ಲೇ ಅಪಾಯ ಕಟ್ಟಿಕೊಂಡಿರುವ ಕ್ರಾಂತಿಕಾರಿ ಆವಿಷ್ಕಾರ
ಈವರೆಗೆ ಫ್ಯಾಂಟಸಿ ಸಿನೆಮಾಗಳಲ್ಲಿ ಮಾತ್ರ ಕಂಡುಬರುತ್ತಿದ್ದ ವಿಸ್ಮಯವೊಂದು ಈಗ ನಿಜವಾಗುತ್ತಿದೆ. ಮೊದಲ ಬಾರಿಗೆ ಮನುಷ್ಯನ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿದೆ. ಇದು ಎಷ್ಟು ಕ್ರಾಂತಿಕಾರಿ? ಏನೇನೆಲ್ಲ ಪ್ರಯೋಜನಗಳಾಗಬಹುದು ಇದರಿಂದ? ಜನರಿಗೆಷ್ಟು ಲಾಭ? ಇನ್ನೊಂದೆಡೆ, ಇದರಿಂದ ಇರುವ ಸಂಭಾವ್ಯ ಅಪಾಯಗಳು ಏನೇನು? ತಂತ್ರಜ್ಞಾನ ಈಗಿರುವ ಸ್ಥಿತಿಯಲ್ಲೇ ಜನರ ಖಾಸಗಿತನಕ್ಕೆ, ಸುರಕ್ಷತೆಗೆ, ಏನೇನೋ ಅಪಾಯಗಳು ಎದುರಾಗುತ್ತಿರುವಾಗ ಈಗ ಮೆದುಳಿಗೇ ಚಿಪ್ ಇಡುವುದು ಎಂತೆಂತಹ ಪರಿಸ್ಥಿತಿಯನ್ನು ತಂದೊಡ್ಡಬಹುದು?
ಸುಮ್ಮನೆ ಒಮ್ಮೆ ಊಹಿಸಿಕೊಳ್ಳಿ. ನಿಮ್ಮಿಂದ ಕೊಂಚ ದೂರದಲ್ಲಿರುವ ನಿಮ್ಮ ಕಂಪ್ಯೂಟರ್ ಇಲ್ಲವೇ ಮೊಬೈಲ್, ಬರೀ ನಿಮ್ಮ ಆಲೋಚನೆಯನ್ನು ಆಧರಿಸಿಯೇ ನಿಮಗೆ ಬೇಕಿರುವಂತೆ ಕೆಲಸ ಮಾಡುವಂತಾದರೆ ಹೇಗಿರುತ್ತದೆ?
ಇದೊಂದು ತರ್ಕರಹಿತ ತಲೆಹರಟೆ ಎಂದುಕೊಳ್ಳುವಿರಾ? ಬರೀ ಸಿನೆಮಾದಲ್ಲಿ ತೋರಿಸುವಂಥದ್ದು ಎನ್ನುವಿರಾ? ಆದರೆ, ಖಂಡಿತ ಇಲ್ಲ. ಅದೇ ನಿಜವಾಗುತ್ತಿರುವ ಕಾಲದಲ್ಲಿ ನಾವೀಗ ಬಂದು ನಿಂತುಬಿಟ್ಟಿದ್ದೇವೆ.
ಸುದ್ದಿ ಏನೆಂದರೆ, ಕಳೆದ ಹಲವು ಸಮಯದಿಂದ ಚರ್ಚೆಯಲ್ಲಿದ್ದ ಬ್ರೈನ್ ಚಿಪ್ ಅನ್ನು ಕಡೆಗೂ ಮೊದಲ ಬಾರಿಗೆ ಮನುಷ್ಯನ ಮೆದುಳಿನಲ್ಲಿ ಅಳವಡಿಸಲಾಗಿದೆ. ಈಗಾಗಲೇ ಹಂದಿ ಮತ್ತು ಮಂಗಗಳಲ್ಲಿ ಅಳವಡಿಸಿ ಪ್ರಯೋಗ ಮಾಡಿ ಯಶಸ್ಸು ಕಂಡ ಒಂದು ವರ್ಷದ ಬಳಿಕ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಸ್ಟಾರ್ಟ್ ಅಪ್ ಕಂಪೆನಿ, ತನ್ನ ವೈರ್‌ಲೆಸ್ ಬ್ರೈನ್ ಚಿಪ್ ಅನ್ನು ಮೊದಲ ಬಾರಿಗೆ ಮಾನವನ ಮೆದುಳಿನಲ್ಲಿ ಅಳವಡಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಎಲಾನ್ ಮಸ್ಕ್, ಈ ಪ್ರಯೋಗ, ನರರೋಗ ಹಾಗೂ ಪಾರ್ಕಿನ್ಸನ್ ಕಾಯಿಲೆಗಳ ಚಿಕಿತ್ಸೆಯಲ್ಲಿ ನೆರವಾಗಲಿದೆ. ಇದೊಂದು ಭರವಸೆಯ ಪ್ರಯೋಗ ಎಂದಿದ್ದಾರೆ.
ವೈದ್ಯಕೀಯ ರಂಗದಲ್ಲಿ ಇದೊಂದು ಆಶಾಕಿರಣವಾಗ ಬಹುದಾದ ಪ್ರಯೋಗ ಎನ್ನಲಾಗುತ್ತಿದ್ದರೂ, ಎಲ್ಲ ತಂತ್ರಜ್ಞಾನಗಳ ದುರ್ಬಳಕೆ ಕುರಿತ ಆತಂಕ ಈ ಬ್ರೈನ್ ಚಿಪ್ ವಿಚಾರದಲ್ಲಿಯೂ ತಲೆದೋರಿದೆ. ಅಷ್ಟು ಮಾತ್ರವಲ್ಲ, ನೈತಿಕತೆಯ ಪ್ರಶ್ನೆಯ ಹಿನ್ನೆಲೆಯಿಂದಲೂ ಹಲವು ಬಗೆಯ ಕಳವಳಗಳು ಪರಿಣಿತರನ್ನು ಈಗ ಕಾಡುತ್ತಿವೆ.
ಎಲ್ಲವೂ ಶುರುವಾಗಿದ್ದು ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಹೆಸರಿನ ಸ್ಟಾರ್ಟ್ ಅಪ್ ಸಂಸ್ಥೆಯ ಅಂಗಳದಲ್ಲಿ. ಜೀವಂತ ಮೆದುಳು ಹಾಗೂ ಜಡ ಯಂತ್ರವಾದ ಕಂಪ್ಯೂಟರನ್ನು ವೈರುಗಳ ಹಂಗಿಲ್ಲದೆ ಬೆಸೆದು ನರಸಂಬಂಧಿ ಕಾಯಿಲೆಗಳಿಗೆ ಪರಿಹಾರ ಹುಡುಕುವ ವಿಶಿಷ್ಟ ಕನಸಿನ ಸಂಸ್ಥೆ ಅದು. 2016ರಲ್ಲಿ ಸ್ಥಾಪನೆಯಾದ ನ್ಯೂರಾಲಿಂಕ್ ಸಂಸ್ಥೆಯ ಶ್ರಮ ಮತ್ತು ಶೋಧದ ಫಲವೇ ಈ ಬ್ರೈನ್ ಚಿಪ್.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ?
ಐದು ರೂಪಾಯಿಯ ಒಂದು ನಾಣ್ಯದ ಗಾತ್ರದ ಸಾಧನ ಅದು. ಅದನ್ನು ಮೆದುಳಿನೊಳಗೆ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಗುತ್ತದೆ. ನಮ್ಮ ಕೂದಲೆಳೆಗಿಂತಲೂ ತೀರಾ ಸೂಕ್ಷ್ಮಾತಿ ಸೂಕ್ಷ್ಮ ಗಾತ್ರದ ತಂತಿಗಳು ಮೆದುಳಿನೊಳಗೆ ಹೋಗುತ್ತವೆ ಮತ್ತು ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ (ಬಿಸಿಐ) ಅನ್ನು ಅಭಿವೃದ್ಧಿಪಡಿಸುತ್ತವೆ. ಡಿಸ್ಕ್ ಮೆದುಳಿನ ಚಟುವಟಿಕೆಯನ್ನು ದಾಖಲಿಸುತ್ತದೆ ಮತ್ತು ಸಾಮಾನ್ಯ ಬ್ಲೂಟೂತ್ ಸಂಪರ್ಕದ ಮೂಲಕ ಆದನ್ನು ಸ್ಮಾರ್ಟ್‌ಫೋನ್‌ನಂತಹ ಸಾಧನಕ್ಕೆ ಕಳುಹಿಸುತ್ತದೆ. ಟೆಲಿಪತಿ ಎಂದು ಕರೆಯಲ್ಪಡುವ ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ನ ಮೊದಲ ಚಿಪ್, ಬರೀ ಆಲೋಚನೆಯ ಮೂಲಕವೇ ಫೋನ್ ಅಥವಾ ಕಂಪ್ಯೂಟರ್‌ಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.
ಮೆದುಳಿನಲ್ಲಿ ಚಿಪ್ ಅನ್ನು ಅಳವಡಿಸುವುದರಿಂದ ನರರೋಗಗಳನ್ನು ಮೆಟ್ಟಿನಿಲ್ಲಲು ಸಾಧ್ಯ ಎಂದು ನ್ಯೂರಾಲಿಂಕ್ ಕಂಪೆನಿ ಹೇಳುತ್ತದೆ. ಆರಂಭಿಕ ಹಂತದಲ್ಲಿ, ಸ್ನಾಯುಗಳು ನಿಷ್ಕ್ರಿಯವಾಗಿರುವವರ ಮೇಲೆ ಇದರ ಪ್ರಯೋಗ ಮಾಡಲಾಗುತ್ತದೆ. ಕೈಗಳ ಮೂಲಕ ಬಳಸುವುದಕ್ಕಿಂತ ವೇಗವಾಗಿ ಈ ಚಿಪ್ ಮೂಲಕ ಮೊಬೈಲ್ ಆಪರೇಟ್ ಮಾಡಬಹುದು ಎನ್ನುತ್ತಾರೆ ಎಲಾನ್ ಮಸ್ಕ್.
ಹಿಂದೆ ನಡೆಸಿದ ಪ್ರಯೋಗಗಳು
ನ್ಯೂರಾಲಿಂಕ್ ತನ್ನ ಚಿಪ್ ಅನ್ನು ಮಂಗಗಳು ಮತ್ತು ಹಂದಿಗಳ ಮೇಲೆ ಈಗಾಗಲೇ ಪ್ರಯೋಗಿಸಿ ಪರೀಕ್ಷಿಸಿದೆ. ಮಂಗಗಳು ತಮ್ಮ ನ್ಯೂರಾಲಿಂಕ್ ಇಂಪ್ಲಾಂಟ್‌ಗಳ ಮೂಲಕ ವೀಡಿಯೊ ಗೇಮ್‌ಗಳನ್ನು ಆಡುವುದು ಕಂಡುಬಂದಿತ್ತು.
ಗೆರ್ಟ್ರೂಡ್ ಎಂಬ ಹಂದಿಯ ಮೆದುಳಿನಲ್ಲಿಯೂ ಚಿಪ್ ಅಳವಡಿಸಲಾಗಿತ್ತು. ಅದು ಹಂದಿಯ ಮೆದುಳಲ್ಲಿನ ಚಟುವಟಿಕೆಗಳ ಸಂಕೇತಗಳನ್ನು ರಿಯಲ್ ಟೈಮ್‌ನಲ್ಲಿಯೇ ಅಂದರೆ ನೇರ ಪ್ರಸಾರದಂತೆ ದಾಖಲಿಸತೊಡಗಿತ್ತು. ಹಂದಿ ಆಹಾರ ಹುಡುಕುತ್ತಿದ್ದರೆ ಆಹಾರದ ಬಗೆಗಿನ ಅದರ ಖುಷಿಯ ಸಂವೇದನೆ ಚಿಪ್‌ನಲ್ಲಿ ಇಲೆಕ್ಟ್ರಿಕ್ ತರಂಗಾಂತರಗಳ ರೂಪದಲ್ಲಿ ದಾಖಲಾಗಿ, ಧ್ವನಿಯ ರೂಪದಲ್ಲಿ ಕಂಪ್ಯೂಟರಿಗೆ ವರ್ಗಾವಣೆಯಾಗುತ್ತಿತ್ತು. ಹಾಗೆಯೇ ಹಂದಿಯ ತಲೆಯನ್ನು ಸವರಿದಾಗಲೂ ಅದಕ್ಕೆ ಆಗುವ ಭಾವನೆಗಳು ಚಿಪ್ ಮೂಲಕ ದಾಖಲಾಗಿ ಸಂಕೇತಗಳು ಕಂಪ್ಯೂಟರಿಗೆ ವರ್ಗವಾಗುತ್ತಿದ್ದವು. ಹಂದಿಯ ಮೇಲಿನ ಪ್ರಯೋಗದಲ್ಲಿ ಕಂಡುಬಂದ ಫಲಿತಾಂಶಗಳು, ಮಾನವನ ಮೆದುಳಿನಲ್ಲಿಯೂ ಅದನ್ನು ಅಳವಡಿಸಿ, ನರಸಂಬಂಧಿತ ಕಾಯಿಲೆಗಳನ್ನು ಗೆಲ್ಲುವ ದಿಸೆಯಲ್ಲಿನ ದಿಟ್ಟ ಹೆಜ್ಜೆಗೆ ಪ್ರೇರಣೆಯಾಗಿದ್ದವು.
ಮಾನವನ ಮೇಲಿನ ಮೊದಲ ಪ್ರಯೋಗದ ಹಂತ ಯಾವುದು?:
ಮಾನವನ ಮೇಲಿನ ಪ್ರಯೋಗದಲ್ಲಿ, ನರಕೋಶಗಳು ದೇಹದ ಸುತ್ತ ಪರಸ್ಪರ ವಿದ್ಯುತ್ ಮತ್ತು ರಾಸಾಯನಿಕ ಸಂಕೇತಗಳನ್ನು ಕಳುಹಿಸುತ್ತವೆ. ಅಂತಹ ಚಟುವಟಿಕೆಯ ಪರಿಣಾಮವಾಗಿ, ತಿನ್ನುವುದರಿಂದ ಹಿಡಿದು ಮಾತನಾಡುವವರೆಗೂ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ 2023ರ ಮೇ ತಿಂಗಳಲ್ಲಿ ಪ್ರಾಣಿಗಳ ಮೇಲೆ ಚಿಪ್ ಪ್ರಯೋಗಕ್ಕೆ ತನ್ನ ಒಪ್ಪಿಗೆ ನೀಡಿತ್ತು.
ಇತರ ಸಂಸ್ಥೆಗಳು ಇಂಥ ಪ್ರಯೋಗದಲ್ಲಿ ತೊಡಗಿವೆಯೇ?
ಅಮೆರಿಕದ ಸಕ್ರಿಯ ಕ್ಲಿನಿಕಲ್ ಪ್ರಯೋಗಗಳ ಆನ್‌ಲೈನ್ ಡೇಟಾಬೇಸ್ ಪ್ರಕಾರ, ಸುಮಾರು 40 ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಪ್ರಯೋಗಗಳು ನಡೆಯುತ್ತಿವೆ. ಆಸ್ಟ್ರೇಲಿಯ ಮೂಲದ ಕಂಪೆನಿ ಸಿಂಕ್ರಾನ್ 2022ರ ಜುಲೈನಲ್ಲಿ ಅಮೆರಿಕದ ರೋಗಿಗೆ ತನ್ನ ಚಿಪ್ ಅಳವಡಿಸಿದೆ. ಇಂಥ ಇತರ ಪ್ರಯೋಗಗಳು ವೈದ್ಯಕೀಯ ಉದ್ದೇಶಕ್ಕೆ ಮಾತ್ರವೇ ಸೀಮಿತವಾಗಿವೆ.
ಆದರೆ ಎಲಾನ್ ಮಸ್ಕ್ ಕಂಪೆನಿ ಅದನ್ನು ಮೀರಿ, ಜನರು ತಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಧನಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಅವಕಾಶ ಮಾಡಿಕೊಡುವ ಗುರಿಯನ್ನು ಹೊಂದಿದೆ.
ಇದರ ಸಾಧ್ಯತೆಗಳು, ಆಶಾವಾದ ಏನು?
ಪಾರ್ಶ್ವವಾಯು ಪೀಡಿತ ವ್ಯಕ್ತಿ ತನ್ನ ಅಂಗಗಳ ಮೇಲೆ ಹಿಡಿತ ಸಾಧಿಸುವಂತಾಗುವುದು, ಕಲಾವಿದನೊಬ್ಬ ಕೈಗಳನ್ನೇ ಬಳಸದೆ ತನ್ನ ಮನಸ್ಸಿನಲ್ಲಿನ ಚಿತ್ರಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಲು ಸಾಧ್ಯವಾಗುವುದು -ಹೀಗೆ ಈ ಪುಟ್ಟ ಗಾತ್ರದ ಚಿಪ್ ಮೂಡಿಸುತ್ತಿರುವ ಭವಿಷ್ಯದ ಕಲ್ಪನೆಗಳು ಕುತೂಹಲಕಾರಿಯಾಗಿವೆ, ಅಷ್ಟೇ ರೋಮಾಂಚನಕಾರಿ ಕೂಡ.
ಆಲೋಚನೆಯೇ ಕ್ರಿಯೆಯಾಗುವ ವಿಶಿಷ್ಟ ಸಾಧ್ಯತೆಯನ್ನು ಇದು ತೆರೆದಿಡಲಿದೆ. ನಮ್ಮ ಶರೀರದ ದೈಹಿಕ ಮಿತಿಗಳನ್ನು ದಾಟಿ, ಬರೀ ಆಲೋಚನೆಗಳ ಮೂಲಕವೇ ಕೆಲಸ ಸಾಧಿಸುವ ಬಗೆ ಇದಾಗಿದೆ. ಆಗ ಮೆದುಳು ಮತ್ತು ಯಂತ್ರದ ನಡುವೆ ಮಿತಿಯಿಲ್ಲದಷ್ಟು ಮಾಹಿತಿಗಳ ಮಹಾಪೂರವೇ ಹರಿಯಲಿದೆ.
ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಅಥವಾ ಬಿಸಿಐ ಎಂಬುದು 1970ರಷ್ಟು ಹಿಂದೆ ಕಂಡುಕೊಳ್ಳಲಾದ ನರತಂತ್ರಜ್ಞಾನ. ಈ ನರತಂತ್ರ ಜ್ಞಾನದ ಮುಂದುವರಿದ ಮತ್ತು ಅತ್ಯಾಧುನಿಕ ಸ್ವರೂಪವೇ ಈಗ ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಮಾಡಿರುವ ಸಾಧನೆ.
ಈ ಸಣ್ಣ ಗಾತ್ರದ ಚಿಪ್ 1,024 ಸೂಕ್ಷ್ಮ ತಂತುಗಳನ್ನು ಒಳಗೊಂಡಿದೆ. ಚಿಪ್ ಅನಲಾಗ್ ಪಿಕ್ಸೆಲ್‌ಗಳನ್ನು ಹೊಂದಿದ್ದು, ಅದು ಡಿಜಿಟಲ್ ಬಿಟ್‌ಗಳಾಗಿ ಪರಿವರ್ತಿಸುವ ಮೊದಲು ನರ ಸಂಕೇತಗಳನ್ನು ವರ್ಧಿಸುತ್ತದೆ ಮತ್ತು ಫಿಲ್ಟರ್ ಮಾಡುತ್ತದೆ. ಅನಲಾಗ್ ಪಿಕ್ಸೆಲ್‌ಗಳು ತಿಳಿದಿರುವ ಸ್ಥಿತಿಗಿಂತ ಕನಿಷ್ಠ 5 ಪಟ್ಟು ಚಿಕ್ಕದಾಗಿವೆ ಎಂದು ನ್ಯೂರಾಲಿಂಕ್ ಹೇಳುತ್ತದೆ. ಒಂದು ಅನಲಾಗ್ ಪಿಕ್ಸೆಲ್ ಪ್ರತೀ ಸೆಕೆಂಡಿಗೆ 20,000 ಮಾದರಿಗಳ ಸಂಪೂರ್ಣ ನರ ಸಂಕೇತಗಳನ್ನು 10 ಬಿಟ್‌ಗಳ ರೆಸಲ್ಯೂಶನ್‌ನೊಂದಿಗೆ ಸೆರೆಹಿಡಿಯಬಲ್ಲುದು.
ಇಲೆಕ್ಟ್ರೋಡ್‌ಗಳಾಗಿರುವ ಆ ಎಳೆಗಳು ಮೆದುಳಿನೊಂದಿಗೆ ಸಂವಹನಿಸುತ್ತ, ಅದರ ಸಂಕೇತಗಳನ್ನು ದಾಖಲಿಸುತ್ತವೆ ಮತ್ತು ನರಗಳ ಕಾರ್ಯಚಟುವಟಿಕೆಯನ್ನು ಉತ್ತೇಜಿಸುತ್ತವೆ. ಆಲೋಚನೆಯ ಮೂಲಕವೇ ಮೊಬೈಲ್ ಕರೆ ಮಾಡುವುದು, ಇಮೇಲ್ ಟೈಪ್ ಮಾಡುವುದೆಲ್ಲ ಈ ಬಗೆಯಲ್ಲಿ ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.
ಇದರ ಸಾಧ್ಯತೆಗಳು ಅಪಾರ. ಸದ್ಯದ ನ್ಯೂರಾಲಿಂಕ್ ಪ್ರಯೋಗ, ಪಾರ್ಶ್ವವಾಯು ಪೀಡಿತರು ತಮ್ಮ ಆಲೋಚನೆಗಳನ್ನೇ ತಮ್ಮ ಶಕ್ತಿಯಾಗಿ ಬಳಸುವುದಕ್ಕೆ ಸೇತುವೆಯಂತೆ ಒದಗಲಿದೆ. ಪಾರ್ಶ್ವವಾಯು ಪೀಡಿತರು, ಪಾರ್ಕಿನ್ಸನ್ ತೊಂದರೆಯಿಂದ ಬಳಲುತ್ತಿರುವವರು ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಹುಟ್ಟಿನಿಂದಲೇ ದೃಷ್ಟಿಯಿಲ್ಲದಿರುವವರ ದೃಷ್ಟಿಯನ್ನು ಪುನಃಸ್ಥಾಪಿಸುವುದು, ಬೆನ್ನುಹುರಿ ಹೊಂದಿರದವರಲ್ಲಿ ಚಲನೆಯನ್ನು ಸಾಧ್ಯವಾಗಿಸುವುದು ಸೇರಿದಂತೆ, ಇಡೀ ಮಾನವನ ದೇಹಕ್ಕೆ ಮರುಚೈತನ್ಯ ಕೊಡಬಲ್ಲದು ಎಂದು ವರದಿಗಳು ಹೇಳುತ್ತಿವೆ. ಇಷ್ಟೇ ಅಲ್ಲದೆ, ಯಂತ್ರಗಳ ಜೊತೆ ಮಾನವನು ಮೆದುಳಿನಿಂದಲೇ ಮಾತನಾಡಲೂ ಕೂಡ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಆರೋಗ್ಯವಂತರೂ ಇದನ್ನು ಅಳವಡಿಸಿಕೊಳ್ಳಬಹುದೆ? ಇಂಥದೊಂದು ಕುತೂಹಲ ಮೂಡದೇ ಇರುವುದಿಲ್ಲ. ಅಂಥ ಸಾಧ್ಯತೆಯೂ ಸಾಕಷ್ಟಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಹೇಳಿದಂತೆ ಮೊಬೈಲ್‌ನಂಥ ಸಾಧನಗಳನ್ನು ನಿಯಂತ್ರಿಸಲು, ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು, ರಿಯಲ್ ಟೈಮ್‌ನಲ್ಲಿಯೇ ಪ್ರಾಜೆಕ್ಟ್‌ಗಳಲ್ಲಿ ಇದರ ನೆರವು ಪಡೆಯಲು ಸಾಧ್ಯವಿದೆ.
ಆದರೆ, ಇದೆಲ್ಲದರ ನಡುವೆಯೂ ಇದು ಹುಟ್ಟುಹಾಕಿರುವ ನೈತಿಕತೆಯ ಪ್ರಶ್ನೆ ಮತ್ತು ಕಳವಳಗಳೂ ಕಡಿಮೆಯಿಲ್ಲ. ಈ ಚಿಪ್ ಮೂಲಕ ಮನುಷ್ಯನ ಮೆದುಳು ಯಾವ ಮಿತಿಯೇ ಇಲ್ಲದೆ ಬಹಿರಂಗಕ್ಕೆ ತೆರೆದುಕೊಳ್ಳುವುದರಿಂದ ಬಹಳಷ್ಟು ನೈತಿಕತೆಯ ಪ್ರಶ್ನೆಗಳು ಏಳುತ್ತವೆ.
ಮೊದಲನೆಯ ಕಳವಳ, ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ್ದು. ವ್ಯಕ್ತಿಯೊಬ್ಬನ ಎಲ್ಲ ಚಲನವಲನಗಳೂ ಯಾರದೋ ನಿಗಾಕ್ಕೆ ಒಳಪಡಲಿವೆಯೇ? ನೆನಪಿನಂಥ ಇತರ ಸಂಕೇತಗಳನ್ನೂ ಇದು ದಾಖಲಿಸುವುದೇ? ದಾಖಲಾಗುವ ಆ ಡೇಟಾಗಳೆಲ್ಲ ಯಾರ ಪಾಲಾಗಲಿವೆ? ವ್ಯಕ್ತಿಯ ಅನುಮತಿಯಿಲ್ಲದೆ ಅವುಗಳ ದುರ್ಬಳಕೆಯಾಗಬಹುದೇ?
ಮತ್ತೊಂದು ಕಳವಳವೆಂದರೆ, ಅವೆಲ್ಲವೂ ಕ್ರಿಮಿನಲ್ ಆರೋಪಗಳ ತನಿಖೆಗೆ ಬಳಕೆಯಾಗಬಹುದೇ? ಈಗಾಗಲೇ ಇರುವ, ನಿರ್ದಿಷ್ಟ ಜನರನ್ನು ಗುರಿ ಮಾಡುವ ಧೋರಣೆಗೆ ಈ ತಂತ್ರಜ್ಞಾನವೂ ದುರ್ಬಳಕೆಯಾಗುವುದೇ? ಇತರರನ್ನು ನಿಯಂತ್ರಿಸಲು ಅಥವಾ ಅವರಿಂದ ಮಾಹಿತಿಯನ್ನು ಕದಿಯಲು ಬಯಸುವವರು ಅದರ ದುರ್ಬಳಕೆ ಮಾಡಿಕೊಳ್ಳಬಹುದೇ? ನಿಮ್ಮ ಎಲ್ಲಾ ಇಮೇಲ್‌ಗಳನ್ನು ಓದಲು ಮತ್ತು ನೀವು ಏನನ್ನು ಯೋಚಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಬಯಸುವವರ, ಸರಕಾರಗಳು, ಭದ್ರತಾ ಏಜೆನ್ಸಿಗಳ ಗುರಿಯಾಗುವ ಅಪಾಯವಿದೆಯೇ? ಇದು ಹೊಸ ಸೈಬರ್ ಸುರಕ್ಷತೆಯ ಅಪಾಯಗಳನ್ನು ತರಬಹುದೇ?
ಈಗ ಫೋನ್‌ಗೆ ಅಡಿಕ್ಟ್ ಆಗಿರುವವರು ಭವಿಷ್ಯದಲ್ಲಿ ನ್ಯೂರಾಲಿಂಕ್‌ಗೂ ಹೀಗೆಯೇ ಒಡ್ಡಿಕೊಂಡುಬಿಡುವರೆ? ಕಡೆಗೆ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಎಂಬುದು ಒಂದು ವ್ಯಸನವೇ ಆಗಿ, ಜನರು ತಮ್ಮ ನೈಜ ಸಾಮರ್ಥ್ಯವನ್ನೇ ಬಳಸಲಾರದೆ, ಅಥವಾ ಅದನ್ನು ಗ್ರಹಿಸಲಾರದೆ, ಬಿಸಿಐನ ಅನಿವಾರ್ಯತೆಗೆ ಶರಣಾಗಿ ಖಿನ್ನತೆಯಂಥ ಕಾಯಿಲೆಗೆ ತುತ್ತಾಗುವರೇ?
ಇದಲ್ಲದೆ, ಮನುಷ್ಯ ಮತ್ತು ಯಂತ್ರದ ನಡುವಿನ ತೆಳುವಾದ ಗೆರೆ ಕೂಡ ಇಲ್ಲವಾಗಲು ಇದು ಕಾರಣವಾಗಬಹುದೇ ಎಂಬ ಕಳವಳವೂ ಮೂಡುತ್ತದೆ. ಒಂದು ವೇಳೆ ಹಾಗಾದರೆ ಮನುಷ್ಯನ ಅಸ್ತಿತ್ವದ ಅಸ್ಮಿತೆಯೇನಾಗಲಿದೆ?
ಮತ್ತು ಎಲ್ಲಕ್ಕಿಂತ ಭಯಾನಕವಾದದ್ದು ಎಂದರೆ, ಮಾನವನ ಮೇಲಿನ ಪ್ರಯೋಗದಲ್ಲಿ ಯಾರಾದರೂ ತಮ್ಮ ಸಾಮರ್ಥ್ಯಗಳನ್ನು ಕಳೆದುಕೊಂಡರೆ ಅಥವಾ ಪ್ರಾಣವನ್ನೇ ಕಳೆದುಕೊಂಡರೆ, ಅದಕ್ಕೆ ಏನು ಸಮರ್ಥನೆಯಿದೆ?
ನ್ಯೂರಾಲಿಂಕ್ ಬಗೆಗಿನ ಮತ್ತೊಂದು ಪ್ರಮುಖ ಕಳವಳವೆಂದರೆ, ಅದು ಮೆದುಳಿನ ಅಂಗಾಂಶಕ್ಕೆ ಹಾನಿ ಉಂಟುಮಾಡಬಹುದು ಎಂಬುದು. ಮಾನವನ ಮೆದುಳು ತುಂಬಾ ಸೂಕ್ಷ್ಮವಾಗಿರುತ್ತದೆ, ಸಣ್ಣ ಗಾಯವೂ ಶಾಶ್ವತ ಹಾನಿ ಅಥವಾ ಸಾವಿಗೆ ಕಾರಣವಾಗಬಹುದು. ನ್ಯೂರಾಲಿಂಕ್ ಅನ್ನು ತಪ್ಪಾಗಿ ಅಳವಡಿಸಿದರೆ, ಅದು ಮೆದುಳಿನಲ್ಲಿ ಸೋಂಕುಗಳು ಮತ್ತು ಉರಿಯೂತಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಒಂದು ಹಂತದಲ್ಲಿ ಬಿಸಿಐಗಳು ವಿಫಲವಾದಾಗ ಅವುಗಳನ್ನು ತೆಗೆದುಹಾಕಲು ಅಥವಾ ಸರಿಪಡಿಸಲು ಆಗದೆ, ಮೆದುಳಿಗೆ ಹಾನಿ ಸಂಭವಿಸಬಹುದು. ಆಗ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಪಾರ್ಶ್ವವಾಯು ಮುಂತಾದ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ತಂತ್ರಜ್ಞಾನ ಸರಿಯಾದ ದಾರಿಯಲ್ಲಿ ಬಳಕೆಯಾದರೆ ಲಾಭ ಖಂಡಿತ ಇದೆ. ಆ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಆವಿಷ್ಕಾರ. ಆದರೆ, ಕೈಮೀರಿದರೆ, ಇಡೀ ಮನುಕುಲಕ್ಕೆ ಭಾರೀ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಕೂಡ ಅಷ್ಟೇ ಸತ್ಯ.