ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಲಿರುವ ರಾಜ್ಯದ ಉಪ ಚುನಾವಣೆಗಳ ಫಲಿತಾಂಶ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಹೋರಾಟವಿದ್ದರೂ ಮೂರೂ ಪಕ್ಷಗಳಿಗೆ ಇದು ಮಹತ್ವದ್ದಾಗಿದೆ. ಸರಕಾರದ ಬಲಾಬಲದ ಮೇಲೆ ಇದು ಪರಿಣಾಮ ಬೀರುವುದಿಲ್ಲವಾದರೂ, ಆಡಳಿತಾರೂಢ ಕಾಂಗ್ರೆಸ್ ತನ್ನ ಬಲವನ್ನು ಸಾಬೀತುಪಡಿಸಿಕೊಳ್ಳಲೇಬೇಕಾದ ಸನ್ನಿವೇಶದಲ್ಲಿದೆ. ಇನ್ನೊಂದೆಡೆ ಬಿಜೆಪಿ-ಜೆಡಿಎಸ್ ಎರಡೂ ಕಾಂಗ್ರೆಸ್ ಅನ್ನು ಮಣಿಸಲೇಬೇಕೆಂಬ ಜಿದ್ದಿನಲ್ಲಿವೆ.
ರಾಷ್ಟ್ರ ರಾಜಕಾರಣದಲ್ಲಿ ಅನೇಕ ಗಮನಾರ್ಹ ಬೆಳವಣಿಗೆಗಳು ವಿವಿಧ ರಾಜ್ಯಗಳ ಚುನಾವಣೆ ಮೂಲಕ ಕಾಣಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿನ ಉಪಚುನಾವಣೆಗಳೂ ಮಹತ್ವ ಪಡೆಯುತ್ತಿವೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುತ್ತಿದೆ. ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದೊಂದು ಕ್ಷೇತ್ರ ಗೆದ್ದಿದ್ದವು. ಬಳಿಕ ಈ ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಕಾರಣದಿಂದ ತೆರವಾಗಿರುವ ಕ್ಷೇತ್ರಗಳಿಗೆ ಈಗ ಉಪಚುನಾವಣೆ ಘೋಷಣೆಯಾಗಿದೆ. ಸಂಸದರಾಗಿ ಆಯ್ಕೆಯಾದ ಮಾಜಿ ಸಿಎಂಗಳಾದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ಬಿಜೆಪಿಯ ಬಸವರಾಜ ಬೊಮ್ಮಾಯಿ (ಶಿಗ್ಗಾಂವಿ) ಮತ್ತು ಕಾಂಗ್ರೆಸ್‌ನ ಇ. ತುಕಾರಾಂ (ಸಂಡೂರು-ಎಸ್‌ಟಿ) ರಾಜೀನಾಮೆ ನೀಡಿದ ನಂತರ ಈ ಸ್ಥಾನಗಳು ತೆರವಾಗಿದ್ದವು.
ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಸಂದರ್ಭದ ಹಿನ್ನೆಲೆಯಲ್ಲಿ ಈ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮಹತ್ವ ಏನು ಎನ್ನುವುದನ್ನು ಮೊದಲು ಗಮನಿಸೋಣ.
1. ಈ ಉಪ ಚುನಾವಣೆಗಳ ಫಲಿತಾಂಶ ವಿಧಾನಸಭೆಯಲ್ಲಿನ ಈಗಿನ ಸಮೀಕರಣಗಳನ್ನು ಬದಲಾಯಿಸುವುದಿಲ್ಲ ಮತ್ತು ಸರಕಾರದ ಮೇಲೆ ಇದರ ನೇರ ಪ್ರಭಾವ ಇರುವುದಿಲ್ಲ.
2. ಆಡಳಿತಾರೂಢ ಕಾಂಗ್ರೆಸ್‌ಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೂ ಈ ಚುನಾವಣೆ ಗೆಲ್ಲುವುದು ಮುಖ್ಯವಾಗಿದೆ.
3. ಮುಡಾ ಪ್ರಕರಣ ಮತ್ತು ಎಸ್‌ಟಿ ಅಭಿವೃದ್ಧಿ ನಿಗಮದ ಹಗರಣಗಳ ಹಿನ್ನೆಲೆಯಲ್ಲಿ ಸರಕಾರ ಇಕ್ಕಟ್ಟಿಗೆ ಸಿಲುಕಿರುವಾಗ, ವಿಪಕ್ಷಗಳನ್ನು ಸುಮ್ಮನಾಗಿಸಲು ಈ ಮೂರೂ ಕ್ಷೇತ್ರಗಳಲ್ಲಿ ಗೆದ್ದು ತೋರಿಸುವುದು ಕಾಂಗ್ರೆಸ್‌ಗೆ ಅಗತ್ಯವಾಗಿದೆ.
4. ಈ ಸಮಯದಲ್ಲಿ, ಮೂರೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡರೆ ಸಿಎಂ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಲಿದೆ.
ವಿಪಕ್ಷಗಳ ಪಾಲಾದರೆ, ಅವುಗಳ ರಾಜಕೀಯ ಆಟಕ್ಕೆ ಅವಕಾಶ ಮಾಡಿಕೊಟ್ಟಂತಾಗಬಹುದು.
5. ಆಡಳಿತಾರೂಢ ಪಕ್ಷವಾಗಿರುವ ಹಿನ್ನೆಲೆಯಿಂದಲೂ ಕಾಂಗ್ರೆಸ್‌ಗೆ ಉಪ ಚುನಾವಣೆಗಳಲ್ಲಿನ ಗೆಲುವು ಮುಖ್ಯ.
ಕಾಂಗ್ರೆಸ್ ಸೋತರೆ ವಿರೋಧ ಪಕ್ಷಗಳಿಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಲಿದೆ.
6. ಕಾಂಗ್ರೆಸ್ ಸರಕಾರ ವಿಫಲವಾಗಿದೆ, ಆಡಳಿತ ವಿರೋಧಿ ಅಲೆಯಿದೆ ಎಂದು ವಿಪಕ್ಷಗಳು ಬಿಂಬಿಸುತ್ತಿರುವ ಕಾರಣದಿಂದಲೂ ಕಾಂಗ್ರೆಸ್ ಈಗ ಈ ಮೂರೂ ಕ್ಷೇತ್ರಗಳನ್ನು ಗೆದ್ದು ತೋರಿಸಬೇಕಾದ ಒತ್ತಡದಲ್ಲಿದೆ.
7. ಪಕ್ಷದ ಇಮೇಜ್ ಅನ್ನು ಉಳಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೈಕಮಾಂಡ್‌ಗೆ ಬಲ ನೀಡುವ ದೃಷ್ಟಿಯಿಂದಲೂ ಈ ಚುನಾವಣೆಗಳಲ್ಲಿನ ಗೆಲುವು ಕಾಂಗ್ರೆಸ್‌ಗೆ ಮುಖ್ಯ.
ಚನ್ನಪಟ್ಟಣ ಕ್ಷೇತ್ರ:
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿಯೇ 15 ವರ್ಷಗಳಾಗುತ್ತಿವೆ. ಕಡೇ ಬಾರಿಗೆ ಅಲ್ಲಿ ಕಾಂಗ್ರೆಸ್ ಅನ್ನು 2008ರಲ್ಲಿ ಗೆಲ್ಲಿಸಿದ್ದ ಸಿ.ಪಿ. ಯೋಗೇಶ್ವರ್ ಇದುವರೆಗೆ ಬಿಜೆಪಿ ಪಾಳಯದಲ್ಲಿದ್ದವರು. ಆನಂತರ ಬಿಜೆಪಿಯನ್ನೂ, ಎಸ್‌ಪಿಯನ್ನೂ ಒಂದೊಂದು ಸಲ ಅಲ್ಲಿ ಗೆಲ್ಲಿಸಿದ ಶ್ರೇಯಸ್ಸು ಕೂಡ ಯೋಗೇಶ್ವರ್‌ಗೇ ಸಲ್ಲುತ್ತದೆ. 2013ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು.
ಕಾಂಗ್ರೆಸ್ ಹಿಡಿತ ಕಳೆದುಕೊಂಡಿರುವ ಚನ್ನಪಟ್ಟಣದಲ್ಲಿ ಈಗ ಜೆಡಿಎಸ್ ಪ್ರಾಬಲ್ಯವಿದೆ.
2018ರಿಂದಲೂ ಜೆಡಿಎಸ್ ನಾಯಕ ಕುಮಾರಸ್ವಾಮಿಯವರೇ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ 16,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಆಗ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದವರು ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್.
ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಪಡೆದಿದ್ದ ಮತಗಳು 96,592. ಯೋಗೇಶ್ವರ್ ಪಡೆದಿದ್ದ ಮತಗಳು 80,677.
ಜೆಡಿಎಸ್ ಪಡೆದಿದ್ದ ಮತಗಳ ಪಾಲು. ಶೇ.48.83. ಬಿಜೆಪಿ ಮತಗಳ ಪಾಲು ಶೇ.40.79.
ಚನ್ನಪಟ್ಟಣ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ.
ಚುನಾವಣೆಯ ವಿಚಾರದಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಸಹಜವಾಗಿಯೇ ಮಹತ್ವವಿದೆ. ಅದರಲ್ಲೂ ಈಗ ನಡೆಯಲಿರುವುದು ಉಪ ಚುನಾವಣೆ ಎನ್ನುವಾಗ, ಗಮನಿಸಲೇಬೇಕಾದ ಮತ್ತೊಂದು ಸಂಗತಿಯಿದೆ. ಏನೆಂದರೆ, ಕಳೆದ 16 ವರ್ಷಗಳಲ್ಲಿ ಚನ್ನಪಟ್ಟಣಕ್ಕೆ ಇದು 3ನೇ ಉಪ ಚುನಾವಣೆಯಾಗಿದೆ. ಹಿಂದಿನ ಎರಡೂ ಉಪ ಚುನಾವಣೆಗಳಲ್ಲಿ ಅಭ್ಯರ್ಥಿಯಾಗಿದ್ದವರು ಸಿ.ಪಿ. ಯೋಗೇಶ್ವರ್. 2008ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಯೋಗೇಶ್ವರ್, ಆಪರೇಷನ್ ಕಮಲದ ಪರಿಣಾಮವಾಗಿ ಒಂದೇ ವರ್ಷಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರಿಂದಾಗಿ 2009ರಲ್ಲಿ ಮೊದಲ ಉಪ ಚುನಾವಣೆ ನಡೆಯಿತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವಥ್ ಎದುರು ಸೋಲನುಭವಿಸಿದ್ದರು. ಅಶ್ವಥ್ ಕೂಡ ಆಪರೇಷನ್ ಕಮಲಕ್ಕೆ ತುತ್ತಾಗಿ ಒಂದೇ ವರ್ಷದ ಬಳಿಕ 2010ರಲ್ಲಿ ರಾಜೀನಾಮೆ ನೀಡಿದಾಗ, 2011ರಲ್ಲಿ ಮತ್ತೊಮ್ಮೆ ಉಪ ಚುನಾವಣೆ ನಡೆಯಿತು. ಆಗ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಯೋಗೇಶ್ವರ್ ಜೆಡಿಎಸ್ ವಿರುದ್ಧ ಗೆದ್ದಿದ್ದರು.
ಆದರೆ ಈ ಸಲದ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಟಿಕೆಟ್ ಯೋಗೇಶ್ವರ್ ಕೈತಪ್ಪಿದೆ. ಅಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಬಹುದು. ಯೋಗೇಶ್ವರ್ ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿ ಗಮನಿಸಬೇಕಿರುವ ಮತ್ತೊಂದು ಪ್ರಮುಖ ವಿಚಾರವೆಂದರೆ, ಕಾಂಗ್ರೆಸ್ ನಾಯಕ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯ ಕಣ ಅದೆಂಬುದು. ಗೆದ್ದು ಬಿಟ್ಟುಕೊಟ್ಟಿರುವ ಕುಮಾರಸ್ವಾಮಿಗೆ ಉಳಿಸಿಕೊಳ್ಳುವ ಅನಿವಾರ್ಯತೆಯಾದರೆ, ಕಸಿದುಕೊಳ್ಳುವ ರಣತಂತ್ರದಲ್ಲಿ ಡಿ.ಕೆ. ಶಿವಕುಮಾರ್ ತೊಡಗಿದ್ದಾರೆ. ಈಗ ಯೋಗೇಶ್ವರ್‌ಗೆ ಬಿಜೆಪಿ ಟಿಕೆಟ್ ಸಿಗದೆ ಇರುವುದರಿಂದ, ಅವರನ್ನೇನಾದರೂ ಕಾಂಗ್ರೆಸ್ ಅಭ್ಯರ್ಥಿಯಾಗಿಸುವ ಸಾಧ್ಯತೆಯಿದೆಯೆ? ಅಥವಾ ಡಿ.ಕೆ. ಸುರೇಶ್ ಅವರನ್ನೇ ಕಣಕ್ಕಿಳಿಸಬಹುದೆ?
ಶಿಗ್ಗಾಂವಿ ಕ್ಷೇತ್ರ:
ಇದು 2008ರಿಂದಲೂ ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರ ಮತ್ತು ಪ್ರತಿನಿಧಿಸುತ್ತಿದ್ದವರು ಬಸವರಾಜ ಬೊಮ್ಮಾಯಿ.
ಕಳೆದ ಬಾರಿ ಗೆದ್ದ ಬಳಿಕ ಸಂಸದರಾಗಿಯೂ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಕ್ಷೇತ್ರಕ್ಕೆ ಈಗ ಮೊದಲ ಬಾರಿಗೆ ಉಪ ಚುನಾವಣೆ ನಡೆಯುತ್ತಿದೆ.
2023ರ ಚುನಾವಣೆಯಲ್ಲಿ ಬೊಮ್ಮಾಯಿ ಪಡೆದಿದ್ದ ಮತಗಳು 1,00,016. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ಪಡೆದಿದ್ದ ಮತಗಳು 64,038.
ಬಿಜೆಪಿ ಪಡೆದಿದ್ದ ಮತಗಳ ಪಾಲು ಶೇ.54.95. ಕಾಂಗ್ರೆಸ್ ಪಡೆದಿದ್ದ ಮತಗಳ ಪಾಲು ಶೇ.35.18.
ಶಿಗ್ಗಾಂವಿ ಕ್ಷೇತ್ರದಲ್ಲಿ ನೇರ ಹಣಾಹಣಿ ಏರ್ಪಡುವುದು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ.
ಈ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರು ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಲಿಂಗಾಯತರು ಬರುತ್ತಾರೆ.
ಬಿಜೆಪಿಯಿಂದ 2005ರಿಂದಲೂ ಸತತವಾಗಿ ಗೆಲ್ಲುತ್ತ ಬಂದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಘೋಷಿಸಿದೆ.
ಮುಸ್ಲಿಮ್ ಮತದಾರರನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಗೆ ಇಳಿಯುತ್ತಿದ್ದ ಕಾಂಗ್ರೆಸ್ ಈ ಸಲ ತಂತ್ರಗಾರಿಕೆ ಬದಲಿಸುವುದೇ ಎಂಬ ಕುತೂಹಲವೂ ಇದೆ. ಕ್ಷೇತ್ರದಲ್ಲಿ ಕಳೆದ 5 ಬಾರಿ ಮುಸ್ಲಿಮ್ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದರೂ ಪಕ್ಷಕ್ಕೆ ಸೋಲಾಗಿದೆ. ಹಿಂದೂ ಮತಗಳೆಲ್ಲ ಕಾಂಗ್ರೆಸ್ ವಿರುದ್ಧವಾಗಿ ಕ್ರೋಡೀಕರಣಗೊಂಡು ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತಿದೆ ಎಂಬ ಮಾತುಗಳಿವೆ.
ಸಂಡೂರು ಕ್ಷೇತ್ರ:
1985ರಲ್ಲಿ ಜನತಾ ಪಕ್ಷ, 2004ರಲ್ಲಿ ಜೆಡಿಎಸ್ ಗೆದ್ದಿದ್ದು ಬಿಟ್ಟರೆ, 1978ರಿಂದಲೂ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ.
2008ರಿಂದಲೂ ಸತತವಾಗಿ ಗೆಲುವು ಸಾಧಿಸುತ್ತ ಬಂದಿದ್ದ ಇ. ತುಕಾರಾಂ ಸಂಸದರಾದ ಹಿನ್ನೆಲೆಯಲ್ಲಿ ತೆರವಾಗಿದ್ದು, ಇದೇ ಮೊದಲ ಸಲ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
2023ರ ಚುನಾವಣೆಯಲ್ಲಿ ಇ. ತುಕಾರಾಂ ಪಡೆದಿದ್ದ ಮತಗಳು 85,223. ಬಿಜೆಪಿಯ ಶಿಲ್ಪಾ ರಾಘವೇಂದ್ರ ಪಡೆದಿದ್ದ ಮತಗಳು 49,701.
ಕಾಂಗ್ರೆಸ್ ಪಡೆದಿದ್ದ ಮತಗಳ ಪಾಲು ಶೇ.49.31, ಬಿಜೆಪಿ ಪಡೆದಿದ್ದ ಮತಗಳ ಪಾಲು ಶೇ.28.76.
ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಏರ್ಪಡುವುದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ.
ಸಂಡೂರು ಕ್ಷೇತ್ರದಲ್ಲಿ ಅಹಿಂದ ಮತದಾರರೇ ಹೆಚ್ಚಿದ್ದಾರೆ. ಈಗ ಸಂಡೂರು ಕ್ಷೇತ್ರದಿಂದ ಬಂಗಾರು ಹನುಮಂತು ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆಕಾಂಕ್ಷಿಯಾಗಿದ್ದ ಶ್ರೀರಾಮುಲು ಅವರಿಗೆ ನಿರಾಸೆಯಾಗಿದೆ.
ಕುಟುಂಬ ರಾಜಕಾರಣಕ್ಕೆ ಮಣೆ:
ಯಾವುದೇ ಚುನಾವಣೆಯ ವೇಳೆ ಸ್ಥಳೀಯ ನಾಯಕರು ಅಥವಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಸಿಗಬೇಕು ಎಂಬ ವಾದ ಇದ್ದೇ ಇರುತ್ತದೆ. ಆದರೆ ಬಹಳ ಸಲ ಅದನ್ನು ಮೀರಿ ಕುಟುಂಬ ರಾಜಕಾರಣವೇ ಪ್ರಾಬಲ್ಯ ಸ್ಥಾಪಿಸುತ್ತದೆ. ಈಗ ಉಪ ಚುನಾವಣೆ ಕಣದಲ್ಲೂ ಅದಕ್ಕೇ ಆದ್ಯತೆ ಸಿಗುತ್ತಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಸದರಾಗಿ ಆಯ್ಕೆಯಾಗಿರುವುದರಿಂದ ತೆರವಾದ ಹಿನ್ನೆಲೆಯಲ್ಲಿ ಅವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಮಗನಿಗೆ ಟಿಕೆಟ್ ಕೊಡಿಸುವ ಇರಾದೆಯಿಲ್ಲ ಎಂದು ಬೊಮ್ಮಾಯಿ ಹೇಳುತ್ತ ಬಂದಿದ್ದರೂ, ಒಳಗುಟ್ಟು ಬೇರೆಯೇ ಇತ್ತು ಎಂಬುದು ಬಯಲಾಗಿದೆ.
ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ನಾಯಕರ ಸಂಬಂಧಿಕರನ್ನೇ ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಹೆಸರು ಮಂಚೂಣಿಯಲ್ಲಿದೆ. ಇನ್ನು ಬಳ್ಳಾರಿಯ ಹಾಲಿ ಸಂಸದ ಇ. ತುಕಾರಾಂ ಅವರಿಂದ ತೆರವಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿಯೂ ತುಕಾರಾಂ ಅವರ ಕುಟುಂಬದವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ವೇಳೆಯೇ ತುಕಾರಾಂ ಅವರು ಪುತ್ರಿ ಸೌಪರ್ಣಿಕಾ ಅವರಿಗೆ ಟಿಕೆಟ್ ನೀಡುವಂತೆ ಕೇಳಿದ್ದರು. ಉಪ ಚುನಾವಣೆಯಲ್ಲಿ ಟಿಕೆಟ್ ಕೊಡುವುದಾಗಿ ಹೇಳಿ, ಲೋಕಸಭೆ ಕಣಕ್ಕಿಳಿಯಲು ಪಕ್ಷ ಅವರ ಮನವೊಲಿಸಿತ್ತು. ಹೀಗಾಗಿ, ತುಕಾರಾಂ ಅವರ ಪುತ್ರಿ ಸೌಪರ್ಣಿಕಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.
ಕುಟುಂಬ ರಾಜಕಾರಣ ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವೇನೂ ಅಲ್ಲ. ಚನ್ನಪಟ್ಟಣ ಚುನಾವಣೆ ವಿಚಾರದಲ್ಲಿ ಜೆಡಿಎಸ್ ಕೂಡ ಕುಟುಂಬ ರಾಜಕಾರಣಕ್ಕೇ ಮೊರೆಹೋಗುವಂತೆ ಕಾಣಿಸುತ್ತಿದೆ. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.