ಭಾರತದಲ್ಲಿ ನಡೆದ ವಿಮಾನ ಅಪಹರಣಗಳೆಷ್ಟು?
ಕಂದಹಾರ್ ವಿಮಾನ ಅಪಹರಣ ಘಟನೆಯನ್ನು ವಸ್ತುವಾಗಿಸಿಕೊಂಡಿರುವ ವೆಬ್ ಸೀರೀಸ್ ‘Iಅ 814 - ದಿ ಕಂದಹಾರ್ ಹೈಜಾಕ್’ ಸುತ್ತ ವಿವಾದವೆದ್ದಿದೆ. ವೆಬ್ ಸೀರೀಸ್‌ನಲ್ಲಿ ಅಪಹರಣಕಾರರು ಹಿಂದೂಗಳಾಗಿದ್ದರು ಎಂದು ಬಿಂಬಿಸುವ ಯತ್ನ ನಡೆದಿದೆ ಎಂದು ಬಿಜೆಪಿ ಐಟಿ ಸೆಲ್ ಆರೋಪಿಸಿದ್ದೇ ವಿವಾದಕ್ಕೆ ಕಾರಣ. ಆದರೆ ಯಾವ ಹೆಸರುಗಳನ್ನು ನೆಟ್‌ಫ್ಲಿಕ್ಸ್ ಬದಲಿಸಿದೆ ಎಂದು ಐಟಿ ಸೆಲ್ ಬೊಬ್ಬೆ ಹಾಕಿತ್ತೋ ಅವು ಆ ಅಪಹರಣಕಾರರೇ ಸ್ವತಃ ಇಟ್ಟುಕೊಂಡಿದ್ದ ಹೆಸರುಗಳೇ ಆಗಿದ್ದವು. ಆಗಿನ ಬಿಜೆಪಿ ಸರಕಾರವೇ ಅವನ್ನು ತನ್ನ ದಾಖಲೆಗಳಲ್ಲಿ ಉಲ್ಲೇಖಿಸಿತ್ತು ಎಂಬ ಸತ್ಯ ಮತ್ತೊಮ್ಮೆ ದೇಶದ ಮುಂದೆ ಬಂತು. ಆ ವೆಬ್ ಸೀರೀಸ್‌ಗೆ ಆಧಾರವಾದದ್ದು ಕಂದಹಾರ್ ವಿಮಾನ ಅಪಹರಣ. ದೇಶದ ಇತರ ವಿಮಾನ ಅಪಹರಣಗಳ ಬಗ್ಗೆ ಒಂದು ನೋಟ ಇಲ್ಲಿದೆ.
ಅದು, 1999ರ ಡಿಸೆಂಬರ್ 24. ದೇಶವನ್ನೇ ತಳಮಳದಲ್ಲಿ ಬೀಳಿಸಿದ್ದ ಘಟನೆಯೊಂದು ನಡೆದುಬಿಟ್ಟಿತ್ತು. ಕಠ್ಮಂಡು ವಿನಿಂದ ಟೇಕಾಫ್ ಆಗಿ ದಿಲ್ಲಿಯತ್ತ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ 814 ಅನ್ನು ಪಾಕಿಸ್ತಾನ ಮೂಲದ ಹರ್ಕತ್ ಉಲ್ ಮುಜಾಹಿದೀನ್ ಭಯೋತ್ಪಾದಕ ತಂಡ ಅಪಹರಿಸಿತ್ತು. ವಿಮಾನದಲ್ಲಿ 191 ಜನ ಪ್ರಯಾಣಿಕರಿದ್ದರು. ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಒಳಗಿದ್ದ ಅಪಹರಣಕಾರರು ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ನಂತರ ಅದು ಅಮೃತಸರ, ಲಾಹೋರ್, ದುಬೈನಲ್ಲಿ ಇಳಿದು, ಅಂತಿಮವಾಗಿ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿದಿತ್ತು.
ಅಪಹರಣಕಾರರ ವಶದಲ್ಲಿದ್ದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಭಾರತದ ಜೈಲಿನಲ್ಲಿದ್ದ ಮಸೂದ್ ಅಝರ್, ಅಹ್ಮದ್ ಉಮರ್ ಸಯೀದ್ ಶೇಕ್ ಹಾಗೂ ಮುಷ್ತಾಕ್ ಅಹ್ಮದ್ ಝರ್ಗರ್ ಎಂಬ ಮೂವರು ಉಗ್ರರನ್ನು ಬಿಡುಗಡೆ ಮಾಡುವುದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅನಿವಾರ್ಯವಾಯಿತು. ದೇಶದ ನಾಗರಿಕರು ಏಳು ದಿನಗಳ ಕಾಲ ವಿಮಾನದ ಒಳಗೆ ಭಯೋತ್ಪಾದಕರ ಒತ್ತೆಯಾಳುಗಳಾಗಿ, ಜೀವ ಕೈಯಲ್ಲಿ ಹಿಡಿದುಕೊಂಡವರಂತೆ ಕಳೆದಿದ್ದರು. 45 ನಿಮಿಷಗಳ ಕಾಲ ವಿಮಾನ ಭಾರತೀಯ ನೆಲದಲ್ಲಿದ್ದರೂ ಅದನ್ನು ಸಮರ್ಥ ನಿರ್ಧಾರದ ಕೊರತೆಯಿಂದಾಗಿ ಪಾಕಿಸ್ತಾನಕ್ಕೆ ಹೋಗುವುದನ್ನು ತಡೆಯಲು ಅವತ್ತು ಸರಕಾರ ವಿಫಲವಾಗಿತ್ತು. ದಿಲ್ಲಿ ಪೊಲೀಸರು ಪಂಜಾಬ್ ಪೊಲೀಸರಿಂದ ತಪ್ಪಾಗಿದೆ ಎನ್ನುತ್ತಲೂ, ಪಂಜಾಬ್ ಪೊಲೀಸರು ದಿಲ್ಲಿ ಪೊಲೀಸರಿಂದ ತಪ್ಪಾಗಿದೆ ಎಂತಲೂ ಆರೋಪಿಸುತ್ತ ಕೂತಿದ್ದರು. ಕೇಂದ್ರ ಸರಕಾರ ಮಾತ್ರ ಯಾವ ತೀರ್ಮಾನವನ್ನೂ ಹೇಳಲಾರದೇ ಹೋಗಿತ್ತು ಎಂದು ಆಗ ಖಂW ಮುಖ್ಯಸ್ಥರಾಗಿದ್ದ ಎ.ಎಸ್. ದುಲತ್ ಹೇಳುತ್ತಾರೆ.
2000 ಜನವರಿ 6ರಂದು ಕೇಂದ್ರ ಸರಕಾರ ಅಪಹರಣಕಾರರ ಹೆಸರು ಬಿಡುಗಡೆ ಮಾಡಿತ್ತು. ಇಬ್ರಾಹೀಂ ಅತ್ತರ್, ಶಹೀದ್ ಅಖ್ತರ್ ಸಯೀದ್, ಸುನ್ನಿ ಅಹ್ಮದ್ ಖ್ವಾಜಿ, ಮಿಸ್ತ್ರಿ ಜಹೂರ್ ಇಬ್ರಾಹೀಂ ಹಾಗೂ ಶಾಕಿರ್ ಐಸಿ ವಿಮಾನ ಅಪಹರಿಸಿದವರಾಗಿದ್ದರು. ಆದರೆ ಆ ಅಪಹರಣಕಾರರು ತಮ್ಮನ್ನು ಬೇರೆ ಹೆಸರುಗಳಲ್ಲಿ ಸಂಬೋಧಿಸಿಕೊಳ್ಳುತ್ತಿದ್ದರು ಎಂಬುದನ್ನೂ ಹೇಳಿದ್ದ ಗೃಹ ಇಲಾಖೆ ಆ ಹೆಸರುಗಳನ್ನೂ ಉಲ್ಲೇಖಿಸಿತ್ತು. ಅವು ಕ್ರಮವಾಗಿ, ಚೀಫ್, ಡಾಕ್ಟರ್, ಬರ್ಗರ್, ಭೋಲಾ ಹಾಗೂ ಶಂಕರ್ ಎಂದಿದ್ದವು.
ಕಂದಹಾರ್ ವಿಮಾನ ಅಪಹರಣದ ಬಗ್ಗೆ ‘Iಅ 814 - ದಿ ಕಂದಹಾರ್ ಹೈಜಾಕ್’ ಎಂಬ ವೆಬ್ ಸೀರೀಸ್ ಮಾಡಿದ್ದ ನೆಟ್‌ಫ್ಲಿಕ್ಸ್, ಅವತ್ತು ಗೃಹ ಇಲಾಖೆ ಬಿಡುಗಡೆ ಮಾಡಿದ್ದ ಅಪಹರಣಕಾರರ ಹೆಸರಿನ ಜೊತೆಗಿದ್ದ ಅವರ ಸಂಕೇತ ರೂಪದ ಹೆಸರುಗಳನ್ನೇ ವೆಬ್ ಸೀರೀಸ್‌ನಲ್ಲಿ ಬಳಸಿತ್ತು. ಇದನ್ನೇ ಈಗ ಬಿಜೆಪಿಯ ಐಟಿ ಸೆಲ್ ವಿವಾದದ ವಿಷಯವನ್ನಾಗಿಸಿದ್ದು. ಅಪಹರಣಕಾರರ ಹೆಸರನ್ನು ಭೋಲಾ ಮತ್ತು ಶಂಕರ್ ಎಂದು ಬದಲಾಯಿಸಲಾಗಿದೆ ಎಂದು ಬೊಬ್ಬೆ ಹೊಡೆದದ್ದು. ಆದರೆ, ಆ ಹೆಸರುಗಳು ಅವತ್ತು ಆ ಅಪಹರಣಕಾರರು ತಮಗೆ ತಾವೇ ಇಟ್ಟುಕೊಂಡಿದ್ದ ಹೆಸರುಗಳಾಗಿದ್ದವು ಮತ್ತು ಅವತ್ತಿನ ಬಿಜೆಪಿ ಸರಕಾರವೇ ಅದನ್ನು ತನ್ನ ದಾಖಲೆಗಳಲ್ಲಿ ಹೇಳಿತ್ತು ಎಂಬುದು ಬಿಜೆಪಿ ಐಟಿ ಸೆಲ್‌ಗೆ ಗೊತ್ತಿರಲಿಲ್ಲವೆ? ಗೊತ್ತಿದ್ದರೂ, ಇದನ್ನೊಂದು ವಿವಾದವಾಗಿಸಲು ಸತ್ಯವನ್ನು ಮರೆಮಾಚಲು ನೋಡಲಾಯಿತು.
ಅಂತೂ, ವೆಬ್ ಸರಣಿಯ ತಯಾರಕರೇ ಉದ್ದೇಶಪೂರ್ವಕವಾಗಿ ಅಪಹರಣಕಾರರ ಹೆಸರನ್ನು ಭೋಲಾ ಮತ್ತು ಶಂಕರ್ ಎಂದು ಬದಲಾಯಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಗುಲ್ಲೆಬ್ಬಿಸಿದ್ದೂ ಆಯಿತು, ಅದನ್ನು ಆಧರಿಸಿ ಪ್ರಸಾರ ಸಚಿವಾಲಯ ನೆಟ್‌ಫ್ಲಿಕ್ಸ್‌ಗೆ ನೋಟಿಸ್ ಜಾರಿ ಮಾಡಿದ್ದೂ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ನೆಟ್‌ಫ್ಲಿಕ್ಸ್ ಸರಣಿ ಆರಂಭದಲ್ಲಿ ಬರುವ ಡಿಸ್ಕ್ಲೇಮರ್‌ನಲ್ಲಿ, ಅಪಹರಣಕಾರರ ಹೆಸರು ಮತ್ತು ಅವರು ಇಟ್ಟುಕೊಂಡಿದ್ದ ಸಂಕೇತ ರೂಪದ ಹೆಸರುಗಳೆರಡನ್ನೂ ಪ್ರಕಟಿಸುವುದಾಗಿ ಹೇಳಿತು. ಹಿಂದೂ-ಮುಸ್ಲಿಮ್ ಎಂದು ವಿವಾದವೆಬ್ಬಿಸುವ ಬಿಜೆಪಿ ಐಟಿ ಸೆಲ್ ಪ್ಲ್ಯಾನ್ ಠುಸ್ ಆಯಿತು.
ಈ ವಿವಾದದ ಬಳಿಕ ವಿಮಾನ ಅಪಹರಣದ ಘಟನೆಗಳು ಕೂಡ ಸರಣಿಯಂತೆ ನೆನಪಿನಲ್ಲಿ ಮೂಡುತ್ತಿವೆ.
ಭಾರತದ ಅತಿ ದೊಡ್ಡ ವಿಮಾನ ಅಪಹರಣ ಪ್ರಕರಣಗಳು ಯಾವುವು ಎಂಬುದನ್ನು ಒಮ್ಮೆ ಗಮನಿಸೋಣ.
ಭಾರತದ ಮೊದಲ ವಿಮಾನ ಹೈಜಾಕ್ ಪ್ರಕರಣ ಎಂದು ದಾಖಲಾಗಿರುವುದು 1955ರ ಜುಲೈ 4ರಂದು ನಡೆದ ವಿಮಾನ ಅಪಹರಣ. ಶ್ರೀನಗರ-ಜಮ್ಮು ವಿಮಾನವನ್ನು ಒಬ್ಬಂಟಿ ಗನ್ ಮ್ಯಾನ್ ಅಪಹರಿಸಿದ್ದ. ಆದರೆ ಅದನ್ನು ತಡೆಯಲಾಗಿತ್ತು.
1970ರ ದಶಕದಲ್ಲಿ ನಡೆದ
ವಿಮಾನ ಅಪಹರಣಗಳು
1971ರ ಜನವರಿ 30
ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್‌ಗೆ (ಜೆಕೆಎಲ್‌ಎಫ್) ಸೇರಿದ್ದವರು ಹೈಜಾಕ್ ಮಾಡಿದ್ದರು. ಅವರು ಅದನ್ನು ಲಾಹೋರ್‌ಗೆ ಕೊಂಡೊಯ್ದರು. ಆಗ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಝುಲ್ಫಿಕರ್ ಅಲಿ ಭುಟ್ಟೋ ಲಾಹೋರ್‌ಗೆ ಧಾವಿಸಿ, ಫೆಬ್ರವರಿ 1ರಂದು ಅಪಹರಣಕಾರರನ್ನು ಕಂಡು, ಪ್ರಯಾಣಿಕರು ಮತ್ತು ಸಿಬ್ಬಂದಿಯ ಬಿಡುಗಡೆಗೆ ಮನವೊಲಿಸಿದರು. ಆನಂತರ ಅವರೆಲ್ಲರನ್ನೂ ರಸ್ತೆ ಮೂಲಕ ಅಮೃತಸರಕ್ಕೆ ಕಳಿಸಲಾಯಿತು. ಅಪಹರಣಕಾರರು ಫೆಬ್ರವರಿ 2ರಂದು ವಿಮಾನವನ್ನು ಸುಟ್ಟುಹಾಕಿದ್ದರು.
1976ರ ಸೆಪ್ಟಂಬರ್ 10
ಇಂಡಿಯನ್ ಏರ್‌ಲೈನ್ಸ್ ವಿಮಾನ ಬೋಯಿಂಗ್ 737 ಅನ್ನು ಕಾಶ್ಮೀರದ 6 ಭಯೋತ್ಪಾದಕರ ಗುಂಪು ದಿಲ್ಲಿಯ ಪಾಲಂ ವಿಮಾನ ನಿಲ್ದಾಣದಿಂದ ಹೈಜಾಕ್ ಮಾಡಿತ್ತು. ದಿಲ್ಲಿಯಿಂದ ಮುಂಬೈಗೆ ಹೊರಡಬೇಕಿದ್ದ ವಿಮಾನವನ್ನು ಮೊದಲು ಲಿಬಿಯಾಕ್ಕೆ ಹಾರಿಸಲು ಆದೇಶಿಸಲಾಯಿತು. ಆದರೆ ಅಲ್ಲಿಗೆ ಮುಟ್ಟಲು ಸಾಕಷ್ಟು ಇಂಧನವಿಲ್ಲ ಎಂದು ತಿಳಿದ ನಂತರ, ಪಾಕಿಸ್ತಾನದ ಕರಾಚಿಗೆ ಹಾರಿಸುವಂತೆ ಹೇಳಲಾಯಿತು. ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಸಲು ಮತ್ತು ಇಂಧನ ತುಂಬಲು ಅನುಮತಿ ಪಡೆಯಲಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಮಾತುಕತೆ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಪಾಕಿಸ್ತಾನ ನೆರವು ನೀಡಿತು. ಉಪಾಹಾರದ ವೇಳೆಗೆ ತಂತ್ರ ರೂಪಿಸಿ ಅಪಹರಣಕಾರರನ್ನು ಬಂಧಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಮರುದಿನ ಭಾರತಕ್ಕೆ ಕರೆತರಲಾಯಿತು. 83 ಪ್ರಯಾಣಿಕರೊಂದಿಗೆ ವಿಮಾನವನ್ನು ಭಾರತಕ್ಕೆ ಕಳುಹಿಸಲಾಯಿತು. ನಂತರ ಪಾಕಿಸ್ತಾನದಲ್ಲಿ ಸಾಕ್ಷ್ಯದ ಕೊರತೆಯಿಂದಾಗಿ ಬಂಧಿತ ಉಗ್ರರನ್ನು ಬಿಡುಗಡೆ ಮಾಡಲಾಯಿತು.
1978ರ ಡಿಸೆಂಬರ್ 20
ಕೋಲ್ಕತಾದಿಂದ ದಿಲ್ಲಿಯತ್ತ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ Iಅ- 410 ಅನ್ನು ದಿಲ್ಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿಮಿಷಗಳ ಮೊದಲು ಹೈಜಾಕ್ ಮಾಡಲಾಗಿತ್ತು. ಭೋಲಾನಾಥ್ ಪಾಂಡೆ ಮತ್ತು ದೇವೇಂದ್ರನಾಥ್ ಪಾಂಡೆ ಎಂಬವರು ಆಟಿಕೆ ಬಂದೂಕಿನ ಮೂಲಕ ಬೆದರಿಸಿ ಈ ಅಪಹರಣ ನಡೆಸಿದ್ದರು. ಇಬ್ಬರೂ ಯುವ ಕಾಂಗ್ರೆಸ್ ಸದಸ್ಯರಾಗಿದ್ದರು ಎಂದು ವದಂತಿಗಳಿದ್ದವು. ಆಗಿನ ವಿರೋಧ ಪಕ್ಷದ ನಾಯಕಿ ಇಂದಿರಾ ಗಾಂಧಿಯವರನ್ನು ಜನತಾ ಪಕ್ಷದ ಸರಕಾರ ಜೈಲಿಗೆ ಹಾಕಿದ್ದನ್ನು ಪ್ರತಿಭಟಿಸಿ ಈ ಅಪಹರಣ ನಡೆದಿತ್ತು. ವಿಮಾನವನ್ನು ನೇಪಾಳಕ್ಕೆ ಮತ್ತು ನಂತರ ಬಾಂಗ್ಲಾದೇಶಕ್ಕೆ ಹಾರಿಸಲು ಅಪಹರಣಕಾರರು ಒತ್ತಾಯಿಸಿದ್ದರೂ, ಇಂಧನದ ಕೊರತೆ ಕಾರಣವೊಡ್ಡಿ ತಿರಸ್ಕರಿಸಲಾಗಿತ್ತು. ಕಡೆಗೆ ವಿಮಾನವನ್ನು ವಾರಣಾಸಿಯಲ್ಲಿ ಇಳಿಸಲಾಯಿತು. ಸಂಧಾನಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹೋದರು. ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಯಿತು. ಮಾಧ್ಯಮಗಳ ಸಮಕ್ಷಮದಲ್ಲೇ ಅಪಹರಣಕಾರರು ಶರಣಾದದ್ದೂ ಆಗಿತ್ತು.
1980ರ ದಶಕದಲ್ಲಿನ ಅಪಹರಣಗಳು
1981ರ ಸೆಪ್ಟಂಬರ್ 29
ದಿಲ್ಲಿಯಿಂದ ಅಮೃತಸರಕ್ಕೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ Iಅ-423 ಅನ್ನು ಸಿಖ್ ಪ್ರತ್ಯೇಕತಾವಾದಿಗಳು ಹೈಜಾಕ್ ಮಾಡಿ ಲಾಹೋರ್‌ಗೆ ಕೊಂಡೊಯ್ದಿದ್ದರು. ಇದರ ವಿರುದ್ಧ ಪಾಕಿಸ್ತಾನ ಕಮಾಂಡೊ ಕಾರ್ಯಾಚರಣೆ ನಡೆಸಿ, ಪ್ರಯಾಣಿಕರನ್ನು ರಕ್ಷಿಸಿತ್ತು.
1981ರ ನವೆಂಬರ್ 25
65 ಪ್ರಯಾಣಿಕರು ಮತ್ತು 13 ಸಿಬ್ಬಂದಿಯೊಂದಿಗೆ ಜಾಂಬಿಯಾದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಬೋಯಿಂಗ್ 707 ಅನ್ನು ಮಾಹೆಯಲ್ಲಿ ಇಂಧನ ತುಂಬಿಸಲು ಇಳಿಸಿದಾಗ ಹೈಜಾಕ್ ಮಾಡಲಾಗಿತ್ತು. 43 ಶಸ್ತ್ರಧಾರಿಗಳ ತಂಡ ವಿಮಾನವನ್ನು ಡರ್ಬನ್‌ಗೆ ಕೊಂಡೊಯ್ಯುವಂತೆ ಕೇಳಿತು. ಸುದೀರ್ಘ ಮಾತುಕತೆಗಳ ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರ ದುಃಸ್ವಪ್ನ ಕೊನೆಗೊಂಡಿತ್ತು.
1982ರ ಆಗಸ್ಟ್ 4
ದಿಲ್ಲಿ-ಶ್ರೀನಗರ ಮಾರ್ಗದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಗುರುಬಕ್ಷ್ ಸಿಂಗ್ ಎಂದು ಗುರುತಿಸಲಾದ ಸಿಖ್ ಉಗ್ರಗಾಮಿಯೊಬ್ಬ ನಕಲಿ ಬಾಂಬ್ ಸಹಾಯದಿಂದ ಹೈಜಾಕ್ ಮಾಡಿದ್ದ. ಪಾಕಿಸ್ತಾನದ ಲಾಹೋರ್‌ನಲ್ಲಿ ಇಳಿಯಲು ಅನುಮತಿ ನಿರಾಕರಿಸಿದ ನಂತರ ವಿಮಾನ ಅಮೃತಸರದಲ್ಲಿ ಇಳಿಯಿತು. ನಂತರ ಅಪಹರಣಕಾರ, ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಅಧ್ಯಕ್ಷ ಹರ್ಚಂದ್ ಸಿಂಗ್ ಲೊಂಗೊವಾಲ್ ಮತ್ತು ನಂತರ ದಮ್ದಾಮಿ ತಕ್ಸಲ್ ಮುಖ್ಯಸ್ಥ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಸಮ್ಮುಖದಲ್ಲಿ ಮಾತ್ರವೇ ಬೇಡಿಕೆ ಇಡುವುದಾಗಿ ಹೇಳಿದ. ಆದರೆ ನಂತರ ಎಸ್‌ಎಡಿ ಮುಂದೆ ಶರಣಾಗಿದ್ದ. 70 ವಿದೇಶಿಯರೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿತ್ತು.
1982ರ ಆಗಸ್ಟ್ 20
ಪಿಸ್ತೂಲ್ ಮತ್ತು ಹ್ಯಾಂಡ್ ಗ್ರೆನೇಡ್ ಹೊಂದಿದ್ದ ಸಿಖ್ ಉಗ್ರಗಾಮಿ 69 ಜನರನ್ನು ಹೊತ್ತು ಜೋಧ್‌ಪುರದಿಂದ ಹೊಸದಿಲ್ಲಿಗೆ ಹೊರಟಿದ್ದ ಬೋಯಿಂಗ್ ವಿಮಾನ 737 ಅನ್ನು ಹೈಜಾಕ್ ಮಾಡಿದ್ದ. ಅಮೃತಸರದ ಮಂಜಿತ್ ಸಿಂಗ್ ಎಂದು ಗುರುತಿಸಲಾಗಿದ್ದ ಅಪಹರಣಕಾರ ವಿಮಾನವನ್ನು ಲಾಹೋರ್‌ಗೆ ಕೊಂಡೊಯ್ಯಲು ಒತ್ತಾಯಿಸಿದ್ದ. ಆದರೆ ಪಾಕಿಸ್ತಾನಿ ಸರಕಾರ ಇಳಿಯಲು ಅನುಮತಿ ನಿರಾಕರಿಸಿತ್ತು. ವಿಮಾನ ಲಾಹೋರ್ ವಿಮಾನ ನಿಲ್ದಾಣದ ಮೇಲೆ 42ಕ್ಕೂ ಹೆಚ್ಚು ಬಾರಿ ಸುತ್ತು ಹಾಕಿತ್ತು. ಇದರಿಂದಾಗಿ ಇಂಧನದ ಕೊರತೆಯುಂಟಾಗಿ, ಕಡೆಗೆ ಅಮೃತಸರದಲ್ಲಿ ವಿಮಾನ ಇಳಿಸ ಲಾಯಿತು. ಮಂಜಿತ್ ಬೇಡಿಕೆಗಳಲ್ಲಿ, ಪ್ರಕಾಶ್ ಸಿಂಗ್ ಬಾದಲ್‌ಗೆ ಅವರು ಹೊಂದಿದ್ದ ಸಿಎಂ ಹುದ್ದೆಯೂ ಸೇರಿ ಪಂಜಾಬ್ ಅಧಿಕಾರವನ್ನು ಅಕಾಲಿದಳಕ್ಕೆ ವರ್ಗಾಯಿಸಬೇಕೆಂಬುದೂ ಸೇರಿತ್ತು. ಅಂತಿಮವಾಗಿ ಆತನನ್ನು ಬಂಧಿಸಲಾಯಿತು ಮತ್ತು ಗುಂಡಿಕ್ಕಿ ಕೊಲ್ಲಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಪಂಜಾಬ್ ಪೊಲೀಸರು ಮತ್ತು ಕಮಾಂಡೋಗಳು ಯಶಸ್ವಿಯಾಗಿ ರಕ್ಷಿಸಿದರು. ಜೇಮ್ಸ್ ಬಾಂಡ್ ಚಿತ್ರ ‘ಆಕ್ಟೋಪಸಿ’ಯಲ್ಲಿ ಕೆಲಸ ಮಾಡುತ್ತಿದ್ದ ಪ್ರೊಡಕ್ಷನ್ ಡಿಸೈನರ್ ಪೀಟರ್ ಲ್ಯಾಮಂಟ್ ಕೂಡ ಪ್ರಯಾಣಿಕರಲ್ಲಿ ಒಬ್ಬನಾಗಿದ್ದ.
1984 ಜುಲೈ 5
254 ಪ್ರಯಾಣಿಕರು ಮತ್ತು ಹತ್ತು ಮಂದಿ ಸಿಬ್ಬಂದಿಯನ್ನು ಹೊತ್ತು ಶ್ರೀನಗರದಿಂದ ಹೊಸದಿಲ್ಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ಜೆಟ್ Iಅ 405 ಅನ್ನು ಹೈಜಾಕ್ ಮಾಡಲಾಗಿತ್ತು ಮತ್ತು ಪಾಕಿಸ್ತಾನದ ಲಾಹೋರ್‌ನಲ್ಲಿ ಬಲವಂತವಾಗಿ ಇಳಿಸಲಾಯಿತು. ಶಸ್ತ್ರಸಜ್ಜಿತರಾಗಿದ್ದ ಅಪಹರಣಕಾರರು ಕಡೆಗೆ ಪಾಕಿಸ್ತಾನಿ ಅಧಿಕಾರಿಗಳ ಮುಂದೆ ಶರಣಾಗತರಾದರು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ 17 ಗಂಟೆಗಳ ಕಾಲ ಈ ಅಗ್ನಿಪರೀಕ್ಷೆ ಎದುರಿಸಿದ್ದರು.
1984 ಆಗಸ್ಟ್ 24
ಇಂಡಿಯನ್ ಏರ್‌ಲೈನ್ಸ್‌ನ ಜೆಟ್‌ಲೈನರ್ Iಅ - 421 ಅನ್ನು ದಿಲ್ಲಿಯಿಂದ ಶ್ರೀನಗರಕ್ಕೆ 100 ಪ್ರಯಾಣಿಕರನ್ನು ಹೊತ್ತು ಹೊರಟಿದ್ದಾಗ ಆಲ್ ಇಂಡಿಯಾ ಸಿಖ್ ಸ್ಟೂಡೆಂಟ್ಸ್ ಫೆಡರೇಷನ್‌ನ 7 ಯುವಕರು ಹೈಜಾಕ್ ಮಾಡಿ ಲಾಹೋರ್ ಕಡೆ ತಿರುಗಿಸಿದ್ದರು. ಅದು ಸಿಖ್ ವಿರೋಧಿ ದಂಗೆಯ ಸುಳಿಯಲ್ಲಿ ಪಂಜಾಬ್ ಸಿಲುಕಿದ್ದ ಸಮಯವಾಗಿತ್ತು. ವಿಮಾನವನ್ನು ಲಾಹೋರ್, ಕರಾಚಿ ಮತ್ತು ಅಂತಿಮವಾಗಿ ದುಬೈಗೆ ಕೊಂಡೊಯ್ಯಲಾಯಿತು. ಅಲ್ಲಿ ಯುಎಇಯ ರಕ್ಷಣಾ ಸಚಿವರು ಪ್ರಯಾಣಿಕರ ಬಿಡುಗಡೆಗೆ ಮಾತುಕತೆ ನಡೆಸಿದರು.
1986 ಸೆಪ್ಟಂಬರ್ 5
ಮುಂಬೈಯಿಂದ ನ್ಯೂಯಾರ್ಕ್‌ಗೆ 360 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಪ್ಯಾನ್ ಆಮ್ ಫ್ಲೈಟ್ 73 ಬೋಯಿಂಗ್ 747-121 ಅನ್ನು ಕರಾಚಿಯಲ್ಲಿ ಇಳಿದ ಹೊತ್ತಲ್ಲಿ ಅಬು ನಿದಾಲ್ ಸಂಘಟನೆಯ ನಾಲ್ವರು ಶಸ್ತ್ರಸಜ್ಜಿತರ ಗುಂಪು ಹೈಜಾಕ್ ಮಾಡಿತ್ತು. ಭಾರತ, ಅಮೆರಿಕ, ಪಾಕಿಸ್ತಾನ ಮತ್ತು ಮೆಕ್ಸಿಕೊದ ಪ್ರಜೆಗಳೂ ಸೇರಿ 43 ಪ್ರಯಾಣಿಕರು ಅಪಹರಣದ ವೇಳೆ ಗಾಯಗೊಂಡರು ಅಥವಾ ಸತ್ತರು ಎಂದು ವರದಿಗಳು ದಾಖಲಿಸಿವೆ. ಎಲ್ಲಾ ಅಪಹರಣಕಾರರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಯಿತು ಮತ್ತು ಮರಣದಂಡನೆ ವಿಧಿಸಲಾಯಿತು. 2016ರ ಬಾಲಿವುಡ್ ಸಿನೆಮಾ ‘ನೀರ್ಜಾ’ ಈ ಘಟನೆಯನ್ನೇ ಆಧರಿಸಿದ್ದಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ವಿಮಾನ ಸಿಬ್ಬಂದಿ ನೀರ್ಜಾ ಭಾನೋಟ್ ಮೆರೆದ ಸಾಹಸವನ್ನು ಈ ಚಿತ್ರ ತೋರಿಸುತ್ತದೆ.
1990ರ ದಶಕದ ಅಪಹರಣಗಳು
1993 ಜನವರಿ 22
ಲಕ್ನೊ ವಿಮಾನ ನಿಲ್ದಾಣದಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ 810 ಅನ್ನು ಹೈಜಾಕ್ ಮಾಡಿ ಲಕ್ನೊಗೆ ಹಿಂದಿರುಗಿಸಲಾಗಿತ್ತು. ಸತೀಶ್ ಚಂದ್ರ ಪಾಂಡೆ ಎಂಬ ಅಪಹರಣಕಾರ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಬಂಧಿತರಾಗಿದ್ದ ಎಲ್ಲಾ ಕರಸೇವಕರನ್ನು ಬಿಡುಗಡೆ ಮಾಡಲು ಮತ್ತು ರಾಮ ಮಂದಿರ ನಿರ್ಮಿಸಲು ಒತ್ತಾಯಿಸಿದ್ದ. ಬಾಬರಿ ಮಸೀದಿ ಮರುನಿರ್ಮಾಣದ ಬಗ್ಗೆ ಆಗಿನ ಪ್ರಧಾನಿ ನರಸಿಂಹ ರಾವ್ ಭರವಸೆ ನೀಡಿದ್ದಕ್ಕೆ ಪ್ರತಿಭಟನೆಯಾಗಿ ಆತ ಈ ಹೈಜಾಕ್ ಮಾಡಿದ್ದಾಗಿ ಹೇಳಿಕೊಂಡಿದ್ದ. ಲಕ್ನೊದ ಆಗಿನ ಸಂಸದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆಗಿನ ಮಾತುಕತೆ ಬಳಿಕ ಅಪಹರಣಕಾರ ಶರಣಾಗಿದ್ದ. ಆತನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
1993 ಮಾರ್ಚ್ 27
ಇಂಡಿಯನ್ ಏರ್‌ಲೈನ್ಸ್ ವಿಮಾನ 439 ಅನ್ನು ದಿಲ್ಲಿಯಿಂದ ಮದ್ರಾಸ್‌ಗೆ ಹೋಗುವ ಮಾರ್ಗದಲ್ಲಿ ಅಪಹರಣಕಾರನೊಬ್ಬ ಸ್ಫೋಟಕ ಹೊಂದಿರುವುದಾಗಿ ಹೇಳಿ ಅಪಹರಿಸಿದ್ದ. ಅಪಹರಣಕಾರನನ್ನು ಹರ್ಯಾಣದ ಟ್ರಕ್ ಚಾಲಕ ಹರಿ ಸಿಂಗ್ ಎಂದು ಗುರುತಿಸಲಾಯಿತು. 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ಆ ಸಮಯದಲ್ಲಿ ಹಿಂದೂ-ಮುಸ್ಲಿಮ್ ದಂಗೆ ವಿರುದ್ಧದ ಪ್ರತಿಭಟನೆಯಾಗಿ ಈ ಅಪಹರಣ ಮಾಡಿರುವುದಾಗಿ ಆತ ಹೇಳಿದ್ದ. ಲಾಹೋರ್‌ನಲ್ಲಿ ಇಳಿಯಲು ಅನುಮತಿ ನಿರಾಕರಿಸಿದ ನಂತರ ಅಮೃತಸರದಲ್ಲಿ ವಿಮಾನ ಇಳಿಸಲು ಒತ್ತಾಯಿಸಿದ್ದ. ಮತ್ತು ಪಾಕಿಸ್ತಾನದಲ್ಲಿ ರಾಜಕೀಯ ಆಶ್ರಯ ಕೋರಿದ್ದ. ಪಾಕಿಸ್ತಾನದಲ್ಲಿ 40 ದಿನಗಳ ಆಶ್ರಯ ನೀಡಬೇಕೆಂಬ ಮತ್ತು ಪಾಕಿಸ್ತಾನಿ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ನೀಡಬೇಕೆಂಬ ಆತನ ಬೇಡಿಕೆಗಳನ್ನು ತಿರಸ್ಕರಿಸಲಾಯಿತು. ಆದರೆ, ಶರಣಾದ ನಂತರ ಅಮೃತಸರ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ನೀಡಲಾಯಿತು. ಬೆದರಿಸಲು ಆತ ಸ್ಫೋಟಕವೆಂದು ತೋರಿಸಿದ್ದ ವಸ್ತು ಹೇರ್ ಡ್ರೈಯರ್ ಆಗಿತ್ತೆಂಬುದು ಆಮೇಲೆ ಗೊತ್ತಾಗಿತ್ತು.
1993 ಎಪ್ರಿಲ್ 10
ಲಕ್ನೊದಿಂದ ದಿಲ್ಲಿಗೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ಬೋಯಿಂಗ್ ವಿಮಾನ 737-2ಎ8 ಅನ್ನು ಲಕ್ನೊದ ಸರಕಾರಿ ಕಲಾ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಹೈಜಾಕ್ ಮಾಡಿದ್ದರು. ಲಕ್ನೊದಿಂದ ಟೇಕಾಫ್ ಆದ ಕೂಡಲೇ ನಾಲ್ವರು ಯುವಕರು ವಿಮಾನವನ್ನು ಅಲ್ಲಿಗೇ ಹಿಂದಿರುಗಿಸಲು ಒತ್ತಾಯಿಸಿದರು. ಅವರು ತಮ್ಮ ಬಳಿಯಿರುವ ಬಾಟಲಿಗಳಲ್ಲಿ ಸ್ಫೋಟಕ ದ್ರವವಿದೆ ಎಂದು ಹೇಳಿಕೊಳ್ಳುತ್ತಿದ್ದರು. ಸಣ್ಣ ಬೆಂಕಿಯ ಸಾಮರ್ಥ್ಯವಿರುವ ದಹನಕಾರಿ ದ್ರವ ಅದೆಂಬುದು ಆನಂತರ ದೃಢವಾಗಿತ್ತು. ಕಾಲೇಜಿನ ಕೋರ್ಸ್‌ಗಳನ್ನು ಬದಲಾಯಿಸಬೇಕು, ಪ್ರಾಧ್ಯಾಪಕರ ಪ್ರಶಸ್ತಿ ರದ್ದುಗೊಳಿಸಬೇಕು ಮತ್ತು ಪರೀಕ್ಷೆಗಳನ್ನು ಮುಂದೂಡಬೇಕು ಎಂಬುದು ಆ ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು. ಉತ್ತರ ಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ನೀಡದಿದ್ದರೆ ವಿಮಾನವನ್ನು ಸ್ಫೋಟಿಸುತ್ತೇವೆ ಎಂದು ಬೆದರಿಸಿದರು. ಪ್ರಯಾಣಿಕರಲ್ಲಿ ಒಬ್ಬನಾಗಿದ್ದ ಇಸ್ರೇಲಿ ಪತ್ರಕರ್ತ ಟಾಮ್ ಸೆಗೆವ್, ‘‘ಇಡೀ ಘಟನೆ ಒಂದು ಆಟದಂತಿತ್ತು’’ ಎಂದು ಆನಂತರ ವಿವರಿಸಿದ್ದರು. ಪ್ರಯಾಣಿಕರು ಅಪಹರಣಕಾರರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಕಂಟ್ರೋಲ್ ಟವರ್ ಮೂಲಕ ಅಧಿಕಾರಿಗಳೊಂದಿಗೆ ಸಂಧಾನ ನಡೆಯುತ್ತಿದ್ದಾಗ 3 ಗಂಟೆಗಳ ಕಾಲ ವಿಮಾನ ಸುತ್ತು ಹೊಡೆಯುತ್ತಲೇ ಇತ್ತು. ವಿಮಾನ ಲ್ಯಾಂಡ್ ಆದ ನಂತರ ಪ್ರಯಾಣಿಕರು ಅಪಹರಣಕಾರರನ್ನು ಹಿಡಿದು ಥಳಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಎಲ್ಲಾ 52 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸುರಕ್ಷಿತವಾಗಿದ್ದರು. ಏಟು ತಿಂದಿದ್ದ ಅಪಹರಣಕಾರರನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದು 1993ರಲ್ಲಿನ ವಿಮಾನ ಅಪಹರಣದ 3ನೇ ಪ್ರಯತ್ನವಾಗಿತ್ತು.
1993 ಎಪ್ರಿಲ್ 24
ದಿಲ್ಲಿಯಿಂದ ಜಮ್ಮು ಮೂಲಕ ಶ್ರೀನಗರಕ್ಕೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಲಾಯಿತು. ಅಪಹರಣಕಾರ ವಿಮಾನವನ್ನು ಲಾಹೋರ್‌ಗೆ ತೆಗೆದುಕೊಂಡು ಹೋಗಲು ಒತ್ತಾಯಿಸಿದ್ದ. ಆದರೆ ಪಾಕಿಸ್ತಾನದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ವಿಮಾನ ಅಮೃತಸರದಲ್ಲಿ ಇಳಿಯಿತು. ಅಲ್ಲಿ ಅಪಹರಣಕಾರನನ್ನು ಕೊಲ್ಲಲಾಯಿತು ಮತ್ತು ಪ್ರಯಾಣಿಕರನ್ನು ಬಿಡುಗಡೆ ಮಾಡಲಾಯಿತು.