ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ ‘ಇಂಡಿಯಾ’ ಒಕ್ಕೂಟಕ್ಕಿರುವ ಸವಾಲುಗಳೇನು

ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳ ಫಲಿತಾಂಶದ ನಂತರ ಈಗ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಬೇಕಿದೆ. ಮೊನ್ನೆ ಬಂದಿರುವ ಫಲಿತಾಂಶ ಆ ಎರಡೂ ರಾಜ್ಯಗಳ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವಲ್ಲಿಂದ ಶುರುವಾಗಿ ಹೇಗೆಲ್ಲ ಸಮೀಕರಣಗಳು ಬದಲಾಗಬಹುದು ಎನ್ನುವಲ್ಲಿಯವರೆಗೆ ಚರ್ಚೆಗಳು ನಡೆದಿವೆ.

Update: 2024-10-15 10:21 GMT
Editor : Thouheed | Byline : ಆರ್. ಜೀವಿ

ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗಳ ಫಲಿತಾಂಶ ಬಂದ ಮೇಲೆ ಸೋಲಿನ ಭೀತಿಯಲ್ಲಿದ್ದ ಬಿಜೆಪಿಯಲ್ಲಿ ಆತ್ಮವಿಶ್ವಾಸ ಚಿಗಿತುಕೊಂಡಿದ್ದರೆ, ಅತಿ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹರ್ಯಾಣದಲ್ಲಿ ಗೆಲ್ಲಬೇಕಿದ್ದ ಕಾಂಗ್ರೆಸ್ ಸೋತಿದೆ. ಅದೇ ವೇಳೆ ಜಮ್ಮು- ಕಾಶ್ಮೀರದಲ್ಲಿಯೂ ಅದರ ಸಾಧನೆ ಏನೇನೂ ಉತ್ತಮವಾಗಿಲ್ಲ. ಇದರೊಂದಿಗೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಅದು ಕಂಡಿದ್ದ ಗೆಲುವಿನ ಹುಮ್ಮಸ್ಸು ಕೊಂಚ ಮಸುಕಾಗುವಂತಾಗಿದೆ.

‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್‌ಗೆ ಮಿತ್ರಪಕ್ಷಗಳು ಪಾಠ ಹೇಳತೊಡಗಿವೆ. ಅವುಗಳ ಎದುರಲ್ಲಿ ಈಗ ಕಾಂಗ್ರೆಸ್ ದಿಟ್ಟತನದಿಂದ ಏನನ್ನಾದರೂ ಹೇಳಲಾರದ ಮತ್ತು ಕೇಳಲಾರದ ಸ್ಥಿತಿ ತಾತ್ಕಾಲಿಕವಾಗಿಯಾದರೂ ತಲೆದೋರಿದೆ. ಬಹುಶಃ ನವೆಂಬರ್‌ನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಈಗಿನ ಫಲಿತಾಂಶದ ಪ್ರಭಾವ ಏನಿರಬಹುದು?

1.ಬರಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದು ಕೇಳುವ ಅವಕಾಶ ಕಾಂಗ್ರೆಸ್ ಪಾಲಿಗೆ ಕಡಿಮೆಯಾಗಿದೆ. ಮಿತ್ರಪಕ್ಷಗಳ ಮಾತಿಗೆ ಮಣಿಯಬೇಕಾಗಬಹುದು.

2.ಉತ್ತರ ಪ್ರದೇಶದಲ್ಲಿನ ಉಪಚುನಾವಣೆಗಳಲ್ಲಿಯೂ ಇದೇ ಸ್ಥಿತಿ ಎದುರಾಗಿ, ಎಸ್‌ಪಿ ಎದುರು ಧೈರ್ಯದಿಂದ ಸೀಟು ಕೇಳಲು ಕಷ್ಟವಾಗಲಿದೆ.

3. ಬಿಜೆಪಿಯೆದುರು ಏಕಾಂಗಿಯಾಗಿ ಸೆಣೆಸಿ ಗೆಲ್ಲುವ ತಾಕತ್ತು ತನಗಿದೆಯೆಂದು ಸಾಬೀತು ಮಾಡುವ ಅವಕಾಶ ಕಾಂಗ್ರೆಸ್ ಕೈತಪ್ಪಿದೆ.

4. ಪಕ್ಷದೊಳಗಿನ ಕಚ್ಚಾಟಗಳು, ಗುಂಪುಗಾರಿಕೆ ಸೋಲಿನತ್ತ ನೂಕುತ್ತಿರುವುದನ್ನು ಕಾಂಗ್ರೆಸ್ ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂಬ ಭಾವನೆ ಬರುವಂತಾಗಿದೆ.

5. ಮತ್ತು ಅಂಥ ಒಡಕುಗಳನ್ನೆಲ್ಲ ಸರಿಪಡಿಸಿ ದಿಟ್ಟ ತೀರ್ಮಾನ ತೆಗೆದುಕೊಳ್ಳುವ ದೃಢತೆ ಕಾಂಗ್ರೆಸ್ ನಾಯಕತ್ವಕ್ಕೆ ಇಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.

6. ಸಾಮಾಜಿಕ ನ್ಯಾಯದ ಮಾತಾಡುವ ಕಾಂಗ್ರೆಸ್ ದಲಿತ ಮತಗಳನ್ನು ಕಳೆದುಕೊಳ್ಳುತ್ತಿರುವುದಕ್ಕೆ ಕಾರಣವಾದ ಅಂಶಗಳೇನು ಎಂಬುದರ ಕಡೆ ಅದರ ನಾಯಕರು ಗಮನ ಹರಿಸಬೇಕಿದೆ.

ಕಾಂಗ್ರೆಸ್ ಬಲ ತಗ್ಗಿದಂತಾಗಿರುವುದು ಮತ್ತು ಅದನ್ನು ಆಡಿಕೊಳ್ಳುವುದಕ್ಕೆ ಬಿಜೆಪಿಗೆ ಮತ್ತೊಂದು ಅವಕಾಶ ಸಿಕ್ಕಿರುವುದು ಮುಂಬರಲಿರುವ ಚುನಾವಣೆಯ ಫಲಿತಾಂಶದ ಮೇಲೆ ಕಿಂಚಿತ್ತಾದರೂ ಪರಿಣಾಮ ಬೀರದೇ ಇರಲಾರದು.

ಈ ಹಿನ್ನೆಲೆಯಲ್ಲಿ ಆ ಎರಡೂ ರಾಜ್ಯಗಳಲ್ಲಿನ ಸಾಧ್ಯಾಸಾಧ್ಯತೆಗಳ ಕಡೆ ಒಂದು ನೋಟ ಇಲ್ಲಿದೆ.

ಮಹಾರಾಷ್ಟ್ರ ರಾಜಕೀಯ:

ದೇಶದ 3ನೇ ಅತಿ ದೊಡ್ಡ ರಾಜ್ಯ ಮಹಾರಾಷ್ಟ್ರದಲ್ಲಿನ ರಾಜಕೀಯದಲ್ಲಿ 5 ವರ್ಷಗಳ ಹಿಂದೆ ಇದ್ದ ಸನ್ನಿವೇಶ ಪೂರ್ತಿ ಬದಲಾಗಿದೆ. ಅವತ್ತಿನ ಬಿಜೆಪಿ-ಶಿವಸೇನಾ ಮೈತ್ರಿ ಮತ್ತು ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯ ಸ್ವರೂಪ ಬದಲಾಗಿದೆ. ಶಿವಸೇನೆಯನ್ನೂ, ಎನ್‌ಸಿಪಿಯನ್ನೂ ಒಡೆದಿರುವ ಬಿಜೆಪಿ, ಹಿಂಬಾಗಿಲ ಮೂಲಕ ಅಧಿಕಾರ ರಾಜಕಾರಣ ಶುರುಮಾಡಿದ ನಂತರ ವಿಚಿತ್ರ ಅಸ್ಥಿರತೆ ಅಲ್ಲಿನ ರಾಜಕೀಯವನ್ನು ಆವರಿಸಿದೆ.

ಒಂದು ರೀತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿಯೇ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿದೆ. ಮಧ್ಯದಲ್ಲಿ ಉದ್ಧವ್ ಠಾಕ್ರೆ ಒಂದು ವರ್ಷ ಆಡಳಿತ ನಡೆಸಿದ್ದನ್ನು ಬಿಟ್ಟರೆ ಕಳೆದ ಹತ್ತು ವರ್ಷಗಳಲ್ಲಿ 9 ವರ್ಷಗಳ ಕಾಲ ಬಿಜೆಪಿಯೇ ಅಲ್ಲಿ ಅಧಿಕಾರದಲ್ಲಿದೆ. ನಿಯಂತ್ರಣವೆಲ್ಲ ದಿಲ್ಲಿಯಲ್ಲಿದ್ದು, ನೇರವಾಗಿ ಬಿಜೆಪಿ ಸರಕಾರವಲ್ಲದಿದ್ದರೂ, ಸರಕಾರದಲ್ಲಿ ಬಿಜೆಪಿ ಪಾಲುದಾರಿಕೆಯಂತೂ ಮುಂದುವರಿದಿದೆ. ಕಾಂಗ್ರೆಸ್, ಶಿವಸೇನೆ ಉದ್ಧವ್ ಠಾಕ್ರೆ ಬಣ, ಎನ್‌ಸಿಪಿ ಶರದ್ ಪವಾರ್ ಬಣ ಇರುವ ಮಹಾ ವಿಕಾಸ್ ಅಘಾಡಿ ಈ ಹಿಂದೆ ಒಂದು ವರ್ಷಕ್ಕೆ ಅಧಿಕಾರದಲ್ಲಿತ್ತು. ಆದರೆ ಶಿವಸೇನೆಯನ್ನು ಒಡೆದು, ಮಹಾವಿಕಾಸ್ ಅಘಾಡಿ ಸರಕಾರವನ್ನು ಬಿಜೆಪಿ ಬೀಳಿಸಿತು ಮತ್ತು ಶಿವಸೇನೆಯ ಏಕನಾಥ್ ಶಿಂದೆಗೆ ಮುಖ್ಯಮಂತ್ರಿ ಪಟ್ಟ ನೀಡಿತು. ಬಳಿಕ ಎನ್‌ಸಿಪಿಯನ್ನೂ ಒಡೆದು ಅಜಿತ್ ಪವಾರ್ ಅವರನ್ನು ಬುಟ್ಟಿಗೆ ಹಾಕಿಕೊಂಡಿತು. ಇಷ್ಟೆಲ್ಲ ಆದ ನಂತರದ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ಏಟನ್ನೇ ಬಿಜೆಪಿ ತಿಂದಿತು. ನೆಲೆಯನ್ನೇ ಕಳೆದುಕೊಂಡಂಥ ಸ್ಥಿತಿಯಲ್ಲಿ ಅದು ಇರುವಾಗ ಈಗ ವಿಧಾನಸಭೆ ಚುನಾವಣೆ ಬಂದಿದೆ.

ಮುಂಬೈ ರಾಜಕಾರಣ ಠಾಕ್ರೆ ಪರಿವಾರದೊಂದಿಗೆ, ಶಿವಸೇನೆಯೊಂದಿಗೆ ಸಂಬಂಧ ಹೊಂದಿದ್ದಾಗಿದೆ. ಮುಂಬೈ ಆಜೂಬಾಜೂ ಇರುವ ಕಲ್ಯಾಣ, ಥಾಣೆ, ಕೊಂಕಣ ಜಿಲ್ಲೆಗಳಲ್ಲಿ ಏಕನಾಥ್ ಶಿಂದೆ ಪ್ರಭಾವವಿದೆ. ಪಶ್ಚಿಮ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಪ್ರಭಾವಶಾಲಿಯಾಗಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನಡೆದ 2019ರ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್‌ಸಿಪಿ 54, ಕಾಂಗ್ರೆಸ್ 44, ಎಐಎಂಐಎಂ 2 ಮತ್ತು ಎಂಎನ್‌ಎಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು ಆಗ ಎನ್‌ಡಿಎಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿದ್ದರೆ, ಯುಪಿಎಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಯಲ್ಲಿತ್ತು.

ಈ ಬಾರಿ ಗೆಲ್ಲಲು ಮಹಾಯುತಿ ತಂತ್ರವೇನು?

ಒಂದೆಡೆಯಿಂದ ಶಿಂದೆ ಸರಕಾರದ, ಇನ್ನೊಂದೆಡೆಯಿಂದ ಬಿಜೆಪಿಯ ತಂತ್ರಗಾರಿಕೆ ನಡೆದಿದೆ. ಒಬಿಸಿ ಓಲೈಕೆ, ಆರ್ಥಿಕವಾಗಿ ನೆರವಾಗುವ ಮೂಲಕ ಮಹಿಳೆಯರನ್ನು ಮತ್ತು ಯುಜನತೆಯನ್ನು ಆಕರ್ಷಿಸುವುದು, ಉಚಿತ ವಿದ್ಯುತ್ ಮತ್ತು ಎಂಎಸ್‌ಪಿ ಭರವಸೆ ಮೂಲಕ ರೈತರನ್ನು ಒಲಿಸಿಕೊಳ್ಳುವುದು ಅದರ ತಂತ್ರಗಾರಿಕೆಯಲ್ಲಿ ಸೇರಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಂತೂ ವಿದರ್ಭದಲ್ಲಿ ಬಿಜೆಪಿಗೆ ಸರಿಯಾದ ಏಟು ಬಿದ್ದಿತ್ತು. ಆದರೆ ಕಾಂಗ್ರೆಸ್ ಇದನ್ನು ಸರಿಯಾಗಿ ಬಳಸಿಕೊಳ್ಳುವ ತಂತ್ರ ರೂಪಿಸಲೇ ಇಲ್ಲ. ಮಹಾ ವಿಕಾಸ್ ಅಘಾಡಿಯಲ್ಲಿನ ಸೀಟು ಹಂಚಿಕೆ ಸಮಸ್ಯೆಯಿಲ್ಲದೆ ಮುಗಿಯುವುದೇ ಎನ್ನುವ ಪ್ರಶ್ನೆಯೂ ಇದೆ.ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಎನ್‌ಸಿಪಿ ಈಗಲೂ ಅದೇ ಭರವಸೆಯೊಂದಿಗಿದೆ.

ಎಂವಿಎ ಬಲವೆಂದರೆ ಮರಾಠರು, ದಲಿತರು ಮತ್ತು ಮುಸ್ಲಿಮರು. ಶೇ.30ರಷ್ಟು ಮರಾಠರು, ಶೇ.11ರಷ್ಟು ಮುಸ್ಲಿಮರು ಶೇ.12ರಷ್ಟು ದಲಿತರು ಇರುವುದರಿಂದ ಈ ಸಮುದಾಯಗಳ ಬೆಂಬಲದೊಂದಿಗೆ ಗೆಲುವು ಸುಲಭ. ಆದರೆ ಹರ್ಯಾಣದಲ್ಲಿ ಜಾಟ್ ವರ್ಸಸ್ ಜಾಟೇತರರು ಹೇಗೆ ವರವಾಯಿತೋ, ಹಾಗೆಯೇ ಮಹಾರಾಷ್ಟ್ರದಲ್ಲಿ ಮರಾಠರು ವರ್ಸಸ್ ಮರಾಠೇತರರು ಫಲ ನೀಡಬಹುದೇ ಎಂಬ ನಿಟ್ಟಿನಲ್ಲಿ ಬಿಜೆಪಿಯ ಲೆಕ್ಕಾಚಾರ ನಡೆದಿದೆ.

ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ವಂಚಿತ ಸಮಾಜ ಅಘಾಡಿಯ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಇನ್ನೊಂದೆಡೆ ರಾಜ್ ಠಾಕ್ರೆ ಕೂಡ ಚುನಾವಣೆ ಎದುರಿಸುತ್ತಾರೆ. ಇಲ್ಲೆಲ್ಲ ಯಾರ ಮತಗಳು ಈ ಎದುರಾಳಿಗಳ ಪಾಲಾಗಲಿವೆ? ವಿದರ್ಭದ ರೈತರು ಯಾರ ಪರ ನಿಲ್ಲಲಿದ್ದಾರೆ? ಹಾಗೆಯೇ ವಿದರ್ಭ ಮತ್ತು ಮರಾಠಾವಾಡದ ಒಬಿಸಿ ಮತಗಳು ಯಾರ ಪಾಲಾಗಲಿವೆ? ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಪಕ್ಷಕ್ಕೆ ಬೆಂಬಲವಾಗಿದ್ದ ಪಶ್ಚಿಮ ಮಹಾರಾಷ್ಟ್ರದ ಮಹಿಳಾ ಮತಗಳು ಈಗ ಯಾರ ಕೈಹಿಡಿಯಲಿವೆ? ಶಿವಸೇನೆ ಜೊತೆ ಭಾವನಾತ್ಮಕ ಸಂಬಂಧವನ್ನು ಮುಂಬೈ ರಾಜಕೀಯ ಹೊಂದಿದೆ ಎಂಬುದು ನಿಜವಾದರೂ, ಅದನ್ನು ಉಳಿಸಿಕೊಳ್ಳುವ ಪ್ರಬುದ್ಧತೆಯನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತೋರಿಸುತ್ತಿದೆಯೆ? ಮಹಿಳೆಯರ ಖಾತೆಗೆ ಹಣ, ರೈತರಿಗೆ ಉಚಿತ ವಿದ್ಯುತ್, ಎಂಎಸ್‌ಪಿ ಭರವಸೆ, ಯುವಜನತೆಯ ಖಾತೆಗೆ ಹಣ ಇವೆಲ್ಲವನ್ನೂ ಈಗಾಗಲೇ ಸಾಲ ಮಾಡಿಕೊಂಡಿರುವ ಸರಕಾರ ನಿಭಾಯಿಸುವುದೆ?

ಬಿಎಂಸಿ ಚುನಾವಣೆ ಮಾಡುವುದಕ್ಕೂ ಹಿಂಜರಿಯುತ್ತಿರುವ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಏನಾಗಲಿದೆ ಎಂಬ ಭಯವಂತೂ ಇದ್ದೇ ಇದೆ. ಸೀಟು ಹಂಚಿಕೆ ವಿಚಾರದಲ್ಲಿ ಮಹಾಯುತಿಯಲ್ಲಿಯೂ ಬಿಕ್ಕಟ್ಟು ಇದೆ, ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದೆ. ಎಂವಿಎಯಲ್ಲಿಯೂ ಸೀಟು ಹಂಚಿಕೆ ವಿಚಾರ ಬಗೆಹರಿಯಬೇಕಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ವಿಪಕ್ಷ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಸೀಟು ಹಂಚಿಕೆ ಮಾತುಕತೆ ಬಹುತೇಕ ಪೂರ್ಣಗೊಂಡಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ. ಮೈತ್ರಿಕೂಟದಲ್ಲಿ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಇವೆ. ಆಡಳಿತಾರೂಢ ಮಹಾಯುತಿ ಬಿಜೆಪಿ, ಎನ್‌ಸಿಪಿ ಮತ್ತು ಶಿವಸೇನೆ ಶಿಂದೆ ಬಣವನ್ನು ಒಳಗೊಂಡಿದೆ. ಈಗಿನ ಭ್ರಷ್ಟ, ಮಹಾರಾಷ್ಟ್ರ ವಿರೋಧಿ ಮತ್ತು ರೈತ ವಿರೋಧಿ ಸರಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಚರ್ಚೆಗಳಾಗುತ್ತಿವೆ ಎಂದು ಪಟೋಲೆ ಹೇಳಿದ್ದಾರೆ. 50ರಿಂದ 60 ವಿಧಾನಸಭಾ ಸ್ಥಾನಗಳ ಬಗ್ಗೆ ಚರ್ಚೆಯಾಗಬೇಕಿದೆ. ಉಳಿದ ಸ್ಥಾನಗಳ ಬಗ್ಗೆ ಒಮ್ಮತವಿದೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ. ಇನ್ನು, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ನಾನಾ ಪಟೋಲೆ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಶರದ್ ಪವಾರ್ ಬಣ ಸೂಚಿಸಿದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬೆಂಬಲಿಸಲು ಸಿದ್ಧ ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿರುವುದು ವರದಿಯಾಗಿದೆ. ಹರ್ಯಾಣದಲ್ಲಿನ ಬಿಜೆಪಿ ಗೆಲುವು ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ. ಅಲ್ಲಿನ ಮತ್ತು ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ನಡುವೆ ವ್ಯತ್ಯಾಸವಿದೆ ಎಂಬುದು ಪಟೋಲೆ ಅಭಿಪ್ರಾಯ.

ಇನ್ನೊಂದೆಡೆ, 235 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಮಹಾಯುತಿ ಸಿದ್ಧವಾಗಿರುವುದಾಗಿ ವರದಿಯಿದೆ. ಮಿತ್ರಪಕ್ಷಗಳ ನಡುವಿನ ತಾತ್ಕಾಲಿಕ ಸೂತ್ರದ ಪ್ರಕಾರ, ಬಿಜೆಪಿ 150 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. 75ರಿಂದ 80 ಸ್ಥಾನಗಳಲ್ಲಿ ಶಿವಸೇನೆ ಶಿಂದೆ ಬಣ, 60ರಿಂದ 65 ಸ್ಥಾನಗಳಲ್ಲಿ ಎನ್‌ಸಿಪಿ ಅಜಿತ್ ಪವಾರ್ ಬಣ ಸ್ಪರ್ಧಿಸುವ ಸಾಧ್ಯತೆಯಿದೆ. ಹರ್ಯಾಣದಲ್ಲಿನ ಬಿಜೆಪಿ ಗೆಲುವು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಶಿವಸೇನೆ ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ, ಮಹಾಯುತಿ ಮೈತ್ರಿಕೂಟ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಮಹಾಯುತಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಏಕನಾಥ್ ಶಿಂದೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ನಿರ್ಧರಿಸುತ್ತಾರೆ ಎಂದು ದೇಸಾಯಿ ಹೇಳಿದ್ಧಾರೆ. ಒಂದು ಪಕ್ಷದ ಅಭ್ಯರ್ಥಿಯನ್ನು ಘೋಷಿಸಿದ ನಂತರ, ಉತ್ತಮ ಸಮನ್ವಯಕ್ಕಾಗಿ ಇತರ ಆಕಾಂಕ್ಷಿಗಳನ್ನು ಸಹ ಕರೆಯಲಾಗುವುದು. ಟಿಕೆಟ್ ಹಂಚಿಕೆಯಲ್ಲಿ ಬಂಡಾಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿನ ಹಿನ್ನಡೆಯನ್ನು ಪಾಠವಾಗಿ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಎನ್‌ಸಿಪಿ ಶರದ್ ಪವಾರ್ ಬಣ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದು, ಎನ್‌ಡಿಎಯನ್ನು ಕೇವಲ 17 ಸೀಟುಗಳಿಗೆ ಸೀಮಿತಗೊಳಿಸಿದ್ದವು.

ಜಾರ್ಖಂಡ್ ರಾಜಕೀಯ:

ಜಾರ್ಖಂಡ್ ಖನಿಜಗಳಿಂದ ಸಮೃದ್ಧವಾಗಿರುವ ರಾಜ್ಯ. 2000 ನವೆಂಬರ್ 15ರಂದು ರಚನೆಯಾದಾಗಿನಿಂದ 24 ವರ್ಷಗಳ ಇತಿಹಾಸದಲ್ಲಿ 7 ಜನ ಮುಖ್ಯಮಂತ್ರಿಗಳನ್ನು ಜಾರ್ಖಂಡ್ ಕಂಡಿದೆ. ಅವರಲ್ಲಿ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಬಾಬುಲಾಲ್ ಮರಾಂಡಿ ಸೇರಿದಂತೆ ಅರ್ಧದಷ್ಟು ಮಂದಿ ಬಿಜೆಪಿಗೆ ಸೇರಿದವರು. ಅವರ ನಂತರದ ಅರ್ಜುನ್ ಮುಂಡಾ ಕೂಡ ಬಿಜೆಪಿಯವರಾಗಿದ್ದು, ಮೂರು ಅವಧಿಗಳಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಎಂ ಆಗಿದ್ದಾರೆ. ಆದರೆ ಅವರೆಂದೂ ಪೂರ್ಣಾವಧಿ ಸಿಎಂ ಆಗಲಿಲ್ಲ. ಶಿಬು ಸೊರೇನ್, ಅವರ ಪುತ್ರ ಹೇಮಂತ್ ಸೊರೇನ್ ಮತ್ತು ಚಂಪಯಿ ಸೊರೇನ್ ಈ ಮೂವರು ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಸಿಎಂಗಳು. ಮೂರು ಬಾರಿ ಸಿಎಂ ಆದ ಶಿಬು ಸೊರೇನ್ ಮೊದಲ ಅವಧಿಯಲ್ಲಿ ಕೇವಲ ಹತ್ತು ದಿನ ಹುದ್ದೆಯಲ್ಲಿದ್ದರು. ಬಹುಮತ ಸಾಬೀತುಪಡಿಸಲು ಆಗದೆ ರಾಜೀನಾಮೆ ನೀಡಿದ್ದರು. ಮಧು ಕೋಡಾ ಪಕ್ಷೇತರರಾಗಿದ್ದು ಸಿಎಂ ಹುದ್ದೆಗೇರಿದ್ದವರು. ಅವರ ಆಳ್ವಿಕೆಯ ನಡುವೆ ರಾಜ್ಯದಲ್ಲಿ ಮೂರು ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಯಿತು.

ಬಿಜೆಪಿಯ ರಘುಬರ್ ದಾಸ್, ರಾಜ್ಯದಲ್ಲಿ ಈವರೆಗೆ ಪೂರ್ಣಾವಧಿ ಪೂರೈಸಿದ ಏಕೈಕ ಸಿಎಂ ಆಗಿದ್ದಾರೆ. ಅಲ್ಲದೆ ಮೊದಲ ಬುಡಕಟ್ಟುಯೇತರ ಸಿಎಂ ಕೂಡ ಹೌದು. ಪ್ರಸಕ್ತ ಅಧಿಕಾರದಲ್ಲಿರುವ ಹೇಮಂತ್ ಸೊರೇನ್ 13ನೇ ಸಿಎಂ ಆಗಿದ್ದು, ಇದು ಅವರ ಮೂರನೇ ಅವಧಿಯಾಗಿದೆ.

ಜೆಎಂಎಂ ಬುಡಕಟ್ಟು ಕೇಂದ್ರಿತ ರಾಜಕೀಯದೊಂದಿಗೆ ಪ್ರಬಲವಾಗಿದೆ. ಬುಡಕಟ್ಟು ಜನಾಂಗದವರು ಜಾರ್ಖಂಡ್‌ನ ಜನಸಂಖ್ಯೆಯಲ್ಲಿ ಶೇ.27ರಷ್ಟಿದ್ದಾರೆ. ಬುಡಕಟ್ಟು ಅಸ್ಮಿತೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಇದನ್ನು ಒಡೆಯುವ ತಂತ್ರವಾಗಿ ಇನ್ನೊಂದೆಡೆ ಬಿಜೆಪಿ ರಾಜಕೀಯವೂ ಜೋರಾಗಿದೆ. 81 ಸದಸ್ಯರ ಬಲದ ಜಾರ್ಖಂಡ್ ವಿಧಾನಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಜೆಎಂಎಂ 30, ಬಿಜೆಪಿ 25, ಕಾಂಗ್ರೆಸ್ 16, ಜೆವಿಎಂ(ಪಿ) 3 ಮತ್ತು ಎಜೆಎಸ್‌ಯು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಈ ಬಾರಿ ಜೆಎಂಎಂ-ಕಾಂಗ್ರೆಸ್ ಮೈತ್ರಿಗೆ ಬಿಜೆಪಿ ಗಂಭೀರ ಸವಾಲು ಒಡ್ಡಲಿದೆಯೇ?

ಚಂಪಯಿ ಸೊರೇನ್ ಪಕ್ಷಾಂತರ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಬಲವಾಗಲಿದ್ದು, ಆಡಳಿತಾರೂಢ ಜೆಎಂಎಂಗೆ ಸವಾಲು ಒಡ್ಡಲಿದೆ ಎನ್ನಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಜಾರ್ಖಂಡ್‌ನ ರಾಜಕೀಯ ಸನ್ನಿವೇಶವನ್ನು ಗಮನಿಸಿದರೆ, ಹೇಮಂತ್ ಸೊರೇನ್ ಬಂಧನ ಅವಧಿಯಲ್ಲಿ ಸಿಎಂ ಹುದ್ದೆಗೆ ಏರಿದ್ದ ಚಂಪಯಿ ಸೊರೇನ್ ಈಗ ಜೆಎಂಎಂ ತೊರೆದು ಬಿಜೆಪಿ ಸೇರಿದ್ದಾರೆ. ಇದು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಪೂರ್ವ ತಂತ್ರಗಳಿಗೆ ಹೊಸ ಆಯಾಮ ನೀಡಿದೆ.

ಏಳು ಬಾರಿ ಶಾಸಕರಾಗಿದ್ದ ಚಂಪಯಿ ಸೊರೇನ್ ಜೆಎಂಎಂನಲ್ಲಿ ಪ್ರಮುಖರಾಗಿದ್ದವರು. ಜಾರ್ಖಂಡ್‌ನ ಬುಡಕಟ್ಟು ಜನಾಂಗದವರ ನಡುವೆ ಪಕ್ಷದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು. ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಜಾರ್ಖಂಡ್ ಹುಲಿ ಎಂದೇ ಪ್ರಸಿದ್ಧರಾದವರು. ಜಾರ್ಖಂಡ್‌ನ ಬುಡಕಟ್ಟು ರಾಜಕೀಯದ ಹಿನ್ನೆಲೆಯನ್ನು ನೋಡಿದಾಗ, ಚಂಪಯಿ ಸೊರೇನ್ ಪಕ್ಷಾಂತರದ ಪರಿಣಾಮದ ತೀವ್ರತೆ ಹೆಚ್ಚು ಸ್ಪಷ್ಟವಾಗುತ್ತದೆ. ಬುಡಕಟ್ಟು ಜನಾಂಗದವರ ಬೆಂಬಲ ಚುನಾವಣೆಯಲ್ಲಿ ಗೆಲ್ಲುವ ಗುರಿ ಹೊಂದಿರುವ ಯಾವುದೇ ರಾಜಕೀಯ ಪಕ್ಷಕ್ಕೆ ನಿರ್ಣಾಯಕವಾಗಿದೆ. ಜಾರ್ಖಂಡ್‌ನ ಬುಡಕಟ್ಟು ಮತದಾರರಲ್ಲಿ ಹಿಡಿತ ಸಾಧಿಸಲು ಬಿಜೆಪಿ ಹೆಣಗಾಡುತ್ತಿರುವ ಹೊತ್ತಲ್ಲಿನ ಪಕ್ಷಾಂತರ ಇದಾಗಿದೆ.

2019ರ ಅಸೆಂಬ್ಲಿ ಚುನಾವಣೆಯಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅತಿ ಕಳಪೆ ಪ್ರದರ್ಶನ ನೀಡಿತ್ತು. ಜೆಎಂಎಂ ಮತ್ತು ಅದರ ಮಿತ್ರಪಕ್ಷಗಳು ಬುಡಕಟ್ಟು ಮತಗಳ ಗಮನಾರ್ಹ ಪಾಲನ್ನು ಪಡೆದಿದ್ದವು. ಕಳೆದ ಚುನಾವಣೆಯಲ್ಲಿನ ಹಿನ್ನಡೆ ಬುಡಕಟ್ಟು ಮತದಾರರೊಂದಿಗೆ ಸಂಪರ್ಕ ಸಾಧಿಸುವಲ್ಲಿನ ಬಿಜೆಪಿಯ ಅಸಮರ್ಥತೆಯನ್ನು ಎತ್ತಿ ತೋರಿಸಿತ್ತು. ಬುಡಕಟ್ಟು ಸಮಸ್ಯೆಗಳು ಮತ್ತು ನಾಯಕತ್ವದೊಂದಿಗೆ ಆಳವಾಗಿ ಬೇರೂರಿರುವ ಸಂಬಂಧದಿಂದಾಗಿ ಜೆಎಂಎಂಗೆ ಬುಡಕಟ್ಟಿನ ಅಲಿಖಿತ ಬೆಂಬಲವೇ ಬಲವಾಗಿದೆ. ಆದರೆ, ಈ ಬಾರಿ ಚಂಪಯಿ ಸೊರೇನ್ ಕಣಕ್ಕಿಳಿದಿದ್ದು, ಬಿಜೆಪಿ ಪರವಾಗಿ ಸನ್ನಿವೇಶ ತಿರುವು ಪಡೆಯುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ.

ಚಂಪಯಿ ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಾಂಗದ ಹೋರಾಟದ ಅನುಭವಿ ನಾಯಕ. ಶಿಬು ಸೊರೇನ್ ಮತ್ತು ಅವರ ಮಗ ಹೇಮಂತ್ ಸೊರೇನ್ ಇಬ್ಬರಿಗೂ ಮುಖ್ಯ ಬಲವಾಗಿ ಇದ್ದವರು. ಭ್ರಷ್ಟಾಚಾರದ ಆರೋಪದಲ್ಲಿ ಹೇಮಂತ್ ಸೊರೇನ್ ಈ.ಡಿ. ಬಂಧನಕ್ಕೆ ಒಳಗಾಗುವ ಮೊದಲು ಚಂಪಯಿ ಅಧಿಕಾರ ವಹಿಸಿಕೊಂಡರು. ಕುಟುಂಬದ ಸದಸ್ಯರ ಬದಲಿಗೆ ಪಕ್ಷದ ಹಿರಿಯನನ್ನು ಆಯ್ಕೆ ಮಾಡುವ ಹೇಮಂತ್ ನಿರ್ಧಾರ ದಿಟ್ಟತನದ್ದೂ, ಮೆಚ್ಚುವಂಥದ್ದೂ ಆಗಿತ್ತು. ಆದರೆ ಸುಮಾರು ಐದು ತಿಂಗಳು ಜೈಲಿನಲ್ಲಿ ಕಳೆದ ನಂತರ ಬಿಡುಗಡೆಯಾದ ಹೇಮಂತ್ ಮತ್ತೆ ಅಧಿಕಾರಕ್ಕೇರಲು ಬಯಸಿ ಚಂಪಯಿ ಅವರ ರಾಜೀನಾಮೆ ಕೇಳಿದಾಗ ಅವರು ಅದನ್ನು ಅವಮಾನ ಎಂದು ಗ್ರಹಿಸಿದರು. ಆದರೆ ಹೇಮಂತ್ ಅವರು ಬಿಜೆಪಿಯಿಂದ ಚಂಪಯಿ ಆಮಿಷಕ್ಕೊಳಗಾಗುತ್ತಿರುವ ಆರೋಪ ಮಾಡಿದರು.

ಜೆಎಂಎಂ ಭಾರತದಲ್ಲಿನ ಹೆಚ್ಚಿನ ಪಕ್ಷಗಳಂತೆ ಒಬ್ಬ ನಾಯಕ ಅಥವಾ ಒಂದು ಕುಟುಂಬದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ವ್ಯಕ್ತಿಗತ ನಾಯಕತ್ವಕ್ಕೆ ಕಡಿಮೆ ಅವಕಾಶವಿದೆ. ಖುದ್ದು ಚಂಪಯಿ ಅವರೇ ಮುನ್ನೆಲೆಗೆ ಬರಲು ಅಷ್ಟು ಕಾಲ ಹಿಡಿದಿತ್ತು. ಅಂಥವರು ಪಕ್ಷದಿಂದ ಹೊರಬಂದಿರುವ ಸನ್ನಿವೇಶವನ್ನು ಬಿಜೆಪಿ ಎಲ್ಲ ರೀತಿಯಿಂದ ಬಳಸಿಕೊಳ್ಳಲು ನೋಡುತ್ತಿದೆ. ತಮ್ಮ ತಳಮಟ್ಟದ ಸಂಪರ್ಕ ಮತ್ತು ಬುಡಕಟ್ಟು ಜನಾಂಗದ ಆಶಯಗಳಿಗೆ ಬೆಂಬಲ ವಾಗಿ ನಿಲ್ಲುವ ನಾಯಕನಾಗಿ ಚಂಪಯಿ, ಬಿಜೆಪಿಯನ್ನು ಬುಡಕಟ್ಟು ಸಮುದಾಯದ ಹತ್ತಿರಕ್ಕೆ ಕರೆದೊಯ್ಯಬಲ್ಲರು ಎನ್ನಲಾಗುತ್ತಿದೆ. ಪ್ರಾದೇಶಿಕ ಮೈತ್ರಿಗಳು ಮತ್ತು ಬುಡಕಟ್ಟು ಸಂಬಂಧಗಳು ಮಹತ್ವದ ಪಾತ್ರವನ್ನು ವಹಿಸುವ ರಾಜ್ಯದಲ್ಲಿ, ಚಂಪಯಿ ಪಕ್ಷಾಂತರ ಬಿಜೆಪಿಗೆ ದೊಡ್ಡ ಬಲವಾಗಬಹುದು ಎಂಬ ವಿಶ್ಲೇಷಣೆಗಳಿವೆ.

ಜಾರ್ಖಂಡ್ ರಾಜಕೀಯದಲ್ಲಿ ಮರಳಿ ನೆಲೆ ಸಾಧಿಸಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಮುಸ್ಲಿಮರ ವಿರುದ್ಧ ಬುಡಕಟ್ಟು ಸಮುದಾಯಗಳಲ್ಲಿ ಅಸಮಾಧಾನವನ್ನು ಹುಟ್ಟುಹಾಕುವುದು, ಬುಡಕಟ್ಟು ಮತಗಳನ್ನು ಒಡೆಯುವುದು ಮತ್ತು ಬುಡಕಟ್ಟುಯೇತರ ಮತಗಳನ್ನು ತನ್ನ ಪರವಾಗಿ ಕ್ರೋಡೀಕರಿಸುವುದು ಅದರ ತಂತ್ರವಾಗಿದೆ. ಬಿಜೆಪಿಯ ತಂತ್ರ ಎರಡು ಬಗೆಯಲ್ಲಿ ಕಂಡುಬರುತ್ತಿದೆ. ಮೊದಲನೆಯದಾಗಿ, ಚಂಪಯಿ ಸೊರೇನ್ ಅವರಂಥ ಪ್ರಭಾವಿ ನಾಯಕರನ್ನು ಕರೆತಂದು ಬುಡಕಟ್ಟು ಮತಗಳನ್ನು ಕ್ರೋಡೀಕರಿಸುವುದು. ಎರಡನೆಯದಾಗಿ, ಹೊಸ ಮೈತ್ರಿಗಳನ್ನು ರೂಪಿಸುವುದು ಮತ್ತು ಪ್ರಾದೇಶಿಕ ಪಕ್ಷಗಳೊಂದಿಗೆ ಅಸ್ತಿತ್ವದಲ್ಲಿರುವ ಮೈತ್ರಿಗಳನ್ನು ಬಲಪಡಿಸುವುದು. ಜಾರ್ಖಂಡ್‌ನ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸುದೇಶ್ ಮಹ್ತೋ ನೇತೃತ್ವದ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು)ನೊಂದಿಗೆ ಬಿಜೆಪಿಯ ಮೈತ್ರಿ ಈ ಹಿನ್ನೆಲೆಯಲ್ಲಿ ಗಮನಾರ್ಹವಾಗಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಎಜೆಎಸ್‌ಯು ಎರಡು ಸ್ಥಾನಗಳನ್ನು ಗೆದ್ದಿತ್ತು. ಆದರೆ ಅದರ ಪ್ರಭಾವ ಚುನಾವಣಾ ವಿಜಯಗಳನ್ನು ಮೀರಿ ವಿಸ್ತರಿಸಿದೆ. ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಅದರ ನಿಲುವು ಮತದಾರರ ಆಶಯಕ್ಕೆ ಪೂರಕವಾಗಿದೆ. ಈ ನಡುವೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಪತ್ನಿ, ಶಾಸಕಿ ಕಲ್ಪನಾ ಸೊರೇನ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ. ಈ ಪ್ರಾಥಮಿಕ ಚರ್ಚೆಯ ನಂತರ ಸೊರೇನ್ ಸೀಟು ಹಂಚಿಕೆ ಸೂತ್ರ ಅಂತಿಮಗೊಳಿಸಲು ಇತರ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಸೀಟು ಹಂಚಿಕೆಗೆ ಸಂಬಂಧಿಸಿ ಎರಡೂ ಪಕ್ಷಗಳ ನಡುವಿನ ಕೆಲ ಆರಂಭಿಕ ಸಂಘರ್ಷ ಪರಿಹರಿಸಲಾಗಿದೆ ಮತ್ತು ‘ಇಂಡಿಯಾ’ ಒಕ್ಕೂಟ ಒಟ್ಟಾಗಿ ಚುನಾವಣೆ ಎದುರಿಸಲಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News