ದ್ವೇಷವೆಂಬ ವಿಷಸುಳಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಬಲಿ
ಉಜ್ವಲ ಭವಿಷ್ಯದ ಕನಸು ಹೊತ್ತುಕೊಂಡು ಅಮೆರಿಕಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳು ಅಲ್ಲೀಗ ಜನಾಂಗೀಯ ದಾಳಿಗೆ ತುತ್ತಾಗುವ ಅಪಾಯ ಎದುರಿಸುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಎಂದು ನಡೆಯುತ್ತಿದ್ದ ಇಂತಹ ದಾಳಿಗಳು ಈಗ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಹಳಿ ತಪ್ಪಿ ಹೋಗುತ್ತಿರುವ ಜೊತೆಜೊತೆಗೆ ಇಲ್ಲಿಂದ ವಿದೇಶಗಳಿಗೆ ಅದರಲ್ಲೂ ವಿಶೇಷವಾಗಿ ಅಮೆರಿಕ-ಯುರೋಪ್ಗಳಿಗೆ ಉನ್ನತ ಅಧ್ಯಯನಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಲಿ ಹೋಗಿ ಒಳ್ಳೆಯ ಶಿಕ್ಷಣ ಪಡೆದು ಅಲ್ಲೇ ಒಳ್ಳೆಯ ಅವಕಾಶವನ್ನೂ ಪಡೆಯುವುದು ಈ ಪೈಕಿ ಹೆಚ್ಚಿನವರ ಗುರಿ. ಆದರೆ ಇಂತಹ ಕನಸುಗಳನ್ನು ಇಟ್ಟುಕೊಂಡು ಹೋದವರಿಗೆ ಭಯಾನಕ ದಾಳಿ ಎದುರಿಸುವ ಸ್ಥಿತಿ ಬಂದರೆ ಹೇಗಿರಬೇಡ?
ಅಮೆರಿಕದಲ್ಲಿ ಭಾರತೀಯರ ಮೇಲೆ ಸರಣಿ ಹಲ್ಲೆಗಳು, ಜನಾಂಗೀಯ ದಾಳಿಗಳು ನಡೆಯುತ್ತಿವೆ. ಅಂಥ ಹಲ್ಲೆ ಮತ್ತು ಕೊಲೆ ಘಟನೆಗಳಲ್ಲಿ ಇತ್ತೀಚಿನದು ಮೊನ್ನೆ ಜೂನ್ 26ರಂದು ನಡೆದಿದೆ.
ಭಾರತೀಯ ಮೂಲದ 59 ವರ್ಷದ ಗುಜರಾತಿ ಹೇಮಂತ್ ಮಿಸ್ತ್ರಿ ಕೊಲೆಯಾದವರು. ಅಮೆರಿಕದಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ದುಡಿಯುತ್ತಿದ್ದರು. ಓಕ್ಲಹಾಮಾದ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ರಿಚರ್ಡ್ ಲೂಯಿಸ್ ಎಂಬ ವ್ಯಕ್ತಿ ಮುಖಕ್ಕೆ ಗುದ್ದಿದ ಬಳಿಕ ಹೇಮಂತ್ ಮಿಸ್ತ್ರಿ ಸಾವನ್ನಪ್ಪಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಆ ಭೀಕರ ಸನ್ನಿವೇಶ ಸೆರೆಯಾಗಿದೆ. ಮಿಸ್ತ್ರಿ ಮತ್ತು ಹಲ್ಲೆಕೋರನ ಮಧ್ಯೆ ಬಿರುಸಿನ ವಾಗ್ವಾದ ನಡೆಯುತ್ತಿರುವುದು ವೀಡಿಯೊ ಫೂಟೇಜ್ನಲ್ಲಿ ಸೆರೆಯಾಗಿದೆ. ಆದರೆ ಆ ವ್ಯಕ್ತಿ ಬರೀ ಮಾತಿಗೇ ನಿಲ್ಲಿಸದೆ ಮಿಸ್ತ್ರಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಆತ ಮುಖಕ್ಕೆ ಗುದ್ದಿದ ತೀವ್ರತೆಗೆ 59 ವರ್ಷದ ಮಿಸ್ತ್ರಿ ಸ್ಥಳದಲ್ಲೇ ಬಿದ್ದದ್ದು ವೀಡಿಯೊದಲ್ಲಿ ಗೊತ್ತಾಗುತ್ತದೆ. ಹಲ್ಲೆಕೋರ ಅಲ್ಲಿಂದ ಹೊರಟುಹೋದದ್ದು ಕೂಡ ಕ್ಲಿಪ್ಲ್ಲಿದೆ.
ಮಿಸ್ತ್ರಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ರಕ್ಷಿಸುವ ಯತ್ನ ನಡೆಯಿತಾದರೂ, ಹೊಡೆತದ ಏಟಿಗೆ ಅವರು ಸಾವನ್ನಪ್ಪಿದ್ದರು. ಆರೋಪಿಯನ್ನು ಬಂಧಿಸಲಾಗಿದೆಯಾದರೂ, ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವ್ಯಕ್ತಿಯ ಹತ್ಯೆ ನಡೆದುಹೋಗಿದೆ ಎಂಬ ಕಟು ಸತ್ಯ ಆಘಾತಕಾರಿ.
ಇಷ್ಟು ಮಾತ್ರವಲ್ಲ, ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ, ಭಾರತೀಯ ವಿದ್ಯಾರ್ಥಿಗಳ ಕೊಲೆ ಪ್ರಕರಣಗಳೂ ಹೆಚ್ಚುತ್ತಿವೆ. 2024ರ ಮೊದಲ ಮೂರು ತಿಂಗಳಲ್ಲೇ ಅಂಥ 9 ಹಲ್ಲೆ ಮತ್ತು ಕೊಲೆ ಪ್ರಕರಣಗಳು ನಡೆದಿವೆ. 2024ರ ಫೆಬ್ರವರಿ 2ರ ವರದಿಯ ಪ್ರಕಾರ ಎರಡೇ ವಾರಗಳಲ್ಲಿ ನಾಲ್ಕು ಭಾರತೀಯ ವಿದ್ಯಾರ್ಥಿಗಳು ಹತ್ಯೆಯಾಗಿದ್ದರು. ಓಹಿಯೋದ ಲಿಂಡರ್ ಸ್ಕೂಲ್ ಆಫ್ ಬ್ಯುಸಿನೆಸ್ನ 19 ವರ್ಷದ ಶ್ರೇಯಸ್ ರೆಡ್ಡಿ ಬೆನಿಗರ್, ಪರ್ಡ್ಯೂ ವಿಶ್ವವಿದ್ಯಾನಿಲಯದ ನೀಲ್ ಆಚಾರ್ಯ, ಹರ್ಯಾಣದ ಪಂಚಕುಲದ ವಿವೇಕ್ ಸೈನಿ ಮತ್ತು ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪಡೆಯುತ್ತಿದ್ದ ಭಾರತೀಯ ಅಮೆರಿಕನ್ ಸಮೀರ್ ಕಾಮತ್ ಆ ನಾಲ್ವರು.
ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತೀಯರ ಮೇಲೆ ದ್ವೇಷ ಅಪರಾಧಗಳು ಹೆಚ್ಚುತ್ತಲೇ ಇದೆ. ಅಮೆರಿಕದಲ್ಲಿ ಭಾರತೀಯ ಹಿಂದೂಗಳ ಮೇಲಿನ ದಾಳಿಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಭಾರತೀಯ ಅಮೆರಿಕನ್ ಕಾಂಗ್ರೆಸ್ ನಾಯಕ ಶ್ರೀ ಥಾಣೆದಾರ್ ಎಪ್ರಿಲ್ನಲ್ಲಿ ದೂರಿದ್ದರು.
ಕೆಲವು ವಾರಗಳ ಹಿಂದೆ ಟೆಕ್ಸಾಸಿನ ಪ್ಲಾನೋದಲ್ಲಿ ನಾಲ್ವರು ಭಾರತೀಯ ಅಮೆರಿಕನ್ ಮಹಿಳೆಯರ ಮೇಲೆ ಮಹಿಳೆಯೊಬ್ಬಳು ಜನಾಂಗೀಯ ನಿಂದನೆ ಮತ್ತು ಹಲ್ಲೆ ನಡೆಸಿದಳು. ಆ ಮಹಿಳೆಗೆ ಕೇವಲ 40 ದಿನಗಳ ಜೈಲು ಶಿಕ್ಷೆ ವಿಧಿಸಲಾಯಿತು. ದಾಳಿಗೆ ಮೊದಲು ಆಕೆ, ‘ಐ ಹೇಟ್ ಯೂ ಇಂಡಿಯನ್ಸ್’ ಎಂದಿದ್ದಲ್ಲದೆ, ತೀರಾ ಅವಹೇಳನಕಾರಿ ಪದಗಳನ್ನೂ ಬಳಸಿ ಕೂಗುತ್ತಿರುವುದು ವೀಡಿಯೊಗಳಲ್ಲಿ ಇದೆ. ಪೊಲೀಸರ ಆಗಮನದ ಬಳಿಕವೂ ಆಕೆ ಜನಾಂಗೀಯ ನಿಂದನೆ ಮಾಡುವುದನ್ನು ಮುಂದುವರಿಸಿದ್ದ ಬಗ್ಗೆ ವರದಿಗಳು ಹೇಳುತ್ತಿವೆ. ದಾಳಿಗೆ ಕಾರಣರಾದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಮತ್ತು ಯಾವುದೇ ಬಂಧನವನ್ನೂ ಮಾಡಿಲ್ಲ ಎಂದು ಹಿಂದೂ ಆ್ಯಕ್ಷನ್ ಸಂಸ್ಥೆ ದೂರಿತ್ತು.
ಅಮೆರಿಕನ್ ಕಾಂಗ್ರೆಸ್ನ ಐವರು ಭಾರತೀಯ ಮೂಲದ ಸದಸ್ಯರು ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಅಮಿ ಬೇರ, ಪ್ರಮೀಳಾ ಜಯಪಾಲ್ ಹಾಗೂ ಶ್ರೀ ಥಾಣೆದಾರ್ ಅವರು ಅಮೆರಿಕ ಸರಕಾರದ ಕಾನೂನು ಹಾಗೂ ನ್ಯಾಯ ಇಲಾಖೆಗೆ ಪತ್ರ ಬರೆದು ಹಿಂದೂ ದೇವಾಲಯಗಳು ಹಾಗೂ ಆರಾಧನಾಲಯಗಳ ಮೇಲೆ ದಾಳಿಗಳ ಕುರಿತು ತನಿಖೆ ನಡೆಸಲು ಆಗ್ರಹಿಸಿದ್ದರು.
ಲಕ್ಷಾಂತರ ಹಣ ಖರ್ಚು ಮಾಡಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳು ಈಗ ಅಲ್ಲಿ ಜನಾಂಗೀಯ ದಾಳಿ ಎದುರಿಸುತ್ತಿದ್ದಾರೆ. ಇದಲ್ಲದೆ, ಭಾರತೀಯ ಮೂಲದ ಇತರ ವ್ಯಕ್ತಿಗಳ ಮೇಲೆಯೂ ದಾಳಿಯಾಗುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ವಾಶಿಂಗ್ಟನ್ ಸ್ಟ್ರೀಟ್ನಲ್ಲಿ 41 ವರ್ಷದ ಭಾರತೀಯ ಮೂಲದ ವ್ಯಕ್ತಿ ವಿವೇಕ್ ತನೇಜಾ ಎಂಬವರು ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.
ಅಮೆರಿಕದಲ್ಲಿನ ಹಿಂದೂಫೋಬಿಯಾದ ಹೆಚ್ಚಳ ನಿಜಕ್ಕೂ ಆತಂಕಕಾರಿ ಪ್ರವೃತ್ತಿಯಾಗಿದೆ. ಕ್ಯಾಲಿಫೋರ್ನಿಯಾದ ನಾಗರಿಕ ಹಕ್ಕುಗಳ ಇಲಾಖೆಯ ಇತ್ತೀಚಿನ ವರದಿ ಪ್ರಕಾರ, ಯೆಹೂದಿಗಳ ವಿರುದ್ಧದ ಅಪರಾದ ಪ್ರಕರಣಗಳ ಬಳಿಕ ದ್ವೇಷದ ಅಪರಾಧಗಳ ಪಟ್ಟಿಯಲ್ಲಿ ಬರುವುದೇ ಹಿಂದೂಫೋಬಿಯಾ. ಅದರ ಪ್ರಕಾರ, ಯಹೂದಿ ವಿರೋಧಿ ಪ್ರಕರಣಗಳು -ಶೇ.36.9; ಹಿಂದೂ ವಿರೋಧಿ ಪ್ರಕರಣಗಳು -ಶೇ.23.3; ಮುಸ್ಲಿಮ್ ವಿರೋಧಿ ಪ್ರಕರಣಗಳು -ಶೇ.14.6 ದಾಖಲಾಗಿವೆ.
ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ವಿದೇಶಕ್ಕೆ ಅದರಲ್ಲೂ ಅಮೆರಿಕ, ಯುರೋಪ್ಗೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. 2023ರ ಒಂದೇ ವರ್ಷದಲ್ಲಿ ಯುಎಸ್ ಮಿಷನ್ ಟು ಇಂಡಿಯಾ 2018, 2019 ಮತ್ತು 2020ರಲ್ಲಿ ನೀಡಿದ ಒಟ್ಟು ವೀಸಾಗಳಿಗಿಂತ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ನೀಡಿದೆ. ಭಾರತದ ಅಮೆರಿಕ ರಾಯಭಾರ ಕಚೇರಿ ಕಳೆದ ವರ್ಷ 1,40,000ಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ನೀಡಿತ್ತು. ಇದು ಅಮೆರಿಕ ಬೇರಾವುದೇ ದೇಶಕ್ಕೆ ನೀಡಿರುವ ವಿದ್ಯಾರ್ಥಿ ವೀಸಾಗಳಿಗಿಂತ ಹೆಚ್ಚು. ಕಳೆದ ಸತತ ಮೂರು ವರ್ಷಗಳಿಂದ ಈ ದಾಖಲೆ ಭಾರತದ ಹೆಸರಲ್ಲಿದೆ.
ಆದರೆ, ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧಗಳಿಂದ ದುಡಿಯುವ ವರ್ಗದವರು ಮತ್ತು ವಿದ್ಯಾರ್ಥಿಗಳು ಈಗ ಆತಂಕ ಎದುರಿಸುವಂತಾಗಿದೆ. ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ತಲೆದೋರಿದೆ.
ತಮಗಿಂತ ಒಳ್ಳೆಯ ಭವಿಷ್ಯ ನಮ್ಮ ಮಕ್ಕಳಿಗಿರಲಿ ಎಂದು ಯೋಚಿಸಿ ಪೋಷಕರು ಕಷ್ಟಪಟ್ಟು, ಸಾಲ ಸೋಲ ಮಾಡಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳಿಸುತ್ತಿದ್ದಾರೆ. ಅಲ್ಲಿ ಕಲಿತು ಅಲ್ಲೇ ಉದ್ಯೋಗ ಗಳಿಸಿದರೆ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ಅವರು ನಿರೀಕ್ಷಿಸುತ್ತಾರೆ. ಹೀಗಿರುವಾಗ ಅಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿಯ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯ. ಈ ಕುರಿತಾಗಿ ಭಾರತ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕೆ ಅಮೆರಿಕ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ.
ವಾಶಿಂಗ್ಟನ್ ಡಿಸಿಯಲ್ಲಿಯೇ ನೆಲೆಸಿರುವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರೋಹಿತ್ ಶರ್ಮಾ, ಯಾಕೆ ಹಿಂದೂಗಳ ವಿರುದ್ಧ ಅಮೆರಿಕದ ನೆಲದಲ್ಲಿ ದ್ವೇಷ ಹೆಚ್ಚುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ ಮಾಡುತ್ತಾರೆ. ಹಿಂದೂಫೋಬಿಯಾವನ್ನು ಪರಿಣಾಮಕಾರಿಯಾಗಿ ಎದುರಿಸಲು ವಕಾಲತ್ತು ಗುಂಪುಗಳಲ್ಲಿನದೇ ಒಡಕು, ಅನಗತ್ಯ ಆಂತರಿಕ ಪೈಪೋಟಿ ಅಡ್ಡಿಯಾಗಿವೆ ಎನ್ನುತ್ತಾರೆ ಅವರು. ಕೆಲವು ಪರಿಹಾರಗಳನ್ನೂ ಅವರು ಸೂಚಿಸುತ್ತಾರೆ:
1.ವಕಾಲತ್ತು ಗುಂಪುಗಳು ಎದುರಿಸುತ್ತಿರುವ ಪ್ರಾಥಮಿಕ ಸವಾಲುಗಳಲ್ಲಿ ಒಂದು ಸಹಕಾರದ ಕೊರತೆ. ಹಾಗಾಗಿ ಒಗ್ಗೂಡಿ ಹೋರಾಡುವ ಅಗತ್ಯವಿದೆ.
2.ಪ್ರತೀ ವಕೀಲರ ಗುಂಪಿನ ಪ್ರತಿನಿಧಿಗಳನ್ನು ಒಳಗೊಂಡ ನಾಯಕತ್ವ ಮಂಡಳಿ ರಚನೆ, ಹಿಂದೂಫೋಬಿಯಾ ಮತ್ತದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಶೈಕ್ಷಣಿಕ ಅಭಿಯಾನಗಳು ಅಗತ್ಯ.
3. ಹಿಂದೂಫೋಬಿಯಾ ವಿರುದ್ಧದ ಹೋರಾಟದಲ್ಲಿ ಫೆಡರಲ್, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ನೀತಿ ನಿರೂಪಕರನ್ನು ತೊಡಗಿಸಿಕೊಳ್ಳುವುದು ಅತ್ಯಗತ್ಯ.
4. ಹಿಂದೂಫೋಬಿಯಾ ವಿರುದ್ಧ ಹೋರಾಡಲು ವಕಾಲತ್ತಿಗೆ ಅಮೆರಿಕನ್ ಹಿಂದೂ ಸಮುದಾಯ ಖರ್ಚು ಮಾಡುತ್ತಿರುವುದು ಇತ್ತೀಚಿನ ವರದಿಯ ಪ್ರಕಾರ ವಾರ್ಷಿಕ ತಲಾ 75 ಸೆಂಟ್ಗಳನ್ನು ಮಾತ್ರ. ಇದು ಹಲವು ಪಟ್ಟು ಹೆಚ್ಚಬೇಕಾದ ಅಗತ್ಯವಿದೆ.
5. ಭಾರತ ವಿರೋಧಿ ಬಾಹ್ಯ ಬೆದರಿಕೆಗಳು ಅಮೆರಿಕದಲ್ಲಿ ಹಿಂದೂಗಳಿಗೆ ಪ್ರತಿಕೂಲ ವಾತಾವರಣ ಉಂಟುಮಾಡುತ್ತಿದ್ದು, ಅದರ ವಿರುದ್ಧ ಜಾಗೃತವಾಗಿರಲು ಮತ್ತು ಎದುರಿಸಲು ವಕೀಲರ ಗುಂಪುಗಳು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು.
6. ಹಿಂದೂಫೋಬಿಯಾ ಹೆಚ್ಚಳ ಎದುರಿಸಲು ಬಹುಮುಖಿ ಮತ್ತು ಸಹಯೋಗ ವಿಧಾನದ ಅಗತ್ಯವಿದೆ. ಪರಸ್ಪರ ಸಹಕಾರದೊಂದಿಗೆ ವಕಾಲತ್ತು ಗುಂಪುಗಳು ತಮ್ಮ ಸಾಮಾನ್ಯ ಗುರಿಯತ್ತ ಮುನ್ನಡೆಯಬೇಕಿದೆ.
ಅಮೆರಿಕದಲ್ಲಿ ದ್ವೇಷದ ಹಿನ್ನೆಲೆಯ ಅಪರಾಧ ಘಟನೆಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದದ್ದು 2022ರಲ್ಲಿ.
ಆ ವರ್ಷ ಒಟ್ಟು 11,634 ಅಂಥ ಘಟನೆಗಳು ನಡೆದವು.
2021ರಲ್ಲಿ 10,840 ಘಟನೆಗಳು ದಾಖಲಾಗಿದ್ದವು.
2000ದಲ್ಲಿ 8,063 ಘಟನೆಗಳು ವರದಿಯಾಗಿದ್ದವು.
ಆದರೆ ಇದು 2022ರಲ್ಲಿ ಶೇ.44ರಷ್ಟು ಹೆಚ್ಚಳವಾದಂತಾಯಿತು.
ಮತ್ತು ಹೆಚ್ಚು ಗಮನ ಸೆಳೆಯಿತು.
ದ್ವೇಷದ ಅಪರಾಧದ ಗುರಿ ಒಬ್ಬ ವ್ಯಕ್ತಿ, ವ್ಯಾಪಾರ ಅಥವಾ ಹಣಕಾಸು ಸಂಸ್ಥೆ, ಸರಕಾರಿ ಘಟಕ, ಧಾರ್ಮಿಕ ಸಂಸ್ಥೆ ಅಥವಾ ಸಮಾಜ ಹೀಗೆ ಯಾವುದೂ ಆಗಿರಬಹುದು. ಈ ಅವಧಿಯಲ್ಲಿ ಬಲಿಪಶುಗಳಾದವರ ಸಂಖ್ಯೆ 9,924ರಿಂದ 13,711ಕ್ಕೆ ಏರಿದೆ. ಅಂದರೆ ಶೇ.38ರಷ್ಟು ಹೆಚ್ಚಳವಾಗಿದೆ.
ಅಮೆರಿಕದಲ್ಲಿರುವ ಭಾರತೀಯರ ಮೇಲಿನ ದಾಳಿಗಳಿಗೆ ಶ್ವೇತಭವನ ಕೂಡ ಕಳವಳ ವ್ಯಕ್ತಪಡಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಯುಎಸ್ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ನ ಜಾನ್ ಕಿರ್ಬಿ, ಹೆಚ್ಚುತ್ತಿರುವ ದಾಳಿಯನ್ನು ತಡೆಯಲು ಶ್ವೇತಭವನ ಬದ್ಧವಾಗಿದೆ ಎಂದಿದ್ದರು. ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕಿರ್ಬಿ, ಜನಾಂಗ, ಲಿಂಗ, ಧರ್ಮ ಅಥವಾ ಯಾವುದೇ ಇತರ ಅಂಶಗಳ ಆಧಾರದ ಮೇಲೆ ಹಿಂಸಾಚಾರವನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಮೆರಿಕದಲ್ಲಿ ಇದು ಸಮ್ಮತವಲ್ಲ ಎಂದು ಸ್ಪಷ್ಟಪಡಿಸಿದ್ದರು.
ಭಾರತದಲ್ಲಿ ಸಂಘ ಪರಿವಾರ ಹಾಗೂ ಅದರ ದ್ವೇಷ ರಾಜಕೀಯ ಎಗ್ಗಿಲ್ಲದೆ ನಡೆದಿದೆ. ಇದನ್ನೇ ಅಲ್ಲಿ ಕೂತು ಬೆಂಬಲಿಸುವ ದೊಡ್ಡ ಸಂಖ್ಯೆಯ ಅನಿವಾಸಿ ಭಾರತೀಯರು ಈಗ ಅಮೆರಿಕದಲ್ಲಿ ಹಿಂದೂ ವಿರೋಧಿ ವಾತಾವರಣ ಸೃಷ್ಟಿಯಾಗಿದೆ ಎಂದು ಅಲವತ್ತುಕೊಳ್ಳುತ್ತಿರುವುದು ವಿಪರ್ಯಾಸ. ಅಲ್ಲೂ ಒಂದೆಡೆ ದ್ವೇಷ ರಾಜಕಾರಣವನ್ನೇ ಉಸಿರಾಡುವ ಟ್ರಂಪ್ ಜೊತೆ ನಿಲ್ಲುವ ಹಿಂದುತ್ವವಾದಿ ಅನಿವಾಸಿಗಳು, ತಮ್ಮ ಮೇಲೆ ಹಿಂದೂ ದ್ವೇಷಿಗಳಿಂದ ದಾಳಿಯಾಗುತ್ತಿದೆ ಎನ್ನುತ್ತಿದ್ದಾರೆ. ಅದೇ ಅಮೆರಿಕದಲ್ಲಿ ಭಾರತದ ಬಿಜೆಪಿ ಸರಕಾರದ ಸಂವಿಧಾನ ವಿರೋಧಿ ಬುಲ್ಡೋಜರ್ ನೀತಿಯನ್ನು ಬೆಂಬಲಿಸಿ ಬುಲ್ಡೋಜರ್ ಮೆರವಣಿಗೆ ನಡೆಸುತ್ತಾರೆ ಹಿಂದುತ್ವ ಬೆಂಬಲಿಗ ಅನಿವಾಸಿ ಭಾರತೀಯರು.
ಅಂದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ಅಕ್ರಮ, ದ್ವೇಷ ದಾಳಿ ಅವರಿಗೆ ಖುಷಿ ಕೊಡುತ್ತದೆ. ಅದಕ್ಕೆ ಅವರು ಸಂಪೂರ್ಣ ಬೆಂಬಲ ಸೂಚಿಸುತ್ತಾರೆ. ಅಮೆರಿಕದಲ್ಲಿ ಕರಿಯರು, ಅಲ್ಪಸಂಖ್ಯಾತರ ಮೇಲೆ ಟ್ರಂಪ್ ಹಾಗೂ ಅವರ ಬೆಂಬಲಿಗರು ಎಸಗುವ ಅನ್ಯಾಯದ ಬಗ್ಗೆಯೂ ಅವರ ತಕರಾರಿಲ್ಲ. ಆದರೆ ಅಮೆರಿಕದಲ್ಲಿ ತಮ್ಮ ಮೇಲೆ ಮಾತ್ರ ಅಕ್ರಮ ಆಗಬಾರದು ಎಂದು ಅವರು ಬಯಸುತ್ತಾರೆ. ಇದೆಂಥ ದ್ವಂದ್ವ?
ಇಲ್ಲಿ ಯಾವ ಮನಃಸ್ಥಿತಿಯನ್ನು ತೋರಿಸಲಾಗುತ್ತಿದೆಯೋ, ಯಾವ ಮನಸ್ಥಿತಿ ಸರಕಾರದ ಮಟ್ಟದಲ್ಲೇ ಇದೆಯೋ, ಅಲ್ಲಿಯೂ ಇವರ ಮೇಲೆ ಅಂಥದೇ ಮನಃಸ್ಥಿತಿಗಳು ದಾಳಿ ನಡೆಸುತ್ತಿವೆ. ಪ್ರಶ್ನೆಗಳು ಕಠಿಣವೂ ಸಂಕೀರ್ಣವೂ ಆಗಿವೆ.
ಆಲೋಚನೆಗಳು ಬದಲಾಗದೆ ಹಿಂಸೆ ನಿಲ್ಲದು ಎಂಬ ಸತ್ಯ, ಹಿಂಸೆಯನ್ನು ಪ್ರಚೋದಿಸುವವರಿಗೆ, ಬೆಂಬಲಿಸುವವರಿಗೆ ಮೊದಲು ಮನವರಿಕೆಯಾಗಬೇಕಿದೆ.