ಇತ್ಯರ್ಥವಾಗದಿರುವ ಕೋಟಿಗಟ್ಟಲೆ ಪ್ರಕರಣಗಳು: ಜನಸಾಮಾನ್ಯರಿಗೆ ಮರೀಚಿಕೆಯಾಗುತ್ತಿದೆಯೆ ನ್ಯಾಯ?

ದೇಶದಲ್ಲಿ ದೀರ್ಘಾವಧಿಯಿಂದ ಬಾಕಿಯುಳಿದಿರುವ ಪ್ರಕರಣಗಳ ದೊಡ್ಡ ಪಟ್ಟಿಯೇ ಇದೆ. ಪ್ರಕರಣಗಳ ಸಂಖ್ಯೆ ಕೋಟಿಗಟ್ಟಲೆ ಲೆಕ್ಕದಲ್ಲಿದೆ. ಏಕೆ ಹೀಗೆ ಪ್ರಕರಣಗಳು ಬಾಕಿಯುಳಿದುಬಿಡುತ್ತವೆ? ನ್ಯಾಯವ್ಯವಸ್ಥೆಯಲ್ಲಿನ ಇಂಥ ವಿಳಂಬದ ಕಾರಣಗಳೇನು? ಇದಕ್ಕೊಂದು ಪರಿಹಾರವೆಂಬುದು ಇಲ್ಲವೆ?

Update: 2024-01-09 06:22 GMT
Editor : Thouheed | Byline : ಆರ್.ಜೀವಿ

Photo: freepik

ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನವಾಗಿರುವುದಕ್ಕೆ ಆತನ ಮೇಲೆ ಕಳೆದ 31 ವರ್ಷಗಳಿಂದ ಇರುವ ಸುಮಾರು 16 ಕೇಸ್‌ಗಳ ಹಿನ್ನೆಲೆಯಿದೆ. ತನ್ನನ್ನು ಹಿಂದೂ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಆತನ ವಿರುದ್ಧದ 16 ಪ್ರಕರಣಗಳಲ್ಲಿ ಗಲಭೆ ಅಥವಾ ದೊಂಬಿಗೆ ಸಂಬಂಧಿಸಿರುವ ಕೇಸ್‌ಗಳೂ ಇವೆ. 1992ರ ಗಲಭೆ ಮಾತ್ರವಲ್ಲದೆ, 1999, 2001 ಹಾಗೂ 2014ರ ಗಲಭೆ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ. ಇದರ ಹೊರತಾಗಿ, ಜೂಜು, ಅಕ್ರಮ ಸಾರಾಯಿ ಕುರಿತ ಕೇಸ್‌ಗಳೂ ದಾಖಲಾಗಿವೆ. ಈ ಎಲ್ಲಾ ಕೇಸ್‌ಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಪೊಲೀಸರು ಹೇಳಿದ್ದಾರೆ. ಹಳೇ ಪ್ರಕರಣಗಳ ವಿಲೇವಾರಿ ಪ್ರಕ್ರಿಯೆ ಭಾಗವಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಸರಕಾರ ಹೇಳಿದೆ.

ವಿಲೇವಾರಿಯಾಗದೆ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳದ್ದೇ ಒಂದು ದೊಡ್ಡ ಕಥೆ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವರು ಲೋಕಸಭೆಗೆ ಕೊಟ್ಟ ಮಾಹಿತಿಯಂತೆ, ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳ ಸಂಖ್ಯೆ 5 ಕೋಟಿಗೂ ಹೆಚ್ಚು. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯೇ ಸುಮಾರು 80,000ದಷ್ಟಿದೆ. ಡಿಸೆಂಬರ್ 1ರವರೆಗಿನ ಸ್ಥಿತಿಯಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳು 5,08,85,856. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿನ ಪ್ರಕರಣಗಳು 4.46 ಕೋಟಿಗೂ ಅಧಿಕ. 25 ಹೈಕೋರ್ಟ್‌ಗಳ ಮಟ್ಟದಲ್ಲಿ ಉಳಿದಿರುವ ಪ್ರಕರಣಗಳು 61 ಲಕ್ಷಕ್ಕೂ ಹೆಚ್ಚು.

2018ರಲ್ಲಿ ನೀತಿ ಆಯೋಗ, ನಮ್ಮ ನ್ಯಾಯಾಲಯಗಳಲ್ಲಿನ ಆಗಿನ ವಿಲೇವಾರಿ ಪ್ರಮಾಣವನ್ನು ಆಧರಿಸಿ ಒಂದು ಅಂದಾಜು ಮಾಡಿತ್ತು. ಅದರಂತೆ, ಆವರೆಗೆ ಬಾಕಿಯಿದ್ದ ಒಟ್ಟು 2.9 ಕೋಟಿ ಪ್ರಕರಣಗಳ ವಿಲೇವಾರಿಗೆ 324 ವರ್ಷಗಳಿಗೂ ಹೆಚ್ಚು ಸಮಯ ಬೇಕು ಎಂದು ಅದು ಹೇಳಿತ್ತು. 2018ರ ಡಿಸೆಂಬರ್ ಹೊತ್ತಿಗೆ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 30 ವರ್ಷಗಳಿಗೂ ಹೆಚ್ಚು ಹಳೆಯ ಪ್ರಕರಣಗಳು 65,695. 2021ರ ಜನವರಿ ವೇಳೆಗೆ, ಅಷ್ಟು ಹಳೆಯ ಪ್ರಕರಣಗಳ ಸಂಖ್ಯೆ ಶೇ.60ರಷ್ಟು ಹೆಚ್ಚಿದ್ದು, ಅವುಗಳ ಸಂಖ್ಯೆ 1,05,560ರಷ್ಟಾಗಿತ್ತು.

ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ, 2010ರಿಂದ 2020ರ ಅವಧಿಯಲ್ಲಿ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳು ವಾರ್ಷಿಕ ಶೇ.2.8ರಷ್ಟು ಹೆಚ್ಚಾಗಿವೆ. 2021ರ ಸೆಪ್ಟಂಬರ್ 15ರ ಹೊತ್ತಿಗೆ, ಎಲ್ಲಾ ನ್ಯಾಯಾಲಯಗಳಲ್ಲಿ 4.5 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿಯಿದ್ದವು. ಅವುಗಳಲ್ಲಿ ಶೇ.87.6ರಷ್ಟು ಪ್ರಕರಣಗಳು ಅಧೀನ ನ್ಯಾಯಾಲಯಗಳಲ್ಲಿ ಮತ್ತು ಶೇ.12.3ರಷ್ಟು ಪ್ರಕರಣಗಳು ಹೈಕೋರ್ಟ್‌ಗಳಲ್ಲಿ ಬಾಕಿಯುಳಿದವಾಗಿದ್ದವು.

ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸದಿದ್ದರೆ, ಈಗಿರುವ ವಿಲೇವಾರಿ ದರದಲ್ಲಿ ಎಲ್ಲಾ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ಸುಪ್ರೀಂ ಕೋರ್ಟ್‌ಗೆ 1 ವರ್ಷ 3 ತಿಂಗಳುಗಳು ಮತ್ತು ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ತಲಾ 3 ವರ್ಷಗಳು ಬೇಕು ಎಂದು ಆಗ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಹೇಳಿತ್ತು.

2019ರಿಂದ 2020ರ ಅವಧಿಯಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೈಕೋರ್ಟ್‌ಗಳಲ್ಲಿ ಶೇ.20 ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶೇ.13ರಷ್ಟು ಹೆಚ್ಚಾಗಿತ್ತು. 2020ರಲ್ಲಿ ಕೋವಿಡ್ ಕಾರಣದಿಂದಾಗಿ ನ್ಯಾಯಾಲಯಗಳ ಸಾಮಾನ್ಯ ಕಾರ್ಯನಿರ್ವಹಣೆ ಸ್ಥಗಿತವಾಗಿತ್ತು. ಹಾಗಾಗಿ, 2020ರಲ್ಲಿ ಹೊಸ ಪ್ರಕರಣಗಳು ಹಿಂದಿನ ವರ್ಷಗಳಿಗಿಂತ ಕಡಿಮೆಯಿದ್ದವಾದರೂ, ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚೇ ಆಯಿತು. ವಿಲೇವಾರಿಯಲ್ಲಿನ ನಿಧಾನ ಗತಿ ಇದಕ್ಕೆ ಕಾರಣ.

ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಬಾಕಿ ಪ್ರಕರಣಗಳಿವೆ ಎಂದು ಪಿಆರ್‌ಎಸ್ ಹೇಳುತ್ತದೆ. ಆದರೂ, ದೊಡ್ಡ ಪ್ರಮಾಣದ ಜನಸಂಖ್ಯೆ ಯಿರುವ ಕೋಲ್ಕೊತಾ ಮತ್ತು ಪಾಟ್ನಾ ಹೈಕೋರ್ಟ್ ಗಳಿಗಿಂತಲೂ ಅಲಹಾಬಾದ್, ಕೇರಳ, ಬಾಂಬೆ, ಮದ್ರಾಸ್, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗಳಲ್ಲೇ ಹೆಚ್ಚು ಪ್ರಕರಣಗಳು ಬಾಕಿಯಿವೆ. 2010ರಿಂದ 2020ರ ಅವಧಿಯಲ್ಲಿ ಅಲಹಾಬಾದ್, ಕೋಲ್ಕೊತಾ, ಒಡಿಶಾ, ಮತ್ತು ಜಮ್ಮು-ಕಾಶ್ಮೀರ ಈ ನಾಲ್ಕು ಹೈಕೋರ್ಟ್‌ಗಳಲ್ಲಿ ಮಾತ್ರವೇ ಬಾಕಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ಸೇರಿದಂತೆ ಬಹುತೇಕ ರಾಜ್ಯಗಳ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳ ಮತ್ತು ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳ ಅಧೀನ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

ಹೈಕೋರ್ಟ್‌ಗಳಲ್ಲಿ ಶೇ.41ರಷ್ಟು ಪ್ರಕರಣಗಳು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. ಅಧೀನ ನ್ಯಾಯಾಲಯಗಳಲ್ಲಿ, ಪ್ರತೀ ನಾಲ್ಕು ಪ್ರಕರಣಗಳಲ್ಲಿ ಒಂದು ಪ್ರಕರಣ ಕನಿಷ್ಠ ಐದು ವರ್ಷಗಳಷ್ಟು ಹಳೆಯದಾಗಿದೆ. ಅಧೀನ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳಲ್ಲಿ ಸುಮಾರು 45 ಲಕ್ಷ ಪ್ರಕರಣಗಳು 10 ವರ್ಷಗಳಿಂದ ಬಾಕಿಯುಳಿದಿವೆ. 10 ವರ್ಷಗಳಷ್ಟು ಹಳೆಯ ಪ್ರಕರಣಗಳ ಪ್ರಮಾಣ ಹೈಕೋರ್ಟ್‌ಗಳಲ್ಲಿ ಶೇ.21ರಷ್ಟಿದ್ದರೆ, ಅಧೀನ ನ್ಯಾಯಾಲಯಗಳಲ್ಲಿ ಶೇ.8ರಷ್ಟಿವೆ.

ಕಳೆದ ಅಕ್ಟೋಬರ್‌ನಲ್ಲಿಯ ವರದಿಯೊಂದರ ಪ್ರಕಾರ, ಸುಪ್ರೀಂ ಕೋರ್ಟ್ ದೀರ್ಘಾವಧಿಯಿಂದ ಬಾಕಿಯುಳಿದ ಪ್ರಕರಣಗಳ ಇತ್ಯರ್ಥಕ್ಕೆಂದೇ ತನ್ನ ಶೇ.25ರಷ್ಟು ನ್ಯಾಯಾಧೀಶರನ್ನು ನಿಯೋಜಿಸಿತ್ತು. ನ್ಯಾಯಾಧೀಶರ ಕೊರತೆ ಇರುವುದು ವಿಲೇವಾರಿಯಲ್ಲಿನ ವಿಳಂಬ ಗತಿಗೆ ಒಂದು ಪ್ರಮುಖ ಕಾರಣ.

2021ರ ಸೆಪ್ಟಂಬರ್ 1ರ ಪ್ರಕಾರ, ಹೈಕೋರ್ಟ್‌ಗಳಲ್ಲಿ 1,098 ನ್ಯಾಯಾಧೀಶರ ಹುದ್ದೆಗಳಲ್ಲಿ 465 ಖಾಲಿಯಿದ್ದವು. ಅಂದರೆ ಆಗ ಖಾಲಿಯಿದ್ದ ಹುದ್ದೆಗಳ ಪ್ರಮಾಣ ಶೇ.42ರಷ್ಟು. ತೆಲಂಗಾಣ, ಪಾಟ್ನಾ, ರಾಜಸ್ಥಾನ, ಒಡಿಶಾ ಮತ್ತು ದಿಲ್ಲಿ ಈ 5 ಹೈಕೋರ್ಟ್‌ಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಖಾಲಿ ಹುದ್ದೆಗಳಿದ್ದವು. 2020ರ ಫೆಬ್ರವರಿ 20ರಂತೆ, ಅಧೀನ ನ್ಯಾಯಾಲಯಗಳಲ್ಲಿ 24,018 ನ್ಯಾಯಾಧೀಶರ ಹುದ್ದೆಗಳಲ್ಲಿ 5,146 ಖಾಲಿಯಿದ್ದವು. ಅಂದರೆ ಶೇ.21ರಷ್ಟು. ಬಿಹಾರದ ಅಧೀನ ನ್ಯಾಯಾಲಯಗಳಲ್ಲಿ ಶೇ.40ರಷ್ಟು ಅಂದರೆ 776 ಹುದ್ದೆಗಳು, ಹರ್ಯಾಣದ ಅಧೀನ ನ್ಯಾಯಾಲಯಗಳಲ್ಲಿ ಶೇ.38 ಅಂದರೆ, 297 ಮತ್ತು ಜಾರ್ಖಂಡ್ ಅಧೀನ ನ್ಯಾಯಾಲಯಗಳಲ್ಲಿ ಶೇ.32 ಅಂದರೆ 219 ಹುದ್ದೆಗಳು ಖಾಲಿಯಿದ್ದವು.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆಂದೇ ಸ್ಥಾಪಿಸಲಾಗಿರುವ ಟ್ರಿಬ್ಯೂನಲ್‌ಗಳು ಮತ್ತು ವಿಶೇಷ ನ್ಯಾಯಾಲಯಗಳಲ್ಲಿಯೇ ಹೆಚ್ಚಿನ ಪ್ರಕರಣಗಳು ಬಾಕಿಯಿವೆ ಮತ್ತು ಅಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆಯೂ ಜಾಸ್ತಿ. 2020ರ ಕೊನೆಯಲ್ಲಿ, 21,259 ಪ್ರಕರಣಗಳು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಬಾಕಿ ಉಳಿದಿದ್ದವು. 2021ರ ಎಪ್ರಿಲ್ ಹೊತ್ತಿಗೆ, ಎನ್‌ಸಿಎಲ್‌ಟಿಯ 63 ಹುದ್ದೆಗಳಲ್ಲಿ 39 ಹುದ್ದೆಗಳು ಮಾತ್ರ ತುಂಬಿದ್ದವು.

ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಯಾದ ಎರಡು ದಶಕಗಳಲ್ಲಿ, ಅಧೀನ ನ್ಯಾಯಾಲಯಗಳು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ ಎಂದು ವರದಿ ಹೇಳುತ್ತದೆ. 2021ರ ಮೇ 31ರ ಪ್ರಕಾರ, 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 956 ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಲ್ಲಿ 9.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿದ್ದವು.

ಕಳೆದ ಡಿಸೆಂಬರ್‌ನಲ್ಲಿ ಕಾನೂನು ಸಚಿವರು ಲೋಕಸಭೆಗೆ ಕೊಟ್ಟ ಮಾಹಿತಿಯಂತೆ, ದೇಶದ ನ್ಯಾಯಾಂಗದಲ್ಲಿ ಒಟ್ಟು 26,568 ನ್ಯಾಯಾಧೀಶರ ನೇಮಕಾತಿಗೆ ಅವಕಾಶವಿದೆ. ಇದರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸಂಖ್ಯೆ 34; ಹೈಕೋರ್ಟ್ ಗಳ ನ್ಯಾಯಾಧೀಶರ ಸಂಖ್ಯೆ 1,114; ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ಸಂಖ್ಯೆ 25,420.

ಸುದೀರ್ಘ ಅವಧಿಯಿಂದ ಪ್ರಕರಣಗಳು ಬಾಕಿಯುಳಿವುದು ದೇಶದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಮಿತಿಮೀರುವುದಕ್ಕೆ ಕಾರಣವಾಗುತ್ತಿದೆ. 2019ರ ಡಿಸೆಂಬರ್ 31ರ ಹೊತ್ತಿನ ಅಂಕಿಅಂಶಗಳಂತೆ ದೇಶದ ಜೈಲುಗಳಲ್ಲಿರುವ ಕೈದಿಗಳ ಸಂಖ್ಯೆ ಸುಮಾರು 4.8 ಲಕ್ಷ. ಅವರಲ್ಲಿ ಮೂರನೇ ಎರಡರಷ್ಟು, ಅಂದರೆ 3.3 ಲಕ್ಷ ಮಂದಿ ವಿಚಾರಣಾಧೀನ ಕೈದಿಗಳೇ ಆಗಿದ್ಧಾರೆ. ಆ ಅಂಕಿ ಅಂಶಗಳ ಪ್ರಕಾರ, 5,011 ವಿಚಾರಣಾಧೀನ ಕೈದಿಗಳನ್ನು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಜೈಲುಗಳಲ್ಲಿ ಇಡಲಾಗಿದೆ. ಅದರಲ್ಲೂ, ಅಷ್ಟು ದೀರ್ಘ ಅವಧಿಯಿಂದ ಜೈಲೊಳಗಿರುವ ವಿಚಾರಣಾಧೀನ ಕೈದಿಗಳ ಅರ್ಧಕ್ಕಿಂತಲೂ ಹೆಚ್ಚು ಕೈದಿಗಳು ಇದ್ದುದು ಉತ್ತರ ಪ್ರದೇಶ (2,142) ಮತ್ತು ಮಹಾರಾಷ್ಟ್ರ (394) ಜೈಲುಗಳಲ್ಲಿ.

ನ್ಯಾಯಾಲಯಗಳಲ್ಲಿ ಪ್ರಕರಣಗಳು

ಬಾಕಿಯಿರುವುದಕ್ಕೆ ಕೆಲ ಪ್ರಮುಖ ಕಾರಣಗಳು:

1.ಹೆಚ್ಚು ಹೆಚ್ಚು ಕಾನೂನು ಅರಿವಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆಹೋಗುತ್ತಿರುವವರ ಸಂಖ್ಯೆ ಹೆಚ್ಚಿರುವುದು.

2.ಪಿಐಎಲ್‌ನಂಥ ಕಾನೂನು ಸೌಲಭ್ಯಗಳು ಮತ್ತು ಆರ್‌ಟಿಐನಂಥ ಹಕ್ಕುಗಳ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಜನರು ನ್ಯಾಯಾಲಯಗಳ ಕದ ತಟ್ಟುವುದು ಸಾಧ್ಯವಾಗಿದೆ.

ದೇಶದ ನಾಗರಿಕರ ಒಳಿತಿಗಾಗಿ ಹೀಗೆ ಕಾನೂನು ನೆರವು ಸಿಗುವಂತಾಗಿರುವುದು ಮಹತ್ವದ ಸಂಗತಿಯಾದರೂ, ಅದಕ್ಕೆ ಪೂರಕವಾಗಿ ಸಂಪನ್ಮೂಲಗಳ ಹೊಂದಿಕೆಯಾಗದಿರುವುದು ನ್ಯಾಯಾಲಯಗಳ ಮೇಲಿನ ಹೆಚ್ಚಿನ ಹೊರೆಗೆ ಕಾರಣ. ಮುಖ್ಯವಾಗಿ,

1.ನ್ಯಾಯಾಧೀಶರ ಕೊರತೆ: ಪರಿಣಿತರೇ ಅಭಿಪ್ರಾಯಪಡು ವಂತೆ ದೇಶದ ನ್ಯಾಯಾಲಯಗಳಿಗೆ ಈಗ ನಿಗದಿಗೊಳಿಸಲಾಗಿರುವ ನ್ಯಾಯಾಧೀಶರ ಪ್ರಮಾಣ ಏನೇನೂ ಸಾಲದು. ಇದರ ನಡುವೆಯೇ ಇರುವ ಹುದ್ದೆಗಳೂ ಬಹು ಕಾಲ ಖಾಲಿಯೇ ಇರುತ್ತವೆ. ಕೇಂದ್ರ ಸರಕಾರಕ್ಕೆ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಚುರುಕುಗೊಳಿಸುವುದರಲ್ಲಿ ಆಸಕ್ತಿಯಿಲ್ಲ ಎಂಬ ದೂರುಗಳೂ ಇವೆ.

2.ಕೋರ್ಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲ: ಈಗಿನ ಸನ್ನಿವೇಶದಲ್ಲಿ ಹೆಚ್ಚು ಸಂಪನ್ಮೂಲದೊಂದಿಗೆ ಹೆಚ್ಚಿನ ಸಂಖ್ಯೆಯ ಕೋರ್ಟ್‌ಗಳ ಅಗತ್ಯವಿದೆ. ಆದರೆ ಇರುವ ಕೋರ್ಟ್‌ಗಳಲ್ಲೂ ನ್ಯಾಯಾಧೀಶರ ಕೊರತೆಯೂ ಸೇರಿದಂತೆ ಹಲವು ಬಗೆಯ ಸಂಪನ್ಮೂಲ ಕೊರತೆಯಿದೆ. ನ್ಯಾಯಾಂಗಕ್ಕೆ ಬಜೆಟ್‌ನಲ್ಲಿನ ಹಂಚಿಕೆ ಕೂಡ ಆಶಾದಾಯಕವಾಗಿಲ್ಲ.

ನ್ಯಾಯಾಲಯಗಳನ್ನು ಆಧುನಿಕಿಕರಣಗೊಳಿಸುವ, ಡಿಜಿಲೀಕರಣಗೊಳಿಸುವ ಪ್ರಕ್ರಿಯೆ ಸಾಕಷ್ಟು ತೀವ್ರ ಗತಿಯಲ್ಲಿಲ್ಲ.

ಹೀಗೆ ದೀರ್ಘಾವಧಿಯಿಂದ ಪ್ರಕರಣಗಳು ಬಾಕಿಯುಳಿಯುವುದರಿಂದ ಉಂಟಾಗುವ ಪರಿಣಾಮಗಳೇನು?:

1.ಮುಖ್ಯವಾಗಿ, ನ್ಯಾಯ ವ್ಯವಸ್ಥೆಯಲ್ಲಿ ಜನಸಾಮಾನ್ಯರು ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ. ನ್ಯಾಯಕ್ಕಾಗಿ ಎಷ್ಟೋ ವರ್ಷ ಕಾಯುವುದು ಹತಾಶೆಯನ್ನು ತರುತ್ತದೆ.

2.ಬಡವರು ಮತ್ತು ವಿಚಾರಣಾ ಕೈದಿಗಳ ಪಾಲಿಗೆ ಇಂಥ ಸನ್ನಿವೇಶದಲ್ಲಿ ನ್ಯಾಯ ಎನ್ನುವುದು ಎಟುಕಲಾರದಂತಾಗುತ್ತದೆ.

3.ದೀರ್ಘಕಾಲ ಕಾದ ಬಳಿಕವೂ ನ್ಯಾಯ ದೊರೆಯುವುದೆಂಬ ನಿರೀಕ್ಷೆಯೂ ಇರುವುದಿಲ್ಲ.

4.ತ್ವರಿತ ನ್ಯಾಯ ವ್ಯವಸ್ಥೆ ಇದ್ದರೆ ಮತ್ತೆ ನ್ಯಾಯಕ್ಕಾಗಿ ಮೊರೆಹೋಗುವ ಅವಕಾಶ ಸಾಧ್ಯವಾಗುತ್ತದೆ ಮತ್ತು ಹೋರಾಡುವ ಶಕ್ತಿಯಾದರೂ ನ್ಯಾಯ ಕೇಳಹೊರಟವರಲ್ಲಿ ಇರುತ್ತದೆ.

ಇದಕ್ಕೇನು ಪರಿಹಾರ?

1.ಪರಿಣಿತರು ಅಭಿಪ್ರಾಯಪಡುವಂತೆ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವ ನಿಟ್ಟಿನ ಪ್ರಕ್ರಿಯೆಗಳು ಆಗಬೇಕು.

2.ಖಾಲಿಯಿರುವ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು.

3.ನ್ಯಾಯದಾನ ತ್ವರಿತವೂ, ಕೈಗೆಟುಕುವಂತೆಯೂ ಆಗಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳು, ಲೋಕ ಅದಾಲತ್‌ಗಳು ಮತ್ತು ಗ್ರಾಮ ನ್ಯಾಯಾಲಯಗಳು ಹೀಗೆ ಕೋರ್ಟ್‌ಗಳು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News