ನೆರೆರಾಷ್ಟ್ರಗಳ ಬಿಕ್ಕಟ್ಟಿಗೆ ಆತಂಕಿತ ಭಾರತ
ನೆರೆ ದೇಶಗಳಲ್ಲಿ ದಂಗೆಯಾದರೆ, ರಾಜಕೀಯ ವಿಪ್ಲವ ತಲೆದೋರಿದರೆ ಅದರ ಬಿಸಿಗೆ ಭಾರತವೂ ನಲುಗುವಂತಾಗುತ್ತದೆ. ಗಂಭೀರ ಕಳವಳಕ್ಕೂ ಅಂಥ ವಿದ್ಯಮಾನಗಳು ಕಾರಣವಾಗುತ್ತವೆ. ಯಾಕೆಂದರೆ ಭಾರತದ ನೆರೆಯ ಎಲ್ಲ ದೇಶಗಳ ಮೇಲೂ ಚೀನಾ ಗಾಳಿಯಿದೆ. ಅದೇ ವೇಳೆ, ಭಾರತ ತನ್ನ ನೆರೆಯ ದೇಶಗಳ ಜೊತೆಗಿನ ಸಂಬಂಧವನ್ನು ಇತ್ತೀಚಿನ ವರ್ಷಗಳಲ್ಲಿ ಕೆಡಿಸಿಕೊಳ್ಳುತ್ತಲೇ ಬಂದಿದೆ. ಹೀಗಿರುವಾಗ, ಅಪಾಯದ ಸಾಧ್ಯತೆ ಆತಂಕ ಮೂಡಿಸದೇ ಇರುವುದಿಲ್ಲ.
ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ.
ಅಲ್ಲಿನ ರಾಜಕೀಯ ವಿಪ್ಲವ ಭಾರತದ ರಾಜತಾಂತ್ರಿಕತೆಗೂ ಒಡ್ಡಬಹುದಾದ ಸವಾಲುಗಳು ಹಲವಾರಿರಬಹುದು.
ನೆರೆ ದೇಶಗಳಲ್ಲಿ ದಂಗೆಯಾದರೆ, ರಾಜಕೀಯ ವಿಪ್ಲವ ತಲೆದೋರಿದರೆ ಅದರ ಬಿಸಿಗೆ ಭಾರತವೂ ನಲುಗುವಂತಾಗುತ್ತದೆ. ಗಂಭೀರ ಕಳವಳಕ್ಕೂ ಅಂಥ ವಿದ್ಯಮಾನಗಳು ಕಾರಣವಾಗುತ್ತವೆ. ಯಾಕೆಂದರೆ ಭಾರತದ ನೆರೆಯ ಎಲ್ಲ ದೇಶಗಳ ಮೇಲೂ ಚೀನಾ ಗಾಳಿಯಿದೆ. ಅದೇ ವೇಳೆ, ಭಾರತ ತನ್ನ ನೆರೆಯ ದೇಶಗಳ ಜೊತೆಗಿನ ಸಂಬಂಧವನ್ನು ಇತ್ತೀಚಿನ ವರ್ಷಗಳಲ್ಲಿ ಕೆಡಿಸಿಕೊಳ್ಳುತ್ತಲೇ ಬಂದಿದೆ. ಹೀಗಿರುವಾಗ, ಅಪಾಯದ ಸಾಧ್ಯತೆ ಆತಂಕ ಮೂಡಿಸದೇ ಇರುವುದಿಲ್ಲ.
ಈಗ ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನಿಂದಾಗಿ ಮತ್ತೊಮ್ಮೆ ರಾಜತಾಂತ್ರಿಕ ಸವಾಲುಗಳು ಎದುರಾಗಿವೆ.
ಬಾಂಗ್ಲಾ ಬಿಕ್ಕಟ್ಟು, ಅದರ ನಂತರದ ಬೆಳವಣಿಗೆಗಳು, ಭಾರತದೆದುರಿನ ಸಂದಿಗ್ಧ ಇವೆಲ್ಲವನ್ನೂ ನೋಡುವ ಮೊದಲು ಇತರ ನೆರೆದೇಶಗಳಲ್ಲಿನ ದಂಗೆಗಳನ್ನು ಒಮ್ಮೆ ನೆನಪಿಸಿಕೊಳ್ಳೋಣ.
1. ಪಾಕಿಸ್ತಾನ
ಆ ದೇಶದ ಸ್ಥಾಪನೆ ಬಳಿಕ ಈವರೆಗಿನ ಅರ್ಧಕ್ಕಿಂತ ಹೆಚ್ಚು ಅವಧಿಯಲ್ಲಿ ಸೇನೆಯೇ ಆಡಳಿತ ನಡೆಸಿದೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರಗಳು ಒಂದೋ ಅಧ್ಯಕ್ಷರಿಂದ ವಜಾಗೊಂಡಿವೆ, ಇಲ್ಲವೇ ಸೇನೆಯ ದಂಗೆಯಿಂದ ಪತನಗೊಂಡಿವೆ. ಒಂದು ಬಾರಿ ಮಾತ್ರ ಚುನಾಯಿತ ಸರಕಾರ 5 ವರ್ಷದ ಆಡಳಿತ ಪೂರ್ಣಗೊಳಿಸಿತ್ತು. ಜನರಲ್ ಪರ್ವೇಝ್ ಮುಶರ‌್ರಫ್ ದೇಶದ ಅಧ್ಯಕ್ಷ ಹಾಗೂ ಸೇನಾ ಮುಖ್ಯಸ್ಥರಾಗಿ ಐದು ವರ್ಷ ಆಡಳಿತ ನಡೆಸಿದ್ದು ದೀರ್ಘಾವಧಿ ಆಳ್ವಿಕೆಯ ಮತ್ತೊಂದು ನಿದರ್ಶನ.
ಮೊದಲ ಸೇನಾ ದಂಗೆ ನಡೆದದ್ದು 1958ರಲ್ಲಿ.
ಪಾಕಿಸ್ತಾನದ ಮೊದಲ ಅಧ್ಯಕ್ಷ ಇಸ್ಕಂದರ್ ಮಿರ್ಝಾ ಅವರು ದೇಶದ ಸಂವಿಧಾನ ಸಭೆ ಹಾಗೂ ಪ್ರಧಾನಿ ಫಿರೋಝ್ ಖಾನ್ ನೂನ್ ಅವರ ಸರಕಾರವನ್ನು ವಿಸರ್ಜಿಸಿ ಸೇನಾ ಮುಖ್ಯಸ್ಥ ಜನರಲ್ ಅಯ್ಯೂಬ್ ಖಾನ್‌ರನ್ನು ಚೀಫ್ ಮಾರ್ಷಿಯಲ್ ಲಾ ಅಧಿಕಾರಿ ಅಂತ ನೇಮಿಸಿದರು.
ಆದರೆ ಕೇವಲ ಹದಿಮೂರು ದಿನಗಳಲ್ಲಿ ಅಯ್ಯೂಬ್ ಖಾನ್ ತನ್ನನ್ನು ನೇಮಿಸಿದ ಅಧ್ಯಕ್ಷ ಇಸ್ಕಂದರ್ ಮಿರ್ಝಾ ವಿರುದ್ಧವೇ ದಂಗೆ ನಡೆಸಿ ಅಧಿಕಾರದಿಂದ ಕೆಳಕ್ಕಿಳಿಸಿ ತಾನೇ ಅಧ್ಯಕ್ಷರಾದರು.
ಆನಂತರ 1969ರಿಂದ ಸೇನಾ ಮುಖ್ಯಸ್ಥ ಜನರಲ್ ಯಾಹ್ಯಾ ಖಾನ್ ಅವಧಿಯಲ್ಲಿ ಮತ್ತೆ ಸೇನಾಡಳಿತ. 1971ರವರೆಗೂ ಮುಂದುವರಿಕೆ. 1977ರಲ್ಲಿ ಸೇನಾ ಮುಖ್ಯಸ್ಥ ಜನರಲ್ ಝಿಯಾ ಉಲ್ ಹಕ್ ದಂಗೆ ಮೂಲಕ ಝುಲ್ಫಿಕರ್ ಅಲಿ ಭುಟ್ಟೊ ಅವರನ್ನು ಪದಚ್ಯುತಗೊಳಿಸಿದರು. ಅಲ್ಲಿಂದ 1988ರವರೆಗೂ ಸೇನಾಡಳಿತವೇ ಮುಂದುವರಿಯಿತು. 1999ರಲ್ಲಿ ಸೇನಾ ಮುಖ್ಯಸ್ಥ ಪರ್ವೇಝ್ ಮುಶರ‌್ರಫ್ ದಂಗೆ ಮೂಲಕ ಮತ್ತೆ ಪಾಕಿಸ್ತಾನ ಸೇನಾಡಳಿತದ ವಶವಾಯಿತು. 2007ರವರೆಗೂ ಸೇನೆಯ ಆಡಳಿತವೇ ಇತ್ತು.
ಪರಿಣಿತರು ಅಭಿಪ್ರಾಯ ಪಡುವ ಹಾಗೆ, ಪಾಕಿಸ್ತಾನದಲ್ಲಿ ಚುನಾವಣೆ ನಡೆದರೂ,
ಪ್ರಜಾಸತ್ತೆಯ ಹೆಸರಿನ ಸರಕಾರವಿದ್ದರೂ ಸೇನೆಯ ಒಲವು ಬಲವಿದ್ದರೆ ಮಾತ್ರ ಉಳಿಗಾಲ.
ಈಚೆಗಂತೂ ಸೇನೆಗೆ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕಿಂತ ಹಿಂದಿನಿಂದಲೇ ನಿಯಂತ್ರಿಸುವುದು ಹೆಚ್ಚು ಅನುಕೂಲಕರ ಎನ್ನಲಾಗುತ್ತಿದೆ.
2.ಶ್ರೀಲಂಕಾ
2022ರಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು.
ಜನರು ಅಕ್ಷರಶಃ ದಂಗೆ ಎದ್ದಿದ್ದರು. ಶ್ರೀಲಂಕಾದ ಪ್ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಗೆ ಮನೆಗೆ ಬೆಂಕಿ ಹಚ್ಚಿದ್ದ ಪ್ರಜೆಗಳು, ಅಧ್ಯಕ್ಷ ಗೋತಬಯ ರಾಜಪಕ್ಸ ನಿವಾಸವನ್ನು ಕೊಳ್ಳೆ ಹೊಡೆದಿದ್ದರು.
ಶ್ರೀಲಂಕಾದ ಮಿತ್ರ ಎಂಬಂತೆ ಬಿಂಬಿಸಿಕೊಳ್ಳುವ ಚೀನಾ 22 ಮಿಲಿಯನ್ ಲಂಕಾ ನಾಗರಿಕರಿಗೆ ಸಹಾಯ ಮಾಡುತ್ತೇನೆಂದು ಬಂದು ದ್ವೀಪ ರಾಷ್ಟ್ರವನ್ನು ಸಾಲದ ಸಂಕೋಲೆಯಲ್ಲಿ ಸಿಲುಕಿಸಿದ್ದೇ ಇಷ್ಟೆಲ್ಲ ವಿಪ್ಲವಕ್ಕೆ ಕಾರಣವಾಗಿತ್ತು.
2022 ಜುಲೈ 9ರಂದು ಶ್ರೀಲಂಕಾದ ರಾಜಧಾನಿ ಕೊಲಂಬೊ ನಗರದಲ್ಲಿ ಲಕ್ಷಾಂತರ ಜನರ ಸಂಕಷ್ಟಗಳು ಆಕ್ರೋಶದ ರೂಪದಲ್ಲಿ ವ್ಯಕ್ತವಾಗಿದ್ದವು.
ಎಲ್ಲ ಪೊಲೀಸ್ ಪಹರೆಗಳನ್ನು ಭೇದಿಸಿ, ಅಧ್ಯಕ್ಷ ಗೋತಬಯ ರಾಜಪಕ್ಸರವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದ ಜನ, ಬಾಂಗ್ಲಾದೇಶದಲ್ಲಿನ ಹಸೀನಾ ಮನೆಯಲ್ಲಿ ಮಾಡಿದಂತೆಯೇ, ಅಲ್ಲಿ ಈಜುಕೊಳದಲ್ಲಿ ಈಜಾಡುತ್ತಿದ್ದರು. ಬೆಡ್ ಮತ್ತು ಸೋಫಾಗಳಲ್ಲಿ ಕುಣಿದಾಡುತ್ತಿದ್ದರು. ಅದೆಲ್ಲದಕ್ಕೂ ಮೊದಲೇ ಅಧ್ಯಕ್ಷ ರಾಜಪಕ್ಸ ಅಲ್ಲಿಂದ ಪಲಾಯನ ಮಾಡಿದ್ದರು.
ಶ್ರೀಲಂಕಾ ಅತಿಯಾದ ಹಣದುಬ್ಬರ, ಆಹಾರದ ಕೊರತೆ, ತೈಲದ ಕೊರತೆ, ವಿದ್ಯುತ್ ಅಲಭ್ಯತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು.
ಇದು ಸಾಮಾನ್ಯ ಜನತೆ ರೊಚ್ಚಿಗೇಳುವಂತೆ ಮಾಡಿತ್ತು.
ಇಂತಹ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಪಕವಾದ ರಾಜಕೀಯ ನಾಯಕತ್ವ ಇನ್ನಷ್ಟು ಅರಾಜಕತೆಗೆ ದಾರಿ ಮಾಡಿಕೊಟ್ಟಿತು.
2019ರ ವರದಿಯೊಂದರ ಪ್ರಕಾರ, ಶ್ರೀಲಂಕಾದ ರಾಷ್ಟ್ರೀಯ ಆದಾಯ ರಾಷ್ಟ್ರೀಯ ಖರ್ಚಿಗಿಂತ ಕಡಿಮೆಯಿತ್ತು. ಕೋವಿಡ್ ನಂತರದ ಆರ್ಥಿಕ ಸಂಕಷ್ಟವಂತೂ ದ್ವೀಪರಾಷ್ಟ್ರವನ್ನು ಪ್ರಕ್ಷುಬ್ಧವಾಗಿಸಿತ್ತು. ಅದು ಆರ್ಥಿಕತೆಯನ್ನೇ ನಾಶ ಮಾಡಿತು.
ಅತಿಯಾದ ಸರಕಾರಿ ಸಾಲ, ಹೆಚ್ಚುತ್ತಿದ್ದ ತೈಲ ಬೆಲೆಗಳು ದ್ವೀಪ ರಾಷ್ಟ್ರ ಶಿಥಿಲವಾಗಲು ಕಾರಣವಾದರೆ, ರಾಸಾಯನಿಕ ಗೊಬ್ಬರ ಆಮದಿನ ನಿಷೇಧ ಕೃಷಿ ಕ್ಷೇತ್ರವನ್ನು ಸಂಕಷ್ಟಕ್ಕೆ ತಳ್ಳಿತ್ತು. ಶ್ರೀಲಂಕಾದ ತೈಲ ಆಮದು ಕೂಡ ನಿಂತಿತ್ತು.
ಅನಿವಾರ್ಯವಿದ್ದರಷ್ಟೇ ಪೆಟ್ರೋಲ್, ಡೀಸೆಲ್ ಅನ್ನು ರೇಷನಿನಂತೆ ಹಂಚುವ ಪರಿಸ್ಥಿತಿ ಬಂದಿತ್ತು.
ಈ ಎಲ್ಲಾ ಆರ್ಥಿಕ ಸಂಕಷ್ಟಗಳ ಮಧ್ಯವೂ, ರಾಜಪಕ್ಸ ಸರಕಾರ ಸಹಾಯಕ್ಕಾಗಿ ಐಎಂಎಫ್ ಬಾಗಿಲು ಬಡಿದಿತ್ತು. ಆದರೆ ಇದರೊಂದಿಗೆ ಅತಿಯಾಗಿ ಅಪಮೌಲ್ಯಗೊಂಡ ಶ್ರೀಲಂಕಾದ ಕರೆನ್ಸಿ, ಹೆಚ್ಚುತ್ತಿದ್ದ ಹಣದುಬ್ಬರ ಸಾರ್ವಜನಿಕರ ಸಂಕಷ್ಟಗಳನ್ನು ಹೆಚ್ಚಿಸಿದ್ದವು.
ಚೀನಾ ಇದೆಲ್ಲವನ್ನೂ ತನ್ನ ಕಾರ್ಯತಂತ್ರದ ಲಾಭಕ್ಕಾಗಿ ಸಿಗುವ ಅವಕಾಶ ಎಂದು ಪರಿಗಣಿಸಿ, ಶ್ರೀಲಂಕಾದ ಆರ್ಥಿಕತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೊಂಚಿತ್ತು. ಇದಕ್ಕಾಗಿ ಆಗಲೇ ಸಂಕಷ್ಟದಲ್ಲಿದ್ದ ಶ್ರೀಲಂಕಾಕ್ಕೆ ವಿಪರೀತ ಬಡ್ಡಿ ದರದಲ್ಲಿ ಇನ್ನಷ್ಟು ಸಾಲ ನೀಡಿತು. ಭವಿಷ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾವನ್ನು ಬಳಸಿಕೊಳ್ಳುವುದೇ ಚೀನಾ ತಂತ್ರ.
3.ಮಾಲ್ದೀವ್ಸ್
1978ರ ಬಳಿಕ ಈ ದ್ವೀಪ ರಾಷ್ಟ್ರ ಆರ್ಥಿಕ ತೊಂದರೆಗಳು ಮತ್ತು ರಾಜಕೀಯ ಅಸ್ಥಿರತೆ ಎದುರಿಸಿತ್ತು. ಆ ಸಮಯದಲ್ಲಿ ಮೌಮೂನ್ ಅಬ್ದುಲ್ ಗಯೂಮ್ ಮಾಲ್ದೀವ್ಸ್ ಅಧ್ಯಕ್ಷರಾಗಿದ್ದರು. ಅಸ್ಥಿರತೆಯ ಕಾರಣಕ್ಕೆ ಅವರ ಸರಕಾರ 1980, 1983 ಮತ್ತು 1988ರಲ್ಲಿ ಮೂರು ದಂಗೆಗಳನ್ನು ಎದುರಿಸಿತ್ತು.
1988ರಲ್ಲಂತೂ ಭಾರತದ ಮಿಲಿಟರಿಯೇ ಆಪರೇಷನ್ ಕ್ಯಾಕ್ಟಸ್ ಹೆಸರಿನ ಕಾರ್ಯಾರಣೆ ಮೂಲಕ ದಂಗೆ ಕೊನೆಗೊಳಿಸಿ ಮಾಲ್ದೀವ್ಸ್ ಪ್ರಜಾಪ್ರಭುತ್ವವನ್ನು ಕಾಪಾಡಿತ್ತು.
1988ರ ನವೆಂಬರ್ 3ರಂದು ಉಗ್ರಗಾಮಿ ಲಂಕಾ ತಮಿಳು ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಆರ್ಗನೈಸೇಶನ್ ಆಫ್ ತಮಿಳ್ ಈಳಂನ ಸುಮಾರು 400 ಬಂದೂಕುಧಾರಿಗಳು ಮಾಲ್ದೀವ್ಸ್ ಅಧ್ಯಕ್ಷರ ವಿರುದ್ಧ ದಂಗೆ ಎಬ್ಬಿಸಿದ್ದರು. ಕೆಲವು ದಾಳಿಕೋರರು ಪ್ರವಾಸಿಗರ ವೇಷದಲ್ಲಿ ಮಾಲ್ದೀವ್ಸ್ ರಾಜಧಾನಿ ಮಾಲೆಗೆ ನುಗ್ಗಿದ್ದರು. ತಿಂಗಳುಗಳ ಕಾಲ ಸಿದ್ಧತೆ ನಡೆಸಿದ ಬಳಿಕ ಬಂಡುಕೋರರು ಮಾಲೆ ಮೇಲೆ ದಾಳಿ ಮಾಡಿದ್ದರೆಂಬುದು ಆನಂತರ ತಿಳಿದಿತ್ತು.
ಭಾರೀ ಪ್ರಮಾಣದ ಬಂದೂಕುಗಳು, ಎಕೆ -47 ಗನ್‌ಗಳು, ಗ್ರೆನೇಡ್‌ಗಳೊಂದಿಗೆ ಬಂದಿದ್ದ ಅವರು ಆಯಕಟ್ಟಿನ ಕಟ್ಟಡಗಳ ಮೇಲೆ ದಾಳಿಯನ್ನು ನಡೆಸಿದ್ದರು.
ಪ್ರಮುಖ ಸರಕಾರಿ ಕಟ್ಟಡಗಳು, ವಿಮಾನ ನಿಲ್ದಾಣಗಳು, ಬಂದರುಗಳು, ದೂರದರ್ಶನ ಮತ್ತು ರೇಡಿಯೊ ಕೇಂದ್ರಗಳು ಸೇರಿದಂತೆ ರಾಜಧಾನಿ ಮೇಲೆ ಬಹುತೇಕ ನಿಯಂತ್ರಣ ಪಡೆದುಕೊಂಡಿದ್ದರು. ಮಾಲ್ದೀವ್ಸ್‌ನ ಏಕೈಕ ಸಶಸ್ತ್ರ ಪಡೆ ಎನ್‌ಎಸ್‌ಎಸ್‌ನ ಪ್ರಧಾನ ಕಚೇರಿಯೂ ಬಂಡುಕೋರರ ವಶವಾಗಿತ್ತು. ದಂಗೆಕೋರರು ಮಾಲ್ದೀವ್ಸ್ ಶಿಕ್ಷಣ ಸಚಿವರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದರು. ಅದಾದ ಬಳಿಕ ಅಧ್ಯಕ್ಷರ ಮನೆ ಮೇಲೆ ದಾಳಿ ಆರಂಭಿಸಿದ್ದರು.
ಅಧ್ಯಕ್ಷ ಗಯೂಮ್ ಹಲವು ದೇಶಗಳ ಮಿಲಿಟರಿ ನೆರವು ಕೋರಿದ್ದರು. ಅದಕ್ಕೆ ಮೊದಲು ಸ್ಪಂದಿಸಿದ್ದು ಭಾರತ.
ವಾಯುಪಡೆಯ 44 ಸ್ಕ್ವಾಡ್ರನ್, ಪ್ಯಾರಾಚೂಟ್ ಬ್ರಿಗೇಡ್ ಮಾಲ್ದೀವ್ಸ್‌ನ ಮುಖ್ಯ ವಿಮಾನ ನಿಲ್ದಾಣವಾದ ಹುಲ್ಹುಲೆಯಲ್ಲಿ ರಾತ್ರಿ ವೇಳೆ ಇಳಿದಿತ್ತು. ಅದೇ ಸಮಯದಲ್ಲಿ, ಭಾರತೀಯ ನೌಕಾಪಡೆ ಮಾಲ್ದೀವ್ಸ್ ಕಡೆಗೆ ಹಡಗುಗಳನ್ನು ಕಳುಹಿಸಿತ್ತು. ಪ್ಯಾರಾಟ್ರೂಪ್ ಸೇರಿದಂತೆ ಸುಮಾರು 1,600 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಬಂಡುಕೋರರು ಅಲ್ಲಿಂದ ಪಲಾಯನ ಮಾಡಿದ್ದರು. ಭಾರತೀಯ ಸೇನೆ ದ್ವೀಪ ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿತ್ತು. ಈ ಕಾರ್ಯಾಚರಣೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಿತ್ತು.
ಆದರೆ ಕಳೆದ ಕೆಲವು ದಶಕಗಳಲ್ಲಿ ಚೀನಾ ಮಾಡಿರುವ ಮೋಡಿಯಿಂದಾಗಿ ಅಲ್ಲಿ ‘ಇಂಡಿಯಾ ಔಟ್’ ಅಭಿಯಾನ ನಡೆಯುತ್ತಿದ್ದು, ಸಂಬಂಧಗಳು ಹಾಳಾಗಿವೆ.
4.ಮ್ಯಾನ್ಮಾರ್
2021ರಲ್ಲಿ ಮ್ಯಾನ್ಮಾರ್‌ನಲ್ಲಿ ಮತ್ತೊಮ್ಮೆ ಮಿಲಿಟರಿ ದಂಗೆ ಶುರುವಾಯಿತು. ಅದನ್ನು ವಿರೋಧಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆದಿತ್ತು. ಹಿಂಸಾಚಾರ ಹೆಚ್ಚಿಸಿದ್ದ ಸೇನೆ, ಪ್ರತಿಭಟನಾಕಾರರನ್ನು ನಿರ್ದಾಕ್ಷಿಣ್ಯವಾಗಿ ಹೊಡೆದು ಹಾಕುತ್ತಿತ್ತು. ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ಅಂತರ್‌ರಾಷ್ಟ್ರೀಯ ಖಂಡನೆ ಮತ್ತು ನಿರ್ಬಂಧಗಳಿಗೂ ಅಲ್ಲಿನ ಮಿಲಿಟರಿ ಆಡಳಿತ ಮಣಿದಿರಲಿಲ್ಲ. ಕ್ರೂರ ಮಿಲಿಟರಿ ಆಡಳಿತದ ನಂತರ ಹೆಚ್ಚಿನ ಪ್ರಜಾಪ್ರಭುತ್ವದ ಕಡೆಗೆ ನಿಧಾನವಾಗಿ ಸಾಗಿದ್ದ ದೇಶಕ್ಕೆ ಸಂಪೂರ್ಣ ಹಿನ್ನಡೆಯಾಗುವ ನಾಗರಿಕ ಯುದ್ಧದ ಸಾಧ್ಯತೆಯ ಬಗ್ಗೆ ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆ ವಿಶೇಷ ರಾಯಭಾರಿ ಎಚ್ಚರಿಸಿದ್ದರು.
5.ನೇಪಾಳ
ರಾಜಮನೆತನ ಕೊನೆಗೊಂಡು, ಜನಾಂದೋಲನ ಶುರುವಾದ ಮೇಲೆ, ಹಲವು ಬಗೆಯ ಪ್ರಕ್ಷುಬ್ಧತೆಯನ್ನು ನೇಪಾಳ ಎದುರಿಸಿತು. ಮಾವೋವಾದಿ ಬಂಡಾಯ 1996ರ ಫೆಬ್ರವರಿ 13ರಿಂದ 2006ರ ನವೆಂಬರ್ 26ರವರೆಗೂ ಮುಂದುವರಿದಿತ್ತು. 17,000 ಜನರ ಹತ್ಯೆ ಈ ಅವಧಿಯಲ್ಲಿ ನಡೆದಿದೆ ಎನ್ನಲಾಗುತ್ತದೆ.
ಇನ್ನು ಈಗ ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನ ವಿಚಾರಕ್ಕೆ ಬರುವುದಾದರೆ,
ಎಲ್ಲ ದಂಗೆಗಳ ಹಿಂದೆ ಇರುವ ಹಾಗೆಯೇ ಇಲ್ಲಿಯೂ ಇರುವುದು ಒಂದು ಅಲಕ್ಷಿತ ಕಿಡಿ. ವಿದ್ಯಾರ್ಥಿಗಳೇಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳದ, ಅದನ್ನು ತನ್ನ ವಿರುದ್ಧದ ರಾಜಕೀಯ ಮತ್ತು ವಿಪಕ್ಷಗಳ ಕುಮ್ಮಕ್ಕು ಎಂದು ಮಾತ್ರ ನೋಡಿದ ಶೇಕ್ ಹಸೀನಾ, ಪ್ರತಿಭಟನಾಕಾರರನ್ನು ಭಯೋತ್ಪಾದಕರು, ರಜಾಕಾರರು, ದೇಶದ್ರೋಹಿಗಳು ಎಂದು ಕರೆಯಲು, ಜರೆಯಲು ಹಿಂದೆ ಮುಂದೆ ನೋಡದೇ ಹೋದರು. ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸುವ ಅತ್ಯಂತ ಅವಿವೇಚನೆಯ ಕ್ರಮಕ್ಕೂ ಅವರು ಮುಂದಾದರು. ಪರಿಣಾಮ ಏನಾಗಿಹೋಯಿತೆಂಬುದನ್ನು ನೋಡುತ್ತಿದ್ದೇವೆ.
15 ವರ್ಷ ದೇಶವನ್ನಾಳಿದ್ದ, ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದ ಶೇಕ್ ಹಸೀನಾ, ಬದುಕುಳಿದರೆ ಸಾಕೆಂದು ಬರಿಗೈಯಲ್ಲಿ ದೇಶ ಬಿಟ್ಟು ಓಡಿಹೋಗಬೇಕಾಯಿತು.
ಹಸೀನಾ ಅಧಿಕೃತ ನಿವಾಸ ಲೂಟಿಯಾಗಿ ಹೋಯಿತು. ಆಕೆಯ ಪಕ್ಷ ಅವಾಮಿ ಲೀಗ್‌ನ ಹಲವಾರು ನಾಯಕರು ಮತ್ತವರ ಕುಟುಂಬದವರು ಜೀವ ತೆರಬೇಕಾಯಿತು. ಹಿಂಸೆ ನಿಯಂತ್ರಣ ಮೀರಿದಾಗ ಆಗಬಹುದಾದ ಎಲ್ಲ ಅನಾಹುತಗಳಿಗೆ ಬಾಂಗ್ಲಾದೇಶ ಕೂಡ ಈಗ ಸಾಕ್ಷಿಯಾಗುತ್ತಿದೆ.
ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟು ಭಾರತಕ್ಕೆ ಹೆಚ್ಚು ಆತಂಕಕಾರಿ ವಿಷಯವಾಗಿದೆ.
ಹಸೀನಾ ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡು ಬಂದಿದ್ದ ಹಿನ್ನೆಲೆಯಲ್ಲಿ ಈಗ ಅವರ ವಿರೋಧಿ ಬಣದ ಪ್ರಾಬಲ್ಯದ ಕಾಲದಲ್ಲಿ ಬಾಂಗ್ಲಾದೇಶದ್ದು ಭಾರತ ವಿರೋಧಿ ನೀತಿಯಾದೀತೇ ಎಂಬ ಆತಂಕ ಕಾಡುತ್ತಿದೆ. ಈಗಾಗಲೇ ಪಾಕಿಸ್ತಾನದೊಂದಿಗಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಈ ಆತಂಕ ಗಂಭೀರವಾದದ್ದಾಗಿದೆ.
ಪಾಕಿಸ್ತಾನದಂತೆ ಬಾಂಗ್ಲಾದೇಶವೂ ಭಾರತ ವಿರೋಧಿ ಉಗ್ರರ ನೆಲೆಯಾದೀತೇ ಎಂಬ ಅನುಮಾನಗಳು ಮೂಡಿವೆ.
ಭಾರತದ ಪಶ್ಚಿಮ ಬಂಗಾಳ, ತ್ರಿಪುರಾ, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಮಿನೊಂದಿಗೆ 4,096 ಕಿ.ಮೀ.ನಷ್ಟು ಗಡಿಯನ್ನು ಬಾಂಗ್ಲಾ ಹಂಚಿಕೊಂಡಿದೆ.
ಈಗ ಅಲ್ಲಿ ಪ್ರಕ್ಷುಬ್ಧ ಸ್ಥಿತಿಯಿರುವಾಗ ಭಾರತದೊಳಕ್ಕೆ ನುಸುಳುವವರ ಹಾವಳಿ ಹೆಚ್ಚಬಹುದೇ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಪಾಕಿಸ್ತಾನದಿಂದ 1971ರಲ್ಲಿ ಬಾಂಗ್ಲಾದೇಶ ಪ್ರತ್ಯೇಕಗೊಂಡಾಗಲೂ ಅಲ್ಲಿಂದ ದೊಡ್ಡ ಪ್ರಮಾಣದಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರಾಕ್ಕೆ ಜನ ನುಸುಳಿದ್ದರು. ಮ್ಯಾನ್ಮಾರ್‌ನಲ್ಲಿನ ಸೇನಾಡಳಿತದ ಹೊತ್ತಲ್ಲಿಯೂ ಸಾವಿರಾರು ನಿರಾಶ್ರಿತರು ಭಾರತದ ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್‌ಗೆ ನುಸುಳಿದ್ದರು. ಇನ್ನು ಅಸ್ಸಾಮಿಗೆ ಹೊಂದಿಕೊಂಡ ಬಾಂಗ್ಲಾ ಗಡಿಯಲ್ಲಂತೂ ಅನೇಕ ಕಡೆ ಬೇಲಿಯೇ ಇಲ್ಲದಿರುವುದರಿಂದ ಅಲ್ಲಿ ಒಳನುಸುಳುವಿಕೆ ಸುಲಭ ಎಂದು ಹೇಳಲಾಗುತ್ತದೆ.
ಬಾಂಗ್ಲಾದೇಶದ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಬಹು ದೊಡ್ಡ ರೀತಿಯಲ್ಲಿ ಭಾರತವನ್ನು ಕಾಡುವ ಆತಂಕವೆಂದರೆ ಚೀನಾ ಕುತಂತ್ರಕ್ಕೆ ಸಂಬಂಧಿಸಿದ್ದು. ಈಗಾಗಲೇ ಬಾಂಗ್ಲಾ ದಂಗೆಯ ಹಿಂದೆ ಪಾಕಿಸ್ತಾನ, ಚೀನಾದಂಥ ದೇಶಗಳ ಕೈವಾಡ ಇರಬಹುದೆ ಎಂಬ ಪ್ರಶ್ನೆಗಳು ಎದ್ದಿವೆ. ಭಾರತದ ಸುತ್ತಲಿನ ಮಿತ್ರರಾಷ್ಟ್ರಗಳೆಲ್ಲ ಶತ್ರುಗಳಾದರೆ ಅದಕ್ಕಿಂತ ಕಠಿಣ ಸ್ಥಿತಿ ಬೇರೊಂದಿಲ್ಲ. ಕಳೆದ ಕೆಲವು ವರ್ಷಗಳಲ್ಲಂತೂ ಅಕ್ಕಪಕ್ಕದ ದೇಶಗಳ ಜೊತೆಗಿನ ಭಾರತದ ಸಂಬಂಧ ಹದಗೆಡುತ್ತಿದೆ. ಭಾರತವನ್ನು ಮೂರು ದಿಕ್ಕುಗಳಲ್ಲಿ ಸುತ್ತುವರಿದಿರುವ ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿ ವ್ಯಾಪ್ತಿಯಲ್ಲಿ ಚೀನಾ ತನ್ನ ನೆಲೆ ಭದ್ರಪಡಿಸಿಕೊಳ್ಳುವ ಕಸರತ್ತಿನಲ್ಲಿದೆ.
ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿ ವ್ಯಾಪ್ತಿಯ ದೇಶಗಳಲ್ಲಿ ಬಂದರುಗಳ ನಿರ್ಮಾಣದ ಮೂಲಕ ತನ್ನ ಸೇನಾ ನೆಲೆ ಸ್ಥಾಪಿಸುತ್ತಿರುವ ಚೀನಾ ಈಗಾಗಲೇ ಭಾರತದ ಸುತ್ತ ಸ್ಟ್ರಿಂಗ್ ಆಫ್ ಪರ್ಲ್ಸ್ ಹೆಣೆಯುವ ತಂತ್ರ ನಡೆಸಿದೆ.
ಪಾಕಿಸ್ತಾನದ ಗ್ವಾಡಾರ್ ಬಂದರು, ಮಾಲ್ದೀವ್ಸ್‌ನ ಮಾಲೆ ಬಂದರು, ಶ್ರೀಲಂಕಾದ ಹಂಬನ್‌ಟೋಟ ಬಂದರು, ಬಾಂಗ್ಲಾದ ಢಾಕಾ ಬಂದರು, ಮ್ಯಾನ್ಮಾರ್‌ನ ಚ್ಯಾಪ್ಚ್ಯೂ ಬಂದರುಗಳ ಮೇಲೆ ಚೀನಾ ಹಿಡಿತವಿದೆ. ಭಾರತದ ನೆರೆಯ ದೇಶಗಳಿಗೆ ನೆರವು, ಸಹಕಾರದ ಹೆಸರಿನಲ್ಲಿ ಸಾಲ ನೀಡುತ್ತ ಮರುಳುಗೊಳಿಸುವ ಕೆಲಸದಲ್ಲೂ ಚೀನಾ ತೊಡಗಿದೆ.
ಪಾಕಿಸ್ತಾನದ ಗ್ವಾಡಾರ್ ಬಂದರಿನಿಂದ ಆರಂಭಿಸಿ, ಭಾರತದ ಸುತ್ತಲಿನ ಇತರ ದೇಶಗಳ ಬಂದರುಗಳನ್ನು ಜೋಡಿಸಿಕೊಳ್ಳುತ್ತ ತನ್ನ ಹಿವಾವ್ ಬಂದರಿನವರೆಗೆ ಸ್ಟ್ರಿಂಗ್ ಆಫ್ ಪರ್ಲ್ಸ್ ಹೆಣೆಯುವ ಮೂಲಕ ಏಶ್ಯದ ಪ್ರಮುಖ ದೇಶಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಲೇ, ಭಾರತವನ್ನು ಕಟ್ಟಿಹಾಕುವುದು ಚೀನಾ ಉದ್ದೇಶ ಎನ್ನಲಾಗಿದೆ.
ಭಾರತದ ನೆರೆಯ ಯಾವುದೇ ದೇಶದಲ್ಲಿ ರಾಜಕೀಯ ವಿಪ್ಲವ ತಲೆದೋರಿದರೆ ಅದನ್ನು ಸಂಭ್ರಮಿಸುವ ಚೀನಾ ಈಗಾಗಲೇ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ಮಾಲ್ದೀವ್ಸ್ ಈ ಎಲ್ಲ ದೇಶಗಳಲ್ಲೂ ತನ್ನ ಹಿಡಿತ ಸಾಧಿಸಿದೆ. ಯುದ್ಧದಂಥ ಅತಿರೇಕದ ಹೆಜ್ಜೆಗಳನ್ನು ತೆಗೆದುಕೊಳ್ಳುವ ಧೈರ್ಯವೇನೂ ಚೀನಾಕ್ಕೆ ಇಲ್ಲ ಎಂದುಕೊಳ್ಳಬಹುದಾದರೂ, ಬೆದರಿಸುವ ಅದರ ನಡೆಯನ್ನು ನಿರ್ಲಕ್ಷಿಸುವ ಹಾಗೆಯೂ ಇಲ್ಲ.