ಮರಳಿ ಬರುವುದೇ ಬಿಎಸ್‌ಎನ್‌ಎಲ್ ಶುಭ ಕಾಲ?
ಮೊಬೈಲ್ ರೀಚಾರ್ಜ್ ಬೆಲೆ ಏರಿಕೆ ಬೆನ್ನಲ್ಲೇ ದೊಡ್ಡ ಸಂಖ್ಯೆಯ ಗ್ರಾಹಕರು ಮತ್ತೆ ಸರಕಾರಿ ಸಂಸ್ಥೆ ಬಿಎಸ್‌ಎನ್‌ಎಲ್ ಗೆ ಪೋರ್ಟ್ ಮಾಡಲು ಮುಂದಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಆಗಿರುವ ಭಾರೀ ಬದಲಾವಣೆ ಹಾಗೂ ಅಭಿವೃದ್ಧಿ ಹೆಸರಲ್ಲಿ ಆಗಿರುವ ರಾಜಕೀಯ ನೋಡಿದರೆ ಇದು ಗಮನಾರ್ಹ ಬೆಳವಣಿಗೆ. ಹೇಗೆ ಬಿಎಸ್‌ಎನ್‌ಎಲ್ ಟೆಲಿಕಾಂನಲ್ಲಿ ಏಕಸ್ವಾಮ್ಯದಿಂದ ಸಂಪೂರ್ಣ ಬದಿಗೆ ಸರಿಯುವ ಸ್ಥಿತಿಗೆ ತಲುಪಿತು? ಅದಕ್ಕೆ ಒಂದೊಂದು ಸರಕಾರವೂ ಕೊಟ್ಟಿರುವ ಕೊಡುಗೆ ಎಷ್ಟು? ಹೇಗೆ ಖಾಸಗಿ ಕಂಪೆನಿಗಳು ಸಂಪೂರ್ಣ ಟೆಲಿಕಾಂ ಕ್ಷೇತ್ರವನ್ನು ಆವರಿಸಿಕೊಂಡು ಬಿಟ್ಟವು? ಹೇಗೆಲ್ಲಾ ಅವು ಜನರನ್ನು ಲೂಟಿ ಮಾಡಿದವು? ಇದಕ್ಕೆ ದೇಶದ ಜನ ಹಾಗೂ ಸರಕಾರ ತೆತ್ತ ಬೆಲೆ ಎಷ್ಟು? ಈಗ ಹೇಗೆ ಮತ್ತೆ ಬಿಎಸ್‌ಎನ್‌ಎಲ್ ನೆನಪಿಗೆ ಬರುತ್ತಿದೆ?
ಅದೊಂದು ಕಾಲ ಇತ್ತು. ಟೆಲಿಕಾಂ ವಲಯದಲ್ಲಿ ಮಾರುಕಟ್ಟೆಯ ಲೀಡರ್ ಆಗಿದ್ದದ್ದು, ತುಂಬ ಲಾಭದಲ್ಲಿದ್ದದ್ದು, ದೇಶದ ಹೆಮ್ಮೆಯಾಗಿದ್ದದ್ದು ಬಿಎಸ್‌ಎನ್‌ಎಲ್. ಅಂಥದ್ದು ಹೇಗೆ ಪೂರ್ತಿ ನಷ್ಟ ಕಂಡಿತು? ಹೇಗೆ ಆಕರ್ಷಣೆಯನ್ನೇ ಕಳೆದುಕೊಂಡಿತು?
ಬಿಎಸ್‌ಎನ್‌ಎಲ್ ಅಥವಾ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 2000ದಲ್ಲಿ ಶುರುವಾಯಿತು. ಅದು ತನ್ನ ಮೊಬೈಲ್ ಸೇವೆಗಳನ್ನು ಆರಂಭಿಸಿದ್ದು 2001ರಲ್ಲಿ. ಆ ಹೊತ್ತಿಗೆ ಖಾಸಗಿ ಕಂಪೆನಿಗಳು ಮಾರುಕಟ್ಟೆಯನ್ನು ಆಕ್ರಮಿಸಿದ್ದವು. ಅಷ್ಟಾಗಿಯೂ ಬಿಎಸ್‌ಎನ್‌ಎಲ್ ಬಹಳ ಬೇಗ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿತು ಮತ್ತು 2005ರ ಹೊತ್ತಿಗೆ ಅದು ಶೇ.47ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ದೇಶದ ಮೂಲೆಮೂಲೆಗಳನ್ನೂ ತಲುಪಿತ್ತು ಬಿಎಸ್‌ಎನ್‌ಎಲ್. 2000ದಿಂದ 2008ರವರೆಗೆ ಒಮ್ಮೆಯೂ ನಷ್ಟದ ಮಾತಾಡಿದ್ದೇ ಇರಲಿಲ್ಲ. ಆ 8 ವರ್ಷಗಳಲ್ಲಿ 46,668 ಕೋಟಿ ರೂ. ಲಾಭ ಗಳಿಸಿತ್ತು. 2004-2005 ಈ ಒಂದೇ ವರ್ಷದಲ್ಲಿ 10,000 ಕೋಟಿಗಳ ಲಾಭ ತಂದಿತ್ತು. ಭಾರತ ಸರಕಾರದ ಪಾಲಿಗೆ ಅದು ಹಾಲು ಕೊಡುವ ಹಸುವಾಗಿತ್ತು. ಏರ್‌ಸೆಲ್, ಡೊಕೊಮೊ, ಐಡಿಯಾ ಮೊದಲಾದವೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದವು.
ಆದರೆ ಆಮೇಲೆ ಶುರುವಾಗಿತ್ತು ಬಿಎಸ್‌ಎನ್‌ಎಲ್ ಅವನತಿ. ಒಂದು ದಶಕದ ನಂತರ 2015ರಲ್ಲಿ ಮೊಬೈಲ್ ಸೇವೆಯಲ್ಲಿ ಅದರ ಮಾರುಕಟ್ಟೆ ಪಾಲು ಶೇ.11ಕ್ಕೆ ಇಳಿಯಿತು. 2016ರಲ್ಲಿ ಮತ್ತಷ್ಟು ಕುಸಿದು, ಶೇ.8ಕ್ಕೆ ಬಂತು. ಎಷ್ಟು ಬೇಗ ಅದು ಮಾರುಕಟ್ಟೆಯನ್ನು ಆಕ್ರಮಿಸಿತ್ತೋ ಅದೇ ವೇಗದಲ್ಲಿ ಅದರ ಅವನತಿಯೂ ಆಯಿತು. ಖಾಸಗಿ ಟೆಲಿಕಾಂ ಕಂಪೆನಿಗಳು ಬೆಳೆದುಕೊಂಡು ಬಿಎಸ್‌ಎನ್‌ಎಲ್ ತನ್ನ ಹೆಚ್ಚುಗಾರಿಕೆ ಕಳೆದುಕೊಳ್ಳತೊಡಗಿತು. ಜಿಯೋ ಪ್ರವೇಶವಾಗುತ್ತಲೇ ಬಿಎಸ್‌ಎನ್‌ಎಲ್ ಇನ್ನೂ ಸೊರಗಿತು.
ಮಾರುಕಟ್ಟೆಯಲ್ಲಿ ತಾವು ಆಡಿದ್ದೇ ಆಟ ಎಂಬ ಖಾಸಗಿ ಕಂಪೆನಿಗಳ ಧೋರಣೆಯನ್ನು ಹದ್ದುಬಸ್ತಿನಲ್ಲಿಡಲು ಬಿಎಸ್‌ಎನ್‌ಎಲ್ ಬಲಗೊಳ್ಳಬೇಕಿರುವುದು ಅನಿವಾರ್ಯವಾಗಿದೆ. ಅಂಥ ಒಂದು ಸಾಧ್ಯತೆ ಈಗ ಜನಬೆಂಬಲದ ಮೂಲಕವೇ ತೆರೆದುಕೊಳ್ಳತೊಡಗಿದೆ.
ಜಿಯೋ, ಏರ್‌ಟೆಲ್, ವೊಡಾಫೋನ್‌ನಂತಹ ಖಾಸಗಿ ಕಂಪೆನಿಗಳು ಜುಲೈ 3ರಿಂದ ಮೊಬೈಲ್ ರೀಚಾರ್ಜ್ ಯೋಜನೆಗಳ ದರವನ್ನು ಶೇ.20-25ರಷ್ಟು ಹೆಚ್ಚಿಸಿವೆ. ಜನರು ಮತ್ತೊಮ್ಮೆ ಬಿಎಸ್‌ಎನ್‌ಎಲ್ ಅನ್ನು ನೆನಪಿಸಿಕೊಳ್ಳತೊಡಗಿದ್ದಾರೆ. ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುವ ಅಭಿಯಾನ ಶುರುವಾಗಿದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲ್ಯಾನ್ ದರಗಳನ್ನು ಹೆಚ್ಚಿಸಿರುವ ಕ್ರಮ ಬಳಕೆದಾರರ ಈ ಬಗೆಯ ಪ್ರತಿಕ್ರಿಯೆಗೆ ಕಾರಣವಾಗಿದೆ. ‘JioBoycott’ ಮತ್ತು ‘BSNL ಘರ್ ವಾಪ್ಸಿ’ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ.
ಇದು ಖಾಸಗಿ ಟೆಲಿಕಾಂ ಕಂಪೆನಿಗಳ ಧೋರಣೆ ವಿಚಾರದಲ್ಲಿ ಜನರ ನಡುವೆ ಬೆಳೆಯುತ್ತಿರುವ ಅಸಮಾಧಾನವನ್ನು ಎತ್ತಿ ತೋರಿಸುತ್ತದೆ. ಗ್ರಾಹಕರು ಹೀಗೆ ತಿರುಗಿಬಿದ್ದರೆ ಏರ್‌ಟೆಲ್, ಜಿಯೋ ಮತ್ತು ವಿಐ ಕಂಪೆನಿಗಳು ಏನು ಮಾಡಬಹುದು? ದೊಡ್ಡ ಸಮಸ್ಯೆಯೊಂದು ಅವಕ್ಕೆ ಎದುರಾಗಬಹುದೇ? ಗ್ರಾಹಕರನ್ನೂ ಕಳೆದುಕೊಳ್ಳಲು ಬಯಸದೆ, ದರವನ್ನೂ ತಗ್ಗಿಸಲಾರದೆ ಇಕ್ಕಟ್ಟಿನಲ್ಲಿ ಸಿಲುಕಿಯಾವೆ? ಈ ಟೆಲಿಕಾಂ ಕಂಪೆನಿಗಳು ತಮ್ಮ ಗಳಿಕೆಯನ್ನು ಹೆಚ್ಚಿಸಲು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ದುಬಾರಿ ಮಾಡುತ್ತವೆ. ಕೋಟಿಗಟ್ಟಲೆ ಬಳಕೆದಾರರ ಮೇಲೆ ಇದರ ಪರಿಣಾಮ ಉಂಟಾಗಲಿದೆ. ಅದೇ ಸಮಯದಲ್ಲಿ, ಬಿಎಸ್‌ಎನ್‌ಎಲ್ ತನ್ನ ಮೊಬೈಲ್ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಇನ್ನೂ ಹೆಚ್ಚಿಸಿಲ್ಲ ಎಂಬುದು ಗಮನಾರ್ಹ. ಈಗ ಬಿಎಸ್‌ಎನ್‌ಎಲ್ ಯೋಜನೆಗಳು ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್‌ಗಿಂತ ಬಹಳ ಅಗ್ಗವಾಗಿವೆ.
ಬಿಎಸ್‌ಎನ್‌ಎಲ್ ಬಗ್ಗೆ ಕಡಿಮೆ ಗೊತ್ತಿರುವ ಸಂಗತಿಯೆಂದರೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯದಲ್ಲಿ ಸತತವಾಗಿ ಹೂಡಿಕೆ ಮಾಡಿದ ಏಕೈಕ ಕಂಪೆನಿ ಅದು. ಎಲ್ಲಾ ಖಾಸಗಿ ಕಂಪೆನಿಗಳು ಈ ಪ್ರದೇಶಗಳಿಗೆ ತಮ್ಮ ಸೇವೆ ತಲುಪಿಸಲು ಬಿಎಸ್‌ಎನ್‌ಎಲ್ ಟವರ್‌ಗಳನ್ನೇ ಅವಲಂಬಿಸಿವೆ. ಈ ಹೆಚ್ಚಿನ ಪ್ರದೇಶಗಳಲ್ಲಿ ವಾಸ್ತವವಾಗಿ ಸೇವೆ ಒದಗಿಸುತ್ತಿರುವುದು ಬಿಎಸ್‌ಎನ್‌ಎಲ್. ಆದರೆ ಅದರ ಸ್ವಂತ ಸಾಮರ್ಥ್ಯವೇ ವ್ಯವಸ್ಥಿತವಾಗಿ ನಾಶವಾಯಿತು. ಬಿಎಸ್‌ಎನ್‌ಎಲ್ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಈ ಕಾರಣದಿಂದ ನಷ್ಟ ಅನುಭವಿಸುತ್ತಿದೆ.
ಜಿಯೋ ಮತ್ತು ಏರ್‌ಟೆಲ್, ವೊಡಾಫೋನ್ ಐಡಿಯಾದ ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ. ಆದರೆ ಬಿಎಸ್‌ಎನ್‌ಎಲ್ ಈಗಿರುವ ದರಗಳನ್ನೇ ಮುಂದುವರಿಸಲು ನಿರ್ಧರಿಸಿದೆ ಮತ್ತು ಇದು ಖಾಸಗಿ ಪ್ರತಿಸ್ಪರ್ಧಿಗಳು ವಿಧಿಸುವುದಕ್ಕಿಂತ ಕಡಿಮೆಯಾಗಿದೆ. ಅಸ್ತಿತ್ವದಲ್ಲಿರುವ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಮತ್ತು ಇತರ ಸೇವಾ ಪೂರೈಕೆದಾರರಿಂದ ಪೋರ್ಟ್ ಮಾಡುವ ಹೊಸ ಬಳಕೆದಾರರಿಗೆ ವಿಭಿನ್ನ ಯೋಜನೆಗಳಿವೆ.
ಟಾಪ್ ಬಿಎಸ್‌ಎನ್‌ಎಲ್ ಯೋಜನೆಗಳು:
ರೂ. 107 ಯೋಜನೆ - 3ಜಿಬಿಯ 4ಜಿ ಡೇಟಾ ಮತ್ತು 200 ನಿಮಿಷಗಳ ಧ್ವನಿ ಕರೆಗಳೊಂದಿಗೆ 35 ದಿನಗಳ ವ್ಯಾಲಿಡಿಟಿ.
ಮೊದಲ ರೀಚಾರ್ಜ್ ಕೂಪನ್ ಯೋಜನೆ ರೂ. 108 - ಇದು ಹೊಸ ಬಳಕೆದಾರರಿಗೆ ಅನ್ವಯಿಸುತ್ತದೆ. 28 ದಿನಗಳವರೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 1ಜಿಬಿ 4ಜಿ ಡೇಟಾ ಇರುತ್ತದೆ.
ರೂ. 197 ಯೋಜನೆ - ಇದು 70 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ, 2ಜಿಬಿಯ 4ಜಿ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಮೊದಲ 18 ದಿನಗಳವರೆಗೆ ಮಾತ್ರ ಇರುತ್ತದೆ.
ರೂ. 199 ಯೋಜನೆ - ಇದರಲ್ಲಿ ಸಂಪೂರ್ಣ 70 ದಿನಗಳವರೆಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 2ಜಿಬಿ ಡೇಟಾ ಸೌಲಭ್ಯವಿರುತ್ತದೆ.
ರೂ. 397 ಯೋಜನೆ - ಅನಿಯಮಿತ ಕರೆಗಳೊಂದಿಗೆ 150 ದಿನಗಳ ವ್ಯಾಲಿಡಿಟಿ ಮತ್ತು ಮೊದಲ 30 ದಿನಗಳವರೆಗೆ 2ಜಿಬಿ 4ಜಿ ಡೇಟಾವನ್ನು ಹೊಂದಿದೆ.
ರೂ. 797 ಯೋಜನೆ - ಒಟ್ಟು 300 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು ಮತ್ತು ಮೊದಲ 60 ದಿನಗಳವರೆಗೆ 2ಜಿಬಿ ಡೇಟಾ ಇರುತ್ತದೆ.
ರೂ 1,999 ಯೋಜನೆ - ಇದು ವಾರ್ಷಿಕ ಯೋಜನೆ. 365 ದಿನಗಳ ವ್ಯಾಲಿಡಿಟಿ, 600 ಜಿಬಿಯ 4ಜಿ ಡೇಟಾ, ಅನಿಯಮಿತ ಕರೆಗಳು, ಬಿಎಸ್‌ಎನ್‌ಎಲ್ ಟ್ಯೂನ್‌ಗಳು ಮತ್ತು ಮೂರನೇ ವ್ಯಕ್ತಿಯ ಚಂದಾದಾರಿಕೆ ಸೌಲಭ್ಯವಿದೆ.
ಈ ಯೋಜನೆಗಳು ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯದ ಉಳಿದ ಭಾಗಗಳಲ್ಲಿ ಅನ್ವಯಿಸುವುದಿಲ್ಲ.
ಏರ್‌ಟೆಲ್ ತಿಂಗಳಿಗೆ ದಿನಕ್ಕೆ 2ಜಿಬಿ ಡೇಟಾಗೆ 379 ರೂ.ಗಳನ್ನು ವಿಧಿಸುತ್ತದೆ ಮತ್ತು ರಿಲಯನ್ಸ್ ಜಿಯೋ 28 ದಿನಗಳ ಪ್ಲ್ಯಾನ್‌ಗೆ 349 ರೂ.ಗಳನ್ನು ವಿಧಿಸುತ್ತದೆ. ಜಿಯೋ, ಏರ್‌ಟೆಲ್ ಅಥವಾ ವೊಡಾಫೋನ್ ಐಡಿಯಾಗೆ ಬದಲಾಗಿ ಕೈಗೆಟುಕುವ ದರಗಳ ಯೋಜನೆಗಳು ಬಿಎಸ್‌ಎನ್‌ಎಲ್ ನಲ್ಲಿವೆ. ಆದರೆ ಬಿಎಸ್‌ಎನ್‌ಎಲ್ ಕವರೇಜ್ 4ಜಿ ನೆಟ್‌ವರ್ಕ್‌ಗೆ ನಿರ್ಬಂಧಿತವಾಗಿದೆ. ಇದು ಇತರ ಟೆಲಿಕಾಂಗಳಂತೆ 5ಜಿ ಸೇವೆ ಲಭ್ಯವಿಲ್ಲ.
ಈಗ ಮತ್ತೆ ಬಿಎಸ್‌ಎನ್‌ಎಲ್ ಯುಗ ಆರಂಭವಾಗಲಿದೆಯೇ? ಕಾದು ನೋಡೋಣ.
ಸರಕಾರಿ ಸಂಸ್ಥೆ ಬಿಎಸ್‌ಎನ್‌ಎಲ್ ಅವನತಿಗೆ ಸರಕಾರಗಳೇ ಕಾರಣವಾಗುತ್ತಿರುವುದು ವಿಪರ್ಯಾಸ. ನರೇಂದ್ರ ಮೋದಿ ಸರಕಾರ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋಗೆ ಲಾಭ ಮಾಡಿಕೊಡಲು ಬಿಎಸ್‌ಎನ್‌ಎಲ್ ಅನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿದೆ ಎಂಬ ಆರೋಪ ಬಹಳ ಸಮಯದಿಂದ ಇದೆ. ಬಿಎಸ್‌ಎನ್‌ಎಲ್ ವಿರುದ್ಧ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಗಮನಿಸುವುದಾದರೆ,
1. 4ಜಿ ಟೆಂಡರ್ ವಿವಾದ
ಬಿಎಸ್‌ಎನ್‌ಎಲ್ ತನ್ನ 4ಜಿ ನೆಟ್‌ವರ್ಕ್ ಉದ್ದೇಶಕ್ಕೆ ಉಪಕರಣಗಳನ್ನು ಖರೀದಿಸಲು ಟೆಂಡರ್ ಕರೆದಿತ್ತು.
ಆದರೆ, ಟೆಲಿಕಾಂ ಸಲಕರಣೆ ಮತ್ತು ಸೇವೆಗಳ ಪ್ರಚಾರ ಮಂಡಳಿ (ಟಿಇಪಿಸಿ) ದೂರಿನ ಹಿನ್ನೆಲೆಯಲ್ಲಿ ಈ ಟೆಂಡರ್ ಅನ್ನು ತಡೆಹಿಡಿಯಲಾಗಿದೆ. ಸ್ಥಳೀಯ ಮಾರಾಟಗಾರರಿಗಿಂತ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗುವ ಷರತ್ತುಗಳನ್ನು ವಿಧಿಸುವ ಮೂಲಕ ಟೆಂಡರ್ ಮೇಕ್ ಇನ್ ಇಂಡಿಯಾ ನೀತಿಯನ್ನು ಉಲ್ಲಂಘಿಸಿದೆ ಎಂಬುದು ದೂರು. ಬಿಎಸ್‌ಎನ್‌ಎಲ್ ಷರತ್ತುಗಳು ಸಮರ್ಥನೀಯವಾಗಿಯೇ ಇವೆಯೆನ್ನಲಾಗಿದೆಯಾದರೂ, ಸರಕಾರ ಟಿಇಪಿಸಿ ಪರವಾಗಿ ನಿಂತಿದೆ ಮತ್ತು ಟೆಂಡರ್‌ಗೆ ಹೊಸ ಮಾರ್ಗಸೂತ್ರಗಳನ್ನು ಸೂಚಿಸಲು ಸಮಿತಿಯನ್ನು ರಚಿಸಿದೆ. ಈ ಮೂಲಕ ಬಿಎಸ್‌ಎನ್‌ಎಲ್‌ನ 4ಜಿ ಅಳವಡಿಕೆ ಇನ್ನಷ್ಟು ಮುಂದಕ್ಕೆ ಹೋಗುವಂತೆ ಮಾಡಲಾಯಿತೆ ಎಂಬ ಪ್ರಶ್ನೆ ಎದ್ದಿದೆ. ಇಲ್ಲಿ ಟಿಇಪಿಸಿ ಬಿಎಸ್‌ಎನ್‌ಎಲ್ ತನ್ನ 4ಜಿ ನೆಟ್‌ವರ್ಕ್‌ಗೆ ಬದಲಾಗುವುದನ್ನು ತಡೆಯಲು ಪಟ್ಟಭದ್ರ ಹಿತಾಸಕ್ತಿಗಳು ಬಳಸುತ್ತಿರುವ ಒಂದು ಸಾಧನವಾಗಿದೆಯೇ ಹೊರತು ಬೇರೇನೂ ಅಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
2. ತಾರತಮ್ಯ ಧೋರಣೆ
ಏರ್‌ಟೆಲ್ ಮತ್ತು ವೊಡಾಫೋನ್‌ನಂತಹ ಖಾಸಗಿ ಟೆಲಿಕಾಂ ಕಂಪೆನಿಗಳು ನೋಕಿಯಾ ಮತ್ತು ಹುವಾವೆಯಂತಹ ಜಾಗತಿಕ ದೈತ್ಯ ಕಂಪೆನಿಗಳಿಂದ ಉಪಕರಣಗಳನ್ನು ಖರೀದಿಸಲು ಅವಕಾಶವಿದೆ. ಆದರೆ ಬಿಎಸ್‌ಎನ್‌ಎಲ್ ಅನ್ನು ಮಾತ್ರ ಸ್ಥಳೀಯ ಮಾರಾಟಗಾರರಿಂದಲೇ ಖರೀದಿಸುವಂತೆ ಕಟ್ಟಿಹಾಕಲಾಗಿದೆ. ಈ ತಾರತಮ್ಯ ಬಿಎಸ್‌ಎನ್‌ಎಲ್ ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡಲಾರದಂತೆ ಮಾಡಿದೆ. ಕೆಳದರ್ಜೆಯ ಉಪಕರಣಗಳ ಮೇಲಿನ ಅನಿವಾರ್ಯ ಅವಲಂಬನೆಯಿಂದಾಗಿ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಅಪ್‌ಗ್ರೇಡ್ ಮತ್ತು ವಿಸ್ತರಣೆ ಪ್ರಯತ್ನಗಳು ತಡವಾಗುತ್ತಿವೆ.
3. ರಿಲಯನ್ಸ್ ಜಿಯೋ ಕಡೆಗೆ ಒಲವು
ಮೋದಿ ಸರಕಾರ ರಿಲಯನ್ಸ್ ಜಿಯೋಗೆ ಹಲವಾರು ರೀತಿಯಲ್ಲಿ ನೆರವಾಗುತ್ತಿದೆ ಎಂಬ ಆರೋಪವೊಂದು ಪ್ರಮುಖವಾಗಿ ಕೇಳಿಬರುತ್ತಿದೆ. ಪ್ರಧಾನಿ ಮೋದಿ ಚಿತ್ರ ಬಳಸಿಯೇ ಜಿಯೋ ಜಾಹೀರಾತು ಪ್ರಕಟಿಸಿದಾಗ ಪ್ರಧಾನಿಯೇ ಜಿಯೋ ಬ್ರಾಂಡ್ ಅಂಬಾಸಡರ್ ತರಹ ಕಂಡಿತ್ತು. ನಂತರ ಅನುಮತಿಯಿಲ್ಲದೆ ಚಿತ್ರ ಬಳಸಿದ್ದು ಎಂದು ಹೇಳಿ 500 ರೂಪಾಯಿ ದಂಡ ವಿಧಿಸಿದ ತಮಾಷೆ ನಡೆದು ಹೋಯಿತು. ರಿಲಯನ್ಸ್ ಜಿಯೋಗೆ ಪ್ರಮುಖ ಸರಕಾರಿ ಗುತ್ತಿಗೆಗಳನ್ನು ನೀಡಲಾಗಿದೆ. ಸಾಂಪ್ರದಾಯಿಕವಾಗಿ ಬಿಎಸ್‌ಎನ್‌ಎಲ್ ನಿರ್ವಹಿಸಬೇಕಿದ್ದ ಕೆಲಸಗಳು ಜಿಯೋ ಪಾಲಾಗುತ್ತಿವೆ. ಉದಾಹರಣೆಗೆ ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಸೇವೆಗಳಲ್ಲಿ ಸಂಪರ್ಕ ಒದಗಿಸಲು ಜಿಯೋಗೆ ಅವಕಾಶ ಕಲ್ಪಿಸಲಾಗಿದೆ.
4. ಕಡಿಮೆಯಾಗುತ್ತಿರುವ ಪ್ರಚಾರ
2015ರ ನಂತರ ಸರಕಾರ ಬಿಎಸ್‌ಎನ್‌ಎಲ್ ಜಾಹೀರಾತು ವೆಚ್ಚವನ್ನು ಕಡಿಮೆ ಮಾಡಿದೆ. ಪ್ರಚಾರದ ಕೊರತೆಯಿಂದಾಗಿ ಅದರ ಮಾರುಕಟ್ಟೆ ಪಾಲು ಕುಸಿದಿದ್ದು, ಆರ್ಥಿಕ ಒತ್ತಡ ಎದುರಿಸುವಂತಾಗಿದೆ. 2005ರಲ್ಲಿ ಶೇ.21 ಇದ್ದ ಬಿಎಸ್‌ಎನ್‌ಎಲ್ ಮಾರುಕಟ್ಟೆ ಪಾಲು 2022ರ ವೇಳೆಗೆ ಶೇ.10ಕ್ಕೆ ಕುಸಿದಿದೆ.
5. ರಾಷ್ಟ್ರೀಯ ಭದ್ರತಾ ಇಬ್ಬಂದಿ ಮಾನದಂಡಗಳು
ಭಾರತ ಮತ್ತು ಚೀನಾ ನಡುವಿನ ಗಾಲ್ವಾನ್ ಕಣಿವೆ ಘರ್ಷಣೆ ಬಳಿಕ ದೂರಸಂಪರ್ಕ ಇಲಾಖೆ (DoT) ರಾಷ್ಟ್ರೀಯ ಭದ್ರತೆ ಉಲ್ಲೇಖಿಸಿ ಚೀನಾದ ಕಂಪೆನಿಗಳಿಂದ ಉಪಕರಣಗಳನ್ನು ಖರೀದಿಸದಂತೆ ಬಿಎಸ್‌ಎನ್‌ಎಲ್ ಅನ್ನು ನಿರ್ಬಂಧಿಸಿದೆ. ಆದರೆ ಈ ನಿಯಮ ಜಿಯೋ ಸೇರಿದಂತೆ ಖಾಸಗಿ ಕಂಪೆನಿಗಳಿಗೆ ಅನ್ವಯಿಸುವುದಿಲ್ಲ ಎಂಬುದು ವಿಪರ್ಯಾಸ. ರಾಷ್ಟ್ರೀಯ ಭದ್ರತೆ ಎನ್ನುತ್ತಿರುವ ಸರಕಾರ ಜಿಯೋಗೆ ಸೂಕ್ಷ್ಮ ಯೋಜನೆಗಳನ್ನು ವಹಿಸಿಕೊಟ್ಟಿರುವುದು ಮತ್ತೊಂದು ವಿಪರ್ಯಾಸ. ನಿಧಾನವಾಗಿ ಆದರೆ ಸ್ಥಿರವಾಗಿ, ಬಿಎಸ್‌ಎನ್‌ಎಲ್ ಜಾಗದಲ್ಲಿ ರಿಲಯನ್ಸ್ ಜಿಯೋ ಸರಕಾರಿ ಸೇವಾ ಪೂರೈಕೆದಾರ ಕಂಪೆನಿಯಾಗಿ ಸ್ಥಾಪಿತವಾಗುತ್ತಿದೆ. ಮೋದಿ ಸರಕಾರದ ನೀತಿಗಳು ಮತ್ತು ಕ್ರಮಗಳು ಬಿಎಸ್‌ಎನ್‌ಎಲ್ ಅನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿವೆ. ರಿಲಯನ್ಸ್ ಜಿಯೋ ಮತ್ತು ಅದರ ಮಾಲಕ ಮುಕೆೇಶ್ ಅಂಬಾನಿಗೆ ಇವು ಲಾಭ ತರುತ್ತವೆ. ಆದರೆ ನಮ್ಮದೇ ಸರಕಾರಿ ಸಂಸ್ಥೆ 4ಜಿಗೆ ಏರಲಾರದೆ, ಮಾರುಕಟ್ಟೆಯಲ್ಲೂ ದಿಟ್ಟತನದಿಂದ ನಿಲ್ಲಲಾರದು ಎನ್ನಿಸಿದೆ. ಹಣಕಾಸಿನ ನಿರ್ಬಂಧಗಳನ್ನು ಎದುರಿಸುತ್ತಿದೆ.
ವರದಿಗಳನ್ನು ಗಮನಿಸಿದರೆ, ಮೋದಿ ಸರಕಾರ ಬಿಎಸ್‌ಎನ್‌ಎಲ್‌ನ ಪುನರುಜ್ಜೀವನಕ್ಕಾಗಿ ಮಾಡಿದ್ದೇನೂ ಇಲ್ಲ.
ವಿಆರ್‌ಎಸ್ ಅಡಿಯಲ್ಲಿ 79,000 ಉದ್ಯೋಗಿಗಳನ್ನು ಮನೆಗೆ ಕಳಿಸಿ ಹಣಕಾಸು ಹೊರೆ ಕಡಿಮೆ ಮಾಡಿರುವುದನ್ನು ಬಿಟ್ಟರೆ ಇನ್ನಾವುದೇ ಮೌಲಿಕ ಕ್ರಮ ಕೈಗೊಂಡಿಲ್ಲ. ಬದಲಾಗಿ, ಬಿಎಸ್‌ಎನ್‌ಎಲ್ ಅನ್ನು ದುರ್ಬಲಗೊಳಿಸುವುದೇ ಸರಕಾರದ ರಹಸ್ಯ ಉದ್ದೇಶವಾಗಿದೆ ಎಂದೇ ಆರೋಪಗಳಿವೆ.
ಬಿಎಸ್‌ಎನ್‌ಎಲ್‌ನ ವ್ಯವಸ್ಥಿತ ನಾಶ ಎನ್‌ಡಿಎ ಸರಕಾರದಿಂದ ಮಾತ್ರವಲ್ಲ, ಯುಪಿಎಯಿಂದಲೂ ನಡೆದಿದೆ. ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಖಾಸಗಿ ಕಂಪೆನಿಗಳಿಗೂ ಮೊದಲು 4ಜಿ ಸೇವೆಗಳನ್ನು ಪ್ರಾರಂಭಿಸಲು ಏಕೆ ಸರಕಾರ ಅನುವು ಮಾಡದೇ ಹೋಯಿತು? ಬಿಜೆಪಿಗಿಂತ ಮೊದಲು, ಯುಪಿಎ ಕೂಡ ಖಾಸಗಿ ಕಂಪೆನಿಗಳಿಗೆ ಅನುಕೂಲವಾಗುವಂತೆಯೇ ಮಾಡಿತು. ಬಿಎಸ್‌ಎನ್‌ಎಲ್ ಅನ್ನು ಉದ್ದೇಶಪೂರ್ವಕವಾಗಿಯೇ ದಮನಿಸಲಾಯಿತು.
ದೇಶದಲ್ಲಿ ಮೊಬೈಲ್ ಫೋನ್ ಸೇವೆಗಳ ಪ್ರಾರಂಭದಿಂದ ಇದೆಲ್ಲವೂ ಶುರುವಾಗುತ್ತದೆ. 1995ರಲ್ಲಿ ಭಾರತದಲ್ಲಿ ಸೆಲ್ಯುಲಾರ್ ಸೇವೆಗಳನ್ನು ಒದಗಿಸಲು ಪರವಾನಿಗೆ ಪಡೆದ ಎಂಟು ಕಂಪೆನಿಗಳಲ್ಲಿ ಸಾರ್ವಜನಿಕ ವಲಯದ ಟೆಲಿಕಾಂ ಕಂಪೆನಿ ಇರಲಿಲ್ಲ. ಬಿಎಸ್‌ಎನ್‌ಎಲ್ ಶುರುವಾದದ್ದು 2000ದಲ್ಲಿ.