ಹಳಿ ತಪ್ಪಿರುವ ಪರೀಕ್ಷಾ ವ್ಯವಸ್ಥೆ: ಬಿಡುಗಡೆಯ ದಾರಿಯೆಲ್ಲಿ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಶ್ನೆಯೇ ಅಸಂಬದ್ಧ, ಒಂದೊಂದು ಪ್ರಶ್ನೆ ಪತ್ರಿಕೆಯದ್ದೂ ಲೆಕ್ಕ ಇದೆ ಎಂಬಲ್ಲಿಂದ ಇದೊಂದು ದೊಡ್ಡ ಸಾಂಸ್ಥಿಕ ವೈಫಲ್ಯ, ನಾವಿದರ ಹೊಣೆ ಹೊರುತ್ತೇವೆ ಎಂಬವರೆಗೆ ಬಂದು ನಿಂತಿದೆ ಮೋದಿ ಸರಕಾರ. ಯುಜಿಸಿ ನೆಟ್ ಪರೀಕ್ಷೆ ನಡೆದು, ಮರುದಿನವೇ ಅದು ರದ್ದಾಗಿದೆ. ಅಲ್ಲೂ ಅಕ್ರಮ ನಡೆದಿದೆ ಎಂದು ಕೇಂದ್ರ ಸರಕಾರವೇ ಒಪ್ಪಿಕೊಂಡು ಸಿಬಿಐ ತನಿಖೆಗೆ ವಹಿಸಿದೆ. ಅತ್ಯಂತ ಪ್ರತಿಷ್ಠಿತ, ಅಷ್ಟೇ ಸುರಕ್ಷಿತ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆ ಇದೆ ಎಂದು ಹೇಳಲಾಗಿದ್ದ ಭಾರತದಲ್ಲಿ ಈಗ ಆಗುತ್ತಿರುವುದೇನು? ಎಲ್ಲಿಗೆ ಬಂದು ತಲುಪಿದೆ ಇಲ್ಲಿನ ಸ್ಪರ್ಧಾತ್ಮಕ ಹಾಗೂ ಪ್ರವೇಶ ಪರೀಕ್ಷೆಗಳ ಅವಸ್ಥೆ? ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಮಾಡುತ್ತಾ ಹೋದಂತೆ ದೇಶದ ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದ್ದು ಹೇಗೆ? ಇದಕ್ಕೆ ಬಲಿಯಾದ ಕೋಟ್ಯಂತರ ವಿದ್ಯಾರ್ಥಿಗಳು, ಯುವಕರು, ಅವರ ಕುಟುಂಬದವರ ಗತಿ ಏನು?
ಮೇ 5 ರಂದು ನೀಟ್ ಪರೀಕ್ಷೆ ನಡೆದಿತ್ತು. ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ನಿಗದಿತ ವೇಳಾಪಟ್ಟಿಗಿಂತ ಕನಿಷ್ಠ 10 ದಿನಗಳ ಮೊದಲು ಲೋಕಸಭಾ ಚುನಾವಣಾ ಫಲಿತಾಂಶದಂದೇ ನೀಟ್ ಫಲಿತಾಂಶ ಪ್ರಕಟವಾದಾಗ ದೊಡ್ಡ ವಿವಾದವೇ ಭುಗಿಲೆದ್ದಿತು. ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವಿದ್ದಾಗಲೇ, 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿದ್ದು ತೀವ್ರ ವಿರೋಧಕ್ಕೆ ಕಾರಣವಾಯಿತು. ಫಲಿತಾಂಶ ತಿರುಚುವಿಕೆ, ಪೇಪರ್ ಸೋರಿಕೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ವಿಪಕ್ಷಗಳು ಸರಕಾರದ ವಿರುದ್ಧ ಹರಿಹಾಯ್ದವು.
ವಿಷಯ ರಾಜಕೀಯ ತಿರುವು ಪಡೆದುಕೊಂಡಿತು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಪೇಪರ್ ಲೀಕ್ ಆಗಿದ್ದುದು ಗಮನಿಸಲೇಬೇಕಿದ್ದ ಸಂಗತಿಯಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಅದರೆಡೆಗೆ ಬೆರಳು ಮಾಡಿ ಮಾತನಾಡಿದ್ದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೊದಲು ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಅಕ್ರಮ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಪ್ರತಿಪಕ್ಷಗಳು ಸುಳ್ಳುಗಳನ್ನು ಹರಡುತ್ತಿವೆ ಎಂದು ಆರೋಪಿಸಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಯೇ ಇಲ್ಲ ಎಂದಿತ್ತು ಎನ್‌ಟಿಎ. ಅಂತಹ ಅರೋಪಗಳು ಆಧಾರ ರಹಿತ, ಒಂದೊಂದು ಪ್ರಶ್ನೆಪತ್ರಿಕೆಯದ್ದೂ ಲೆಕ್ಕ ಇದೆ ಎಂದಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆಗಳಿಗೂ ನಿಜವಾದ ಪ್ರಶ್ನೆಪತ್ರಿಕೆಗೂ ಸಂಬಂಧವಿಲ್ಲ ಎಂದಿತ್ತು. ಪ್ರಶ್ನೆಪತ್ರಿಕೆಗಳು ಭಾರೀ ಭದ್ರತೆಯಲ್ಲಿರುತ್ತವೆ ಎಂದೆಲ್ಲ ಕೊಚ್ಚಿಕೊಂಡಿತ್ತು. ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಯಿತು.
ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಎನ್‌ಟಿಎಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು ಮತ್ತು ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕಿರುವುದನ್ನು ಖಾತರಿಪಡಿಸುವಂತೆ ಸೂಚಿಸಿತು.
ಈಗ ಎನ್‌ಟಿಎ ಮುಖಕ್ಕೆ ಹೊಡೆದ ಹಾಗೆ ಸತ್ಯಗಳು ಬಯಲಾಗಿವೆ. ಎನ್‌ಟಿಎಯನ್ನು ಸಮರ್ಥಿಸಿಕೊಳ್ಳುವುದರಲ್ಲೇ ಕಳೆದಿದ್ದ, ವಿಪಕ್ಷಗಳ ವಿರುದ್ಧವೇ ಮಾತಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಗವೂ ಬದಲಾಗಿಬಿಟ್ಟಿದೆ.
ಯಾವಾಗ ಬಿಹಾರದಲ್ಲಿ ನಾಲ್ವರ ಬಂಧನವಾಯಿತೋ, ಆಗ ಎನ್‌ಟಿಎ ಮತ್ತು ಧರ್ಮೇಂದ್ರ ಪ್ರಧಾನ್ ತಲೆ ತಗ್ಗಿಸಬೇಕಾದ ಸತ್ಯಗಳು ಹೊರಬಿದ್ದಿವೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಿಂದಿನ ರಾತ್ರಿ ಸೋರಿಕೆಯಾಗಿದೆ ಎಂದು ನಾಲ್ವರು ಬಂಧಿತರು ಒಪ್ಪಿಕೊಂಡಿರುವು ದರೊಂದಿಗೆ, ನೀಟ್ ಅಕ್ರಮ ವಿಚಾರಕ್ಕೆ ಹೊಸ ತಿರುವು ಸಿಕ್ಕಿದೆ. ಬಂಧಿತ ನಾಲ್ವರಲ್ಲಿ ಸ್ವತಃ ವಿದ್ಯಾರ್ಥಿ ಅನುರಾಗ್ ಯಾದವ್, ಅವರ ಚಿಕ್ಕಪ್ಪ ದಾನಪುರ ಪುರಸಭೆಯ ಜೂನಿಯರ್ ಇಂಜಿನಿಯರ್ ಸಿಕಂದರ್ ಕೂಡ ಸೇರಿದ್ಧಾರೆ. ಬಂಧಿತ ಇನ್ನಿಬ್ಬರು ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್. ಪರೀಕ್ಷೆಯ ಹಿಂದಿನ ದಿನ ಪ್ರಶ್ನೆ ಪತ್ರಿಕೆ ಸಿಕ್ಕಿದ್ದನ್ನು ಬಂಧಿತರು ಒಪ್ಪಿಕೊಂಡಿದ್ಧಾರೆ. ಮರುದಿನ ಪರೀಕ್ಷೆಯಲ್ಲಿ ಅದೇ ನಿಖರ ಪ್ರಶ್ನೆಗಳನ್ನು ಕೇಳಲಾಗಿತ್ತೆಂಬುದನ್ನೂ ಬಿಹಾರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಬಂಧಿತರು ಬಾಯ್ಬಿಟ್ಟಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಅವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಬಹುದು ಮತ್ತು ನೀಟ್ ಪಾಸಾಗಲು ಪ್ರತಿ ಆಕಾಂಕ್ಷಿಗಳಿಗೆ 30ಲಕ್ಷ ರೂ.ದಿಂದ 32 ಲಕ್ಷ ರೂ. ಖರ್ಚಾಗುತ್ತದೆ ಎಂದಿದ್ದರು ಎಂಬುದನ್ನು ವಿದ್ಯಾರ್ಥಿ ಅನುರಾಗ್ ಚಿಕ್ಕಪ್ಪ ಸಿಕಂದರ್ ಹೇಳಿದ್ದಾನೆ. ತಾನು ನಾಲ್ವರು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದಾಗಿಯೂ, ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಅವರಿಂದ ಪ್ರಶ್ನೆಪತ್ರಿಕೆ ಕೊಡಿಸಿ, ಆ ವಿದ್ಯಾರ್ಥಿಗಳಿಂದ ತಲಾ 30 ಲಕ್ಷದ ಬದಲು 40 ಲಕ್ಷ ರೂ. ಪಡೆದೆ ಎಂದೂ ಪೊಲೀಸರ ಬಳಿ ಸಿಕಂದರ್ ಒಪ್ಪಿಕೊಂಡಿದ್ದಾನೆ.
ಇದಕ್ಕೆ ಪೂರಕವಾಗಿ, ಮರುದಿನ ವಾಹನ ತಪಾಸಣೆ ವೇಳೆ ವಿದ್ಯಾರ್ಥಿಗಳ ಪ್ರವೇಶ ಪತ್ರದೊಂದಿಗೆ ಆತ ಸಿಕ್ಕಿಬಿದ್ದಿದ್ದು, ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದು ವರದಿಯಾಗಿದೆ.
ಏನೂ ನಡೆದೇ ಇಲ್ಲ ಎನ್ನುತ್ತಿದ್ದ ಶಿಕ್ಷಣ ಮಂತ್ರಿ ಈಗ ಎನ್‌ಟಿಎ ವಿರುದ್ಧ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ಪರೀಕ್ಷಾ ಅಕ್ರಮವನ್ನು ಎನ್‌ಟಿಎಯ ಸಾಂಸ್ಥಿಕ ವೈಫಲ್ಯ ಎಂದು ಅವರು ಹೇಳಿದ್ದಾರೆ ಮತ್ತು ನೈತಿಕ ಹೊಣೆಗಾರಿಕೆಯನ್ನು ಅವರು ಹೊತ್ತುಕೊಂಡಿದ್ದಾರೆ. ಬಿಹಾರದಲ್ಲಿ ಇಬ್ಬರು ಆಕಾಂಕ್ಷಿಗಳು ಪ್ರಶ್ನೆಪತ್ರಿಕೆಗಳಿಗೆ ಹಣ ಪಾವತಿಸಿರುವುದಾಗಿ ಒಪ್ಪಿಕೊಂಡ ಘಟನೆಯನ್ನು ಬೇರೆಯೇ ವಿಚಾರ ಎಂದಿರುವ ಅವರು, ಲಕ್ಷಗಟ್ಟಲೆ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ನೀಟ್ ಪರೀಕ್ಷೆ ರದ್ದುಗೊಳಿಸುವ ಸಾಧ್ಯತೆಯಿಲ್ಲ ಎಂದಿದ್ದಾರೆ. ಯಾವುದೇ ಎನ್‌ಟಿಎ ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಪ್ರಶ್ನೆಪತ್ರಿಕೆಗಳು ಡಾರ್ಕ್ ನೆಟ್‌ನಲ್ಲಿ ಮತ್ತು ಟೆಲಿಗ್ರಾಂ ಚಾನೆಲ್‌ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಗೃಹ ಸಚಿವಾಲಯವೇ ಖುದ್ದು ಖಾತ್ರಿಪಡಿಸಿಕೊಂಡ ಬಳಿಕ ಯುಜಿಸಿ-ನೆಟ್ ಪ್ರವೇಶ ಪರೀಕ್ಷೆಗಳನ್ನೂ ರದ್ದುಗೊಳಿಸಲಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಈ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪಿಡುಗಾಗಿ ವಕ್ಕರಿಸಿಕೊಂಡಿದೆ.
ಮತ್ತದು ಕೋಟಿಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳುಗೆಡವಿದೆ. ವಿವಿಧ ತನಿಖಾ ವರದಿಗಳ ಪ್ರಕಾರ, 15 ರಾಜ್ಯಗಳಲ್ಲಿ ಕಳೆದ 7 ವರ್ಷಗಳಲ್ಲಿ ನೇಮಕಾತಿ ಮತ್ತು ಬೋರ್ಡ್ ಪರೀಕ್ಷೆಗಳು ಸೇರಿದಂತೆ 70ಕ್ಕೂ ಹೆಚ್ಚು ಪರೀಕ್ಷೆಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ. ಇದರ ಪರಿಣಾಮವಾಗಿ ಬಲಿಪಶುವಾಗಿರುವವರು 1.7 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು. ಮೊನ್ನೆ ಪತ್ರಿಕೆ ಸೋರಿಕೆಯಾದ ನೀಟ್ ಬರೆದಿದ್ದವರು 24 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು. ದೇಶದಲ್ಲಿ ಪರೀಕ್ಷೆಗಳ ಪೇಪರ್ ಸೋರಿಕೆ ಮಾಫಿಯಾದ ಹಿಡಿತ ಎಂಥದು ಎಂಬುದನ್ನು ಈ ಹಗರಣ ಮತ್ತೊಮ್ಮೆ ಎತ್ತಿ ತೋರಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಹೆಚ್ಚಾಗಿ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಗುಜರಾತ್‌ನಂತಹ ಪ್ರಮುಖ ರಾಜ್ಯಗಳಲ್ಲಿ ಆಗಿದೆ. ಸೋರಿಕೆ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದು ಚುನಾವಣೆಯ ಸಮಯದಲ್ಲಿ.
ಆಗ ಪಕ್ಷಗಳು ಪರಸ್ಪರ ಆರೋಪಗಳಲ್ಲಿ ತೊಡಗುತ್ತವೆ. ಚುನಾವಣೆ ನಂತರ ಅವರೂ ಮರೆಯುತ್ತಾರೆ, ಇವರೂ ಮರೆಯುತ್ತಾರೆ. ಬಲಿಪಶುಗಳಾಗಿ ಸಂಕಷ್ಟ ಅನುಭವಿಸುವವರು ವಿದ್ಯಾರ್ಥಿಗಳು ಮಾತ್ರ. ಇದು ರಾಜಕಾರಣಿಗಳು ಮತ್ತು ಪೇಪರ್ ಲೀಕ್ ಮಾಫಿಯಾ ಒಟ್ಟಿಗೆ ಸೇರಿಯೇ ಮಾಡುತ್ತಿರುವ ವ್ಯವಹಾರವಾಗಿದೆಯೇ ಎಂಬ ಪ್ರಶ್ನೆಗಳು ಕೂಡ ಏಳದೇ ಇರುವುದಿಲ್ಲ. ಪೇಪರ್ ಸೋರಿಕೆ ಪ್ರಮುಖ ನೇಮಕಾತಿ ಮತ್ತು ಉನ್ನತ ಶಿಕ್ಷಣ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಲಾ ಪರೀಕ್ಷೆಗಳ ಮೇಲೂ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಬಿಹಾರ ಬೋರ್ಡ್ 10ನೇ ತರಗತಿ ಪರೀಕ್ಷೆಯ ಪತ್ರಿಕೆಗಳು ಆರು ಬಾರಿ ಸೋರಿಕೆಯಾಗಿವೆ. ಪಶ್ಚಿಮ ಬಂಗಾಳದಲ್ಲಿ, ಏಳು ವರ್ಷಗಳಲ್ಲಿ ರಾಜ್ಯ ಬೋರ್ಡ್ ಪರೀಕ್ಷೆಯ ಪತ್ರಿಕೆ ಕನಿಷ್ಠ 10 ಬಾರಿ ಸೋರಿಕೆಯಾಗಿದೆ. ತಮಿಳುನಾಡಿನಲ್ಲಿ, 2022ರಲ್ಲಿ 10ನೇ ತರಗತಿ ಮತ್ತು 12ನೇ ತರಗತಿ ಎರಡೂ ಪರೀಕ್ಷೆಯ ಪತ್ರಿಕೆಗಳು ಸೋರಿಕೆಯಾಗಿವೆ.
ಕಳೆದ ಕೆಲವು ವರ್ಷಗಳಿಂದ ಹಲವಾರು ಪ್ರಶ್ನೆ ಪತ್ರಿಕೆ ಸೋರಿಕೆಗೆ ರಾಜಸ್ಥಾನ ಕುಖ್ಯಾತವಾಗಿದೆ. 2015ರಿಂದ 2023ರ ಅವಧಿಯಲ್ಲಿ ಅಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 14ಕ್ಕೂ ಹೆಚ್ಚು ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಹಿರಿಯ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಜ್ಞಾನ ಪರೀಕ್ಷೆಯ ಪತ್ರಿಕೆ ಡಿಸೆಂಬರ್ 2022ರಲ್ಲಿ ಸೋರಿಕೆಯಾಗಿತ್ತು. ಅಲ್ಲಿನ ಇತರ ಪ್ರಮುಖ ಸೋರಿಕೆ ಪ್ರಕರಣಗಳಲ್ಲಿ, ಕಳೆದ 2 ವರ್ಷಗಳಲ್ಲಿ ನಡೆದ ಯುಜಿಸಿ ನೆಟ್ ಮತ್ತು ಪೊಲೀಸ್ ನೇಮಕಾತಿ ಪತ್ರಿಕೆಗಳ ಸೋರಿಕೆಗಳು ಸೇರಿವೆ. ಕಳೆದ ಏಳು ವರ್ಷಗಳಲ್ಲಿ ಗುಜರಾತ್ ಕೂಡ 14 ಪೇಪರ್ ಸೋರಿಕೆ ಘಟನೆಗಳನ್ನು ಕಂಡಿದೆ. ಇವುಗಳಲ್ಲಿ 2014ರ ಜಿಪಿಎಸ್‌ಸಿ ಮುಖ್ಯ ಅಧಿಕಾರಿ ಪರೀಕ್ಷೆ, 2018ರ ಶಿಕ್ಷಕರ ಆಪ್ಟಿಟ್ಯೂಡ್ ಪರೀಕ್ಷೆ, ಅಲ್ಲದೆ, ಮುಖ್ಯ ಸೇವಿಕಾ, ನಯಾಬ್ ಚಿಟ್ನಿಸ್, ಲೋಕ ರಕ್ಷಕ ದಳ ಮತ್ತು ಗುಮಾಸ್ತರ ಪರೀಕ್ಷೆಗಳಂತಹ ಹಲವಾರು ಪರೀಕ್ಷೆಗಳಲ್ಲಿ ಪತ್ರಿಕೆ ಸೋರಿಕೆಯಾದದ್ದಿದೆ. ಇತ್ತೀಚಿನ ಪ್ರಕರಣಗಳಲ್ಲಿ 2021ರ ಹೆಡ್ ಕ್ಲರ್ಕ್ ಪರೀಕ್ಷೆ, ಜಿಎಸ್‌ಎಸ್‌ಎಸ್‌ಬಿ ಪೇಪರ್ ಲೀಕ್, 2022ರ ಫಾರೆಸ್ಟ್ ಗಾರ್ಡ್ ಪರೀಕ್ಷೆ, 2023ರ ಜೂನಿಯರ್ ಕ್ಲರ್ಕ್ ಪರೀಕ್ಷೆ ಮತ್ತು 2021ರ ಸಬ್ ಆಡಿಟರ್ ಪರೀಕ್ಷೆಗಳಲ್ಲಿ ಪೇಪರ್ ಲೀಕ್ ಪ್ರಕರಣಗಳು ಸೇರಿವೆ. ಉತ್ತರ ಪ್ರದೇಶ 2017ರಿಂದ 2024ರ ಅವಧಿಯಲ್ಲಿ ಕನಿಷ್ಠ ಒಂಭತ್ತು ಬಾರಿ ಪೇಪರ್ ಸೋರಿಕೆ ಪ್ರಕರಣಗಳನ್ನು ಕಂಡಿದೆ. ಮುಖ್ಯವಾಗಿ, 2017ರ ಇನ್‌ಸ್ಪೆಕ್ಟರ್‌ಗಳ ಆನ್‌ಲೈನ್ ನೇಮಕಾತಿ ಪರೀಕ್ಷೆ, 2021ರ ಯುಪಿಟಿಇಟಿ, ಪ್ರಾಥಮಿಕ ಅರ್ಹತಾ ಪರೀಕ್ಷೆ, ಬಿಎಡ್ ಜಂಟಿ ಪ್ರವೇಶ ಪರೀಕ್ಷೆ, ನೀಟ್ ಮತ್ತು 2022ರ 12ನೇ ತರಗತಿ ಬೋರ್ಡ್ ಪರೀಕ್ಷೆ, 2024ರ ಕಾನ್‌ಸ್ಟೇಬಲ್ ಪರೀಕ್ಷೆಯ ಪತ್ರಿಕೆ ಸೋರಿಕೆಗಳು ಸೇರಿವೆ. ಇವು 48 ಲಕ್ಷಕ್ಕೂ ಹೆಚ್ಚು ಪರೀಕ್ಷಾರ್ಥಿಗಳ ಭವಿಷ್ಯವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದವು.
ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಮತ್ತು ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಕಳೆದ 7 ವರ್ಷಗಳಲ್ಲಿ ಇದೇ ರೀತಿಯ ಪೇಪರ್ ಸೋರಿಕೆಯ ಘಟನೆಗಳಿಗೆ ಸಾಕ್ಷಿಯಾಗಿವೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಾನೂನು:
ಪತ್ರಿಕೆ ಸೋರಿಕೆಯಾದರೆ ಕಠಿಣ ಶಿಕ್ಷೆ ವಿಧಿಸಲು ಮತ್ತು ಪರೀಕ್ಷಾ ಮಾಫಿಯಾದ ಮೇಲೆ ನಿಯಂತ್ರಣ ಬಿಗಿಗೊಳಿಸಲು ಸಂಸತ್ತು 2024ರಲ್ಲಿ ಕಾನೂನನ್ನು ತಂದಿತು. ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗಿನ ದಂಡ ಎಂದೆಲ್ಲ ಅದರಲ್ಲಿ ಎಚ್ಚರಿಕೆಗಳಿದ್ದವು.
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಲವಾರು ರಾಜ್ಯ ಸರಕಾರಗಳು ಕಠಿಣ ಕಾನೂನುಗಳನ್ನು ಮಾಡಿವೆ.
ಆದರೆ ಈ ಕಾನೂನುಗಳ ಹೊರತಾಗಿಯೂ ಪ್ರಶ್ನೆಪತ್ರಿಕೆ ಸೋರಿಕೆ ಅವ್ಯಾಹತವಾಗಿ ಮುಂದುವರಿದಿದೆ ಮತ್ತು ಪರೀಕ್ಷಾರ್ಥಿಗಳು ಬಲಿಪಶುಗಳಾಗುತ್ತಲೇ ಇದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯ ಪರಿಣಾಮಗಳು:
1. ಗ್ರಾಮೀಣ ಮತ್ತು ಅಂಚಿನಲ್ಲಿರುವ ಸಮುದಾಯದ ವಿದ್ಯಾರ್ಥಿಗಳ ಮೇಲೆ ಅಸಮಾನ ಪರಿಣಾಮ. ಅವರು ಅರ್ಜಿಗಳ ಶುಲ್ಕ, ಕೋಚಿಂಗ್ ಸೆಂಟರ್‌ಗಳು ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರಗಳ ಶುಲ್ಕ ಮತ್ತು ಬಾಡಿಗೆ ಪಾವತಿಸಲು ಸಾಲದ ಒತ್ತಡ ಎದುರಿಸುವ ಸ್ಥಿತಿ.
2. ಪರೀಕ್ಷೆಗಳು ರದ್ದಾದ ನಂತರ, ವಿದ್ಯಾರ್ಥಿಗಳ ಹತಾಶೆ ಹೆಚ್ಚಾಗುತ್ತದೆ. ನಂತರದ ಪರೀಕ್ಷೆಯಲ್ಲಿ ಅವರು ಇನ್ನಷ್ಟು ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸುವ ಸ್ಥಿತಿಯೂ ತಲೆದೋರುತ್ತದೆ.
3. ನೇಮಕಾತಿ ಪ್ರಕ್ರಿಯೆ ರದ್ದಾಗುವುದರಿಂದ ನಿರುದ್ಯೋಗ ಬಿಕ್ಕಟ್ಟು ಹೆಚ್ಚುತ್ತದೆ.
4. ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಗಳನ್ನು ಮುಂದೂಡುವುದು ಮತ್ತು ರದ್ದುಗೊಳಿಸುವುದರಿಂದ ವಿದ್ಯಾರ್ಥಿಗಳು ಅನಿಶ್ಚಿತತೆ ಎದುರಿಸಬೇಕಾಗುತ್ತದೆ.
5. ಪದೇ ಪದೇ ಪೇಪರ್ ಸೋರಿಕೆಯಾಗುವುದರಿಂದ ಪರೀಕ್ಷೆಗಳು ನ್ಯಾಯಸಮ್ಮತ ಎಂಬುದರ ಬಗೆಗಿನ ನಂಬಿಕೆಯನ್ನೇ ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಾರೆ.
6. ಹಲವರು ಈ ಸಂಕಷ್ಟ ಎದುರಿಸಲು ವಿಫಲರಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ.
ಪೇಪರ್ ಸೋರಿಕೆ ಕೇವಲ ಪರೀಕ್ಷಾ ವ್ಯವಸ್ಥೆಯಲ್ಲಿನ ದೋಷವಲ್ಲ, ಆದರೆ ಲಕ್ಷಾಂತರ ಯುವಕರ ಕನಸುಗಳನ್ನು ಭಗ್ನಗೊಳಿಸುವ ದೊಡ್ಡ ಸಮಸ್ಯೆ. ದೇಶದಲ್ಲಿನ ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಕರಿದ್ದಾರೆ. ಅವರ ಕನಸುಗಳು ದೊಡ್ಡವು. ಅನೇಕ ವರ್ಷಗಳಿಂದ ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಠಿಣ ತಯಾರಿ ನಡೆಸಿರುತ್ತಾರೆ. ಆದರೆ ಪರೀಕ್ಷೆಗಳು ನಿಯಮಿತವಾಗಿಯೇನೂ ನಡೆಯುವುದಿಲ್ಲ. ವರ್ಷಗಟ್ಟಲೆ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ನಡೆಯುತ್ತಿಲ್ಲ, ಇದು ಸರಕಾರಿ ವ್ಯವಸ್ಥೆಯ ಸಂಪೂರ್ಣ ವೈಫಲ್ಯ.
ಅನೇಕ ಸಂದರ್ಭಗಳಲ್ಲಿ ಪತ್ರಿಕೆ ಸೋರಿಕೆಯ ನಂತರ ಪರೀಕ್ಷೆಗಳನ್ನು ರದ್ದುಪಡಿಸಲಾಗುತ್ತದೆ. ನೇಮಕಾತಿಗಳನ್ನು ತಡೆಹಿಡಿಯಲಾಗುತ್ತದೆ. ಮತ್ತೆ ಅವೆಲ್ಲ ಪ್ರಕ್ರಿಯೆ ಶುರುವಾಗಲು ಬಹಳ ಸಮಯ ಹಿಡಿಯುತ್ತದೆ. ಈ ದೀರ್ಘ ಅಂತರ ಆಕಾಂಕ್ಷಿಗಳಲ್ಲಿ ಹತಾಶೆಗೆ ಕಾರಣವಾಗುತ್ತದೆ. ಅವರ ಮನೋಸ್ಥೈರ್ಯವನ್ನೇ ಕೊಂದುಬಿಡುತ್ತದೆ. ಅಂತಹ ಅನೇಕ ಯುವಕರ ಭವಿಷ್ಯವೇ ಕರಾಳವಾಗುವುದೂ ಇದೆ.
ಕನಿಷ್ಠ 20 ಪ್ರಕರಣಗಳಲ್ಲಿ ಪರೀಕ್ಷೆಗಳು ಮತ್ತೆ ನಡೆದದ್ದು ಸೋರಿಕೆ ಸಂಭವಿಸಿದ ಸುಮಾರು ಒಂದು ವರ್ಷದ ನಂತರ. 6 ಪ್ರಕರಣಗಳಲ್ಲಿ, ಪರೀಕ್ಷೆಗಳಿಗಾಗಿ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಕಾಯಬೇಕಾಯಿತು. 11 ಪ್ರಕರಣಗಳಲ್ಲಿ, ಅಭ್ಯರ್ಥಿಗಳು ಇನ್ನೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಸೋರಿಕೆ ಘಟನೆಯಿಂದಾಗಿ 2021ರಿಂದ ಯುಪಿಟಿಇಟಿ ಪರೀಕ್ಷೆಯ ವಿಚಾರದಲ್ಲಿ ಆಗುತ್ತಿರುವ ವಿಳಂಬ ಆಕಾಂಕ್ಷಿಗಳಲ್ಲಿ ಅನಿಶ್ಚಿತತೆ ಮತ್ತು ಹತಾಶೆಗೆ ಕಾರಣವಾಗಿದೆ. ಗುಜರಾತ್ ಮತ್ತು ಇತರ ಕೆಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗಳನ್ನು ಎದುರಿಸಲು ಎರಡು ವರ್ಷಗಳವರೆಗೆ ಕಾಯಬೇಕಾಗಿದೆ.
ಅನೇಕ ಸಂದರ್ಭಗಳಲ್ಲಿ, ಪತ್ರಿಕೆ ಸೋರಿಕೆ ಸಕಾಲದಲ್ಲಿ ಬಹಿರಂಗವಾಗದೆ ಅದರ ಲಾಭ ಪಡೆದವರೂ ಇದ್ದಾರೆ. ಅಂಥವರು ಉದ್ಯೋಗಕ್ಕೂ ಸೇರಿದ್ದರೆಂಬುದು ಆನಂತರ ಬಯಲಾದದ್ದಿದೆ. ಬಿಹಾರ ಮತ್ತು ಯುಪಿಯಂತಹ ರಾಜ್ಯಗಳಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣದ ಹಲವಾರು ನಿದರ್ಶನಗಳು ವರದಿಯಾಗಿವೆ.
ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಮುಖ್ಯವಾಗಿ ಕಾಣಿಸುವುದೇನು?:
ಪ್ರಶ್ನೆಪತ್ರಿಕೆ ಸೋರಿಕೆಯ ಎಲ್ಲಾ ಘಟನೆಗಳಲ್ಲೂ ಸಾಮಾನ್ಯವಾಗಿರುವುದು ಗಣನೀಯ ಪ್ರಮಾಣದ ಹಣದ ವ್ಯವಹಾರ. ಒಂದು ಪ್ರಶ್ನೆಪತ್ರಿಕೆಗಾಗಿ 30 ಲಕ್ಷ, 40 ಲಕ್ಷ, 50 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೊಡಲು ತಯಾರಾಗುತ್ತಾರೆ ಮತ್ತು ಪತ್ರಿಕೆ ಸೋರಿಕೆ ಆಗಿ ಕೋಟಿಗಟ್ಟಲೆ ದುಡ್ಡು ಬಾಚಿಕೊಳ್ಳಲಾಗುತ್ತದೆ. ಈ ಕೃತ್ಯಗಳಲ್ಲಿ ಸರಕಾರಿ ಅಧಿಕಾರಿಗಳು, ಶಿಕ್ಷಕರು ಮತ್ತು ಪ್ರಿಂಟಿಂಗ್ ಪ್ರೆಸ್‌ಗಳ ಸಿಬ್ಬಂದಿ ಕೂಡ ಭಾಗಿಯಾಗಿರುವುದು ಅನೇಕ ಪ್ರಕರಣಗಳಲ್ಲಿ ಬಯಲಿಗೆ ಬಂದಿದೆ. ಸೋರಿಕೆಯಾದ ಪೇಪರ್‌ಗಳ ತ್ವರಿತ ಪ್ರಸರಣದಲ್ಲಿ ಸಾಮಾಜಿಕ ಮಾಧ್ಯಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಡೆಗೆ ಇಂಥ ಪ್ರಕರಣಗಳು ಬಯಲಾಗುವುದು ಕೂಡ ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳ ಮೂಲಕವೇ ಆಗಿದೆ.
ಭಾರತದಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು:
1. ಅಸಮರ್ಪಕ ಭದ್ರತಾ ಕ್ರಮಗಳಿಂದಾಗಿ ಪ್ರಶ್ನೆ ಪತ್ರಿಕೆಯ ಸೆಟ್ಟಿಂಗ್, ಮುದ್ರಣ ಮತ್ತು ವಿತರಣೆಯ ಹಂತದಲ್ಲಿ ಸೋರಿಕೆಯಾಗುತ್ತದೆ.
2. ಅಸಮರ್ಪಕ ಐಟಿ ವ್ಯವಸ್ಥೆಯ ಕಾರಣದಿಂದಾಗಿ ಆನ್‌ಲೈನ್ ಪರೀಕ್ಷೆಗಳು ಕೂಡ ದೋಷಪೂರಿತವಾಗಿರುವ ಸಾಧ್ಯತೆ.
3. ಎಲ್ಲಾ ರೀತಿಯ ಪರೀಕ್ಷಾ ಅಪರಾಧಗಳ ತನಿಖೆಗೆ ಮತ್ತು ಆರೋಪಿಗಳನ್ನು ತ್ವರಿತವಾಗಿ ಶಿಕ್ಷೆಗೆ ಒಳಪಡಿಸಲು ಮೀಸಲಾದ ತನಿಖಾ ಏಜೆನ್ಸಿಯಿಲ್ಲ.
ರಾಹುಲ್ ಗಾಂಧಿ ಪ್ರಶ್ನೆಗಳು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡಿರುವವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ಮುಕ್ತ ಮತ್ತು ನ್ಯಾಯಸಮ್ಮತ ಪರೀಕ್ಷೆಗಳನ್ನು ನಡೆಸುವಲ್ಲಿ ವಿಫಲವಾಗಿರುವುದಾಗಿ ರಾಹುಲ್ ಆರೋಪಿಸಿದ್ದಾರೆ. ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ ತಂದಿದೆ ಎಂದಿದ್ಧಾರೆ. ಪ್ರಧಾನಿ ಮೋದಿ ರಶ್ಯ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತಿದೆ, ಆದರೆ ನಮ್ಮ ದೇಶದಲ್ಲಿಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಅವರಿಗೆ ಹೇಗೆ ಸಾಧ್ಯವಾಗಲಿಲ್ಲ ಅಥವಾ ಅದನ್ನು ತಡೆಯಲು ಅವರಿಗೆ ಇಷ್ಟವಿಲ್ಲವೇ ಎಂದು ರಾಹುಲ್ ವ್ಯಂಗ್ಯವಾಡಿದ್ಧಾರೆ. ಪೇಪರ್ ಸೋರಿಕೆಯನ್ನು ದೇಶವಿರೋಧಿ ಚಟುವಟಿಕೆ ಎಂದು ಕರೆದಿರುವ ರಾಹುಲ್, ಪೇಪರ್ ಸೋರಿಕೆ ಹಿಂದಿನ ಕಾರಣವೆಂದರೆ ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮೂಲ ಸಂಘಟನೆಯಾದ ಆರೆಸ್ಸೆಸ್ ತನ್ನ ವಶದಲ್ಲಿ ಇಟ್ಟುಕೊಂಡಿರುವುದು ಎಂದಿದ್ಧಾರೆ. ಅದು ಬದಲಾಗುವವರೆಗೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಲೇ ಇರುತ್ತವೆ ಎಂಬುದು ರಾಹುಲ್ ಆರೋಪ.
ರಾಹುಲ್ ಮಾತುಗಳು ಗಂಭೀರ ಮತ್ತು ಕಳವಳಕಾರಿ ಸತ್ಯದೆಡೆಗೆ ಬೆರಳು ಮಾಡುತ್ತಿವೆ. ಆದರೆ ಅಂಥ ಕರಾಳತೆಯಿಂದ ಶಿಕ್ಷಣ ವ್ಯವಸ್ಥೆಯನ್ನು ಮುಕ್ತಗೊಳಿಸುವ ಬಗೆ ಹೇಗೆ? ಇದು ಬಹುಶಃ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದೀತೆ?
ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಇತ್ತೀಚಿನ ಪ್ರಕರಣಗಳು:
15 ರಾಜ್ಯಗಳಲ್ಲಿ ಕಳೆದ ಐದು ವರ್ಷಗಳಲ್ಲಿ 41 ಪೇಪರ್ ಸೋರಿಕೆಯಾಗಿದೆ, ಇದು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 1.4 ಕೋಟಿ ಉದ್ಯೋಗಾಕಾಂಕ್ಷಿಗಳ ಮೇಲೆ ಪರಿಣಾಮ ಬೀರಿದೆ. ಯುವಕರಲ್ಲಿ ತಲ್ಲಣ ಮತ್ತು ನಿರಾಸೆಯನ್ನುಂಟು ಮಾಡಿದೆ. ನೀಟ್ ಪತ್ರಿಕೆ ಸೋರಿಕೆ ಹೊರತುಪಡಿಸಿ ಇತ್ತೀಚಿನ ಇತರ ಕೆಲವು ಪ್ರಕರಣಗಳನ್ನು ಗಮನಿಸುವುದಾದರೆ,
1. ಯುಪಿ ಕಾನ್ಸ್ಟೇಬಲ್ ನೇಮಕಾತಿ ಮತ್ತು ಭಡ್ತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ(2023)
2. ರಾಜಸ್ಥಾನ ಅಧೀನ ಮತ್ತು ಮಂತ್ರಿ ಸೇವೆಗಳ ಆಯ್ಕೆ ಮಂಡಳಿ (ಆರ್ಎಸ್ಎಂಎಸ್ಎಸ್ಬಿ) 2023ರಿಂದ ನಡೆಸಿದ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯ (ಆರ್ಇಇಟಿ) ಪತ್ರಿಕೆ ಸೋರಿಕೆ
3. ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ (ಟಿಎಸ್ಪಿಎಸ್ಸಿ) 2023ರಲ್ಲಿ ನಡೆಸಿದ ಸಹಾಯಕ ಇಂಜಿನಿಯರ್ ನೇಮಕಾತಿ ಪರೀಕ್ಷೆಯ ಪೇಪರ್ ಸೋರಿಕೆ.
4. ಅಸ್ಸಾಂ 10ನೇ ತರಗತಿ ಬೋರ್ಡ್ ಪರೀಕ್ಷೆ 2024ರ ಪತ್ರಿಕೆ ಸೋರಿಕೆ