ಅಪರಾಧ ಲೋಕದಲ್ಲಿ ಸಿನೆಮಾ ರಂಗದವರ ಹೆಜ್ಜೆಗಳು

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ವಿಚಾರಣೆ ತೀವ್ರಗೊಂಡಿದೆ. ತೆರೆಯ ಮೇಲೆ ನಾಯಕರಾಗಿ ಮೆರೆಯುವವರು ತೆರೆಯ ಹಿಂದೆ ವಿಲನ್ ಅವತಾರ ತೋರಿಸಿದ್ದರ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಅಭಿಮಾನಿಗಳು ಸುತ್ತುವರಿದ ಕೂಡಲೇ ತಾನು ಅಸಾಮಾನ್ಯ ಎಂಬ ಮದ ಸೆಲೆಬ್ರಿಟಿಗಳನ್ನು ಆವರಿಸಿಬಿಡುತ್ತದೆಯೇ? ಜನಪ್ರಿಯತೆಯ ಅಹಮ್ಮಿನಲ್ಲಿಯೇ ಕ್ರಿಮಿನಲ್ ಮನಃಸ್ಥಿತಿ ಮುಟ್ಟಿಬಿಡುತ್ತಾರೆಯೇ? ತಾನು ಪ್ರಭಾವಿ, ಇಂಥವನ್ನೆಲ್ಲ ಅರಗಿಸಿಕೊಳ್ಳಬಲ್ಲೆ ಎಂದು ಕಾನೂನನ್ನೇ ಕೈಗೆತ್ತಿಕೊಳ್ಳುವ, ಕಡೆಗಣಿಸುವ ವಿಪರೀತಕ್ಕೆ ಒಬ್ಬ ಸೆಲೆಬ್ರಿಟಿ ಹೋಗುವುದು ಏಕೆ ಅಥವಾ ಹೇಗೆ? ಸಿನೆಮಾ ರಂಗಕ್ಕೆ ಅಂಟಿಕೊಂಡೇ ಬಂದಿರುವ ಕ್ರಿಮಿನಲ್ ಕಳಂಕಗಳು ಏನೇನು?

Update: 2024-06-19 05:09 GMT
Editor : Thouheed | Byline : ಆರ್.ಜೀವಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ದರ್ಶನ್ ಮಾತ್ರವಲ್ಲದೆ, ಸ್ನೇಹಿತೆ ಪವಿತ್ರಾ ಗೌಡ ಮತ್ತಿತರರು ಸೇರಿ ಪ್ರಕರಣದಲ್ಲಿ 17 ಆರೋಪಿಗಳಿದ್ದಾರೆ. ವಿಚಾರಣೆ ತೀವ್ರಗೊಂಡಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ, ಷೆಡ್ ಒಂದರಲ್ಲಿ ಕೂಡಿಹಾಕಿ, ಥಳಿಸಿ ಕೊಲೆಗೈಯಲಾಗಿದೆ. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಬಹಿರಂಗವಾಗುತ್ತಿರುವ ಮಾಹಿತಿಗಳು ಭಯಾನಕವಾಗಿವೆ. ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಒದ್ದಿರುವ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ಧಾರೆ. ತೀವ್ರ ಥಳಿತದಿಂದ ಆತ ಸ್ಥಳದಲ್ಲೇ ನರಳಾಡಿ ಪ್ರಾಣಬಿಟ್ಟ ಬಳಿಕ ಬಚಾವಾಗಲು ದರ್ಶನ್ ಕೆಲ ಪೊಲೀಸರಿಗೂ, ವೈದ್ಯರಿಗೂ ಕೋಟಿ ಕೋಟಿ ಹಣದ ಆಮಿಷವೊಡ್ಡಿ ನೆರವು ಕೇಳಿದ್ದ ವಿಚಾರವೂ ಬಯಲಾಗಿದೆ. ದರ್ಶನ್‌ಗೆ ನೆರವಾಗಲು ಯಾರೂ ಒಪ್ಪಲಿಲ್ಲ. ಆದರೆ, ಮೃತದೇಹ ಸಾಗಿಸುವ ಬಗ್ಗೆ ಪಿಎಸ್‌ಐ ಒಬ್ಬರು ಸಲಹೆ ಕೊಟ್ಟಿದ್ದರು ಎಂಬ ವಿಚಾರವನ್ನೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ನಡುವೆ ಪ್ರಕರಣದ ತನಿಖಾಧಿಕಾರಿಯನ್ನು ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಮತ್ತೋರ್ವ ಅಧಿಕಾರಿಯನ್ನು ನೇಮಿಸಲಾಗಿದೆ.

ದರ್ಶನ್ ಪೊಲೀಸರ ಅತಿಥಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. 2011ರ ಸೆಪ್ಟಂಬರ್‌ನಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ದೂರಿನ ಮೇರೆಗೆ ಅವರನ್ನು ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಬಂಧಿಸಲಾಗಿತ್ತು. ಕಡೆಗೆ ಪ್ರಕರಣ ಬಗೆಹರಿದಿತ್ತು.

ಜೈಲಿಗೆ ಹೋಗಿದ್ದ ಕನ್ನಡ ಸಿನೆಮಾ ರಂಗದ ಇತರರು ಯಾರು ಎಂದು ನೋಡುವುದಾದರೆ, 2023ರ ಅಕ್ಟೋಬರ್‌ನಲ್ಲಿ ನಟ ಎನ್.ಎಸ್. ನಾಗಭೂಷಣ್ ಕಾರು ವಯಸ್ಸಾದ ದಂಪತಿ ಮೇಲೆ ಹರಿದಿತ್ತು. ವೃದ್ಧೆ ಸಾವಿಗೀಡಾಗಿದ್ದರು. ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ನಾಗಭೂಷಣ್ ಅವರನ್ನು ಬಂಧಿಸಿದ್ದರು. 2022ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಕನ್ನಡದ ಹಿರಿಯ ನಟಿ ಅಭಿನಯಾ ಅವರನ್ನು ಬಂಧಿಸಲಾಗಿತ್ತು. ಕರ್ನಾಟಕ ಹೈಕೋರ್ಟ್ ಅಭಿನಯ, ಅವರ ತಾಯಿ ಮತ್ತು ಸಹೋದರನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ನೀಡಿತ್ತು. 2020ರ ಸೆಪ್ಟಂಬರ್‌ನಲ್ಲಿ ಬೆಂಗಳೂರಿನ ಸಿಸಿಬಿ, ರೇವ್ ಪಾರ್ಟಿಗಳು ಮತ್ತಿತರ ಕಾರ್ಯಕ್ರಮಗಳಲ್ಲಿ ಸೈಕೆಡೆಲಿಕ್ ಡ್ರಗ್ಸ್ ಸರಬರಾಜು ಮಾಡುವ ಅಂತರ್‌ರಾಷ್ಟ್ರೀಯ ಡ್ರಗ್ ಕಾರ್ಟೆಲ್ ಜೊತೆಗಿನ ಸಂಪರ್ಕದ ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿತ್ತು. 2020ರ ಸೆಪ್ಟಂಬರ್‌ನಲ್ಲಿಯೇ ಬೆಂಗಳೂರಿನಲ್ಲಿ ನಡೆದ ಹೈ-ಎಂಡ್ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ನಟಿ ಸಂಜನಾ ಗಲ್ರಾನಿ ಅವರನ್ನು ಪೊಲೀಸರು ಬಂಧಿಸಿದ್ದರು. 2018ರಲ್ಲಿ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಅಪಹರಣ ಮಾಡಿದ ಆರೋಪದ ಮೇಲೆ ದುನಿಯಾ ವಿಜಯ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು.

ನೀರಜ್ ಗ್ರೋವರ್ ಕೊಲೆ ಕೇಸ್:

ಕನ್ನಡ ಚಿತ್ರರಂಗದವರೊಬ್ಬರ ಸಂಪರ್ಕವಿದ್ದ ಕ್ರೈಮ್ ಪ್ರಕರಣವಾಗಿ ಬಹಳ ಸುದ್ದಿ ಮಾಡಿದ್ದು ಟಿವಿ ಕಾರ್ಯನಿರ್ವಹಣಾಧಿಕಾರಿ ನೀರಜ್ ಗ್ರೋವರ್ ಕೊಲೆ ಪ್ರಕರಣ. 2008ರಲ್ಲಿ ಬಹಳ ದೊಡ್ಡ ಸಂಚಲನ ಮೂಡಿಸಿದ್ದ ಕೇಸ್ ಅದಾಗಿತ್ತು. ಮೈಸೂರಿನ ನಟಿ ಮರಿಯಾ ಸುಸೈರಾಜ್ ಹಾಗೂ ಆಕೆಯ ಗೆಳೆಯ, ನೌಕಾದಳದ ಮಾಜಿ ಅಧಿಕಾರಿ ಎಮಿಲ್ ಜೆರೋಮ್ ಅವರನ್ನು ತಪ್ಪಿತಸ್ಥರು ಎಂದು ಮುಂಬೈ ಕೋರ್ಟ್ 2011ರಲ್ಲಿ ತೀರ್ಪು ಕೊಟ್ಟಿತ್ತು.

ಮದುವೆಯಾಗಲಿದ್ದ ಜೆರೋಮ್ ಜೊತೆ ಮರಿಯಾ ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನೀರಜ್ ಗ್ರೋವರ್ ಕೊಲೆಯಲ್ಲಿ ಭಾಗಿಯಾಗಿದ್ದಳು. ನೀರಜ್ ದೇಹವನ್ನು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಬೆಂಕಿ ಹಚ್ಚಿ ವಿಲೇವಾರಿ ಮಾಡಲಾಗಿತ್ತು. ಪ್ರಕರಣದಲ್ಲಿ ಜೆರೋಮ್‌ಗೆ 10 ವರ್ಷಗಳ ಶಿಕ್ಷೆಯಾದರೆ, ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಮರಿಯಾಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆಕೆ ಈಗಾಗಲೇ ಶಿಕ್ಷೆ ಅನುಭವಿಸಿದ್ದಾಳೆ.

ಚಿತ್ರರಂಗದ ಇನ್ನೂ ಕೆಲವರು ಕ್ರೈಂ ಪ್ರಕರಣದಲ್ಲಿ ಭಾಗಿಯಾಗಿದ್ದರ ಉದಾಹರಣೆಗಳನ್ನು ನೋಡುವುದಾದರೆ,

1. ಜನಪ್ರಿಯ ನಟಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪಿತೂರಿ ಆರೋಪದ ಮೇಲೆ 2017ರ ಜುಲೈನಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಬಂಧಿಸಲಾಗಿತ್ತು. 2017ರ ಫೆಬ್ರವರಿ 17ರಂದು ಕೊಚ್ಚಿಯಲ್ಲಿ ನಾಲ್ವರು ಕಾರಿನಲ್ಲಿ ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ವೈಯಕ್ತಿಕ ದ್ವೇಷಕ್ಕಾಗಿ ದಿಲೀಪ್ ನಟಿಯನ್ನು ಅಪಹರಿಸಲು ಮತ್ತು ಹಲ್ಲೆ ಮಾಡಲು ಹಣ ನೀಡಿದ್ದಾರೆ ಎಂಬುದು ಆರೋಪವಾಗಿತ್ತು. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರೂ, ತನಿಖೆ ಮುಂದುವರಿದಿದೆ.

2. ಸಲ್ಮಾನ್ ಖಾನ್ ಕಾರು 2002ರ ಸೆಪ್ಟಂಬರ್ 28ರಂದು ಬಾಂದ್ರಾದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಕಾರ್ಮಿಕನ ಮೇಲೆ ಹರಿದು ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಖಾನ್ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಸುಮಾರು 13 ವರ್ಷಗಳ ನಂತರ ಈ ಪ್ರಕರಣದಿಂದ ಅವರು ಖುಲಾಸೆಯಾದರು.

ರಾಜಸ್ಥಾನದ ಭವಾದ್ ಗ್ರಾಮದಲ್ಲಿ ಚಿಂಕಾರಾ ಜಿಂಕೆ ಮತ್ತು ಮಥಾನಿಯಾ ಗ್ರಾಮದಲ್ಲಿ ಕೃಷ್ಣಮೃಗಗಳನ್ನು ಕೊಂದಿದ್ದ ಆರೋಪದ ಮೇಲಿನ ಪ್ರಕರಣಗಳಲ್ಲಿಯೂ ಸಲ್ಮಾನ್ ಖಾನ್ ಖುಲಾಸೆಗೊಂಡಿದ್ದಾರೆ.

3. ತೆಲುಗು ನಟ ನಂದಮೂರಿ ಬಾಲಕೃಷ್ಣ ವಿರುದ್ಧ ಚಿತ್ರನಿರ್ಮಾಪಕರ ಮೇಲೆ ಗುಂಡು ಹಾರಿಸಿದ್ದ ಆರೋಪದ ಮೇಲೆ 2004ರಲ್ಲಿ ಪ್ರಕರಣ ದಾಖಲಾಗಿತ್ತು. 2005ರಲ್ಲಿ ಅವರು ಪ್ರಕರಣದಿಂದ ಖುಲಾಸೆಯಾದರು.

4. ಬಾಲಿವುಡ್ ನಟಿ ಝಿಯಾ ಖಾನ್ 2013ರಲ್ಲಿ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು. ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಬಳಿಕ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪ ಆತನ ಮೇಲಿತ್ತು. ಕಡೆಗೆ 2023ರ ಎಪ್ರಿಲ್‌ನಲ್ಲಿ ಖುಲಾಸೆಗೊಳಿಸಲಾಯಿತು.

5. ಗಾಯಕ ಮತ್ತು ಸಂಗೀತ ನಿರ್ದೇಶಕ ಅಂಕಿತ್ ತಿವಾರಿಯನ್ನು 2014ರಲ್ಲಿ ಮಾಜಿ ಗೆಳತಿ ಅತ್ಯಾಚಾರದ ದೂರು ನೀಡಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಯಿತು. ಪಾರ್ಟಿಯಲ್ಲಿ ಮದ್ಯ ಸೇವಿಸುವಂತೆ ಒತ್ತಾಯಿಸಿದರು ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುದು ಆರೋಪವಾಗಿತ್ತು. 2017ರಲ್ಲಿ ಖುಲಾಸೆಗೊಳಿಸಲಾಯಿತು.

ಕ್ರೈಮ್ ಲೋಕದಲ್ಲಿ ಸಿನೆಮಾ ನಟನಟಿಯರ ಹೆಸರು ಸೇರಿಹೋಗುವುದು ಒಂದೆಡೆಯಾದರೆ, ಭೂಗತ ಲೋಕದೊಂದಿಗಿನ ಚಿತ್ರರಂಗದವರ ಸಂಬಂಧ ಮತ್ತು ಸಂಪರ್ಕಗಳ ಬಗೆಗಿನ ಗುಲ್ಲುಗಳು ಮತ್ತೊಂದು ಬಗೆಯವು.

ಅಂಥ ಕೆಲವು ವದಂತಿಗಳ ಬಗ್ಗೆ ಗಮನ ಹರಿಸುವುದಾದರೆ,

1. ಸಂಜಯ್ ದತ್ ಮತ್ತು ಛೋಟಾ ಶಕೀಲ್:

1993ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಕ್ಕಾಗಿ ಸಂಜಯ್ ದತ್ ಬಂಧನಕ್ಕೊಳಗಾಗಿದ್ದರು. ಛೋಟಾ ಶಕೀಲ್ ಜೊತೆಗೆ ಸಂಜಯ್ ದತ್ ಸಂಪರ್ಕವಿದ್ದುದನ್ನು ಮುಂಬೈ ಪೊಲೀಸರು ಬಯಲು ಮಾಡಿದ್ದರು. ದೀರ್ಘ ಅವಧಿಯ ಜೈಲು ಶಿಕ್ಷೆ ಬಳಿಕ ಸಂಜಯ್ ದತ್ ಅಂತಿಮವಾಗಿ 2016ರಲ್ಲಿ ಜೈಲಿನಿಂದ ಬಿಡುಗಡೆಗೊಂಡರು.

2. ಸಲ್ಮಾನ್ ಖಾನ್ ಮತ್ತು ದಾವೂದ್ ಇಬ್ರಾಹೀಂ:

ಸಲ್ಮಾನ್ ಖಾನ್ ಹೆಸರು ಭೂಗತ ಲೋಕದ ಪಾತಕಿಗಳಾದ ದಾವೂದ್ ಇಬ್ರಾಹೀಂ, ಛೋಟಾ ಶಕೀಲ್ ಮತ್ತು ಗುರು ಸಾಟಮ್ ಜೊತೆ ಆಗಾಗ ಕೇಳಿಬಂದದ್ದಿದೆ.

3. ಮೋನಿಕಾ ಬೇಡಿ ಮತ್ತು ಅಬು ಸಲೀಂ:

ಭೂಗತ ಲೋಕದ ಗ್ಯಾಂಗ್‌ಸ್ಟರ್ ಅಬು ಸಲೀಂ ಜೊತೆ ಮೋನಿಕಾ ಬೇಡಿ ಮದುವೆಯಾಗಿದೆ ಎಂಬ ಊಹಾಪೋಹಗಳು ಇದ್ದವು. ಆತ ತನ್ನ ಪ್ರಭಾವ ಬಳಸಿ ಕೆಲವು ಸಿನೆಮಾಗಳಲ್ಲಿ ಆಕೆಗೆ ಅವಕಾಶ ಕೊಡಿಸಿದ್ದ ವದಂತಿಗಳೂ ಇದ್ದವು. ಸಲೀಂ ಜೊತೆ ನಕಲಿ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸಿದ ಆರೋಪದಲ್ಲಿ ಆಕೆಯನ್ನು 2002ರಲ್ಲಿ ಲಿಸ್ಬನ್‌ನಲ್ಲಿ ಬಂಧಿಸಲಾಯಿತು. ಪೋರ್ಚುಗಲ್ ಮತ್ತು ಭಾರತದ ಜೈಲುಗಳಲ್ಲಿ ಐದು ವರ್ಷ ಕಳೆಯಬೇಕಾಗಿ ಬಂತು. 2007ರಲ್ಲಿ ಆಕೆ ಬಿಡುಗಡೆಯಾದಳು.

4. ಪ್ರೀತಿ ಜಿಂಟಾ ಮತ್ತು ರವಿ ಪೂಜಾರಿ:

ಭೂಗತ ಪಾತಕಿ ರವಿ ಪೂಜಾರಿ ಅವರನ್ನು ಪ್ರೀತಿ ಜಿಂಟಾ ಭೇಟಿಯಾಗಿದ್ದರ ಬಗ್ಗೆ ಸ್ವತಃ ಆಕೆಯ ಮಾಜಿ ಗೆಳೆಯ ನೆಸ್ ವಾಡಿಯಾ ಹೇಳಿದ್ದರು. ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಸಿನೆಮಾ ಬಿಡುಗಡೆ ವೇಳೆ ಆಕೆ ಮತ್ತು ರವಿ ಪೂಜಾರಿ ಒಡನಾಟದ ಬಗ್ಗೆ ವದಂತಿಗಳು ಹರಡಿದ್ದವು.

5. ಅನಿಲ್ ಕಪೂರ್ ಮತ್ತು ದಾವೂದ್ ಇಬ್ರಾಹೀಂ:

ಕ್ರಿಕೆಟ್ ಪಂದ್ಯವೊಂದರಲ್ಲಿ ಅನಿಲ್ ಕಪೂರ್ ಮತ್ತು ದಾವೂದ್ ಒಟ್ಟಿಗೇ ಕಾಣಿಸಿಕೊಂಡಿದ್ದರು. ಆ ಬಳಿಕ ದಾವೂದ್ ಜೊತೆಗಿನ ಕಪೂರ್ ಸಾಮೀಪ್ಯದ ಬಗ್ಗೆ ವದಂತಿಗಳು ಹರಡಿದ್ದವು.

6. ಟ್ವಿಂಕಲ್ ಖನ್ನಾ-ಅಕ್ಷಯ್ ಕುಮಾರ್ ಮತ್ತು ದಾವೂದ್ ಇಬ್ರಾಹೀಂ:

ದಾವೂದ್ ಇಬ್ರಾಹೀಂ ಆಯೋಜಿಸಿದ್ದ ಪಾರ್ಟಿಗಳಲ್ಲಿ ಈ ಸೆಲೆಬ್ರಿಟಿ ದಂಪತಿ ಭಾಗವಹಿಸುತ್ತಿದ್ದುದರ ಬಗ್ಗೆ ಸುದ್ದಿಗಳು ಏಳುತ್ತಿದ್ದವು. ಇಬ್ಬರೂ ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದರ ಬಗ್ಗೆ ಗುಸುಗುಸು ಕೇಳಿಸಲು ಅದು ಕಾರಣವಾಗಿತ್ತು.

7. ಮಮತಾ ಕುಲಕರ್ಣಿ ಮತ್ತು ವಿಕ್ರಮ್ ಗೋಸ್ವಾಮಿ:

ಭೂಗತ ಲೋಕದ ವ್ಯಕ್ತಿ ವಿಕ್ರಮ್ ಗೋಸ್ವಾಮಿಯೊಂದಿಗೆ ಈ ಬಾಲಿವುಡ್ ನಟಿ ಸಂಬಂಧ ಹೊಂದಿದ್ದ ವದಂತಿಗಳಿದ್ದವು. ಮಮತಾ ಕುಲಕರ್ಣಿ ಚಲನಚಿತ್ರ ವೃತ್ತಿಜೀವನ ಬಿಟ್ಟು ದುಬೈಗೆ ಹೋಗಲಿದ್ದಾರೆ ಎಂಬ ಊಹಾಪೋಹಗಳು ಸಹ ಇದ್ದವು. ಕಡೆಗೆ ಆತನನ್ನೇ ಆಕೆ ಮದುವೆಯಾದರು.

8. ಅನಿತಾ ಅಯ್ಯೂಬ್ ಮತ್ತು ದಾವೂದ್ ಇಬ್ರಾಹೀಂ:

ಸೌಂದರ್ಯ ಸ್ಪರ್ಧೆಯ ಸ್ಪರ್ಧಿ ಅನಿತಾ ಅಯ್ಯೂಬ್ ಕೂಡ ದಾವೂದ್ ಜೊತೆ ಸಂಪರ್ಕ ಹೊಂದಿದ್ದ ವದಂತಿಗಳಿದ್ದವು. 1995ರಲ್ಲಿ ಬಾಲಿವುಡ್ ನಿರ್ಮಾಪಕ ಜಾವೇದ್ ಸಿದ್ದೀಕ್ ಆಕೆಗೆ ಸಿನೆಮಾದಲ್ಲಿ ಅವಕಾಶ ನಿರಾಕರಿಸಿದಾಗ ಈ ವಿಚಾರ ಬಯಲಾಗಿತ್ತು ಮತ್ತು ಆನಂತರ ಸಿದ್ದೀಕ್ ಅವರನ್ನು ದಾವೂದ್ ಕಡೆಯವರೇ ಗುಂಡಿಕ್ಕಿ ಕೊಂದಿದ್ದರು.

9. ಮಂದಾಕಿನಿ ಮತ್ತು ದಾವೂದ್ ಇಬ್ರಾಹೀಂ:

ರಾಮ್ ತೇರಿ ಗಂಗಾ ಮೈಲಿ ಚಿತ್ರದ ನಟಿ ಮಂದಾಕಿನಿ ಮತ್ತು ದಾವೂದ್ ನಡುವಿನ ಸಂಬಂಧ ಕೂಡ ಬಾಲಿವುಡ್‌ನಲ್ಲಿನ ದೊಡ್ಡ ಚರ್ಚೆಯ ಸಂಗತಿಯಾಗಿತ್ತು. ದಾವೂದ್ ತನ್ನ ಪ್ರಭಾವ ಬಳಸಿ ಆಕೆಗೆ ಹಲವಾರು ಸಿನೆಮಾಗಳಲ್ಲಿ ಅವಕಾಶ ಕೊಡಿಸಿದ್ದಾನೆ ಎಂಬ ಮಾತುಗಳಿದ್ದವು.

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್‌ಗೆ ಭೂಗತ ಲೋಕದಿಂದ ಕೊಲೆ ಬೆದರಿಕೆ ಕರೆಗಳು ಬಂದಿದ್ದರೂ ಅವರು ಅದಕ್ಕೆ ಹೆದರಲಿಲ್ಲ. ‘‘ಕೊಲ್ಲೋದಿದ್ರೆ ಕೊಂದು ಬಿಡಿ, ನಿಮಗಾಗಿ ಕೆಲಸ ಮಾಡಲ್ಲ’’ ಎಂದು ಹೇಳಿದ್ದರು ಶಾರುಕ್ ಎಂದು ಇತ್ತೀಚಿಗೆ ನಿರ್ದೇಶಕ ಸಂಜಯ್ ಗುಪ್ತಾ ಹೇಳಿದ್ದು ಸುದ್ದಿಯಾಗಿತ್ತು.

ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವ ಈ ಪ್ರಕರಣದ ಬಗ್ಗೆ ಸಿನೆಮಾ ರಂಗದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

‘‘ನಿರ್ದೇಶಕರು ಚಿತ್ರಕಥೆಯನ್ನು ಅಂತಿಮಗೊಳಿಸಿದ ನಂತರವೇ ಚಿತ್ರೀಕರಣವನ್ನು ಪ್ರಾರಂಭಿಸಬೇಕು. ಆದರೆ ಹಲವು ಬಾರಿ, ಚಿತ್ರೀಕರಣ ನಡೆಯುವ ವೇಳೆ ಬರೆಯುತ್ತಾರೆ. ಆದರೆ ದರ್ಶನ್‌ಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ, ಸಿನೆಮಾ ಬಿಡುಗಡೆಯಾದ ನಂತರ ಚಿತ್ರಕಥೆ ಬರೆಯಲು ಪ್ರಾರಂಭ ಮಾಡಿದಂತಾಗಿದೆ’’ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಕ್ಸ್‌ನಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ.

ತಮ್ಮ ಮತ್ತೊಂದು ಪೋಸ್ಟ್‌ನಲ್ಲಿ ಅವರು ಸೆಲೆಬ್ರೆಟಿಗಳ ಬಗೆಗಿನ ಹುಚ್ಚು ಅಭಿಮಾನ ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಸೂಚಿಸಿದ್ದಾರೆ. ‘‘ಸ್ಟಾರ್ ಒಬ್ಬರು ತಮ್ಮ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುವ ಕಟ್ಟಾ ಅಭಿಮಾನಿಯನ್ನು ಕೊಲ್ಲಲು ಮತ್ತೊಬ್ಬ ಕಟ್ಟಾ ಅಭಿಮಾನಿಯನ್ನು ಬಳಸುತ್ತಾರೆ. ಇದು ಸ್ಟಾರ್ ಆರಾಧನೆಯ ವಿಲಕ್ಷಣತೆಗೆ ಉತ್ತಮ ಉದಾಹರಣೆಯಾಗಿದೆ. ಅಭಿಮಾನಿಗಳು ತಾವು ಹೇಗೆ ಜೀವನ ನಡೆಸಬೇಕೆಂಬುದರ ಬಗ್ಗೆ ತಮ್ಮ ಮೆಚ್ಚಿನ ಸ್ಟಾರ್ ಆದೇಶ ಕೊಡಲಿ ಎಂದು ಬಯಸುತ್ತಾರೆ. ಇದೇ ‘ಸ್ಟಾರ್ ವರ್ಶಿಪ್ ಸಿಂಡ್ರೋಮ್’ನ ಸೈಡ್ ಎಫೆಕ್ಟ್’’ ಎಂದು ವರ್ಮಾ ಬರೆದಿದ್ದಾರೆ.

ಕನ್ನಡ ನಟ ಚೇತನ್ ಅಹಿಂಸಾ, ‘‘ನಿಜಜೀವನದ ಖಳನಾಯಕರನ್ನು ಸೃಷ್ಟಿಸಿದ ನಾವು ಒಂದು ಸಮಾಜವಾಗಿ ತಪ್ಪಿತಸ್ಥರು’’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಈ ನಡುವೆ, ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎಂಬ ಅನುಮಾನಗಳೂ ಎದ್ದಿವೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೆ ಹೇಳಿಲ್ಲ. ತನಿಖೆಯ ನಂತರ ಬರಲಿರುವ ಅಂತಿಮ ವರದಿ ಏನು ಎಂಬುದನ್ನು ನೋಡಿದ ಬಳಿಕ ಎಲ್ಲರೂ ಸೇರಿ ಗಟ್ಟಿಯಾದ ಒಂದು ನಿರ್ಧಾರಕ್ಕೆ ಬರುವುದಾಗಿ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿರುವುದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News